ಮಠಾಧಿಪತಿ ಆಯ್ಕೆ: ಜೈಲಿನಲ್ಲೇ “ವಿಷ’ ಸ್ವಾಮಿ ತಂತ್ರ
Team Udayavani, Aug 30, 2019, 3:00 AM IST
ಹನೂರು: ಐತಿಹಾಸಿಕ ಗುರುಪರಂಪರೆಯುಳ್ಳ ಸಾಲೂರು ಮಠದ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಇತ್ತ ಸೂಕ್ತ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆಯುತ್ತಿದ್ದರೆ ಅತ್ತ ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ನಂಬರ್ ಒನ್ ಆರೋಪಿ ಇಮ್ಮಡಿ ಮಹದೇವ ಸ್ವಾಮಿ ನ್ಯಾಯಾಲಯದ ಮೊರೆಹೋಗಿ ತಡೆಯಾಜ್ಞೆ ಪಡೆದಿದ್ದಾನೆ.
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲ ಕಾರ್ಯಕ್ರಮದಲ್ಲಿ ಭಕ್ತರಿಗೆ “ವಿಷವಿಕ್ಕಿ’ ಜೈಲು ಸೇರಿರುವ ಇಮ್ಮಡಿ ಮಹದೇವ ಸ್ವಾಮಿ ಅಲ್ಲಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದಾನೆ. ಇದರಲ್ಲಿ ತಾತ್ಕಾಲಿಕವಾಗಿ ಯಶು ಕಂಡಿದ್ದಾನೆ. ಅಲ್ಲದೇ ಮಠದಲ್ಲಿ ತನ್ನದೇ ಆದ ಬೆಂಬಲಿಗರಿಂದ ತನ್ನ ಪರ ವಾದಿಸುವಂತೆ ಪ್ರೇರೇಪಿಸುತ್ತಿದ್ದಾನೆ.
ಹಿರಿಯ ಶ್ರೀಗೆ ಆರೋಗ್ಯ ಸಮಸ್ಯೆ: ಸಾಲೂರು ಮಠದ ಹಾಲಿ ಅಧ್ಯಕ್ಷರಾಗಿರುವ ಪಟ್ಟದ ಗುರುಸ್ವಾಮಿಗಳಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಮಠದ ಜವಾಬ್ದಾರಿ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆಗೆ ಕಷ್ಟವಾಗುತ್ತಿದೆ. ನನ್ನ ಉತ್ತರಾಧಿಕಾರಿ ನೇಮಕ ಮಾಡುವಂತೆ ಆಗಸ್ಟ್ 15 ರಂದು ಗುಂಡೇಗಾಲ ಮಠದಲ್ಲಿ ಸಭೆ ಸೇರಿ ಗುರುಸ್ವಾಮಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆ ಸುತ್ತೂರು ಶ್ರೀಗಳು ಮತ್ತು ಕನಕಪುರ ಶ್ರೀಗಳ ಮಾರ್ಗದರ್ಶನದಲ್ಲಿ ಭಕ್ತ ಸಮೂಹದ ಅಭಿಪ್ರಾಯ ಪಡೆದು ಉತ್ತರಾಧಿಕಾರಿ ನೇಮಕ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಉತ್ತರಾಧಿಕಾರಿ ನೇಮಕಕ್ಕೆ ಸಮಿತಿ: ಆ.18ರಂದು ಸುತ್ತೂರು ಮಠದಲ್ಲಿ ಸಭೆ ಸೇರಿ ವಿವಿಧ ಮಠಗಳ ಮಠಾಧೀಶರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡಲು ತೀರ್ಮಾನ ಕೈಗೊಂಡು ಸಮರ್ಥ ಉತ್ತರಾಧಿಕಾರಿ ನೇಮಕಕ್ಕಾಗಿ 9 ಜನರ ಸಮಿತಿ ರಚಿಸಲಾಗಿತ್ತು. ಗುಂಡ್ಲುಪೇಟೆ ಕ್ಷೇತ್ರ ಶಾಸಕ ನಿರಂಜನ್‌ಕುಮಾರ್, ಹನೂರು ಕ್ಷೇತ್ರದ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ವೀರಶೈವ ಮಹಾಸಭಾದ ರಾಜ್ಯ ಘಟಕದ ಕಾರ್ಯದರ್ಶಿ ಮಹದೇವಸ್ವಾಮಿ, ಮುಖಂಡರಾದ ಪೊನ್ನಾಚಿ ಮಹದೇವ ಸ್ವಾಮಿ, ವೀರಮಾಧು, ತೋಟೇಶ್, ವಕೀಲ ಶಶಿಬಿಂಬ, ಶಾಗ್ಯ ರವಿ ಮತ್ತು ಮಹದೇವಸ್ವಾಮಿ ತಂಬಡಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಬಳಿಕ ಆಗಸ್ಟ್ 28 ರಂದು ಸಾಲೂರು ಮಠದಲ್ಲಿ ಭಕ್ತ ಸಮೂಹದ ಅಭಿಪ್ರಾಯ ಪಡೆದು ಉತ್ತರಾಧಿಕಾರಿ ನೇಮಕ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು.
ಇಬ್ಬರು ಶ್ರೀಗಳ ನೇಮಕ ಬೇಡ: ಕಳೆದ 29 ವರ್ಷಗಳ ಹಿಂದೆ ಸಾಲೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡುವ ವೇಳೆ ಉಂಟಾದ ಕೆಲ ಸಮಸ್ಯೆಗಳಿಂದಾಗಿ ಹಿರಿಯ ಶ್ರೀಗಳು, ಕಿರಿಯ ಶ್ರೀಗಳು ಎಂದು ಇಬ್ಬರು ಶ್ರೀಗಳನ್ನು ನೇಮಕ ಮಾಡಲಾಗಿತ್ತು. ಆದರೆ, ಅಂದಿನಿಂದಲೂ ಇಬ್ಬರೂ ಶ್ರೀಗಳ ನಡುವೆ ಸಮನ್ವಯತೆ, ಹೊಂದಾಣಿಕೆ ಕಾಣದ ಹಿನ್ನೆಲೆ ಆಗಾಗ್ಗೆ ಸಣ್ಣಪುಟ್ಟ ಕಲಹಗಳು, ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ದವು. ಸಾಲೂರು ಮಠ ತನ್ನದೇ ಆದ ಐತಿಹಾಸಿಕ ಹಿನ್ನೆಲೆ, ಪಾವಿತ್ರಯತೆಯನ್ನು ಹೊಂದಿದ್ದು, ಇದನ್ನು ಕಾಪಾಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಬ್ಬರು ಶ್ರೀಗಳನ್ನು ನೇಮಕ ಮಾಡದೆ ಸಮರ್ಥವಾದ ಒಬ್ಬರೇ ಉತ್ತರಾಧಿಕಾರಿಯನ್ನು ನೇಮಕ ಮಾಡಬೇಕೆಂದು ಭಕ್ತ ಸಮೂಹ ಸಭೆಯಲ್ಲಿ ಒತ್ತಾಯ ಮಂಡಿಸಿದರು.
ಕೋರ್ಟ್ ಮೊರೆ: ಇತ್ತ ಸಾಲೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದಿದ್ದ ಇಮ್ಮಡಿ ಮಹದೇವಸ್ವಾಮಿ ಕಳೆದ 4 ದಿನಗಳ ಹಿಂದೆಯೇ ಕೊಳ್ಳೇಗಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಸುಳ್ವಾಡಿ ಪ್ರಕರಣ ವಿಚಾರಣೆ ಹಂತದಲ್ಲಿದ್ದು ನನ್ನ ವಿರುದ್ಧ ಆರೋಪ ಇನ್ನೂ ಸಾಬೀತಾಗಿಲ್ಲ. ಆದರೆ, ಈಗಾಗಲೇ ಉತ್ತರಾಧಿಕಾರಿ ನೇಮಕ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಉತ್ತರಾಧಿಕಾರಿ ನೇಮಕ ಮಾಡಬಾರದು ಎಂದು ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಸಿದ್ದನು.
ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಕೊಳ್ಳೇಗಾಲದ ಎಸಿಜೆ ನ್ಯಾಯಾಲಯ ಆ.28ರಂದು ಉತ್ತರಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಒಟ್ಟಾರೆ ಸಾಲೂರು ಮಠದ ಪಟ್ಟದ ಗುರುಸ್ವಾಮಿಗಳ ಆರೋಗ್ಯ ಏರುಪೇರಿನಿಂದಾಗಿ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಇತ್ತ ಇಮ್ಮಡಿ ಮಹದೇವಸ್ವಾಮಿ ನ್ಯಾಯಾಲಯ ಮೊರೆಹೋಗಿ ತಡೆಯಾಜ್ಞೆ ಪಡೆದಿರುವುದರಿಂದ ಮುಂದೆ ಏನೆಲ್ಲಾ ಬೆಳವಣಿಗೆಗಳು ಜರುಗಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಏನಿದು ಸುಳ್ವಾಡಿ ವಿಷಪ್ರಸಾದ ಪ್ರಕರಣ?: ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ 2018ರ ಡಿ.14 ರಂದು ನಡೆದ ಪೂಜಾ ಕಾರ್ಯಕ್ರಮದಲ್ಲಿ ಕ್ರಿಮಿನಾಶಕ ಹಾಕಿದ್ದ ಆಹಾರವನ್ನು ಸೇವಿಸಿದ್ದ 17 ಜನ ಸಾವನ್ನಪ್ಪಿದ್ದರು. 125 ಮಂದಿ ವಿವಿಧ ಆಸ್ಪತ್ರೆಗಳ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ. ಈ ಪ್ರಕರಣದಲ್ಲಿ ಇಮ್ಮಡಿ ಮಹದೇವ ಸ್ವಾಮಿ ತನ್ನ ಬೆಂಬಲಿಗರೊಂದಿಗೆ ಸೇರಿಕೊಂಡು ಪ್ರಸಾದಕ್ಕೆ ವಿಷ ಬೆರೆಸಿದ್ದನು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ ಜೈಲಿನಲ್ಲಿರುವ ಈ ಸ್ವಾಮಿಯನ್ನು ನಂಬರ್ ಒನ್ ಆರೋಪಿಯನ್ನಾಗಿ ಮಾಡಲಾಗಿದೆ. ಈ ವಿಷಪ್ರಸಾದ ದುರಂತವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೇ ರಾಜ್ಯದಲ್ಲಿ ಪ್ರಸಾದ ವಿತರಣೆಗೆ ಕಣ್ಗಾವಲು ಇಡುವಂತೆ ಕಾನೂನು ರೂಪಿಸಲೂ ಕಾರಣವಾಗಿತ್ತು.
ಸಾಲೂರು ಮಠ ಇತಿಹಾಸವುಳ್ಳ ಮಠವಾಗಿದ್ದು ತನ್ನದೇ ಆದ ಸಂಪ್ರದಾಯ ಹೊಂದಿದೆ. ಈ ನಿಟ್ಟಿನಲ್ಲಿ ಮಠದ ಅಭಿವೃದ್ಧಿಗಾಗಿ ಉತ್ತಮ ವಿದ್ಯಾಭ್ಯಾಸ, ಪಾಂಡಿತ್ಯ ಹೊಂದಿರುವ ಉತ್ತಮ ಚಾರಿತ್ರ್ಯವುಳ್ಳವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಿ. ವೀರಶೈವ ಮಹಾಸಭಾ ಜಿಲ್ಲಾ ಘಟಕ ಎಲ್ಲಾ ರೀತಿಯಲ್ಲಿಯೂ ಮಠಕ್ಕೆ ಸಹಕಾರ ನೀಡಲಿದೆ.
-ಕೊಡಸೋಗೆ ಶಿವಬಸಪ್ಪ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ
ಮಹದೇಶ್ವರರ ಪೂಜಾ ಕೈಂಕರ್ಯಗಳಿಗೆ ಆಚಾರ ವಿಚಾರ ಕಟ್ಟುಪಾಡುಗಳಿವೆ. ಮಹದೇಶ್ವರನನ್ನು ಪೂಜಿಸುವವರು, ನೈವೇದ್ಯ ಸಲ್ಲಿಸುವವರು ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮ ಧರ್ಮ. ಚಪ್ಪಲಿಯಲ್ಲಿ ಹೊಡೆಸಿಕೊಂಡವರು, ಜೈಲಿಗೆ ಹೋಗಿ ಬಂದವರು ಮಠಕ್ಕೆ ಅನರ್ಹರಾಗಿರುತ್ತಾರೆ.
-ಮಾದಯ್ಯ ತಂಬಡಿ, ಬೇಡಗಂಪಣ ಮುಖ್ಯಸ್ಥ
* ವಿನೋದ್ ಎನ್.ಹನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Kollegala: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ… ಸೊತ್ತು ಸಮೇತ ಆರೋಪಿ ಬಂಧನ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.