ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ; ಪ್ರಚಾರ ಬಿರುಸು, ರಂಗೇರಿದ ಅಖಾಡ
ಕಳೆದ ಅವಧಿಯಲ್ಲಿ ಚಾ.ನಗರ ಎಪಿಎಂಸಿ ಅಧಿಕಾರವನ್ನು ಕಾಂಗ್ರೆಸ್ ಪಕ್ಷದ ಬೆಂಬಲಿತರು ಹಿಡಿದಿದ್ದರು.
Team Udayavani, Apr 8, 2022, 5:55 PM IST
ಚಾಮರಾಜನಗರ: ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ 12 ಕ್ಷೇತ್ರಗಳ ನಿರ್ದೇಶಕ ಸ್ಥಾನಗಳಿಗೆ ಏ. 17ರಂದು ಚುನಾವಣೆ ನಡೆಯಲಿದೆ. ಪಕ್ಷದ ಚಿಹ್ನೆಯಲ್ಲಿ ಚುನಾವಣೆ ನಡೆಯದಿದ್ದರೂ, ಬಿಜೆಪಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದು, ಎರಡೂ ಪಕ್ಷಗಳ ನಡುವೆ ಪ್ರಚಾರದ ಭರಾಟೆ ಜೋರಾಗಿದೆ.
ಚಾಮರಾಜನಗರ ಎಪಿಎಂಸಿಗೆ 12 ಕ್ಷೇತ್ರಗಳಿವೆ. ಇದರಲ್ಲಿ 11 ರೈತರ ಕ್ಷೇತ್ರ, 1 ವರ್ತಕರ ಕ್ಷೇತ್ರ. ಚುನಾವಣೆ ನಂತರ ಮೂವರು ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಿ ಕೊಳ್ಳ ಲಾಗುತ್ತದೆ. 12 ಕ್ಷೇತ್ರಗಳಲ್ಲೂ ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಈ ರೀತಿಯ ಬಹಿರಂಗ ಪ್ರಚಾರ, ಮತ ಯಾಚನೆ, ಪೈಪೋಟಿ ಇರಲಿಲ್ಲ. ಆದರೆ ಈ ಬಾರಿ ಎರಡೂ ಪಕ್ಷಗಳು ಎಪಿಎಂಸಿ ಚುನಾವಣೆಯನ್ನೂ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿವೆ. ಪ್ರಚಾರದ ಭರಾಟೆ ತೀವ್ರವಾಗಿದೆ. ಇದಕ್ಕೆ ಎರಡು ಕಾರಣಗಳು. ಒಂದು ವರ್ಷದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದು ಒಂದು ಕಾರಣ. ಕೋವಿಡ್ ಆತಂಕ ಅಂತ್ಯಗೊಂಡ ಬಳಿಕ ಹಿಂದಿನ ವಾತಾವರಣದಲ್ಲಿ ನಡೆಯುತ್ತಿರುವ ಚುನಾವಣೆ ಎಂಬುದು ಇನ್ನೊಂದು ಕಾರಣ.
ಹೊಸ ಕಾಯಿದೆಯಂತೆ ಎಪಿಎಂಸಿಗಳಿಗೆ ಹೆಚ್ಚಿನ ಅಧಿಕಾರ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಸ್ಪರ್ಧಿಸಲು ಹಿಂದೇಟು ಹಾಕಿದವರೇ ಹೆಚ್ಚು. ಆದರೂ ನಾಮಪತ್ರ ಸಲ್ಲಿಸುವ ಕೊನೆ ದಿನ ಉಭಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಎಲ್ಲ ಕ್ಷೇತ್ರಗಳಿಂದಲೂ ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿವೆ.
ಕಳೆದ ಅವಧಿಯಲ್ಲಿ ಚಾ.ನಗರ ಎಪಿಎಂಸಿ ಅಧಿಕಾರವನ್ನು ಕಾಂಗ್ರೆಸ್ ಪಕ್ಷದ ಬೆಂಬಲಿತರು ಹಿಡಿದಿದ್ದರು. ಈ ಬಾರಿಯು ಹೆಚ್ಚಿನ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರ ಹಿಡಿಯ ಬೇಕೆಂದು ಕಾಂಗ್ರೆಸ್ ಹವಣಿಸುತ್ತಿದೆ. ಇನ್ನೊಂದೆಡೆ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರನ್ನು ಹೊಂದಿ ಹುಮ್ಮಸ್ಸಿನಲ್ಲಿರುವ ಬಿಜೆಪಿ ಎಪಿಎಂಸಿ ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದೆ.
ರಂಗೇರುತ್ತಿರುವ ಪ್ರಚಾರ ಕಣ:ದಿನೇ ದಿನೆ ಪ್ರಚಾರ ಬಿರುಸುಗೊಳ್ಳುತ್ತಿದೆ. ಬಿಜೆಪಿ- ಕಾಂಗ್ರೆಸ್ ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ಆಯಾ ಕ್ಷೇತ್ರದ ಭಾಗದಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಜಮೀನು ಖಾತೆದಾರರು ಮಾತ್ರ ಮತದಾರರು. ಅಂಥ ಮತದಾರರನ್ನು ಹುಡುಕಿ ಅವರ ಮನೆಗೆ ತೆರಳಿ ಮತಯಾ ಚಿಸುವ ಕೆಲಸ ಭರದಿಂದ ಸಾಗಿದೆ. ಒಂದೆಡೆ ಬೇಸಿಗೆಯ ಬಿರು ಬಿಸಿಲಿ ದ್ದರೂ, ಅನಿವಾರ್ಯವಾಗಿ ಮುಖಂಡರು ಮತಯಾಚನೆಯಲ್ಲಿ ನಿರತರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಖುದ್ದಾಗಿ ಮತದಾರರ ಬಳಿ ತೆರಳಿ ತಮ್ಮ ಪಕ್ಷದ ಅಭ್ಯರ್ಥಿಯ ಪರ ಮತ ಯಾಚಿಸುತ್ತಿದ್ಧಾರೆ. ಅವರಲ್ಲದೇ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಮುಖಂಡರಾದ ಗಣೇಶ್‌ಪ್ರಸಾದ್, ಉಪಾಧ್ಯಕ್ಷ ಬಿ.ಕೆ. ರವಿ ಕುಮಾರ್, ಬ್ಲಾಕ್ ಅಧ್ಯಕ್ಷರು, ಜಿ.ಪಂ. ಮಾಜಿ ಸದಸ್ಯರು, ತಾ.ಪಂ. ಮಾಜಿ ಸದಸ್ಯರು ಮತ ಯಾಚನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇನ್ನು ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಆರ್. ಸುಂದರ್, ಮುಖಂಡರಾದ ಜಿ. ನಾಗಶ್ರೀ ಪ್ರತಾಪ್, ಎಂ.ರಾಮಚಂದ್ರ, ನಿಜಗುಣರಾಜು, ನೂರೊಂದು ಶೆಟ್ಟಿ, ನಗರಸಭಾಧ್ಯಕ್ಷೆ ಆಶಾ ನಟರಾಜು, ಕೆಲ್ಲಂಬಳ್ಳಿ ಸೋಮನಾಯಕ, ಬಾಲಸುಬ್ರಹ್ಮಣ್ಯ ಮತ್ತಿತರ ಮುಖಂಡರು ಅಭ್ಯರ್ಥಿಗಳ ಪರವಾಗಿ ಮತಯಾಚನೆಯಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ ಅವಧಿಗಳಲ್ಲಿ ಎಪಿಎಂಸಿ ಚುನಾವಣೆ ಪ್ರಚಾರ ಈ ರೀತಿ ರಂಗೇರುತ್ತಿರಲಿಲ್ಲ. ಈ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯುವಷ್ಟೇ ಖದರ್ ನಿಂದ ಚುನಾವಣೆ ಚಟುವಟಿಕೆ ನಡೆಯುತ್ತಿದೆ. ಏ.17 ರಂದು ಬೆಳಗ್ಗೆ 7 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಏ.20ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.
ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳು
ಚಾಮರಾಜನಗರ: ಮನೋಜ್ ಪಟೇಲ್, ಸಿದ್ದರಾಜು. ಬದನಗುಪ್ಪೆ: ಸಿ.ಬಿ.ಸೂರ್ಯಕುಮಾರ್, ಎಂ.ಬಿ. ಗುರುಸ್ವಾಮಿ.
ಹರವೆ: ಎಂ.ಗುರುಸ್ವಾಮಿ, ಮಹದೇವಪ್ರಸಾದ್, ಎಂ. ಗಿರೀಶ್.
ಉಡಿಗಾಲ: ನಿಂಗಮಣ್ಣಮ್ಮ, ಪ್ರೇಮಾ, ಮಂಜುಳಾ.
ಅಮಚವಾಡಿ: ರವಿಕುಮಾರ್, ರಾಜಶೇಖರಮೂರ್ತಿ.
ಹರದನಹಳ್ಳಿ: ಎಚ್.ಎನ್.ಮಹದೇವಸ್ವಾಮಿ, ಬಿ.ವಿ. ಶಿವಕುಮಾರ್.
ನಾಗವಳ್ಳಿ: ಎ.ಎಸ್.ಪ್ರದೀಪ್‌ಕುಮಾರ್, ಜೆ. ಎನ್. ಶಿವಕುಮಾರ್.
ಹೊಂಗನೂರು: ಮೋಹನ್‌ಕುಮಾರ್, ರವಿಶಂಕರಮೂರ್ತಿ.
ಉಮ್ಮತ್ತೂರು: ನಂಜಮ್ಮಣಿ, ಕಲಾವತಿ.
ಯಳಂದೂರು ಕಸಬಾ: ಮಹೇಶ್, ಆರ್. ರಮೇಶ್. ಅಗರ: ರಂಗಸ್ವಾಮಿ. ರಾಮಚಂದ್ರ.
ವರ್ತಕರ ಕ್ಷೇತ್ರ: ಮಹೇಶ್, ವೆಂಕಟರಾವ್, ಬಿ. ರಾಜಶೇಖರ್, ಎಲ್. ಸುರೇಶ್.
ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಬೋನಿಗೆ ಬಿದ್ದ 3-4 ವರ್ಷದ ಗಂಡು ಚಿರತೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Eshwar Khandre: ಅರಣ್ಯದೊಳಗೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ
Gundlupete: ಬಂಡೀಪುರದಲ್ಲಿ ವಾಹನಗಳ ಅಡ್ಡಗಟ್ಟಿದ ಕಾಡಾನೆ: ಆತಂಕ
Gundlupete: 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಈಶ್ವರ್ ಖಂಡ್ರೆ
Gundlupete: ಚಿರತೆ ಸೆರೆಗಾಗಿ ಇರಿಸಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.