ಅಪಾಯ ಮಟ್ಟ ಮೀರಿ ಹರಿದ ಕಾವೇರಿ
Team Udayavani, Aug 13, 2019, 3:00 AM IST
ಕೊಳ್ಳೇಗಾಲ: ಕಬಿನಿ ಮತ್ತು ಕೃಷ್ಣರಾಜಸಾಗರದಿಂದ ಅತಿ ಹೆಚ್ಚು ನೀರು ಬಿಟ್ಟ ಪರಿಣಾಮ ಕಾವೇರಿ ನದಿ ಅಪಾಯ ಮೀರಿ ಹರಿದ ಪರಿಣಾಮ ಪ್ರವಾಹ ಬಾಧಿತ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸೋಮವಾರ ತೆಪ್ಪಗಳ ಮೂಲಕ ತೆರಳಿ ವೀಕ್ಷಿಸಿದರು.
ಕಾವೇರಿ ನದಿ ಅಪಾಯಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರದ ಗ್ರಾಮಗಳಾದ ದಾಸನಪುರ, ಹಳೇ ಅಣಗಳ್ಳಿ, ಹರಳೆ, ಹಳೇ ಹಂಪಾಪುರ, ಮುಳ್ಳೂರು, ಯಡಕುರಿಯ ಸೇರಿದಂತೆ ವಿವಿಧ ಗ್ರಾಮಗಳ ಸುತ್ತ ನೀರು ಆವರಿಸಿ ಕೊಂಡಿದ್ದು, ನೂರಾರು ಮನೆಗಳು ಜಖಂಗೊಂಡು, ಸಾವಿರಾರು ಎಕರೆ ಜಮೀನು ಜಲಾವೃತವಾಗಿರುವುದನ್ನು ವೀಕ್ಷಿಸಿದರು.
ಸಂತ್ರಸ್ತರಿಗೆ ನೆರವು: ನಂತರ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಜಿಲ್ಲಾಡಳಿತ ಎಲ್ಲಾ ಅಗತ್ಯಕ್ರಮಗಳನ್ನು ಕೈಗೊಂಡು ಪ್ರವಾಹ ಪೀಡಿತ ಗ್ರಾಮಸ್ಥರನ್ನು ನೆರೆ ಸಂತ್ರ ಸ್ತರ ಪುನರ್ ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ಕಳುಹಿಸಿ ಕೊಡಲಾಗಿದೆ. ಅಲ್ಲಿ ಅವರಿಗೆ ಎಲ್ಲಾ ತರಹದ ಉಪಚಾರಗಳನ್ನು ನೀಡಿ, ಅವರ ಆರೋಗ್ಯದ ಬಗ್ಗೆಯೂ ಸೂಕ್ಷ್ಮ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ನಿರಾಶ್ರಿತರಿಗೆ ಸೂಕ್ತ ಪರಿಹಾರ: ಪ್ರವಾಹದಿಂದಾಗಿ ಮುಳುಗಡೆಯಾಗಿರುವ ಗ್ರಾಮಗಳನ್ನು ಖುದ್ದು ವೀಕ್ಷಣೆ ಮಾಡಿದ್ದು, ನಷ್ಟ ಉಂಟಾಗಿರುವ ಗ್ರಾಮಸ್ಥರಿಗೆ ಮತ್ತು ಬೆಳೆ ಕಳೆದುಕೊಂಡಿರುವ ರೈತರ ಜಮೀನುಗಳ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರುವ ಎಲ್ಲಾ ನಿರಾಶ್ರಿತರಿಗೆ ಸೂಕ್ತ ಪರಿಹಾರ ಕೊಡಿಸಕೊಡಲಾಗುವುದು ಎಂದರು.
ಪ್ರವಾಹ ತಡೆಯಲು ಜಿಲ್ಲಾಡಳಿತ ಸಿದ್ಧ: ಈಗಾಗಲೇ ಜಿಲ್ಲಾಧಿಕಾರಿಗಳಿಗೆ ರೈತರ ಜಮೀನುಗಳಲ್ಲಿ ಮತ್ತು ಮನೆಗಳು ಕುಸಿದು ಬಿದ್ದಿರುವ ಬಗ್ಗೆ ನೀರು ಸಂಪೂರ್ಣ ಹರಿದು ಹೋದ ಬಳಿಕ ಸಮೀಕ್ಷೆ ನಡೆಸಿ ಅಂದಾಜು ವೆಚ್ಚ ತಯಾರಿಸಿ ನೀಡುತ್ತಿದ್ದಂತೆ ಅಂದಾಜು ವೆಚ್ಚದ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಮತ್ತಷ್ಟು ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಹೇಳಿದ ಅವರು, ಪ್ರವಾಹ ಸಂಪೂರ್ಣ ತಡೆಯಲು ಜಿಲ್ಲಾಡಳಿತ ಸಿದ್ಧವಾಗಿದ್ದು, ಪ್ರವಾಹದಿಂದ ನೊಂದ ಗ್ರಾಮಸ್ಥರಿಗೆ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.
ಅಪಾಯಮಟ್ಟ ಮೀರಿದ ಕಾವೇರಿ: ಕೊಡಗು ಮತ್ತು ಕೇರಳಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಮತ್ತು ಕೃಷ್ಣರಾಜಸಾಗರ ಜಲಾಶಯ ಗಳಿಂದ ಅತಿ ಹೆಚ್ಚು ನೀರು ಬಂದ ಪರಿಣಾಮ ನೀರನ್ನು ಹೊರ ಬಿಟ್ಟ ಪರಿಣಾಮ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ತೀರದ ಗ್ರಾಮಗಳು ಮುಳುಗಡೆಯಾಗಿದೆ. ಇದನ್ನು ಎದುರಿಸಲು ಜಿಲ್ಲಾಡಳಿತ ಸತತ ಒಂದು ವಾರದಿಂದ ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.
ವಸತಿ ನಿಲಯದಲ್ಲಿ ಸೌಕರ್ಯ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಕಳೆದ ವರ್ಷ ಒಂದೆ ಕಡೆ ಎಲ್ಲಾ ಗ್ರಾಮಸ್ಥರನ್ನು ಪುನರ್ ವಸತಿ ಕೇಂದ್ರದಲ್ಲಿ ಇಟ್ಟಿದ್ದ ಕಾರಣ ಪರಸ್ಪರ ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದನ್ನು ತಡೆಯುವ ಸಲುವಾಗಿ ದಾಸನಪುರ ನಿರಾಶ್ರಿತರಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಅಗ್ರಹಾರದ ಶಾಲೆಯಲ್ಲಿ ಪುನರ್ ವಸತಿ ಕೇಂದ್ರ: ಹಳೇ ಹಂಪಾಪುರ ಗ್ರಾಮದ ನಿರಾಶ್ರಿತರನ್ನು ಮಹದೇಶ್ವರ ಕಲ್ಯಾಣಮಂಟಪಕ್ಕೆ ಸ್ಥಳಾಂತರಿಸಲಾಗಿದೆ. ಹಳೇ ಅಣಗಳ್ಳಿ ಗ್ರಾಮದ ಗ್ರಾಮಸ್ಥರನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ನಿಲಯದಲ್ಲಿ ಇರಿಸಿದ್ದಾರೆ. ಮುಳ್ಳೂರು ಗ್ರಾಮಸ್ಥರನ್ನು ಅದೇ ಗ್ರಾಮದ ಮೇಲ್ಭಾಗ ಇರುವ ಸರ್ಕಾರಿ ಶಾಲೆಯಲ್ಲಿ ಇರಿಸಲಾಗಿದೆ. ದ್ವೀಪ ಗ್ರಾಮವಾದ ಯಡಕುರಿಯ ಗ್ರಾಮಸ್ಥರನ್ನು ಸತ್ತೇ ಗಾಲದ ಅಗ್ರಹಾರದ ಶಾಲೆಯಲ್ಲಿ ಪುನರ್ ವಸತಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದರು.
ಸುಮಾರು 5 ಕಡೆ ಪುನರ್ ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹಕ್ಕೆ ಸಿಲುಕಿದ ಎಲ್ಲಾ ಗ್ರಾಮಸ್ಥರನ್ನು ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿದ್ದು, ಪ್ರತಿಯೊಬ್ಬರಿಗೂ ಪರಿಹಾರವನ್ನು ಅತಿ ಶೀಘ್ರದಲ್ಲೇ ನೀಡಲಾಗುವುದು ಎಂದು ಹೇಳಿದರು.
ಗ್ರಾಮಸ್ಥರಿಗೆ ಮನವಿ: ದ್ವೀಪ ಗ್ರಾಮವಾದ ತಾಲೂಕಿನ ಯಡಕುರಿಯ ಗ್ರಾಮಸ್ಥರನ್ನು ಅಗ್ರಹಾರ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಪುನರ್ ವಸತಿ ಕೇಂದ್ರಕ್ಕೆ ಹನೂರು ಶಾಸಕ ಆರ್.ನರೇಂದ್ರ ಭೇಟಿ ನೀಡಿ ನಿರಾಶ್ರಿತರ ಕುಂದು-ಕೊರತೆಯನ್ನು ಆಲಿಸಿ, ಪ್ರತಿಯೊಬ್ಬರು ಇಲ್ಲೇ ಇದ್ದು, ತಮ್ಮ ಸುರಕ್ಷತೆಯನ್ನು ಕಾಪಾಡಿಕೊಂಡು ನೀರು ಸಂಪೂರ್ಣ ಇಳಿಮುಖವಾದ ಬಳಿಕ ತಮ್ಮ ಗ್ರಾಮಗಳಿಗೆ ತೆರಳಬೇಕೆಂದು ಮನವಿ ಮಾಡಿದರು.
ಜಿಪಂ ಸಿಇಒ ಲತಾಕುಮಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಅಡ್ಡಣ್ಣನವರ್, ಡಿಎಫ್ಒ ಏಲುಕೊಂಡಲು, ಉಪ ವಿಭಾಗಾಧಿಕಾರಿ ನಿಖೀತಾ ಎಂ.ಚಿನ್ನಸ್ವಾಮಿ, ತಹಶೀಲ್ದಾರ್ ಕುನಾಲ್, ಡಿವೈಎಸ್ಪಿ ನವೀನ್‌ಕುಮಾರ್, ಜಿಲ್ಲಾ ಕೃಷಿ ಉಪ ನಿರ್ದೇಶಕಿ ಚಂದ್ರಕಲಾ, ಕಬಿನಿ ಇಇ ರಘು, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಎಸ್‌ಐಗಳಾದ ರಾಜೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ರವಿ, ಪೌರಾಯುಕ್ತ ನಾಗಶೆಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಮಹದೇವಸ್ವಾಮಿ, ಪಶು ವೈದ್ಯ ಅಧಿಕಾರಿ ಡಾ.ವೆಂಕಟರಾಮು, ಸಮಾಜ ಕಲ್ಯಾಣ ಇಲಾಖೆಯ ಜಯಕಾಂತ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.