ರಾಜ್ಯದ ಜೀವನದಿ ಕೃಷ್ಣೆ ಮಕ್ಕಳಿಗೆ ವಚನ ಕೊಡುವರೆ ಬೊಮ್ಮಾಯಿ?
ನಿರುದ್ಯೋಗಿ ಕೇಂದ್ರಗಳಂತಾಗಿರುವ ಪುನರ್ವಸತಿ ಕೇಂದ್ರಗಳ ದುಸ್ಥಿತಿಯ ಸುಧಾರಣೆಗೆ ಚಿತ್ತ ನೆಡಬೇಕಿದೆ.
Team Udayavani, Aug 21, 2021, 6:06 PM IST
ವಿಜಯಪುರ: ಕಳೆದ ಅರ್ಧ ಶತಮಾನದಿಂದ ನೀರಾವರಿಗಾಗಿ ಹಪಾಹಪಿಸುತ್ತಿರುವ ಉತ್ತರ ಕರ್ನಾಟಕಕ್ಕೆ ಜೀವನದಿ ಕೃಷ್ಣೆ ಈಗಷ್ಟೇ ವರವಾಗಿ ಹರಿಯುತ್ತಿದ್ದಾಳೆ. ಆದರೆ ಕೃಷ್ಣೆಯ ಸಂತ್ರಸ್ತರು, ಕೃಷ್ಣೆಯ ಒಡಲಲ್ಲಿರುವ ರೈತರು, ಪ್ರತಿ ವರ್ಷ ಪ್ರವಾಹ ಪೀಡಿತರಾಗಿ ಸಂಕಷ್ಟ ಎದುರಿಸುತ್ತಿರುವ ಅನ್ನದಾತರ ಗೋಳಿಗೆ ಮುಕ್ತಿ ಹಾಡಲು ರಾಜಕೀಯ ಇಚ್ಛಾಶಕ್ತಿಯ ಪ್ರದರ್ಶನ ಬೇಕಿದೆ. ಹೀಗಾಗಿ ಮುಖ್ಯಮಂತ್ರಿಯಾದ ಬಳಿಕ ಕೃಷ್ಣೆಗೆ ಮಡಿಲು ತುಂಬುವುದಕ್ಕಾಗಿ ಮೊದಲ ಬಾರಿಗೆ ಬಸವನಾಡಿಗೆ ಬರುತ್ತಿರುವ ರಾಜ್ಯದ ದೊರೆ ಬಸವರಾಜ ಬೊಮ್ಮಾಯಿ ಹಲವು ದಶಕಗಳ ತಮ್ಮ ಬೇಡಿಕೆಗೆ ಸ್ಪಷ್ಟ ವಚನ ನೀಡುವ ನಿರೀಕ್ಷೆಯಲ್ಲಿ ಕೃಷ್ಣೆಯ ಮಕ್ಕಳು ಕಾತರದಿಂದ ಕಾಯುತ್ತಿದ್ದಾರೆ.
ರಾಜ್ಯದ ಜೀವನದಿ ಕೃಷ್ಣೆಗೆ ಬಸವನಾಡಿನ ಆಲಮಟ್ಟಿ ಬಳಿ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಕೃಷ್ಣೆ ಮೈದುಂಬಿ ನಿಂತಿದ್ದಾಳೆ. ಶಾಸ್ತ್ರಿ ಸಾಗರದಲ್ಲಿ ನೀರು ಸಂಗ್ರಹದ ಬಳಿಕ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಮುಖ್ಯಮಂತ್ರಿಗಳು ಈ ಜಲಾಶಯ ಭರ್ತಿಯಾದಾಗಲೆಲ್ಲ ಬಾಗಿನ ಅರ್ಪಿಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.
ಅದರ ಮುಂದುವರೆದ ಭಾಗವಾಗಿ ಮೈದುಂಬಿ ನಿಂತು ಭೋರ್ಗರೆಯುತ್ತಿರುವ ಕೃಷ್ಣೆಯ ಮಡಿಲಿಗೆ ಸಾಂಪ್ರದಾಯಿಕ ಬಾಗಿನ ಅರ್ಪಿಸುವುದಕ್ಕೆ ಆ. 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲಮಟ್ಟಿಗೆ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಬರುತ್ತಿದ್ದಾರೆ. ಕಾರಣ ಜಿಲ್ಲೆಯ ಜನರು ಮುಖ್ಯಮಂತ್ರಿ ಬೊಮ್ಮಾಯಿ ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಸಮಗ್ರ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ತಮ್ಮ ಸರ್ಕಾರದ ಬದ್ಧತೆಯ ಕುರಿತು ವಚನ ನೀಡುವ ನಿರೀಕ್ಷೆಯಲ್ಲಿದ್ದಾರೆ.
1964 ಮಾರ್ಚ್ 22ರಂದು ಕೇಂದ್ರ ಸಚಿವರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲು ಹಾಕಿದ್ದ ನೀರಾವರಿ ಯೋಜನೆ ಪೂರ್ಣಗೊಂಡಿದ್ದು 2000ನೇ ಇಸ್ವಿಯಲ್ಲಿ. ಮರು ವರ್ಷವೇ ಶಾಸ್ತ್ರಿ ಜಲಾಶಯದಲ್ಲಿ 524.256 ಮೀ. ಎತ್ತರದ ಗೇಟ್ ಅಳವಡಿಸಿ, ಪ್ರಾಯೋಗಿಕವಾಗಿ ನೀರು ನಿಲ್ಲಿಸಲು ಆರಂಭಿಸಲಾಯಿತು. ಆದರೆ ಅಂದು ಹಲವು ಪ್ರಾದಶಿಕ ಪಕ್ಷಗಳ ಬೆಂಬಲದಿಂದ ಪ್ರಧಾನಿ ಹುದ್ದೆಯಲ್ಲಿದ್ದವರೇ ಕನ್ನಡಿಗರ ದೇವೇಗೌಡರು.
ಜಲಾಶಯದಲ್ಲಿ 524.256 ಮೀಟರ್ ಗೇಟ್‌ಗಳನ್ನು 519.600 ಮೀಟರ್‌ಗೆ ಕತ್ತರಿಸದಿದ್ದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವುದಾಗಿ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಸಂಚಾಲಕರಾಗಿದ್ದ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆದರಿಕೆ ಹಾಕಿದರು. ಸಾಲದ್ದಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋದರು. ಪರಿಣಾಮ ಶಾಸ್ತ್ರಿ ಸಾಗರಕ್ಕೆ ಅಳವಡಿಸಿದ್ದ ಗೇಟ್‌ಗಳನ್ನು 5 ಮೀ. ಕತ್ತರಿಸಿ, 2002ರಿಂದ ನೀರು ನಿಲ್ಲಿಸಲು ಆರಂಭಿಸಿದರು.
ದಶಕದ ಬಳಿಕ ಕೃಷ್ಣಾ ನ್ಯಾಯಾಧಿಕರಣ ನೀಡಿರುವ ಅಂತಿಮ ತೀರ್ಪಿನ ಅನುಷ್ಠಾನ ಮಾಡಿ ಇನ್ನೇನು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಬೇಕು ಎನ್ನುವ ಹಂತದಲ್ಲಿ ಆಂಧ್ರಪ್ರದೇಶ ಹಾಗೂ ಆಂಧ್ರದಿಂದ ವಿಭಜನೆಯಾಗಿದ್ದ ತೆಲಂಗಾಣ ರಾಜ್ಯಗಳು ತಮ್ಮ ಪಾಲಿನ ನೀರಿನ ಹಂಚಿಕೆ ವಿಷಯವಾಗಿ ತಕರಾರು ಮಾಡಿಕೊಂಡು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿವೆ. ಇದರಿಂದಾಗಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ನಂತರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಕೆಲಸಕ್ಕೆ ಬಾಗಿದೆ.
ನೆರೆಯ ರಾಜ್ಯಗಳ ತಕರಾರುಗಳನ್ನೆಲ್ಲ ತ್ವರಿತವಾಗಿ ಬಗೆಹರಿಸಿಕೊಳ್ಳಲು ಕೇಂದ್ರದ ಮೇಲೆ ಒತ್ತಡ ಹೇರಿ, ರಾಜ್ಯದ ಪಾಲಿಗೆ ಹಂಚಿಕೆಯಾಗಿರುವ ನೀರಿನ ಬಳಕೆಗೆ ಅಧಿಸೂಚನೆ ಹೊರಡಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಜೊತೆಗೆ ರಾಜ್ಯದ ಪಾಲಿನ ನೀರಿನ ಬಳಕೆಗೆ ಬೇಕಾದ ಅಗತ್ಯ ಆರ್ಥಿಕ ಸಂಪನ್ಮೂಲ ಹಾಗೂ ನೀರಾವರಿ ಪ್ರದೇಶಗಳ ಭೂಸ್ವಾಧೀನ, ಶಾಶ್ವತ ಹಾಗೂ ವೈಜ್ಞಾನಿಕ ಪುರ್ನಸತಿ ಕಲ್ಪಿಸುವಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ.
ಈ ಅಧಿಸೂಚನೆ ಹೊರಡಿಸಿದರೆ ಆಲಮಟ್ಟಿಯ ಶಾಸ್ತ್ರಿ ಜಲಾಶಯದ ಗೇಟ್‌ಗಳನ್ನು ಎತ್ತರಿಸಬೇಕಾಗುತ್ತದೆ. ಗೇಟ್ ಎತ್ತರಿಸಿದರೆ ಮತ್ತೆ ಸುಮಾರು 22 ಹಳ್ಳಿಗಳು
ಮುಳುಡೆಯಾಗಿ, ಲಕ್ಷಾಂತರ ಎಕರೆ ಜಮೀನು ಶಾಸ್ತ್ರೀ ಸಾಗರದ ಹಿನ್ನೀರಿನಲ್ಲಿ ಕೃಷ್ಣಾರ್ಪಣ ಆಗಲಿದೆ. ಆದರೆ ಸರ್ಕಾರ ನೀರಾವರಿ ಯೋಜನೆ ಅನುಷ್ಠಾನದ ಕುರಿತು ಮಾತನಾಡುವ ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಈಗಾಗಲೇ ಭೂಮಿ, ಮನೆ ಸೇರಿ ಎಲ್ಲವನ್ನೂ ಕಳೆದುಕೊಂಡಿರುವ 136 ಹಳ್ಳಿಗರ ಬದುಕು ಏನಾಗಿದೆ ಎಂದು ಸರ್ಕಾರ ಕಣ್ತೆರೆದು ನೋಡಬೇಕಿದೆ.
ನೀರಾವರಿ ಯೋಜನೆ ಅನುಷ್ಠಾನದ ಬಳಿಕ ಭಾಗಶಃ ಬದುಕು ಕಳೆದುಕೊಂಡು ಅತಂತ್ರವಾಗಿರುವ 201 ಹಳ್ಳಿಗರ ಜೀವನ ಏನಾಗಿದೆ ಎಂದು ಅಧ್ಯಯನ ಮಾಡಬೇಕಿದೆ. ನಿರುದ್ಯೋಗಿ ಕೇಂದ್ರಗಳಂತಾಗಿರುವ ಪುನರ್ವಸತಿ ಕೇಂದ್ರಗಳ ದುಸ್ಥಿತಿಯ ಸುಧಾರಣೆಗೆ ಚಿತ್ತ ನೆಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪುನರ್ವಸತಿ ಕೇಂದ್ರಗಳಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ನಿವಾರಣೆಗೆ ಜಲ ಸಂಪನ್ಮೂಲ ಖಾತೆ ನಿಭಾಯಿಸಿದ ಅನುಭವ ಇರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಕಾಳಜಿ ತೋರಬೇಕಿದೆ.
ನೀರಾವರಿ ಸೌಲಭ್ಯ ಕಲ್ಪಿಸಿದ ಬಳಿಕ ಕೃಷ್ಣೆಯ ಸಮೃದ್ಧ ಭೂಮಿ ರೈತರ ದುರಾಸೆಯ ಫಲವಾಗಿ ಅವೈಜ್ಞಾನಿಕ ರೀತಿಯಲ್ಲಿ ನೀರು, ರಸಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆಯಿಂದ ಸಾವಿನ ದವಡೆಗೆ ಸೇರಿರುವ ಫಲವತ್ತಾದ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಲು ಕಠಿಣ ನೀತಿಗಳನ್ನು ಜಾರಿಗೆ ತರುವ ಅಗತ್ಯವಿದೆ. ನೀರು ನಿಲ್ಲಿ, ಕಾಲುವೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ 20 ವರ್ಷಗಳಲ್ಲಿ ನೀರಾವರಿ ಸೌಲಭ್ಯ ಕಂಡ ಪ್ರದೇಶದಲ್ಲಿ 50 ಸಾವಿರ ಹೆಕ್ಟೇರ್ ಸವಳು-ಜವಳಾಗಿದೆ ಎಂಬ ಆತಂಕದ ಮಾತಿನ ಬಗ್ಗೆ ಸರ್ಕಾರ ಕಿವಿಯಾಗಬೇಕಿದೆ.
ಜಲಾಶಯ ನಿರ್ಮಾಣದ ಬಳಿಕ ರಾಜ್ಯದಲ್ಲಿ ಪದೇ ಪದೇ ಕೃಷ್ಣೆ ಹಾಗೂ ಅದರ ಉಪ ನದಿಗಳಲ್ಲಿ ಕಂಡು ಬರುತ್ತಿರುವ ನಿರಂತರ ಪ್ರವಾಹ ಹಾಗೂ ಅದರಿಂದ ಸಂಕಷ್ಟ ಅನುಭವಿಸುತ್ತ ಹದಗೆಟ್ಟ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುವ ಪ್ರವಾಹ ಪೀಡಿತರ ನೋವಿಗೆ ಮುಖ್ಯಮಂತ್ರಿ ಧ್ವನಿ ಆಗಬೇಕಿದೆ.
ಯೋಜನಾ ನಿರಾಶ್ರಿತರ ಭಾವನೆಗಳಿಗೆ ನಡೆಸಿದ ಹೋರಾಟಗಳು, ಸಲ್ಲಿಸಿದ ಮನವಿಗಳಿಗೆ ಸರ್ಕಾರ ಈ ವರೆಗೆ ಕನಿಷ್ಟ ಸ್ಪಂದನೆ ಮಾಡಿಲ್ಲ. ಹೀಗಾಗಿ ನಮ್ಮ ಭಾವನೆಗಳು ಎದೆಯಲ್ಲೇ ಜೀವ ಕಳೆದುಕೊಂಡು ನಿರಾಶ್ರಿತರು ನಿರಾಸಕ್ತಿ ಹೊಂದಿದ್ದಾರೆ. ಸರ್ಕಾರ ನಮ್ಮ ಬಗ್ಗೆ ಕನಿಷ್ಟ ಸೌಜನ್ಯದ ಸಹಾನುಭೂತಿ ಹೊಂದಿಲ್ಲ. ಭೂ ಸಂತ್ರಸ್ತರಿಗೆ ಭೂಮಿಯನ್ನೇ ನೀಡಿದ್ದರೆ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತಿದ್ದೆವು. ಸರ್ಕಾರಿ ನೇಮಕದಲ್ಲಿ ಶೇ. 5 ಮೀಸಲು ಕಲ್ಪಿಸಿರುವುದು ಮೊಸಳೆ ಕಣ್ಣೀರಿನ ಕಥೆಯಷ್ಟೆ. ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದಲ್ಲಿ ಯೋಜನಾ ಸಂತ್ರಸ್ತ ಎಲ್ಲ ಕುಟುಂಬಗಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ ನೀಡಲಿ.
ಶಿವಾನಂದ ಗದಿಗೆಪ್ಪಗೌಡರ
ಯೋಜನಾ ಸಂತ್ರಸ್ತ ಚಿಮ್ಮಲಗಿ ಪುನರ್ವಸತಿ ಕೇಂದ್ರ
ಸರ್ಕಾರ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ನೀರಾವರಿ ಯೋಜನೆ ಅನುಷ್ಠಾನದ ಜೊತೆಗೆ ಗಂಭೀರ ಸ್ವರೂಪದಲ್ಲಿ
ತಲೆ ಎತ್ತುತ್ತಿರುವ ಸವಳು-ಜವಳು ಸಮಸ್ಯೆ ನೀಗಲು ಆದ್ಯತೆ ನೀಡಬೇಕು. ಯೋಜನಾ ನಿರಾಶ್ರಿತರು ಹಾಗೂ ಪ್ರವಾಹ ಸಂತ್ರಸ್ತರ ಸಾಮಾಜಿಕ-ಆರ್ಥಿಕ ಜೀವನ ಮಟ್ಟದ ಕುರಿತು ಅಧ್ಯಯನ ನಡೆಸಿ, ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು.
ಬಸವರಾಜ ಕುಂಬಾರ
ನೀರಾವರಿ ಹೋರಾಟಗಾರ, ನಿಡಗುಂದಿ
*ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.