ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಲ್ಲ
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ಸಭೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ
Team Udayavani, Mar 13, 2020, 11:55 AM IST
ವಿಜಯಪುರ: ಜಿಲ್ಲಾದ್ಯಂತ ಯಾವುದೇ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ವಿಶೇಷವಾಗಿ ಕೊರೊನಾ ವೈರಸ್ ವಿಸ್ತರಣೆಗೆ ಹೆಸರುವಾಸಿಯಾಗಿರುವ 10 ದೇಶಗಳಾದ ಚೀನಾ, ಇಟಲಿ, ದಕ್ಷಿಣ ಕೊರಿಯಾ, ಇರಾನ್, ಹಾಂಕಾಂಗ್, ಜರ್ಮನಿ, ಥೈಲ್ಯಾಂಡ್, ಸಿಂಗಾಪುರ, ಮಲೇಶಿಯಾ, ಸ್ಪೇನ್ ಪ್ರಜೆಗಳು ಮತ್ತು ಪ್ರವಾಸಿಗರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಗುರುವಾರ ಜಿಪಂ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಹೊಟೇಲ್ ಮಾಲಿಕರ ಸಂಘದ ಪ್ರತಿನಿಧಿ ಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕೊರೊನಾ ವೈರಸ್ ಮಾಹಿತಿ ವಿನಿಮಯ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಜಿಲ್ಲಾದ್ಯಂತ ಈ ವರೆಗೆ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ. ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ ಅವರು, ಸ್ವಚ್ಚತೆಗೆ ವಿಶೇಷ ಗಮನ ನೀಡುವ ಮೂಲಕ ಮುನ್ನೆಚ್ಚರಿಕೆ ವಹಿಸಲು ಅವರು ಮನವಿ ಮಾಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಕೊರೊನಾ ವೈರಸ್ ಕುರಿತು ಸೂಕ್ತ ಅರಿವು ಮೂಡಿಸಲಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅವಶ್ಯಕ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವಿದೇಶದಿಂದ 13 ಜನ ಪ್ರವಾಸಿಗರು ಬಂದಿದ್ದು, ವಿಶೇಷವಾಗಿ ಕೊರೊನಾ ವೈರಸ್ ವ್ಯಾಪಕವಾಗಿರುವ ಚೀನಾ, ಇಟಲಿ, ದಕ್ಷಿಣ ಕೊರಿಯಾ, ಇರಾನ್, ಹಾಂಕಾಂಗ್, ಜರ್ಮನಿ, ಥೈಲ್ಯಾಂಡ್, ಸಿಂಗಾಪುರ, ಮಲೇಶಿಯಾ, ಸ್ಪೇನ್ ಪ್ರಜೆಗಳು ಮತ್ತು ಪ್ರವಾಸಿಗರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಹೀಗಾಗಿ ವಿವಿಧ ಆಸ್ಪತ್ರೆ, ಹೊಟೇಲ್‌ಗಳಿಗೆ ಆಗಮಿಸುವ ಈ ಪ್ರಜೆಗಳು ಸ್ವಯಂ ವರದಿ ನೀಡಲು ನಿಗದಿತ ನಮೂನೆಯನ್ನು ಭರ್ತಿಗೆ ತಿಳಿಸಿದ್ದು, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಜಿಲ್ಲಾಸ್ಪತ್ರೆ ಸರ್ಜನ್ ಅವರಿಗೆ ದೂರು ಸಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆ, ಅಲ್ ಆಮೀನ್, ಬಿಎಲ್‌ಡಿಇ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ಇತರೆ ಆಸ್ಪತ್ರೆಗಳ ಸಹಕಾರ ಸಹ ಕೋರಲಾಗಿದೆ. ಆಸ್ಪತ್ರೆಯಲ್ಲಿ 3 ಅಡಿ ಅಂತರ ಇರುವ ಬೆಡ್, ವೆಂಟಿಲೇಟೆಡ್ ಕೊಠಡಿಗಳನ್ನು ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಕೊರೊನಾ ವೈರಸ್ ಪರಿಶೀಲನೆಗೆ ರಾಜ್ಯದ ಬೆಂಗಳೂರು ಎರಡು ಕಡೆಗಳಲ್ಲಿ, ಮೈಸೂರು, ಶಿವಮೊಗ್ಗ, ಹಾಸನಗಳಲ್ಲಿ ಮಾತ್ರ ಲ್ಯಾಬ್‌ಗಳ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದಿಂದ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೊರೊನಾ ವೈರಸ್ ಬರದಂತೆ ಮುನ್ನೆಚ್ಚರಿಕೆ ವಹಿಸಲು ಸಾಬೂನಿನಿಂದ ಕೈ ತೊಳೆಯಬೇಕು. ಕೈ ಕುಲುಕುವುದನ್ನು ಮಾಡಬಾರದು, ಕೆಮ್ಮು ಮತ್ತು ಸೀನುವ ಸಂದರ್ಭದಲ್ಲಿ ಕರವಸ್ತ್ರ ಬಳಸುವುದು, ಕೆಮ್ಮು, ನೆಗಡಿ, ಜ್ವರ ಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
ಕೊರೊನಾ ವೈರಸ್‌ಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಸುಳ್ಳು ವದಂತಿಗಳನ್ನು ವಾಟ್ಸ್ ಆ್ಯಪ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಸಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮಾಂಸ ಹಾಗೂ ಮೊಟ್ಟೆ ತಿನ್ನುವುದರಿಂದ ಯಾವುದೇ ಅಪಾಯವಿಲ್ಲ. ಬೇಯಿಸಿ ತಿನ್ನುವುದರಿಂದ ಈ ವೈರಸ್‌ನಿಂದ ಯಾವುದೇ ಅಪಾಯವಿರುವುದಿಲ್ಲ. ಕೊರೊನಾ ವೈರಸ್‌ಗೆ ಸಂಬಂಧಪಟ್ಟಂತೆ ಆರೋಗ್ಯ ಸಹಾಯವಾಣಿ 104ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಮಾ.16ರೊಳಗೆ 1ರಿಂದ 3ನೇ ತರಗತಿ, ಮಾ.21ರೊಳಗೆ 4ರಿಂದ 9ನೇ ತರಗತಿಯ ಪರೀಕ್ಷೆ ಪೂರ್ಣಗೊಳಿಸಲು ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಯಾ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸರ್ಕಾರಿ ಹಾಗೂ ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಈ ನಿಯಮ ಪಾಲಿಸುವಂತೆ ನೋಡಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಎಸ್ಪಿ ಅನುಪಮ ಅಗರವಾಲ್, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.