ದಾರ್ಶನಿಕರೇ ಕತ್ತಲ ಸಮಾಜಕ್ಕೆ ದಾರಿದೀಪ
ಜಾತಿ ಸಂಕೋಲೆ ಬದಿಗೊತ್ತಿ ವಿಶ್ವ ಮಾನವನಾಗುವ ನಿಟ್ಟಿನಲ್ಲಿ ಎಲ್ಲರೂ ಹೆಜ್ಜೆ ಇರಿಸಿ: ಮುರುಘಾ ಶರಣರು
Team Udayavani, Nov 30, 2019, 6:52 PM IST
ಚಳ್ಳಕೆರೆ: ಸಾವಿರಾರು ವರ್ಷಗಳಿಂದ ಜಾತೀಯತೆಯ ಕತ್ತಲಲ್ಲಿ ಮುಳುಗಿದ್ದ ಸಮಾಜಕ್ಕೆ ಧರ್ಮದ ಜಾಗೃತಿ ಸ್ಪರ್ಶವನ್ನು ಮೂಡಿಸಿದವರು ಪ್ರವಾದಿ ಮಹಮ್ಮದ್ ರವರು. ಸಮಾಜದಲ್ಲಿ ತುಂಬಿದ್ದ ಜಾತಿ ವಿಷ ಬೀಜ, ಮೇಲು ಕೀಳು ಎಂಬ ಭಾವನೆ ತೊಡೆದು ಹಾಕಲು ಶ್ರಮಿಸಿದ ದಾರ್ಶನಿಕರು ಎಂದರೆ ಪ್ರವಾದಿ ಮಹಮ್ಮದ್‌ರವರು ಎಂದು ಚಿತ್ರದುರ್ಗದ ಬೃಹ್ನಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ಸಂಜೆ ಇಲ್ಲಿನ ಬಿ.ಎಂ.ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪ್ರವಾದಿ ಮಹಮ್ಮದ್ ಎಲ್ಲರಿಗಾಗಿ ಸೀರತ್ ಪ್ರವಚನ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ನೂರಾರು ಮಠಾಧಿಧೀಶರು, ನೂರಾರು ಧರ್ಮಗಳು, ಸಾವಿರಾರು ಪದ್ಧತಿಗಳು, ಧಾರ್ಮಿಕ ಉತ್ಸವ, ಆಚರಣೆಗಳು ನಿರಂತರವಾಗಿ ನಡೆಯುತ್ತಿದ್ದರೂ ಎಲ್ಲವುಗಳ ಸಾರಾಂಶ ನಾವೆಲ್ಲರೂ ಪುನೀತರಾಗಿ ದೇವರು ಮತ್ತು ದೈವದ ಕೃಪೆಗಾಗಿ ಕಾರ್ಯನಿರ್ವಹಿಸುತ್ತಾ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿದೆ. ಎಲ್ಲಾ ಜಾತಿ ಸಂಕೋಲೆಗಳನ್ನು ಬದಿಗೊತ್ತಿ ವಿಶ್ವಮಾನವನಾಗುವ ನಿಟ್ಟಿನಲ್ಲಿ ನಾವೆಲ್ಲರೂ ಹೆಜ್ಜೆ ಇಡಬೇಕಿದೆ. ಈ ಒಂದು ಪುಣ್ಯ ಕಾರ್ಯದ ಹಿಂದೆ ಇರುವ ಮಹಾನ್ ಶಕ್ತಿಯೇ ಪ್ರವಾದಿ ಮಹಮ್ಮದ್‌ರವರು.
ನಾವೆಲ್ಲರೂ ಸಮಾಜದಲ್ಲಿ ಸಾಮರಸ್ಯದ ಬದುಕನ್ನು ಕಂಡುಕೊಂಡಿದ್ದೇವೆಂದರೆ ಅದು ಇಂತಹ ಶ್ರೇಷ್ಠ ದಾರ್ಶನಿಕರ ಪವಿತ್ರ ಪುಣ್ಯ ಕಾರ್ಯದಿಂದ ಎಂದರು. ಇನ್‌ಫೆಂಟ್ ಜೀಸಸ್ ಚರ್ಚಿನ ಧರ್ಮಗುರು ಕೆ.ಎ.ಜಾರ್ಜ್ ಮಾತನಾಡಿ, ಇಂದು ನಗರದಲ್ಲಿ ಅತ್ಯಂತ ಮಹತ್ವ ಪೂರ್ಣವಾದ ಪ್ರತಿಯೊಬ್ಬರ ಬದುಕಿಗೂ ಹೊಸ ಸ್ಪರ್ಶ ನೀಡುವ ಎಲ್ಲರ ಬದುಕನ್ನು ಪಾವಿತ್ರ್ಯತೆಗೊಳಿಸುವ ಕಾರ್ಯದಲ್ಲಿ ಭಾಗವಹಿಸಿದ್ದೇವೆ. ಪ್ರವಾದಿ ಮಹಮ್ಮದ್ ಎಲ್ಲರಿಗಾಗಿ ಎಂಬ ಕಾರ್ಯಕ್ರಮ ವಿಶೇಷತೆಯಿಂದ ವೈಶಿಷ್ಠತೆಯಿಂದ ಕೂಡಿದೆ.
ಸಮಾಜದಲ್ಲಿರುವ ಹಲವಾರು ಜಾತಿ, ಧರ್ಮಗಳಿಗೆ ಮಾರ್ಗದರ್ಶನವಾಗುವಂತಹ ಸೂತ್ರವನ್ನು ಕಂಡು ಹಿಡಿದು ಅದರ ಪರಿಪಾಲನೆಗೆ ಮುಂದಾದವರೇ ಪ್ರವಾದಿ ಮಹಮ್ಮದ್‌ರವರು ಎಂದರು.
ಪ್ರವಚನ ನೀಡಿದ ಜಮಾತ್ -ಎ-ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕºರ್ ಅಲಿ ಉಡುಪಿ ಮಾತನಾಡಿ, ಧಾರ್ಮಿಕ ಕಾರ್ಯಗಳ ವಿಚಾರ ಧಾರೆಗಳು ಸುಲಭವಾಗಿ ಎಲ್ಲರಿಗೂ ಅರ್ಥವಾಗುವುದಿಲ್ಲ. ನಾವೆಲ್ಲರೂ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕಿದೆ. ಭಗವಂತನು ನೀಡಿದ ಬುದ್ಧಿ ಶಕ್ತಿಯನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಬೇಕಿದೆ. ಯಾರು ದೇವರು ಮತ್ತು ಧರ್ಮದಲ್ಲಿ ಅಪಾರವಾದ ಭಕ್ತಿ ಶ್ರದ್ಧೆಯನ್ನು ಹೊಂದಿರುತ್ತಾರೋ ಅವರು ಸಮಾಜದಲ್ಲಿ ಸರ್ವಶಕ್ತಿಯಾಗಿ ಬೆಳೆಯುತ್ತಾರೆ. ನಾವೆಲ್ಲರೂ ಹಲವಾರು ಧಾರ್ಮಿಕ ಆಚಾರ, ವಿಚಾರ ಪದ್ಧತಿಗಳನ್ನು ಅನುಸರಿಸಿದರೂ ಎಲ್ಲವುಗಳ ಸಾರಾಂಶ ವಿಶ್ವಮಾನವರಾಗಬೇಕೆಂಬುವುದು. ತತ್ವವನ್ನು ಈ ಪುಣ್ಯ ಭೂಮಿಗೆ ಪರಿಚಯಿಸಿದ ಮಹಾನ್ ಶ್ರೇಷ್ಠ ವ್ಯಕ್ತಿ ಪ್ರವಾದಿ ಮಹಮ್ಮದ್ ಎಂದರು.
ಮದರಸ ದಾರೂಲ್ ಉಲೂಮ್ ಅಧ್ಯಕ್ಷ ಮುಫ್ತಿ ಮೊಹಮ್ಮದ್ ಶೊಯೆಬ್, ನಗರಸಭಾ ಸದಸ್ಯ ಹೊಯ್ಸಳ ಗೋವಿಂದ, ಮಾಜಿ ಸದಸ್ಯರಾದ ಆರ್.ಪ್ರಸನ್ನಕುಮಾರ್, ಎಚ್. ಮುಜೀಬ್, ನೇತಾಜಿ ಪ್ರಸನ್ನ, ಕೆಜಿಎನ್. ಮುಜೀಬುಲ್ಲಾ, ಎಚ್.ಎಸ್. ಸೈಯದ್, ಡಾ.ಚಂದ್ರನಾಯ್ಕ, ಪ್ರಭಾರಿ ಪೌರಾಯುಕ್ತ ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ರೆಡ್ಡಿಹಳ್ಳಿ ವೀರಣ್ಣ, ಸೈಯದ್, ಮುಬಾಷೀರ್, ರಮೇಶ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.