ವರನಟ ಡಾ.ರಾಜ್ ಅಪಹರಣ ನಡೆದು ಇಂದಿಗೆ 20 ವರ್ಷ: ಇಲ್ಲಿದೆ ಆ ಕರಾಳ ರಾತ್ರಿಯ ಸಂಪೂರ್ಣ ಮಾಹಿತಿ
ರಾಜ್ ಬೆನ್ನಿಗೆ ಬಂದೂಕು ಗುರಿ ಹಿಡಿದು ನೈಲಾನ್ ಹಗ್ಗದಿಂದ ಕೈಕಟ್ಟಿ ಬೇಡಿಕೆಗಳಿರುವ ಕ್ಯಾಸೆಟ್ ನೀಡಿದ್ದ ವೀರಪ್ಪನ್
Team Udayavani, Jul 30, 2020, 8:27 AM IST
ಚಾಮರಾಜನಗರ: ನರಹಂತಕ, ಕಾಡುಗಳ್ಳ ವೀರಪ್ಪನ್ ವರನಟ ಡಾ. ರಾಜ್‌ಕುಮಾರ್ ಅವರನ್ನು ಜಿಲ್ಲೆಯ ಗಡಿಭಾಗದಲ್ಲಿರುವ ತಮಿಳುನಾಡಿನ ಗಾಜನೂರಿನ ಅವರ ತೋಟದ ಮನೆಯಿಂದ ಅಪಹರಿಸಿದ ಕರಾಳ ಘಟನೆ ನಡೆದು ಇಂದಿಗೆ 20 ವರ್ಷಗಳಾದವು.
ಡಾ. ರಾಜ್‌ಕುಮಾರ್ ಅವರಿಗೆ ತಮ್ಮ ಹುಟ್ಟೂರು (ರಾಜ್‌ಕುಮಾರ್ ಅವರ ತಂದೆಯ ಊರು ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು. ತಾಯಿ ಊರು ಗಾಜನೂರು. ರಾಜ್ ತಂದೆ ಬಳಿಕ ಇಲ್ಲೇ ನೆಲೆಸಿದ್ದರು) ಗಾಜನೂರನ್ನು ಕಂಡರೆ ಅನನ್ಯ ಪ್ರೀತಿ. ಅಲ್ಲಿರುವ ಜಮೀನಿನಲ್ಲಿ ಕೊರೆಸಿರುವ ಕೊಳವೆಬಾವಿಯಲ್ಲಿ ನೀರು ಬಂತೆಂಬ ಸುದ್ದಿ ತಿಳಿದು ಪಾರ್ವತಮ್ಮ ಅವರೊಡನೆ ಗಾಜನೂರಿಗೆ ಬಂದಿದ್ದರು.
ಖ್ಯಾತರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಕಾಡುಗಳ್ಳ ವೀರಪ್ಪನ್ ವರನಟ ರಾಜ್‌ಕುಮಾರ್ ಅವರನ್ನೇ ಅಪಹರಿಸುವ ಸಂಚು ಮಾಡಿದ್ದ. ಮಾಹಿತಿದಾರರರಿಂದ ರಾಜ್‌ಕುಮಾರ್ ಅವರು ಬರುವ ವಿಷಯ ತಿಳಿದು 2000ರ ಜುಲೈ 30 ರ ರಾತ್ರಿ ಗಾಜನೂರಿನ ತೋಟದ ಮನೆಯಿಂದ ರಾಜ್‌ಕುಮಾರ್ ಅವರನ್ನು ಹಾಗೂ ಇನ್ನಿತರ ಮೂವರನ್ನು ಅಪಹರಿಸಿ ಕರೆದೊಯ್ದಿದ್ದ. ಅವರನ್ನು ಸತ್ಯಮಂಗಲ ಕಾಡಿನಲ್ಲಿ ಒತ್ತೆಯಾಳಾಗಿರಿಸಿಕೊಂಡು 108 ದಿನಗಳ ನಂತರ ಅಂದರೆ ನವೆಂಬರ್ 15ರಂದು ಬಿಡುಗಡೆ ಮಾಡಿದ್ದ.
ಅಂದು ಅಪಹರಣದ ರಾತ್ರಿಯ ಮಾರನೆ ದಿನ ಘಟನೆಗಳ ಪ್ರತ್ಯಕ್ಷ ವಿವರಗಳ ಮೆಲುಕು ಇಲ್ಲಿದೆ
ಅಪಹರಣದ ಬಳಿಕ ಪಾರ್ವತಮ್ಮ ರಾಜ್‌ಕುಮಾರ್ ಅವರು ಮಧ್ಯರಾತ್ರಿ ವೇಳೆಗೆ ಚಾಮರಾಜನಗರಕ್ಕೆ ಬಂದು ಎಸ್‌ಟಿಡಿ ಬೂತ್‌ವೊಂದರ ಮೂಲಕ ಅವರ ಮಕ್ಕಳಿಗೆ ಕರೆ ಮಾಡಿ ರಾಜ್ ಅಪಹರಣದ ವಿಷಯ ತಿಳಿಸಿ, ನಂತರ ಬೆಂಗಳೂರಿಗೆ ತೆರಳಿದ್ದರು. (ಅಂದು ಗಾಜನೂರು ಹಾಗೂ ತಾಳವಾಡಿಯಲ್ಲಿ ಫೋನ್ ಲೈನ್‌ಗಳು ಸಂಪೂರ್ಣ ಕೆಟ್ಟಿದ್ದವು)
ಡಾ. ರಾಜ್‌ಕುಮಾರ್ ಅವರ ಅಪಹರಣದ ವಿಷಯ ತಿಳಿದು, 2000 ರ ಜು.31 ರ ಬೆಳಗಿನ ಜಾವ ಸ್ಥಳಕ್ಕೆ ಹೋದಾಗ ಅಲ್ಲಿ ಕಂಡದ್ದು ನೀರವ ಮೌನ. ಚಾಮರಾಜನಗರದಿಂದ ಗಾಜನೂರು 22 ಕಿ.ಮೀ. ದೂರ. ಆಗ ತಾನೇ ಬೆಳಕು ಹರಿಯುತ್ತಿತ್ತು. ಗ್ರಾಮಗಳಲ್ಲಿ ಜನರಿಗೆ ರಾಜ್ ಅಪಹರಣದ ವಿಷಯ ತಿಳಿದಿಲ್ಲ. ಹಾಗಾಗಿ ಎಲ್ಲೆಡೆ ಮಾಮೂಲಿನಂಥ ಜನಜೀವನವಿತ್ತು. ಗಾಜನೂರಿಗೆ ಹೋದರೆ, ರಾಜ್‌ಕುಮಾರ್ ಅವರ ತೋಟದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಕೃಷಿಕರಿಗೂ ರಾತ್ರಿ ರಾಜ್ ಅಪಹರಣವಾಗಿರುವ ವಿಷಯ ತಿಳಿದಿರಲಿಲ್ಲ. ಅವರೆಲ್ಲ ಆರಾಮಾಗಿ ಮಾತಾಡುತ್ತಾ ಕಬ್ಬು ಕಟಾವು ಮಾಡುತ್ತಿದ್ದರು.
ರಾಜ್‌ರ ತೋಟದ ಹಳೆಯ ಮನೆಯಲ್ಲಿ ರಾಜ್ ತಂಗಿ ಪುತ್ರ ಗೋಪಾಲ್ ಮತ್ತವರ ಕುಟುಂಬ ವಾಸವಿದ್ದು ರಾಜ್ ಜಮೀನು ನೋಡಿಕೊಳ್ಳುತ್ತಿದ್ದರು. ಮನೆಯೊಳಗೆ ಹೋದಾಗ ಸಾವರಿಸಿಕೊಂಡಿದ್ದ ಗೋಪಾಲ್, ಅವರ ಮಕ್ಕಳಾದ ಪಲ್ಲವಿ, ದೀಪಾ ನಿನ್ನೆ ರಾತ್ರಿ ನಡೆದ ಘಟನೆ ವಿವರಿಸಿದರು. ರಾತ್ರಿ 8.30 ರಲ್ಲಿ ರಾಜ್‌ಕುಮಾರ್ ಅವರು ಹಳೆಯ ಮನೆಯ ಹಜಾರದಲ್ಲಿ ಊಟ ಮುಗಿಸಿ ಎಲೆ ಅಡಿಕೆ ಹಾಕಿಕೊಳ್ಳುತ್ತಾ ಟಿ.ವಿ. ನೋಡುತ್ತಿದ್ದರು.9 ಗಂಟೆಗೆ ವೀರಪ್ಪನ್ ತನ್ನ ಸಹಚರರೊಂದಿಗೆ ಮನೆಯೊಳಗೆ ನುಗ್ಗಿದ. ಮನೆಯ ಸುತ್ತ 6 ಮಂದಿ ಸಹಚರರನ್ನು ನಿಲ್ಲಿಸಿ, ಡಾ.ರಾಜ್ ಬೆನ್ನಿಗೆ ಬಂದೂಕು ಗುರಿ ಹಿಡಿದು ನೈಲಾನ್ ಹಗ್ಗದಿಂದ ಕೈಕಟ್ಟಿದ್ಧಾನೆ. ತಕ್ಷಣ ಪಾರ್ವತಮ್ಮ ಅವರಿಗೆ ಕ್ಯಾಸೆಟ್‌ವೊಂದನ್ನು ನೀಡಿ ಇದರಲ್ಲಿ ನನ್ನ ಬೇಡಿಕೆಗಳಿವೆ. ಇದನ್ನು ಕರ್ನಾಟಕದ ಮುಖ್ಯಮಂತ್ರಿಯವರಿಗೆ ತಲುಪಿಸಿ ಎಂದಿದ್ದಾನೆ. ಅಷ್ಟರಲ್ಲಿ ಪಾರ್ವತಮ್ಮನವರು ನಾವು ನಿನಗೆ ಏನಪ್ಪಾ ಮಾಡಿದ್ದೇವೆ. ಅವರನ್ನು ಬಿಟ್ಟುಬಿಡು ಎಂದಿದ್ದಾರೆ. ಶ್! ಯಾರೂ ಮಾತಾಡಬೇಡಿ ಮಾತಾಡಿದರೆ ಸುಟ್ಟು ಬಿಡುತ್ತೇನೆ ಎಂದು ಬೆದರಿಸಿದ್ದಾನೆ. ಆಗ ಡಾ.ರಾಜ್‌ಕುಮಾರ್, ಹೆದರಬೇಡ ಪಾರ್ವತಿ ಏನೂ ಆಗಲ್ಲ ಎಂದು ಧೈರ್ಯ ಹೇಳಿ ಆತನ ಹಿಂದೆ ಮನೆಯಿಂದ ಹೊರಬಂದು ಮನೆಯಾಚೆ ಇದ್ದ ಚಪ್ಪಲಿ ಮೆಟ್ಟಿ ಹೊರನಡೆದಿದ್ದಾರೆ.
ರಾಜ್‌ಕುಮಾರ್ ಅವರೊಂದಿಗೆ ಅವರ ಅಳಿಯ ಎಸ್.ಎ. ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಅವರನ್ನು ವೀರಪ್ಪನ್ ಅಪಹರಿಸಿದ್ದ.
ಆಗ ಕನ್ನಡದಲ್ಲಿದ್ದುದು ಒಂದೇ ಟಿವಿ ಚಾನೆಲ್. ಅದರಲ್ಲಿ ರಾಜ್‌ಕುಮಾರ್ ಅಪಹರಣದ ವರದಿ ಪ್ರಸಾರವಾಯಿತು. ಜನರಿಂದ ನಾನು ಮೇಲೆ ಬಂದೆ ಎಂಬ ಶಬ್ದವೇಧಿ ಚಿತ್ರದ ಹಾಡು ಮೂಡಿ ಬಂತು. ವಿಷಯ ತಿಳಿದ ಮೇಲೆ ಗಾಜನೂರು ಹಾಗೂ ಸುತ್ತಮುತ್ತಲಿನ ಜನ ಧಾವಿಸಿ ಬಂದರು. ರಾಜ್ ಅವರ ಕಬ್ಬಿನಗದ್ದೆಯಲ್ಲಿ ಕಟಾವು ಮಾಡುತ್ತಿದ್ದ ಕೂಲಿಯಾಳುಗಳಿಗೆ ಆಗ ವಿಷಯ ತಿಳಿದು ಕಟಾವು ನಿಲ್ಲಿಸಿ ಮನೆಯ ಬಳಿ ಬಂದರು. ಏನೂ ಆಗಿಲ್ಲವೇನೋ ಎಂಬಂತಿದ್ದ ದಾರಿಯಲ್ಲಿದ್ದ ಗ್ರಾಮಗಳಲ್ಲಿ ಜನರು ರಾಜ್‌ಕುಮಾರ್ ಕಿಡ್ನಾಪಂತೆ ಎಂದು ಗಾಬರಿಯಿಂದ ಪ್ರಶ್ನಿಸುತ್ತಾ ದಿಗ್ಭ್ರಮೆಗೊಳಗಾಗಿದ್ದರು.
ಪ್ರತ್ಯಕ್ಷದರ್ಶಿ ಸಹನಟ ವಡ್ಡ ನಾಗರಾಜ್ ಮಾತುಗಳಲ್ಲಿ
ರಾಜ್ ಅಪಹರಣದ ವಿಷಯ ತಿಳಿದು ಸ್ಥಳಕ್ಕೆ ಹೋದ ಪತ್ರಕರ್ತರಿಗೆ, ಮನೆಯ ಹೊರಗಿದ್ದ ಸಹನಟ ವಡ್ಡ ನಾಗರಾಜ್ ಹಿಂದಿನ ರಾತ್ರಿ ನಡೆದ ಘಟನೆಯನ್ನು ವಿವರಿಸಿದರು.
ನಿನ್ನೆ ರಾತ್ರಿ 8.30ರಲ್ಲಿ ಹಳೆ ಮನೆಯಲ್ಲಿ ಊಟ ಮುಗಿಸಿಕೊಂಡು ಅಣ್ಣಾವ್ರ ಹೊಸ ಮನೆಗೆ ಮಲಗಲು ಹೊರಟೆವು. ನಾನು ಎಸ್.ಎ. ಗೋವಿಂದರಾಜು, ನಾಗೇಶ್, ನಾಗಪ್ಪ ಮಾರಡಗಿ, ರವಿ ಹೋಗ್ತಾ ಇದ್ದೆವು. ದಾರಿ ಮಧ್ಯ 15 ಮಂದಿ ಅಟ್ಯಾಕ್ ಮಾಡಿದ್ರು, ನನ್ನ ಬೆನ್ನಿಗೆ ವೀರಪ್ಪನ್ ಬಂದೂಕು ಹಿಡಿದ. ವೀರಪ್ಪನ್‌ನನ್ನು ಫೋಟೋದಲ್ಲಷ್ಟೇ ನೋಡಿದ್ದ ನಾನು ಬೆಚ್ಚಿದೆ. ಆತ ರಾಜಕುಮಾರ್ ಎಲ್ಲಿ ಎಂದು ತಮಿಳಿನಲ್ಲಿ ಕೇಳಿದ. ಅಷ್ಟರಲ್ಲಿ ಗೋವಿಂದರಾಜು ಅವರು, ಮನೆಯಲ್ಲಿದ್ದಾರೆ ಎಂದು ತಮಿಳಿನಲ್ಲಿ ಹೇಳಿದರು. ನಮ್ಮೆಲ್ಲರನ್ನೂ ವೀರಪ್ಪನ್ ಒಬ್ಬರ ಪಕ್ಕ ಒಬ್ಬರಂತೆ ಮಂಡಿಯೂರಿ ಕುಳ್ಳಿರಿಸಿದ. ನಮ್ಮ ಜೊತೆ ನಾಲ್ಕೈದು ಮಂದಿ ಸಹಚರರನ್ನು ಇರಿಸಿ ರಾಜ್ ಇದ್ದ ಹಳೆ ಮನೆಯತ್ತ ಹೋದ. ಸ್ವಲ್ಪ ಹೊತ್ತಿನ ಬಳಿಕ ಅಣ್ಣಾವ್ರನ್ನು ಕೈಕಟ್ಟಿ ಕರೆತಂದ. ಇವರೆಲ್ಲ ಯಾರು ಎಂದು ಅಣ್ಣಾವ್ರನ್ನು ಪ್ರಶ್ನೆ ಮಾಡಿದ. ಅವರು ಎಲ್ಲರನ್ನೂ ವೀರಪ್ಪನ್‌ಗೆ ಪರಿಚಯ ಮಾಡಿಕೊಟ್ಟರು. ನಂತರ ಪೊಲೀಸರಿಗೇನಾದರೂ ತಿಳಿಸಿದರೆ ರಾಜ್‌ಕುಮಾರ್ ಅವರನ್ನು ಸುಟ್ಟುಬಿಡುತ್ತೇನೆ ಎಂದು ಪದೇ ಪದೇ ಎಚ್ಚರಿಸಿ ಕತ್ತಲಲ್ಲೇ ರಾಜ್‌ರನ್ನು ಕರೆದುಕೊಂಡು ಹೋದ ಎಂದು ವಿವರಿಸಿದರು.
ಅಪಹರಣ ಆರೋಪಿಗಳ ಖುಲಾಸೆ
ವರನಟ ಡಾ. ರಾಜ್‌ಕುಮಾರ್ ಅವರ ಅಪಹರಣಕ್ಕೆ ಸಂಬಂಧಿಸಿದಂತೆ 12 ಜನರನ್ನು ಆರೋಪಿಗಳನ್ನಾಗಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಈ ನಡುವೆ ಕಾಡುಗಳ್ಳ ವೀರಪ್ಪನ್ 2004ರ ಅಕ್ಟೋಬರ್ 18ರಂದು ವೀರಪ್ಪನ್, ತಮಿಳುನಾಡು ಎಸ್‌ಟಿಎಫ್ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ. ತಮಿಳುನಾಡಿನ ಈರೋಡು ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2018ರ ಸೆ.25ರಂದು ತೀರ್ಪು ನೀಡಿ, ಬದುಕುಳಿದಿದ್ದ 9 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಿತ್ತು. ವೀರಪ್ಪನ್ ಜೊತೆ ಅಪಹರಣೆದಲ್ಲಿ ಭಾಗಿಯಾಗಿದ್ದ ಸೇತುಕುಳಿಗೋವಿಂದ ಹಾಗೂ ರಂಗಸ್ವಾಮಿ ಸಹ ಪೊಲೀಸರಿಂದ ಹತರಾದರು.
ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿ ಅವ್ಯವಸ್ಥೆ… ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.