ಸಕ್ಕರೆ ಕಾರ್ಖಾನೆಯಲ್ಲಿ 1 ರೂ. ಅವ್ಯವಹಾರ ಸಾಬೀತಾದರೂ ರಾಜಕೀಯ ನಿವೃತ್ತಿ: ಯಶವಂತರಾಯಗೌಡ
Team Udayavani, Apr 23, 2022, 11:53 AM IST
ವಿಜಯಪುರ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 1 ರೂ. ಅವ್ಯವಹಾರವಾಗಿದ್ದನ್ನು ದಾಖಲೆ ಸಹಿತ ಸಾಬೀತುಪಡಿಸಿದರೆ ಕಾರ್ಖಾನೆ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೆ, ರಾಜಕೀಯ ಸಾರ್ವಜನಿಕ ಜೀವನದಿಂದಲೂ ದೂರ ಆಗುತ್ತೇನೆ ಎಂದು ಇಂಡಿ ಶಾಸಕ ಯಶವಂತರಾಯ ಗೌಡ ಸವಾಲು ಹಾಕಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಎಸೆದ ಅವರು, ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ರಾಜಕೀಯ ಕಾರಣಕ್ಕೆ ಮಾಜಿ ಶಾಸಕ ರವಿಕಾಂತ ಪಾಟೀಲ ಆಧಾರ ರಹಿತವಾಗಿ ಕ್ಷುಲ್ಲಕ ಆರೋಪ ಮಾಡಿದ್ದಾರೆ. ನಿಜಕ್ಕೂ ರವಿಕಾಂತ ಅವರಿಗೆ ಶಕ್ತಿ ಇದ್ದರೆ ದಾಖಲೆ ಸಮೇತ ಆರೋಪ ಸಾಬೀತು ಮಾಡಲಿ. ಇಲ್ಲವಾದಲ್ಲಿ ಕಾನೂನು ಮೂಲಕ ಉತ್ತರ ನೀಡುತ್ತೇನೆ. ಈಗಾಗಲೇ ಈ ಬಗ್ಗೆ ರವಿಕಾಂತ ಪಾಟೀಲ ಅವರಿಗೆ ಸಕ್ಕರೆ ಕಾರ್ಖಾನೆ ಪರವಾಗಿ ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೋಟೀಸ್ ನೀಡಿದ್ದು, ಕ್ಷಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದು ಖಚಿತ ಎಂದು ಎಚ್ಚರಿಸಿದರು.
2200+200 ಎಫ್ ಆರ್ ಪಿ ಪ್ರಕಾರ ಹೆಚ್ಚು ಬೆಲೆ ನೀಡಿದ ಕಾರ್ಖಾನೆ ನಮ್ಮದು. ರಾಜ್ಯ ಮಾತ್ರವಲ್ಲ ಕೃಷ್ಣಾ, ಭೀಮಾ ಭಾಗದ ಮಾತ್ರ 5.36 ಲಕ್ಷ ರೈತರಿಗೆ ಬಿಲ್ ಪಾವತಿಸಿದೆ 127 ಕೋಟಿ ರೂ. ಪಾವತಿಸಿದ್ದೇವೆ. ಇದು ಸಕ್ಕರೆ ಕಾರ್ಖಾನೆ ಇತಿಹಾಸದಲ್ಲಿ ಪ್ರಥಮ ಎಂದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ 50 ವರ್ಷ ರಾಜಕೀಯ ಮಾಡುತ್ತಾ ಬಂದವರು, ಕಾರ್ಖಾನೆ ಆರಂಭಕ್ಕೆ ಯಾರೂ ಕಿಂಚಿತ್ತು ಪ್ರಾಮಾಣಿಕ ಕೆಲಸ ಮಾಡಲಿಲ್ಲ. ರಾಜಕೀಯ ಪ್ರೇರಿತ ಭಾಷಣ ಮಾಡಿ ಕಾಲ ಕಳೆದ ಇವರನ್ನು ಕ್ಷೇತ್ರದ ಜನರು ಮೂರು ಬಾರಿ ಸೋಲಿಸಿದ್ದಾರೆ. ಕೊಟ್ಟ ಮಾತಿನಂತೆ ಶಾಸಕನಾಗಿ ಆಯ್ಕೆಯಾಗಿ ಬಂದ ಮೊದಲ ಅವಧಿಯಲ್ಲೇ ಸರ್ಕಾರದ ಹಾಗೂ ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆದು ರೈತರ ಅರ್ಧ ಶತಮಾನದ ಕನಸು ನನಸು ಮಾಡಿದೆ. ಇದೇ ಕಾರಣಕ್ಕೆ ಕ್ಷೇತ್ರದ ಜನರು ನನ್ನನ್ನು ಪುನರಾಯ್ಕೆ ಮಾಡಿಕೊಂಡದ್ದು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಸರಕಾರಕ್ಕೆ ಬಿಸಿತುಪ್ಪವಾದ PSI ಪರೀಕ್ಷೆ ಹಗರಣ: ಖರ್ಗೆ ಆಡಿಯೋ ಟೇಪ್ ತನಿಖೆಗೆ ಸಿಎಂ ನಿರ್ಧಾರ
ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವ ಸದಾಶಯದಿಂದ ರೈತರ ಕಬ್ಬಿಗೆ ಯೋಗ್ಯ ಬೆಲೆ ನೀಡುತ್ತಿದ್ದೇವೆ. ಸಹಕಾರಿ ವ್ಯವಸ್ಥೆ ಜೀವಂತಿಕೆಗಾಗಿ ನಾನು ಅಧಿಕಾರಕ್ಕೆ ಬರುತ್ತಲೇ ರೈತರಿಗೆ ನೀಡಿದ ಭರವಸೆ ಈಡೇರಿಸಿದ ಸಂತೃಪ್ತಿ ನನಗಿದೆ ಎಂದರು.
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 16300 ಶೇರು ಸದಸ್ಯರಿದ್ದು, ಅವರ ಶೇರು ಬೆಲೆ ಏರಿಕೆಯಾಗಿ ಮೌಲ್ಯ ತಂದುಕೊಡುವಲ್ಲಿ ಪ್ರಾನಾಣಿಕವಾಗಿ ದುಡಿದಿದ್ದೇನೆ. ರೈತ ಸಹಕಾರಿ ಸಂಸ್ಥೆ ವ್ಯವಸ್ಥೆ ಹಾಳು ಮಾಡುವಲ್ಲಿ ನಿರತರಾಗಿದ್ದಾರೆ. ಈಗ ಕಾರ್ಖಾನೆ ಬಗ್ಗೆ ಮಾನಾಡುವ ವ್ಯಕ್ತಿ ಪರ್ಲ್ ಹೆಸರಿನಲ್ಲಿ ಸಹಕಾರಿ ವ್ಯವಸ್ಥೆಯನ್ನು ಖಾಸಗಿಯಾಗಿ ತಮ್ಮ ಸ್ವಂತ ಆಸ್ತಿ ಮಾಡಿಕೊಳ್ಳಲು ಹೊರಟಿದ್ದರು. ಇಂಥವರು ಇದೀಗ ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಇವರ ಹುನ್ನಾರದ ವಿರುದ್ಧ ಕಾನೂನು ಮೂಲಕ ಕೋರ್ಟಿನಲ್ಲಿ ಹೋರಾಟ ಮಾಡಿ ರೈತರ ಆಡಳಿತಕ್ಕಾಗಿ ಸಹಕಾರಿ ವ್ಯವಸ್ಥೆಯನ್ನು ಜೀವಂತ ಉಳಿಸಿಕೊಂಡಿದ್ದೇವೆ ಎಂದು ಮಾಜಿ ಶಾಸಕ ರವಿಕಾಂತ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಾಸ್ತವಿಕ ಸ್ಥಿತಿ ಅರಿಯದೇ ಇನ್ನು ಯಾರಾದರೂ ಅನಗತ್ಯವಾಗಿ, ಆಧಾರ ರಹಿತವಾಗಿ ಆರೋಪ ಮಾಡಿದರೆ ಸುಮ್ಮನಿರಲ್ಲ. ಬೆವರು ಹರಿಸಿ ಕಟ್ಟಿದ ಭೀಮಾಶಂಕರ ಸಹಕಾರಿ ಸಕ್ಕರೆ ಸಂಸ್ಥೆಯ ಕೀರ್ತಿ, ಹೆಸರು ಹಾಳು ಮಾಡಲು ಯಾರೇ ಯತ್ನಿಸಿದರೂ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.
ಮೂರು ಬಾರಿ ಶಾಸಕರಾಗಿರುವ ರವಿಕಾಂತಗೌಡ ಆಧಾರ ರಹಿತವಾಗಿ ಆರೋಪ ಮಾಡುವುದು ಸರಿಯಲ್ಲ. ಇದೀಗ ಸತತವಾಗಿ ಮೂರು ಬಾರಿ ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ. ನೀವು ರಾಜಕೀಯ ಕಾರಣಕ್ಕೆ ಆರೋಪ ಮಾಡಿ ರೈತ ಸಹಕಾರಿಗೆ ಅಪಚಾರದ ಮಾತನಾಡಬೇಡಿ. ಯಾರ ಕಾಲದಲ್ಲಿ ಇಂಡಿ ಕ್ಷೇತ್ರದ ಅಭಿವೃದ್ಧಿ ಹೇಗಿತ್ತು, ನೀವು ಏನು ಮಾಡಿದಿರಿ ಎಂದು ಜನರಿಗೆ ಗೊತ್ತಿದೆ ಎಂದು ಕುಟುಕಿದರು.
ನಿಮಗೆ ಶಕ್ತಿ ಇದ್ದರೆ 2024 ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ರೈತರ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ನೋಡೋಣ ಪಂಥಾಹ್ವಾನ ನೀಡಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.