ಅನ್ನ, ಅಕ್ಷರ, ಆರೋಗ್ಯ ನೀಡಿದ ಮಠಗಳನ್ನು ಬೆಳೆಸಿ
Team Udayavani, Jan 31, 2017, 3:34 PM IST
ಗುಂಡ್ಲುಪೇಟೆ: ಸಮಾಜದ ಸ್ವಾಸ್ಥ್ಯಕ್ಕಾಗಿ ಸೃಷ್ಟಿಯಾಗಿರುವ ಮಠಗಳ ಸೇವೆ ಮತ್ತು ಕೊಡುಗೆ ಅನನ್ಯ. ಮಠಗಳನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪೊ›.ಕೆ.ಆರ್.ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಪಡುಗೂರು ಅಡವಿಮಠದ ಆವರಣದಲ್ಲಿ ಆಯೋಜಿಸಿದ್ದ “ಹಿರಿಯ ವಿದ್ಯಾರ್ಥಿಗಳ ಸಮಾಗಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನ್ನ ದಾಸೋಹ, ಅಕ್ಷರ ದಾಸೋಹ ಮತ್ತು ಆರೋಗ್ಯ ದಾಸೋಹ ನೀಡಿ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಜಾತಿಭೇದವಿಲ್ಲದೆ ಆಶ್ರಯ ನೀಡಿರುವ ಮಠಗಳು ಸಮಾಜದ ಸಾಮಾಜಿಕ ಜವಾಬ್ದಾರಿ ಹೊತ್ತು ಉನ್ನತ ಸ್ಥಾನಮಾನಗಳಿಸಲು ಸಹಕಾರಿಯಾಗಿವೆ ಎಂದರು.
ಇಂತಹ ಸಮಾಜಮುಖೀಯಾಗಿರುವ ಮಠಗಳ ಅಭಿವೃದ್ಧಿಗಾಗಿ ಹಳೆಯ ವಿದ್ಯಾರ್ಥಿಗಳು ಮತ್ತು ಸಮಾಜದ ಎಲ್ಲ ವರ್ಗದ ಜನರು ಕೈಜೋಡಿಸಬೇಕು. ತಮ್ಮ ಕಾನೂನು ವಿದ್ಯಾಭ್ಯಾಸದ ಸಂದರ್ಭದಲ್ಲಿ ಮಠದ ಆಶ್ರಯವನ್ನು ಪಡೆದು ಓದಿದ್ದು, ಮಠಗಳು ಮಾಡಿರುವ ಸಹಕಾರವನ್ನು ಸ್ಮರಿಸಿದರು.
ಸಾಮಾಜಿಕ ಕಳಕಳಿ ಹೊಂದಿರುವ ಮಠಗಳು ಸರ್ಕಾರ ಮಾಡಬೇಕಾದ ಅನೇಕ ಕಾರ್ಯಗಳನ್ನು ಕೈಗೊಂಡು ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ತೆರೆದು ಜನೋಪಕಾರಿಯಾಗಿವೆ. ಇಂತಹ ಮಠಗಳ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ ಕುಟುಂಬಗಳ ಮಿಲನದಂತೆ ಸಮಾಗಮ ಕಾರ್ಯಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿ ಮಾದಾಪಟ್ಟಣ ವಿರಕ್ತ ಮಠಾಧ್ಯಕ್ಷ ಸದಾಶಿವಸ್ವಾಮೀಜಿ, ಈ ಮಠದ ಆಶ್ರಯದಲ್ಲಿ ತಾವೂ ವಿದ್ಯಾಭ್ಯಾಸ ಮಾಡಿದ್ದು, ತಾನು ಕೂಡ ವಿದ್ಯಾರ್ಥಿಯಾಗಿದ್ದೇನೆ. ಮೈಸೂರಿನ ಅಡವಿ ಮಠದ ಬಿಲ್ವಭವನದಲ್ಲಿ ಶಿಕ್ಷಣ ಪಡೆಯದಿದ್ದರೆ ಅಂದಿನ ಕಾಲದಲ್ಲಿ ಉನ್ನತ ವ್ಯಾಸಂಗ ಮಾಡಲಾಗುತ್ತಿರಲಿಲ್ಲ. ಅಂದಿನ ತನ್ನ ಸಹಪಾಠಿಗಳಲ್ಲಿ ಹಲವರನ್ನು ನೋಡುವ ಸುಯೋಗ ದೊರಕಿದೆ ಎಂದು ವಿದ್ಯಾರ್ಥಿ ದಿನಗಳನ್ನು ನೆನೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಡವಿಮಠದ ಮಠಾಧ್ಯಕ್ಷ ಶಿವಲಿಂಗೇಂದ್ರಸ್ವಾಮೀಜಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಕನಿಷ್ಠ ವರ್ಷಕೊಮ್ಮೆಯಾದರೂ ಒಂದೆಡೆ ಸಮಾಗಮಗೊಂಡು ಸಮಾಜದ ಏಳ್ಗೆಗಾಗಿ ದುಡಿಯಿರಿ, ಆದಷ್ಟು ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಹಿರಿಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಸಮಾಜದ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಹಿರಿಯರ ಮಹಾಮನೆ ಎಂಬ ಹೆಸರಿನಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಅಡವಿ ಮಠದ ಮುಂಭಾಗದಲ್ಲಿರುವ ಸ್ಥಳದಲ್ಲಿ ವೃದ್ಧಾಶ್ರಮ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಸರ್ಕಾರದ ಯಾವುದೇ ಅನುದಾನದ ನಿರೀಕ್ಷೆಯಲ್ಲಿಲ್ಲ. ಕೇವಲ ಭಕ್ತವೃಂದ ಮತ್ತು ಮಠದ ಅನುದಾನದಲ್ಲಿ ಕೆಲಸ ನಡೆಯುತ್ತಿದೆ ಎಂದರು.
ಈ ಹಿರಿಯರ ಮಹಾಮನೆಯನ್ನು ಮಠದ ಹಿರಿಯ ಸ್ವಾಮೀಜಿ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮೀಜಿಗಳ ಜನ್ಮ ಶತಮಾನೋತ್ಸವದ ಸವಿ ನೆನಪಿಗಾಗಿ ನಿರ್ಮಿಸಲಾಗುತ್ತಿದೆ. ಈ ಪುಣ್ಯ ಕಾರ್ಯಕ್ಕೆ ಹಿರಿಯ ವಿದ್ಯಾರ್ಥಿಗಳು, ಭಕ್ತಾದಿಗಳು ನೆರವು ನೀಡಬೇಕು ಎಂದು ಕೋರಿದರು. ಇದಲ್ಲದೇ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಬಳಕೆ ಮಾಡದೆ ಇಟ್ಟಿರುವ ಹಿರಿಯರು ಉಪಯೋಗಿಸುತ್ತಿದ್ದ ಪುರಾತನ ಕಲಾಕೃತಿಗಳು, ಹಿಂದಿನ ಕಾಲದ ವಸ್ತುಗಳನ್ನು ಮಠಕ್ಕೆ ನೀಡಿದರೆ ವಸ್ತುಸಂಗ್ರಹಾಲಯ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಜಿಪಂ ಸದಸ್ಯ ಪಿ.ಚೆನ್ನಪ್ಪ, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಟಿ.ಸಿ.ಬಸಪ್ಪ ದೇವರು, ನಿವೃತ್ತ ಡಿವೈಎಸ್‌ಪಿ ಹೊರೆಯಾಲ ಶಿವಬಸಪ್ಪ, ಹಿರಿಯ ವಿದ್ಯಾರ್ಥಿಗಳಾದ ದುಂಡುಮಾದಪ್ಪ, ಮಹದೇವಪ್ಪ, ಸಾಹಿತಿ ಪಿ.ಸಿ.ರಾಜಶೇಖರ್, ಪಡಗೂರು ನಾಗಮಲ್ಲಪ್ಪ, ಕಬ್ಬಹಳ್ಳಿ ಶಿವರುದ್ರಪ್ಪಸೇರಿದಂತೆ ಮಠದ ಹಿರಿಯ ವಿದ್ಯಾರ್ಥಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.