ಹೆಣ‍್ಣನ್ನು ದೈವತ್ವಕ್ಕೇರಿಸಿದ್ದು 12ನೇ ಶತಮಾನದ ಬಸವಾದಿ ಶರಣರು
Team Udayavani, Jan 16, 2022, 3:12 PM IST
ವಿಜಯಪುರ: ವೇದ ಪುರಾಣಗಳಲ್ಲಿ ಮತ್ತು ಬಹುತೇಕ ಕಡೆ ಹೆಣ್ಣನ್ನು ಕೀಳಾಗಿ ಕಂಡಿದ್ದಲ್ಲದೇ ಹೆಣ್ಣನ್ನು ಕಡೆಗಣಿಸಿದ್ದಾರೆ. ಆದರೆ ಹೆಣ್ಣಿಗೆ ಸಮಾನತೆ ನೀಡಿ ದೈವತ್ವಕ್ಕೇರಿಸಿದವರು 12ನೇ ಶತಮಾನದ ಬಸವಾದಿ ಶರಣರು ಎಂದು ಶಿವಬಸವ ಯೋಗಾಶ್ರಮದ ಮಾತೋಶ್ರೀ ದಾನಮ್ಮ ಮಠ ವಿಶ್ಲೇಷಿಸಿದರು.
ವಿಜಯಪುರ ನಗರದ ರಾಧಾಕೃಷ್ಣನ್ ಬಡಾವಣೆಯ ಶಿವಬಸವ ಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ 208ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣರ ದೃಷ್ಟಿಯಲ್ಲಿ ಸ್ತ್ರೀ ಸಂವೇದನೆ ಕುರಿತು ಪ್ರವಚನ ನೀಡಿದ ಅವರು, ಹರಿ, ಮನುವಿನಾದಿಯಾಗಿ ಹೆಣ್ಣೆಂದರೆ ವಿಘ್ನ, ನರಕ, ಶಾಪ, ಕಳಂಕ ಎಂದು, ಆಕೆಯು ಸದಾಕಾಲ ಪರಾವಲಂಬಿಯೂ ಎಂದು ಚಿತ್ರಿಸಿದ್ದಾರೆ. ಆದರೆ ಶರಣರು ಮಹಿಳೆಯನ್ನು ದೈವತ್ವಕ್ಕೆ ಹೋಲಿಸಿದ್ದಾರೆ ಎಂದರು.
ಮನದೊಳಗಿನ ಮಾಯೆಯನ್ನು ಬಿಟ್ಟುಬಿಡಿ. ಸಂಸಾರವನ್ನು ಧನ್ಯೋಸ್ಮಿ ಎಂದು ಕರೆದು, ಇದ್ದೂ ಇಲ್ಲದಂತಿದ್ದು ಸಂಸಾರವನ್ನು, ಜಗವನ್ನು ಗೆದ್ದು ನಡೆ. ನಿಶ್ಚಿಂತೆಯಿಂದ ಬದುಕು ಸಾಗಿಸು. ಭಾರತಾಂಬೆ, ಜಗನ್ಮಾತೆ, ಕರ್ನಾಟಕ ಮಾತೆ, ರಾಜರಾಜೇಶ್ವರಿ, ಲಕ್ಷ್ಮೀ, ಸರಸ್ವತಿ, ಆದಿಶಕ್ತಿ, ಶಾರದಾ ಮಾತೆ, ಭೂತಾಯಿ, ಪ್ರಕೃತಿ ಮಾತೆ, ಗಂಗಾ ಮಾತೆ ಎಲ್ಲವೂ ಸ್ತ್ರೀ ಕುಲವೇ ಆಗಿರುವಾಗ ಚಿಂತಿಸುವುದೇನಿದೆ. ಹೆಣ್ಣಿಂದಲೇ ಜಗವು ಹಾಗೂ ಸಕಲ ಸಂಪದವು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಈಶ್ವರ ಯೋಗಾಸನ ಸಂಘದ ವಿ.ಎಸ್. ಹಿರೇಮಠ ಮಾತನಾಡಿ,12ನೇ ಶತಮಾನದ ಅನುಭವ ಮಂಟಪದಲ್ಲಿ ಸಿಗುತ್ತಿದ್ದ ಅನುಭಾವ ನಮಗಿಂದು ಶಿವಬಸವಯೋಗಾಶ್ರಮದಲ್ಲಿ ದೊರೆಯುತ್ತಿದೆ. ಮೊಬೈಲ್ ದಾಸರಾಗಿ ನಮ್ಮ ಮಕ್ಕಳನ್ನು ನಮ್ಮ ಮಕ್ಕಳನ್ನು ಇಂಥ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಕರೆ ತರುವ ಮೂಲಕ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶಿವಬಸವ ಯೋಗಾಶ್ರಮದ ಶಂಭುಲಿಂಗ ಶ್ರೀಗಳು ಮಾತನಾಡಿ, ಸಂಸಾರದಿಂದಲೇ ಸದ್ಗತಿ, ಮೋಕ್ಷ ಎಂದು ತಿಳಿದ ಶರಣರು ನಿಶ್ಚಿಂತೆಯಿಂದ ಮುಕ್ತಿಯನ್ನು ಪಡೆದರು. ನೀರಿನ ಮೇಲೆ ದೋಣಿ ಇರಬೇಕೆ ಹೊರತು ದೋಣಿಯೊಳಗೆ ನೀರಿರಬಾರದು. ಹೊಕ್ಕರೆ ದೋಣಿ ಮುಳುಗುವಂತೆ, ನಾವು ಸಂಸಾರದೊಳಗಿರಬೇಕು. ಆದರೆ ಸಂಸಾರ ನಮ್ಮೊಳಗೆ ಒಳಹೊಕ್ಕು ನಮ್ಮನ್ನೇ ಮುಳುಗಿಸಬಾರದು. ಬದುಕಿನ ಸಾರ್ಥಕತೆ ಯಾವುದರಲ್ಲಿದೆ ಎಂದು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆಶ್ರಮಕ್ಕೆ ಉಚಿತವಾಗಿ ಕುರ್ಚಿಗಳನ್ನು ದೇಣಿಗೆ ನೀಡಿದ ಈಶ್ವರ ಯೋಗಾಸನ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಬಸವರಾಜ ಗಾವಿ, ರಾಜೇಂದ್ರಕುಮಾರ ಬಿರಾದಾರ ವೇದಿಕೆಯಲ್ಲಿದ್ದರು. ಮಹಾದೇವಿ ತೆಲಗಿ ನಿರೂಪಿಸಿದರು. ಶಿವಾಜಿ ಮೋರೆ ಪ್ರಾರ್ಥಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ದಾಕ್ಷಾಯಿಣಿ ಬಿರಾದಾರ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.