ಕೋಳೂರಲ್ಲಿ ಕಾಮಗಾರಿ ಪರಿಶೀಲನೆ
Team Udayavani, Apr 5, 2022, 5:54 PM IST
ಮುದ್ದೇಬಿಹಾಳ: ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯ ಕೋಳೂರು ತಾಂಡಾದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ 2021-22ನೇ ಸಾಲಿನ 7 ಕಾಮಗಾರಿಗಳು ಖೊಟ್ಟಿ ಆಗಿರುವ ದೂರಿನ ಕುರಿತು ವಿಜಯಪುರದ ಜಿಲ್ಲಾ ಒಂಬುಡ್ಸ್‌ಮನ್ ನೇಮಿಸಿದ ತನಿಖಾಧಿಕಾರಿಗಳ ತಂಡ ಸೋಮವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಾಪಂ ಮಾಜಿ ಸದಸ್ಯ ಪ್ರೇಮಸಿಂಗ್ ಚವ್ಹಾಣ ಅವರು 31-8-2021ರಂದು ಲಿಖೀತ ದೂರೊಂದನ್ನು ಒಂಬುಡ್ಸ್‌ಮನ್‌ಗೆ ನೀಡಿ 7 ಕಾಮಗಾರಿಗಳನ್ನು ಗ್ರಾಪಂನ ಅಧ್ಯಕ್ಷರು, ಪಿಡಿಓ, ತಾಂತ್ರಿಕ ಸಹಾಯಕ ಇಂಜಿನೀಯರ್ ಸೇರಿಕೊಂಡು ಸಿಸಿ ರಸ್ತೆ, ಚರಂಡಿ, ಆರ್ಚ ಬಾಂದಾರ ನಿರ್ಮಾಣದಲ್ಲಿ ಖೊಟ್ಟಿ ಮಾಡಿ ಅವ್ಯವಹಾರ ನಡೆಸಿದ್ದರ ಕುರಿತು ತನಿಖೆ ಮಾಡುವಂತೆ ಕೋರಿದ್ದರ ಹಿನ್ನೆಲೆಯಲ್ಲಿ ಜಿಲ್ಲಾ ಒಂಬುಡ್ಸ್‌ಮನ್ ಬಿ.ಜಿ.ಬಿರಾದಾರ ಅವರು ತನಿಖಾಧಿಕಾರಿಗಳ ತಂಡವೊಂದನ್ನು ನೇಮಿಸಿ ದೂರುದಾರರ ಸಮಕ್ಷಮ ಆಯಾ ಕಾಮಗಾರಿಗಳನ್ನು ಭೌತಿಕವಾಗಿ ಮೌಲ್ಯಮಾಪನ ಮಾಡಿ ಚೆಕ್ ಮೆಜರ್‌ವೆುಂಟ್ ಹಾಕಿ ಲಾಂಜಿಟ್ಯೂಡ್ ಮತ್ತು ಲ್ಯಾಟಿಟ್ಯೂಡ್ ವರದಿಯನ್ನು ಸಲ್ಲಿಸಲು ತಿಳಿಸಿದ್ದ ಹಿನ್ನೆಲೆ ತಂಡವು ಆಗಮಿಸಿತ್ತು.
ಕೋಳೂರು ತಾಂಡಾದ ಸುರೇಶ ಜಾನು ಮನೆಯಿಂದ ಮುತ್ತು ರಾಮಚಂದ್ರ ಮನೆಯವರೆಗೆ, ಮಾನಸಿಂಗ್ ಮನೆಯಿಂದ ರವಿಕುಮಾರ ರಾಠೊಡ ಮನೆವರೆಗೆ, ಸೋಮಸಿಂಗ್ ಮನೆಯಿಂದ ಲಾಲು ಮಾಸ್ತರ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ, ಪಾರವ್ವ ಮಾದರ ಇವರ ಹೊಲದ ಹತ್ತಿರ ಸಿಡಿ ನಿರ್ಮಾಣ, ರಾಜಪಾಲ ಚವ್ಹಾಣ ಇವರ ಹೊಲದ ಹತ್ತಿರ ಇರುವ ಹಳ್ಳಕ್ಕೆ ಮಲ್ಟಿ ಆರ್ಚ್ ಚಕ್ ಡ್ಯಾಂ ನಿರ್ಮಾಣ, ಶಾಂತು ಇವರ ಹೊಲದ ಹತ್ತಿರ ಹಳ್ಳಕ್ಕೆ ಹೂಳೆತ್ತುವುದು ಮತ್ತು ಮಲ್ಟಿ ಆರ್ಚ್ ಚಕ್ ಡ್ಯಾಂ ನಿರ್ಮಾಣ, ಸುಬ್ಬಣ್ಣ ಇವರ ಹೊಲದ ಹತ್ತಿರ ಹಳ್ಳಕ್ಕೆ ಮಲ್ಟಿ ಆರ್ಚ್ ಚಕ್ ಡ್ಯಾಂ ನಿರ್ಮಾಣ ಮತ್ತು ಹೂಳೆತ್ತುವ ಕಾಮಗಾರಿ ಭೋಗಸ್ ನಡೆದಿದ್ದು 25 ಲಕ್ಷಕ್ಕೂ ಹೆಚ್ಚು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರುದಾರರು ಆರೋಪಿಸಿದ್ದ ಹಿನ್ನೆಲೆ ಆಯಾ ಸ್ಥಳಗಳಿಗೆ ತೆರಳಿ ತಂಡವು ಮಾಹಿತಿ ದಾಖಲಿಸಿಕೊಂಡಿತು.
ಒಂಬುಡ್ಸ್‌ಮನ್ ಪತ್ರದಲ್ಲಿ ತಿಳಿಸಿರುವ ಕಾಮಗಾರಿಗಳ ಪರಿಶೀಲನೆ ಸಂದರ್ಭ ಆರೋಪ ಪಟ್ಟಿಯಲ್ಲಿರುವ ಸ್ಥಳದ ಬದಲು ಬೇರೆ ಸ್ಥಳದಲ್ಲಿ ತಂಡದವರು ಪರಿಶೀಲನೆ ನಡೆಸಲು ಮುಂದಾದಾಗ ತಕರಾರು ತೆಗೆದ ಪ್ರೇಮಸಿಂಗ್ ಅವರು ಬಿಲ್ ಎತ್ತುವಾಗಿನ ದಾಖಲೆಗಳಲ್ಲಿ ತಿಳಿಸಿರುವ ಮಾಹಿತಿ ಮತ್ತು ಕೊಟ್ಟಿರುವ ವಿಳಾಸಕ್ಕೆ ಅನುಗುಣವಾಗಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.
ಆದರೂ ತಂಡದವರು ನಿಗದಿಪಡಿಸಿದ ಸ್ಥಳ ಬಿಟ್ಟು ಬೇರೆ ಕಡೆಗೆ ನಿರ್ಮಿಸಲಾದ ಕಾಮಗಾರಿಗಳನ್ನು ಪರಿಶೀಲಿಸಿ ಅವುಗಳನ್ನೇ ದಾಖಲಿಸಿಕೊಂಡರು. ಕಾಮಗಾರಿಗಳ ಸ್ಥಳ ಬದಲಾವಣೆ ಆಗಿದೆಯೇ ಹೊರತು ಭೋಗಸ್ ಆಗಿದೆಯೋ ಇಲ್ಲವೋ ಅನ್ನೋದನ್ನು ಹೇಳಲು ಸಧ್ಯಕ್ಕೆ ಸಾಧ್ಯವಿಲ್ಲ ಅನ್ನೋ ಅಭಿಪ್ರಾಯ ತಂಡದವರದಾಗಿತ್ತು. ಇದನ್ನು ಆಕ್ಷೇಪಿಸಿದ ಪ್ರೇಮಸಿಂಗ್ ಅವರು ದೂರಿನಲ್ಲಿ ಕೊಟ್ಟಿರುವ ಕಾಮಗಾರಿ ಮಾಹಿತಿ ಅನ್ವಯವೇ ಪರಿಶೀಲನೆ ನಡೆಸಿ ವರದಿ ತಯಾರಿಸಬೇಕು. ಇಲ್ಲವಾದಲ್ಲಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ತಂಡದ ಮುಖ್ಯಸ್ಥ ಡಿಕ್ಯೂಎಂ ಮನೋಹರ ಇನಾಮದಾರ, ಪಿಡಿಓ ನಿರ್ಮಲಾ ತೋಟದ ಮತ್ತಿತರರು ಇದ್ದರು.
ಒಂಬುಡ್ಸ್‌ಮನ್ ಅವರು ನಮ್ಮ ದೂರನ್ನು ಆಲಿಸಲು ತಮ್ಮ ಕಚೇರಿಯಲ್ಲಿ ಹಿಯರಿಂಗ್ ಇಟ್ಟಾಗ ಸಂಬಂಧಿಸಿದ ಅಧಿಕಾರಿಗಳು ಹಿಯರಿಂಗ್‌ಗೆ ಆಗಮಿಸದೆ ನುಣುಚಿಕೊಂಡಿದ್ದಾರೆ. ಇದು ಭೋಗಸ್ ಕಾಮಕಾರಿ ನಡೆಸಿದ್ದಕ್ಕೆ ಪುಷ್ಟಿ ನೀಡುತ್ತದೆ. ಒಂಬುಡ್ಸ್‌ಮನ್‌ರವರ ಸೂಚನೆ ಅನ್ವಯ ನಿಗದಿತ ಸ್ಥಳದಲ್ಲೇ ಕಾಮಗಾರಿಗಳ ಮೌಲ್ಯಮಾಪನ, ಚೆಕ್ ಮೆಜರ್‌ವೆುಂಟ್ ದಾಖಲಿಸಿಕೊಳ್ಳಬೇಕಿತ್ತು. ಆದರೆ ತಂಡದವರು ಇದನ್ನು ಪಾಲಿಸಿಲ್ಲ. -ಪ್ರೇಮಸಿಂಗ್ ಚವ್ಹಾಣ, ತಾಪಂ ಮಾಜಿ ಸದಸ್ಯ, ದೂರುದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.