ತಿಡಗುಂದಿ ಹೆಸರು ಪ್ರಸ್ತಾಪಕ್ಕೆ ಕಾರಣವೇನು?
ಮೂರು ವರ್ಷಗಳ ಹಂತ ಮಾಡಿಕೊಂಡಲ್ಲಿ ಒಟ್ಟು ಬೇಕಿರುವ ಅನುದಾನ 34.93 ಕೋಟಿ ರೂ. ಮಾತ್ರ
Team Udayavani, Sep 19, 2022, 6:31 PM IST
ವಿಜಯಪುರ: ವಿವಿಧ ತೋಟಗಾರಿಕೆ ಬೆಳೆ ಬೆಳಯಲು ವೈವಿಧ್ಯಮಯ ಮಣ್ಣಿನ ಗುಣ, ನೀರು-ಹವಾಗುಣ ಹೀಗೆ ನೈಸರ್ಗಿಕ ಸಂಪನ್ಮೂಲದ ಸದ್ಧತೆಯ ಕಾರಣ ವಿಜಯಪುರ ಜಿಲ್ಲೆ ತೋಟಗಾರಿಕೆಯ ತವರು ಎನಿಸಿಕೊಳ್ಳುತ್ತಿದೆ. ವೈವಿಧ್ಯಮಯ ತೋಟಗಾರಿಕೆ ಬೆಳೆಯುವ ನೆಲಕ್ಕೊಂದು ತೋಟಗಾರಿಕೆ ಕಾಲೇಜು ಘೋಷಣೆ ಆಗುತ್ತಲೇ ತಿಡಗುಂದಿ ಸೂಕ್ತವೆಂಬ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ. ಇದಕ್ಕೆ ಕಾರಣ ಇಲ್ಲಿರುವ ಕೆಲವು ಸೌಲಭ್ಯ ಹಾಗೂ ಸೂಕ್ತ ಅವಕಾಶಗಳಿರುವ ಅಂಶಗಳೇ ಕಾರಣ.
ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕಂಡಿರುವ ತಿಡಗುಂದಿಯಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಅಧೀನದಲ್ಲಿರುವ ತೋಟಗಾರಿಕೆ ಸಂಶೋಧನಾ ಕೇಂದ್ರವಿದೆ. ಜಿಲ್ಲಾ ಕೇಂದ್ರ ವಿಜಯಪುರ ನಗರಕ್ಕೆ ಕೇವಲ 20 ಕಿ.ಮೀ. ಅಂತರದಲ್ಲಿದ್ದು, ಸಾಮಾನ್ಯವಾಗಿ ಜಿಲ್ಲೆಯ ರೈತರು ಜಿಲ್ಲಾ ಕೇಂದ್ರಕ್ಕೆ ಬರುವುದರಿಂದ ತಿಡಗುಂದಿಗೆ ಬಂದುಹೋಗಲು ಸುಲಭವಾಗಲಿದೆ.
ವಿಜಯಪುರ ಜಿಲ್ಲಾ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗದ ರಸ್ತೆ ಸಾರಿಗೆ, ವಿಜಯಪುರ ಹಾಗೂ ಸುತ್ತಲಿನ ರೈಲು ಜೋಡು ಮಾರ್ಗದ ಸಾರಿಗೆ, ಬುರಣಾಪುರ ಬಳಿ ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ಸಾರಿಗೆ ಮಾರ್ಗಗಳು ಹತ್ತಿರದಲ್ಲೇ ಇವೆ. ಇದರಿಂದ ಜಿಲ್ಲೆಯ ರೈತರು ಸುಲಭವಾಗಿ ತಿಡಗುಂದಿಗೆ ಭೇಟಿ ನೀಡಲು ಸುಲಭ ಅವಕಾಶವಿದೆ.
ರೈತರು ಮಾತ್ರವಲ್ಲದೇ ಸಂಶೋಧಕರು, ವಿದ್ಯಾರ್ಥಿಗಳು, ರೈತರು ಬಂದುಹೋಗಲು ಸಾರಿಗೆ ಎಲ್ಲ ಮಾರ್ಗಗಳು ಕಾಲೇಜು ಸ್ಥಾಪನೆಗೆ ಹೆಚ್ಚು ಪೂರಕ ಸ್ಥಿತಿ ನಿರ್ಮಿಸಿವೆ. ದೇಶ-ವಿದೇಶಿ ಸಂಶೋಧಕರೂ ಇಲ್ಲಿಗೆ ಸುಲಭವಾಗಿ ಭೇಟಿ ನೀಡಲು ಎಲ್ಲ ಸಾರಿಗೆ ವ್ಯವಸ್ಥೆಗಳು ಹೆಚ್ಚು ಪೂರಕ ವಾತಾವರಣ ಸೃಷ್ಟಿಸಿವೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿದ್ದ 50 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿದ್ದ ತಿಡಗುಂದಿ ತೋಟಗಾರಿಕೆ ಸಂಶೋಧನಾ ಕೇಂದ್ರ, 2009 ಏಪ್ರೀಲ್ 1ರಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಗೊಂಡಿದೆ. ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಕನಿಷ್ಟ 80-100 ಎಕರೆ ಜಮೀನು ಬೇಕಿದ್ದು, ತಿಡಗುಂದಿ ಪಕ್ಕದಲ್ಲೇ ತೋಟಗಾರಿಕೆಗೆ ಪೂರಕವಾದ ವೈನ್ ಪಾರ್ಕ್‌ಗೆ ಮೀಸಲಿಟ್ಟ ನೂರಾರು ಎಕರೆ ಜಮೀನಿನಲ್ಲಿ 30-40 ಎಕರೆ ಜಮೀನು ಪಡೆಯಲು ಅವಕಾಶವಿದೆ.
ತಿಡಗುಂದಿ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ 5 ಕೊಳವೆ ಬಾವಿ, ಒಂದು ತೆರೆದ ಬಾವಿ, 1 ಎಕರೆ ವಿಸ್ತಾರದ ಕೆರೆ ಸೇರಿ ಸೂಕ್ತ ನೀರಿನ ವ್ಯವಸ್ಥೆ ಇದೆ.
2 ಆಕಳು, ಎರಡು ಎತ್ತು ಹಾಗೂ ಎತ್ತಿನ ಉಳುಮೆಗೆ ಬೇಕಾದ ಸಾಮಗ್ರಿಗಳಿವೆ. 3 ಟ್ರಾಕ್ಟರ್ ಇದ್ದು, ಒಂದು ಜೀಪ್ ಕೂಡ ಇದೆ. ಆಡಳಿತ ಕಚೇರಿ ಮಾತ್ರವಲ್ಲದೇ ತರಬೇತಿ ಕೇಂದ್ರದ 2 ಕಟ್ಟಡಗಳು, ಬೋಧನೆಗೆ ಬೇಕಾದ ತರಗತಿಯ 4 ಕೋಠಡಿಗಳು, ಒಂದು ಸುಸಜ್ಜಿತ ಗ್ರಂಥಾಲಯವಿದೆ. ಸಕಲ ಸೌಲಭ್ಯಗಳ ಸಹಿತ 20 ಹಾಸಿಗೆ ಒಂದು ಹಾಸ್ಟೆಲ್ ಇದೆ. ವಿದ್ಯಾರ್ಥಿಗಳ ಊಟಕ್ಕೆ ವಿಸ್ತಾರವಾದ ಪ್ರತ್ಯೇಕ ಊಟದ ಮನೆ ಇದೆ.
ಸಿಬ್ಬಂದಿ ವಸತಿ ನಿಲಯದ ಜೊತೆಗೆ, ಕೇಂದ್ರಕ್ಕೆ ಭೇಟಿ ನೀಡುವ ರೈತರಿಗೆ ತಂಗಲು ವಸತಿ ನಿಲಯವಿದೆ. ಒಣದ್ರಾಕ್ಷಿ ತಯಾರಿಕೆ ಘಟಕ ಮಾತ್ರವಲ್ಲ ತೋಟಗಾರಿಕೆ ಬೆಳೆಗಳ ಪ್ಯಾಖೀಂಗ್ ಹಾಗೂ ಗ್ರೇಡಿಂಗ್ ಘಟಕವೂ ಇದೆ. ಸುಸಜ್ಜಿತ ಸ್ಥಿತಿಯಲ್ಲಿರುವ ಶೀತಲ ಘಟಕವಿದ್ದು, ನೆರಳು ಮನೆ, ಮಿಸ್ಟಹೌಸ್, ಮೀಡಿಯಾ ಶೆಡ್, ಹಸಿರು ಮನೆ ಹೀಗೆ ಹಲವು ಸುಸಜ್ಜಿತ ಸೇವೆಗಳನ್ನು ನೀಡಲಾಗುತ್ತಿದ್ದು, ಎಲ್ಲ ಸೇವೆಗೂ ಪ್ರತ್ಯೇಕ ಕಟ್ಟಡಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಜಿಲ್ಲೆಯಲ್ಲಿ ರೈತರಿಗೆ ಸಹಕಾರಿ ಆಗಬಲ್ಲ ತೋಟಗಾರಿಕೆ ಬೆಳೆಗಳ ವಿವಿಧ ತಾಕುಗಳ ಸಂಶೋಧನೆಗಳು ನಡೆಯುತ್ತಿವೆ. ಪ್ರಮುಖವಾಗಿ ತೋಟಗಾರಿಕೆ ಬೆಳೇಗಳ ನರ್ಸರಿ, ಜೈವಿಕ ಪೀಡ ನಾಶಕ ಘಟಕವಿದೆ.
ತಿಡಗುಂದಿ ಸಂಶೋಧನಾ ಕೇಂದ್ರದಲ್ಲಿ ತೋಟಗಾರಿಕೆ ಬೆಳೆಗಳ ಕುರಿತು ಸಂಶೋಧನೆ ನಡೆಸಲು ವಿವಿಧ ವಿಷಯಗಳ 7 ಪ್ರಯೋಗಾಲಯಗಳು ಚಾಲ್ತಿಯಲ್ಲಿದ್ದು, ರೈತರಿಗೆ, ವಿವಿಧ ಬೆಳೆಗಳ ಸಂಶೋಧನಾ ಸೇವೆ ನೀಡುತ್ತಿವೆ. ಅಂಗಾಶ ಕೃಷಿ ಪ್ರಯೋಗಾಲಯದ ವಿವಿಧ 17 ಬಗೆಯ ಸಂಶೋಧನೆಯ ತಾಂತ್ರಿಕ ಸೌಲಭ್ಯಗಳಿದ್ದು, ಎಲ್ಲಕ್ಕೂ ಪ್ರತ್ಯೇಕವಾದ ಸುಸಜ್ಜಿತ ಕಟ್ಟಡಗಳಿವೆ. ಅಣು ಜೀವಶಾಸ್ತ್ರ ವಿಭಾಗದಲ್ಲಿ 25 ಸಂಶೋಧನೆಗಳ ಪ್ರಯೋಗಾಲಯವಿದೆ. ಜೈವಿಕ ತಂತ್ರಜ್ಞಾನದ ಪ್ರಯೋಗಾಲಯದಲ್ಲಿ 3 ವಿಶೇಷ ಸೌಲಭ್ಯವಿದೆ. ಹಣ್ಣು ವಿಜ್ಞಾನ ಪ್ರಯೋಗಾಲಯದಲ್ಲಿ 7 ಸೌಲಭ್ಯಗಳಿವೆ.
ತೋಟಗಾರಿಕೆ ಸಸ್ಯ ರೋಗಶಾಸ್ತ್ರ ಪ್ರಯೋಗಾಲಯದಲ್ಲಿ 7 ಪ್ರಮುಖ ಸುಧಾರಿತ ಸೌಲಭ್ಯಗಳಿವೆ. ತೋಟಗಾರಿಕೆ ಕೀಟ ಶಾಸ್ತ್ರದ ಅಧ್ಯಯನಕ್ಕೆಂದೇ ಇರುವ ಪ್ರಯೋಗಾಲಯದಲ್ಲಿ ವಿವಿಧ 7 ತಾಂತ್ರಿಕ ಉಪಕರಣ ಸಹಿತ ಸೌಲಭ್ಯಗಳಿವೆ.
ನೀರು-ಮಣ್ಣು ಪರೀಕ್ಷಾ ಪ್ರಯೋಗಾಲಯದಲ್ಲಿ 14 ತಾಂತ್ರಿಕ ಸೌಲಭ್ಯವಿದ್ದು, ವಿಶ್ಲೇಷಣಾತ್ಮಕ ತಾಂತ್ರಿಕ ನೆರವೂ ದೊರೆಯುತ್ತಿದೆ. ಸದರಿ ಸಂಶೋಧನಾ ಕೇಂದ್ರದಲ್ಲಿ ಈಗಾಗಲೇ ದ್ರಾಕ್ಷಿ, ಲಿಂಬೆ, ದಾಳಿಂಬೆ, ನೇರಳೆ, ಸಪೋಟಾ, ಹುಣಸೆ, ಬಾರೆ, ಅಂಜೂರ ಸೇರಿದಂತೆ ವಿವಿಧ ಬಹುವಾರ್ಷಿಕ ತೋಟಗಾರಿಕೆಯ 3462 ಮರಗಳಿವೆ. ಪರಿಣಾಮವಾಗಿ ಪುಣೆ ಎನ್‌ಆರ್‌ಸಿ ದ್ರಾಕ್ಷಿ ಬೆಳೆ, ನಾಗಪುರದ ಸಿಸಿಆರ್‌ಐ ಲಿಂಬೆ, ಎಐಸಿಆರ್‌ಪಿ ಸಂಸ್ಥೆಗಳು ಸಂಶೋ ಸಿದ ವಿವಿಧ
ಹಣ್ಣುಗಳ ತಾಕುಗಳನ್ನು ಈ ಸಂಸ್ಥೆಗಳ ಸಮನ್ವಯದೊಂದಿಗೆ ತಳಿಗಳ ಸಂಶೋಧನಾ ಕೆಲಸವೂ ನಡೆದಿದೆ.
ಬೋಧಕ ವಿಭಾಗದಲ್ಲಿ ಮಂಜೂರಾದ 7 ಹುದ್ದೆಗಳಲ್ಲಿ ಈಗಾಗಲೇ ವಿವಿಧ ವಿಷಯಗಳಲ್ಲಿ ಪಿಎಚ್‌ಡಿ ಪಡೆದಿರುವ 4 ಸಹಾಯಕ ಪ್ರಾಧ್ಯಾಪಕರಿದ್ದು, ವಿವಿಧ ಕಾರಣಗಳಿಗೆ 3 ಖಾಲಿ ಇವೆ. ಪ್ರಸ್ತಾವಿತ ವಿವಿಧ 10 ವಿಷಯಗಳ ಬೋಧನೆಗೆ 50 ಬೋಧಕರ ಅಗತ್ಯವಿದ್ದು, ಹಂತ ಹಂತವಾಗಿ ಪೂರೈಸಿದರೂ ತಿಡಗುಂದಿ ಸಂಶೋಧನಾ ಕೇಂದ್ರದಲ್ಲೇ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತೋಟಗಾರಿಕೆ ಕಾಲೇಜು ಆರಂಭಿಸಲು ಅವಕಾಶವಿದೆ. ತಿಡಗುಂದಿ ಸಂಶೋಧನಾ ಕೇಂದ್ರದಲ್ಲಿ
ಈಗಿರುವ ಸಿದ್ಧ ಸಂಪನ್ಮೂಲದ ಹೊರತಾಗಿ ಮೂರು ವರ್ಷಗಳ ಹಂತ ಮಾಡಿಕೊಂಡಲ್ಲಿ ಒಟ್ಟು ಬೇಕಿರುವ ಅನುದಾನ 34.93 ಕೋಟಿ ರೂ. ಮಾತ್ರ. ಪ್ರತಿ ವರ್ಷ ಸರಾಸರಿ 11-12 ಕೋಟಿ ರೂ. ನೀಡಿದರೂ ತ್ವರಿತವಾಗಿ ವಿಜಯಪುರ ಜಿಲ್ಲೆಗೆ ಘೋಷಿತ ತೋಟಗಾರಿಕೆ ಕಾಲೇಜು ಸೌಲಭ್ಯ ಪಡೆಯಲು ಸಾಧ್ಯವಿದೆ.
ನಮ್ಮ ಸರ್ಕಾರದಲ್ಲಿ ಜಿಲ್ಲೆಗೆ ಮಂಜೂರಾದ ತೋಟಗಾರಿಕೆ ಕಾಲೇಜು ಕೈ ತಪ್ಪಿರುವ ಕುರಿತು ಸದನದಲ್ಲಿ ಎರಡು ಬಾರಿ ಪ್ರಸ್ಥಾಪಿಸಿದ್ದು, ಈಗ ನಡೆಯುತ್ತಿರುವ ಕಲಾಪದಲ್ಲೂ ಧ್ವನಿ ಎತ್ತುತ್ತೇನೆ. ತೋಟಗಾರಿಕೆ ಕಾಲೇಜು ಆರಂಭಿಸಲು ಕೇವಲ ಬೋಧಕರನ್ನು ಒದಗಿಸಿದರೆ ಸಾಕು ಈಗಲೇ ಕಾಲೇಜು ಬೇಕಾದ ಅಗತ್ಯದ ಎಲ್ಲ ಸೌಲಭ್ಯ-ಸಂಪನ್ಮೂಲಗಳು ತಿಡಗುಂದಿ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿವೆ. ಜಿಲ್ಲೆಯ ಪ್ರಭಾವಿ ನಾಯಕರಾದ ಸಚಿವ ಗೋವಿಂದ ಕಾರಜೋಳ ತಮ್ಮ ಸರ್ಕಾರದಲ್ಲಿ ಮಾಡಿ ತೋರಿಸಲಿ.
ದೇವಾನಂದ ಚವ್ಹಾಣ
ಶಾಸಕರು ನಾಗಠಾಣ
ಜಿ.ಎಸ್. ಕಮತರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.