ಸ್ಮಾರಕಗಳ ಮೌಲ್ಯ ಕಳೆಯುತ್ತಿದೆ ಕೊಳಕು
Team Udayavani, Sep 2, 2019, 2:41 PM IST
ವಿಜಯಪುರ: ನಗರದ ಕೋಟೆ ಗೋಡೆಗಳ ಸುತ್ತಲೂ ಚರಂಡಿ ನೀರು ಸಂಗ್ರಹವಾಗಿ ಸ್ಮಾರಕಗಳಿಗೆ ಧಕ್ಕೆಯಾಗಿ ಪ್ರವಾಸಿಗರನ್ನು ಮೂಗು ಮುಚ್ಚುವಂತೆ ಮಾಡಿರುವ ಸ್ಥಿತಿ.
ವಿಜಯಪುರ: ಪಾರಂಪರಿಕ ನಗರಿ ಎಂಬ ಹಿರಿಮೆ ಸಂಪಾದಿಸಿರುವ ವಿಜಯಪುರ ನಗರ ಇದೀಗ ಕೊಳಚೆಪುರ ಎಂಬ ಕುಖ್ಯಾತಿ ಪಡೆಯುವ ದುಸ್ಥಿತಿಗೆ ತಲುಪಿದೆ. ನಗರದಲ್ಲಿರುವ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ, ಇತಿಹಾಸದ ಅಧ್ಯಯನಕ್ಕೆ ಬರುವ ದೇಶಿ-ವಿದೇಶಿ ಪ್ರವಾಸಿಗರಿಗೆ ಕಂದಕಗಳ ಕೊಳಕು ಮೂಗು ಮುಚ್ಚುವಂತೆ ಮಾಡುತ್ತಿದೆ.
ಪಾರಂಪರಿಕ ಕಂದಕಕ್ಕೆ ಸೇರುತ್ತಿರುವ ಚರಂಡಿ ನೀರು, ಸ್ಮಾರಕಗಳ ಬಳಿ ಬಯಲು ಬಹಿರ್ದೇಸೆ, ತಿಪ್ಪೆ ಗುಂಡಿಗಳಿಂದಾಗಿ ಮಾಲಿನ್ಯ-ದುರ್ವಾಸನೆ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರತೊಡಗಿದೆ. ಈ ದುರವಸ್ಥೆ ನಿವಾರಣೆ ವಿಷಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ವಿಜಯಪುರ ಶಾಹಿ ಆರಸರ ರಾಜಧಾನಿಯಾಗಿತ್ತು. ಶಾಹಿ ವಂಶದ ಸಂಸ್ಥಾಪಕ ಯಸೂಫ್ ಆದಿಲ್ ಶಹಾ ರಾಜಧಾನಿವಾಸಿ ಪ್ರಜೆಗಳ ಸುರಕ್ಷತೆಗಾಗಿ ಸುಮಾರು 10 ಕಿ.ಮೀ. ಸುತ್ತಲೂ ಕಲ್ಲುಗಳಿಂದ ಬೃಹತ್ ಕೋಟೆ ಕಟ್ಟಿಸಿದ್ದು, ಕೋಟೆ ಸುತ್ತಲೂ ಹೊರ ಪರಿಧಿಯಲ್ಲಿ ಕಂದಕ ನಿರ್ಮಿಸಿದ್ದಾನೆ. ಮತ್ತೂಂದೆಡೆ ರಾಜಧಾನಿಯಲ್ಲಿ ತನ್ನ ಅರಮನೆ ಸುತ್ತಲೂ ಅರೆಕಿಲ್ಲಾ ಎಂಬ ಕೋಟೆಯನ್ನೂ ನಿರ್ಮಿಸಿದ್ದಾನೆ.
ವಿಜಯನಗರ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿ ವಿಜಯ ಸಾಧಿಸಿದ ಸ್ಮರಣೆಗಾಗಿ ಅಲಿ ಆದಿಲ್ ಶಹಾ ಅರೆಕಿಲ್ಲಾ ಕೋಟೆಯನ್ನು ನಿರ್ಮಿಸಿದ್ದು, ಕೋಟೆ ಹೊರ ಭಾಗದಲ್ಲಿ 6 ಮೀ. ಅಳದ ಹಾಗೂ 12ರಿಂದ 15 ಮೀ. ಅಗಲದ ಬೃಹತ್ ಕಂದಕ ನಿರ್ಮಿಸಿದ್ದಾನೆ. ರಾಜಧಾನಿ ಹಾಗೂ ಅರಮನೆ ಸುತ್ತಲೂ ನಿರ್ಮಿಸಿರುವ ಕೋಟೆ-ಆರೆಕಿಲ್ಲಾ ಕಂದಕಗಳಲ್ಲಿ ನಿರಂತರ ನೀರು ಇರಿಸಿ, ಇದರಲ್ಲಿ ಮೊಸೆಳಗಳನ್ನು ಇರಿಸಿದ್ದ. ಇದರಿಂದ ವಿಜಯನಗರದ ಆರಸರು ಸೇರಿದಂತೆ ಯಾವುದೇ ವೈರಿ ರಾಜರು ಸುಲಭವಾಗಿ ತನ್ನ ಕೋಟೆಯನ್ನು ಬೇಧಿಸದಂತೆ ವಿಶಿಷ್ಟ ರೀತಿಯಲ್ಲಿ ಜಲಕೋಟೆ ನಿರ್ಮಿಸಿದ್ದ. ಅರೆಕಿಲ್ಲಾ ಪ್ರದೇಶದಲ್ಲಿ ಶಾಹಿ ದೊರೆ ಎರಡನೇ ಅಲಿ ಆದಿಲ್ ಶಹಾ ಗಗನ ಮಹಲ್ ಎಂಬ ಮಹಲ್ ನಿರ್ಮಿಸಿದ್ದು, ಇದರ ಪಕ್ಕದಲ್ಲೇ ಕಂದಕವೂ ಇದೆ. ಕಂದಕದಲ್ಲಿ ಈ ಹಿಂದೆ ಶಾಹಿ ಅರಸರ ಜಲ ಸಂರಕ್ಷಣೆ ಹಾಗೂ ವಿಶಿಷ್ಟ ತಾಂತ್ರಿಕತೆಯಿಂದ ಕಂದಕದಲ್ಲಿ ನಿರಂತರ ನೀರು ನಿಲ್ಲುವ ವ್ಯವಸ್ಥೆ ಮಾಡಿದ್ದರು.
ಕೋಟೆ ಸುತ್ತಲೂ ಕಂದಕ ಒತ್ತುವರಿಯಾಗಿದ್ದು, ಅಲ್ಲಲ್ಲಿ ಮಹಾನಗರ ಪಾಲಿಕೆ ಕಂದಕ ಸುತ್ತ ಚರಂಡಿ ನಿರ್ಮಾಣಕ್ಕೆ ಮುಂದಾಗಿದೆ. ಐತಿಹಾಸಿಕ ಗಗನ ಮಹಲ್ ಪಕ್ಕದ ಕಂದಕ ಇದೀಗ ವಿಜಯಪುರ ನಗರದ ಚರಂಡಿ ನೀರು ಸಂಗ್ರಹ ಕೇಂದ್ರವಾಗಿದೆ. ಕಂದಕದಲ್ಲಿ ಚರಂಡಿ ನೀರು ಸೇರುವ ಕಾರಣ ಗಗನ ಮಹಲ್ ಹಾಗೂ ಎರಡನೇ ಅಲಿ ಆದಿಲ್ ಶಾಹಿ 1670ರಲ್ಲಿ ಅಪರೂಪದ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ಅರ್ಧಕ್ಕೆ ನಿಂತಿರುವ ಬಾರಾಕಮಾನ್ ಸ್ಮಾರಕಗಳ ಸುತ್ತಲೂ ಕಂದಕದಲ್ಲಿ ಚರಂಡಿ ನೀರು ಶೇಖರಣೆಗೊಂಡು ಈ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತಿವೆ. ಈ ಅಪರೂಪದ ಸ್ಮಾರಕಗಳಿಗೆ ಭೇಟಿ ನೀಡುವ ಪ್ರವಾಸಿಗರು ಪರಂಪರೆಯ ನಗರ ವಿಜಯಪುರದ ಕುರಿತು ನಕಾರಾತ್ಮಕ ಭಾವನೆ ಹೊಂದುವಂತಾಗಿದೆ.
ಚರಂಡಿ ನೀರನ್ನು ಕಂದಕಗಳಿಗೆ ಬೀಡುತ್ತಿರುವುದನ್ನು ತಡೆಯುವಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಪಾಲಿಕೆ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಪಾಲಿಕೆಯ ಬೇಜವಾಬ್ದಾರಿ ನಡೆಯಿಂದ ನಮ್ಮ ಸ್ಮಾರಕಗಳು ಅಪಾಯಕ್ಕೆ ಸಿಲುಕಿವೆ ಎಂದೆಲ್ಲ ದೂರುತ್ತಾರೆ. ಕಂದಕಗಳಲ್ಲಿ ಚರಂಡಿ ನೀರು ಶೇಖರಣೆಗೊಂಡು ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿರುವ ಕುರಿತು ಆರೋಗ್ಯ ಇಲಾಖೆ ಕೂಡ ಪಾಲಿಕೆಗೆ ಪತ್ರ ಬರೆದಿದೆ. ಆದರೂ ಕಂದಕದ ಕೊಳಕು ನಿವಾರಣೆಗೆ ಮುಂದಾಗಿಲ್ಲ.
ಈ ಕುರಿತು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಹೇಳುವುದೇ ಬೇರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಮಾರಕ, ಕೋಟೆ, ಕಂದಕಗಳನ್ನು ಒತ್ತುವರಿ ಮಾಡಿದ ಬೃಹತ್ ಕಟ್ಟಡಗಳನ್ನು ಕಟ್ಟಿದ ಜನರ ವಿರುದ್ಧ ಚಕಾರ ಎತ್ತುವುದಿಲ್ಲ. ಆದರೆ ಮಹಾನಗರ ಪಾಲಿಕೆ ನಗರದಲ್ಲಿ ಚರಂಡಿ, ರಸ್ತೆ ನಿರ್ಮಾಣದಂಥ ಮೂಲಭೂತ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಪರಂಪರೆ ಯಾವುದಕ್ಕೂ ಧಕ್ಕೆ ಆಗದಂತೆ ಅಭಿವೃದ್ಧಿ ಕಾಮಗಾರಿ ರೂಪಿಸಿದರೆ ತಕರಾರು ಮಾಡುತ್ತಾರೆ ಎಂದು ದೂರುತ್ತಾರೆ.
ಪರಿಣಾಮ ನಗರದ ಕೋಟೆ ಸುತ್ತಲೂ ಯಾವುದೇ ಸಮಸ್ಯೆ ಆಗದಂತೆ ಚರಂಡಿ ನಿರ್ಮಿಸಲು ಮುಂದಾಗಿ ಸರ್ಕಾರದಿಂದ 2.50 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿಸಿತ್ತು. ಆದರೆ ಪುರಾತತ್ವ ಇಲಾಖೆ ಮೊಂಡುತನದಿಂದ ಅನುದಾನ ಮರಳಿ ಹೋಗಿದೆ. ಹೀಗಾಗಿ ನಗರದಲ್ಲಿ ಪರಂಪರೆಗೆ ಹಾನಿಯಾಗದಂತೆ ಕೋಟೆ ಸುತ್ತಲೂ ರಾಜಕಾಲುವೆ ಮಾದರಿಯಲ್ಲಿ ಚರಂಡಿ ನಿರ್ಮಿಸಲು ಮಹಾನಗರ ಪಾಲಿಕೆ 35 ಕೋಟಿ ರೂ. ಪ್ರವಸ್ತಾವನೆ ಸಲ್ಲಿಸಿದೆ.
ಕಂದಕ ಮಾತ್ರವಲ್ಲ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಬರುವ ಬರುವ ಪ್ರವಾಸಿಗರ ಅನುಕೂಲಕ್ಕೆ ಉತ್ತಮ ರಸ್ತೆ, ನಗರದ ಸೌಂದರ್ಯಕ್ಕೆ ಚರಂಡಿ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲೆಲ್ಲ ಪುರಾತತ್ವ ಇಲಾಖೆ ಮಹಾನಗರ ಪಾಲಿಕೆ ವಿರುದ್ಧ ಸ್ಮಾರಕಕ್ಕೆ ಧಕ್ಕೆ, ಪರಂಪರೆ ನಾಶದ ಕುರಿತು ಪ್ರಕರಣ ದಾಖಲಿಸಿದೆ. ಇದರಿಂದ ನಗರದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳೂ ಅನುದಾನ ಸರ್ಕಾರಕ್ಕೆ ಮರಳಿ, ಸೌಲಭ್ಯಗಳು ನನೆಗುದಿಗೆ ಬೀಳುವಂತಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಇನ್ನು ಗಗನಮಹಲ್ ಬಳಿ ಕಂದಕ ಸ್ವಚ್ಛತೆ ವಿಷಯದಲ್ಲೂ ಇದೇ ರೀತಿ ಸಮಸ್ಯೆ ಇದೆ. ಮಾಧ್ಯಮಗಳು ವರದಿ ಮಾಡಿ ಗಮನ ಸೆಳೆದಾಗ ಆಗೊಮ್ಮೆ ಈಗೊಮ್ಮೆ ಪುರಾತತ್ವ ಇಲಾಖೆ ಕಂದಕದ ತಾಜ್ಯ ಹೊರ ಹಾಕುವುದನ್ನು ಬಿಟ್ಟರೆ ಕಂದಕ ರಕ್ಷಣೆಗೆ ಮುಂದಾಗಿಲ್ಲ. ಪಾಲಿಕೆ ಆಧಿಕಾರಿಗಳು ನಿಯಮ ಬಾಹೀರವಾಗಿ ಪಾರಂಪರಿಕ ಕಂದಕಕ್ಕೆ ನಗರದ ಚರಂಡಿ ನೀರನ್ನು ಬಿಡುವ ಮೂಲಕ ಸ್ಮಾರಕಗಳ ಪರಿಸರವನ್ನು ವಿರೂಪಗೊಳಿಸುವ ಕೆಲಸ ಮಾಡುತ್ತಿದೆ. ಇದರಿಂದ ಸ್ಮಾರಕಗಳ ಸುತ್ತಲೂ ಕಂದಕಗಳಲ್ಲಿ ಚರಂಡಿ ಮಲೀನ ಸಂಗ್ರಹವಾಗಿ ದುರ್ವಾಸನೆ ಹರಡಿಕೊಂಡು, ನಿರ್ವಹಣೆ ಅಸಾಧ್ಯವಾಗುತ್ತಿದೆ. ಪಾಲಿಕೆ ಅಧಿಕಾರಿಗಳ ಕಡೆಗೆ ಬೆರಳು ತೋರಿಸಿ ಹರಿಹಾಯುತ್ತಾರೆ.
ಇನ್ನೂ ಗಗನಮಹಲ್ ಬಳಿಯ ಕಂದಕ ನಿರ್ವಹಣೆಗೆ ಪ್ರವಾಸಿಗರ ಆಕರ್ಷಣೆ ಮಾಡಲು ಕಂದಕದ ನೀರನ್ನು ಶುಚಿಗೊಳಿಸಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಈ ಹಿಂದೆ ಹಲವು ಬಾರಿ ವಿವಿಧ ಮಜಲುಗಳಲ್ಲಿ ಪ್ರಯತ್ನಗಳು ನಡೆದಿದ್ದರೂ ಕನಸು ನನಸಾಗಿಲ್ಲ. 2015ರಲ್ಲಿ ಫೆಬ್ರವರಿ 28ರಿಂದ ಮಾರ್ಚ್ 1ರವರೆಗೆ ನಡೆದ ನವಸರಪುರ ಉತ್ಸವದ ಸಂದರ್ಭದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆಲಮಟ್ಟಿಯಲ್ಲಿ ಬೋಟಿಂಗ್ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಂದಲೇ ಪೆಡಲಿಂಗ್ ಹಾಗೂ ಯಾಂತ್ರೀಕೃತ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು.
ನವರಸಪುರ ಉತ್ಸವದಲ್ಲಿ ಮೊದಲ ಬಾರಿಗೆ ನಡೆದ ಬೋಟಿಂಗ್ ಪ್ರಯೋಗ ಯಶಸ್ವಿಯಾಗುತ್ತಲೇ ಕಂದಕ ನಿರ್ವಹಣೆ ಜೊತೆಗೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಶಾಶ್ವತ ಬೋಟಿಂಗ್ ವ್ಯವಸ್ಥೆಗೂ ಚಿಂತಿಸಲಾಗಿತ್ತು. ಆದರೆ ಪುರಾತತ್ವ ಇಲಾಖೆ ತಕರಾರು ತೆಗೆದ ಕಾರಣ ಯೋಚನೆ ಯೋಜನೆ ರೂಪ ಪಡೆಯುವ ಹಂತದಲ್ಲೇ ನನೆಗುದಿಗೆ ಬಿದ್ದಿತ್ತು. ಇದರ ಹೊರತಾಗಿ ಕಳೆದ ವರ್ಷ ಈ ಕಂದಕದಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಸುಮಾರು 50 ಲಕ್ಷ ರೂ. ವೆಚ್ಚ ಯೋಜನೆಗೆ ಮಂಜೂರಾತಿ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರ ಕಥೆ ಏನಾಗಿದೆ ಎಂದು ಹೇಳಲು ಇಲಾಖೆಯಲ್ಲಿ ಪ್ರಭಾರಿ ಅಧಿಕಾರಿಗಳು ಲಭ್ಯವಾಗುವುದೇ ಇಲ್ಲ.
ಇನ್ನು ಕಂದಕದ ಮಾಲಿನ್ಯ ಹಾಗೂ ದುರ್ವಾಸನೆ ಕಥೆ ಒಂದೆಡೆಯಾದರೆ, ನಗರದ ಹಲವು ಸ್ಮಾರಕಗಳು ಬಯಲು ಬಹಿರ್ದೆಸೆ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಅದರಲ್ಲಿ ನಿತ್ಯವೂ ಸಾವಿರಾರು ಜನರು ಭೇಟಿ ನೀಡುವ ಇಬ್ರಾಹಿಂ ರೋಜಾ, ತಾಜಬಾವಡಿ ಸ್ಮಾರಕಗಳ ಸುತ್ತಲೂ ಚರಂಡಿ ನೀರಿನ ದುರ್ವಾಸನೆ ಮಾತ್ರವಲ್ಲದೇ, ಸುತ್ತಲೂ ತಿಪ್ಪೆಗುಂಡಿಗಳನ್ನು ಹಾಕಲಾಗಿದೆ. ಪರಿಣಾಮ ದೇಶ-ವಿದೇಶಿ ಪ್ರವಾಸಿಗರಿಗೆ ವಿಜಯಪುರ ಜಿಲ್ಲೆಯ ಪಾರಂಪರಿಕ ಸ್ಮಾರಕಗಳ ವೀಕ್ಷಣೆ ಪ್ರವಾಸದ ಕುರಿತು ನಕಾರಾತ್ಮಕ ಸಂದೇಶ ರವಾನಿಸುವಂತಾಗಿದೆ.
ಇಂಥ ಹಲವು ಕಾರಣಗಳಿಂದಾಗಿ ಐತಿಹಾಸಿಕ ಸ್ಮಾರಕಗಳು ಬಯಲು ಶೌಚಾಲಯಗಳಾಗಿ ಪರಿವರ್ತನೆ ಗೊಂಡಿದ್ದರೆ, ಪಾರಂಪರಿಕ ಕಂದಕಗಳು ಚರಂಡಿ-ಕೊಳಚೆ ಸಂಗ್ರಹಾಗಾರವಾಗಿ ಮಾರ್ಪಾಡಾಗಿವೆ. ಪ್ರವಾಸೋದ್ಯಮ ಅಭಿವೃದ್ಧಿ ಮೇಲೆ ಪುರಾತತ್ವ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳ ಮಧ್ಯದ ಈ ಸಂಘರ್ಷ ನೇರ ಪರಿಣಾಮ ಬೀರುವಂತಾಗಿದೆ.
•ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.