Vijayapura: ಪತ್ನಿಯ ಅಕ್ರಮ ಸಂಬಂಧ; ಪತಿಯ ಬರ್ಬರ ಹತ್ಯೆ
6 ತಿಂಗಳ ಬಳಿಕ ಪ್ರಕರಣ ಪತ್ತೆ : ಪತ್ನಿ, ಆಕೆಯ ಪ್ರಿಯಕರನ ಬಂಧನ
Team Udayavani, Aug 28, 2023, 11:04 PM IST
ವಿಜಯಪುರ : ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ತನ್ನ ಪ್ರಿಯಕರನೊಂದಿಗೆ ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಿದ ಪ್ರಕರಣವನ್ನು 6 ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ.
ಬಸವನಬಾಗೇವಾಡಿ ಪಟ್ಟಣದಲ್ಲಿ ಕಳೆದ ಫೆಬ್ರವರಿ 23 ರಂದು ಮಧ್ಯರಾತ್ರಿ 11-30 ರ ಸುಮಾರಿಗೆ ಜಕರಾಯ ದಳವಾಯಿ ಎಂಬ ವ್ಯಕ್ತಿಯ ಹತ್ಯೆಯಾಗಿತ್ತು. ಜಕರಾಯನ ಪತ್ನಿ ಜಯಶ್ರೀ (34) ಹಾಗೂ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಡೋಂಗ್ರಿಸಾಬ್ ಬೊಮ್ಮನಹಳ್ಳಿ (38) ಇಬ್ಬರೂ ವ್ಯವಸ್ಥಿತ ಸಂಚು ರೂಪಿಸಿ, ಹತ್ಯೆ ಮಾಡಿ, ಶವವನ್ನು ಸುಟ್ಟು ಹಾಕಿ, ಸಾಕ್ಷಿ ನಾಶ ಪಡಿಸಿದ್ದರು.
ಕಾಣೆಯಾದ ಮಗನ ಕುರಿತು ಅನುಮಾನಗೊಂಡ ಜಕರಾಯನ ತಂದೆ ಭೀಮರಾಯ ಆ.25 ರಂದು ಬಸವನಬಾಗೇವಾಡಿ ಪೊಲೀಸರಿಗೆ ದೂರು ನೀಡಿದ್ದರು. ಹತ್ಯೆಯಾದ ವ್ಯಕ್ತಿಯ ಕುರಿತು ಯಾವ ಸುಳಿವೂ ಇರಲಿಲ್ಲ. ಆದರೂ ಪೊಲೀಸರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪತ್ನಿಯೇ ಸಂಚು ರೂಪಿಸಿ ಹತ್ಯೆ ಮಾಡಿ, ಸಾಕ್ಷಿ ನಾಶ ಮಾಡಿರುವುದು ಬೆಳಕಿಗೆ ಬಂದಿದೆ.
ಬಸವನಬಾಗೇವಾಡಿ ಮೂಲದ ಡೋಂಗ್ರೀಸಾಬ್ ಮದುವೆ ಇತರೆ ಸಮಾರಂಭಗಳಿಗೆ ಅಡುಗೆ ಮಾಡುವ ಗುತ್ತಿಗೆ ಪಡೆಯುತ್ತಿದ್ದ. ವಿಜಯಪುರ ತಾಲೂಕಿನ ಹೆಗಡಿಹಾಳ ಮೂಲದ ಬಸವನಬಾಗೇವಾಡಿ ಪಟ್ದಣದಲ್ಲಿ ವಾಸವಿದ್ದ ಜಕರಾಯನ ಪತ್ನಿ ಜಯಶ್ರೀ ಅಡುಗೆ ಕೆಲಸಕ್ಕೆ ಹೋಗುತ್ತಿದ್ದಳು.
ಈ ಹಂತದಲ್ಲಿ ಜಯಶ್ರೀ ಹಾಗೂ ಡೊಂಡ್ರೀಸಾಬ್ ಇವರ ಮಧ್ಯೆ ಅನೈಕ ಸಂಬಂಧ ಬೆಸೆದಿದೆ. ಈ ವಿಷಯ ಜಕರಾಯನಿಗೆ ಗೊತ್ತಾಗಿ ಡೋಂಗ್ರಿಸಾಬ್‍ನ ಸಹವಾಸ ಬಿಡುವಂತೆ ಪತ್ನಿ ಜಯಶ್ರೀಗೆ ಬುದ್ದಿವಾದ ಹೇಳಿದ್ದಾನೆ. ಆದರೆ ಪತಿಯ ಬುದ್ದಿ ಮಾತಿಗೆ ಬಗ್ಗದ ಜಯಶ್ರೀ ಪತಿಯನ್ನೇ ಹತ್ಯೆ ಮಾಡುವ ಸಂಚು ರೂಪಿಸಿದ್ದಾಳೆ.
ಫೆ.23 ರಂದು ರಾತ್ರಿ 11-50ಕ್ಕೆ ಪತಿ ಮನೆಗೆ ಬರುತ್ತಲೇ ಜಯಶ್ರೀ ಮಾಹಿತಿ ನೀಡಿದಂತೆ ಡೋಂಗ್ರೀಸಾಬ್ ಮನೆಗೆ ಬಂದಿದ್ದಾನೆ. ಪತಿಯನ್ನು ಜಯಶ್ರೀ ಬಿಗಿಯಾಗಿ ಹಿಡಿಯುತ್ತಲೇ ಡೋಂಗ್ರಿಸಾಬ್ ಕೊಡಲಿಯಿಂದ ಜಕರಾಯನನ್ನು ಹೊಡೆದು ಹತ್ಯೆ ಮಾಡಿದ್ದಾನೆ.
ಬಳಿಕ ಶವವನ್ನು ಹೊದಿಕೆಯಲ್ಲಿ ಕಟ್ಟಿಕೊಂಡು ದ್ವಿಚಕ್ರ ವಾಹನದಲ್ಲಿ ಲಾವಣಿ ಯಮನಪ್ಪ ಅವಟಿ ಎಂಬವರ ಜಮೀನಿಲ್ಲಿ ಮೊದಲೇ ಸಂಗ್ರಹಿಸಿ ಇರಿಸಿದ ಕಟ್ಟಿಗೆಯಲ್ಲಿ ಹಾಕಿ ಬೆಂಕಿಹಚ್ಚಿ ಬಂದಿದ್ದಾರೆ. ಆದರೆ ಶವ ಸರಿಯಾಗಿ ಸುಡದ ಕಾರಣ ಫೆ.25 ರಂದು ಮತ್ತಷ್ಟು ಕಟ್ಟಿಗೆ ಹಾಕಿ ಶವನ್ನು ಸುಟ್ಟು ಉಳಿದ ಬೂದಿ ಹಾಗೂ ಕಟ್ಟಿಗೆಯನ್ನು ಪಕ್ಕದಲ್ಲಿದ್ದ ಭಾವಿಗೆ ಎಸೆದಿದ್ದಾರೆ.
ಅಲ್ಲದೇ ಜಕರಾಯನ ಎಟಿಎಂ ಕಾರ್ಡ್, ಪಾನ್ ಕಾರ್ಡ್, ವಾಹನ ಚಾಲನಾ ಪರವಾನಿಗೆ ಪತ್ರ, ಪಾಸ್‍ಪೋರ್ಟ್ ಅಳತೆಯ ಫೋಟೋ, ಕೊಲೆಗೆ ಬಳಸಿದ ಕೊಡಲಿ ಎಲ್ಲವನ್ನೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಇಟ್ಟಿಗೆಯನ್ನು ಇಟ್ಟು ಬಾವಿಗೆ ಎಸೆದು ಸಾಕ್ಷಿ ನಾಶಮಾಡಿ ಬಂದಿದ್ದಾರೆ.
ತನ್ನ ತಂದೆ ಕಾಣೆಯಾದ ಕುರಿತು ಮಗಳು ಪದೇ ಪದೇ ಕೇಳು ಆರಂಭಿಸಿದಾ, ಜಕರಾಯನ ತಂದೆ ಭೀಮರಾಯ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿ, ವಿಚಾರಣೇ ನಡೆಸಿದಾಗ ಅಕ್ರಮ ಸಂಬಂಧ ಹಾಗೂ ಸಾಕ್ಷಿ ನಾಶ ಪಡಿಸಿದ ವ್ಯವಸ್ಥಿತ ಸಂಚಿನ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮೀಣ ಉಪ ವಿಭಾಗದ ಡಿಎಸ್ಪಿ ಜಿ.ಎಚ್.ತಳಕಟ್ಟಿ, ಸಿಪಿಐ ಆರ್.ಎಸ್.ಜಾನರ, ಪಿಎಸ್‍ಐ ವಿನೋನ ಪೂಜಾರಿ, ಆರ್.ಎ.ದಿನ್ನಿ ಅವರ ನೇತೃತ್ವದಲ್ಲಿ ತನಿಖಾ ತಂಡ ಇಲಾಖೆಗೆ ಸವಾಲಾಗಿದ್ದ ಇಡೀ ಪ್ರಕರಣವನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಆನಂದಕುಮಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.