Chamarajanagar: ಮಾದಪ್ಪನ ಜಿಲ್ಲೆಗೆ ದಸರಾ ಉತ್ತಮ ಸ್ತಬ್ಧಚಿತ್ರದ ಗರಿ
Team Udayavani, Oct 30, 2023, 3:12 PM IST
ಚಾಮರಾಜನಗರ: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧ ಚಿತ್ರಗಳಲ್ಲಿ (ಟ್ಯಾಬ್ಲೋ) ಜಿಲ್ಲಾ ವಿಭಾಗದಿಂದ ಚಾಮರಾಜನಗರ ಜಿಲ್ಲೆಯ ಜಾನಪದ ಭಕ್ತಿಯ ಬೀಡು, ಹುಲಿ ಆನೆಗಳ ಸಂತೃಪ್ತಿಯ ತಾಣ ಟ್ಯಾಬ್ಲೋ ಉತ್ತಮ ಸ್ತಬ್ಧಚಿತ್ರ ಬಹುಮಾನ ಪಡೆದುಕೊಂಡಿದೆ.
31 ಜಿಲ್ಲೆಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಈ ಪೈಕಿ ಧಾರವಾಡ, ಚಿಕ್ಕ ಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಸ್ತಬ್ಧಚಿತ್ರಗಳು ಉತ್ತಮ ಸ್ತಬ್ಧಚಿತ್ರಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗೊರವರ ಕುಣಿತವನ್ನು ಪ್ರಧಾನವಾಗಿರಿಸಿಕೊಂಡು, ಮಧ್ಯದಲ್ಲಿ ಹುಲಿಯ ಮೇಲೆ ಕುಳಿತ ಮಲೆ ಮಹ ದೇಶ್ವರರ ಪ್ರತಿಮೆಯ ಪ್ರತಿರೂಪವನ್ನು ಸ್ತಬ್ಧಚಿತ್ರದಲ್ಲಿ ರೂಪಿಸಲಾಗಿತ್ತು. ಈ ಸ್ತಬ್ಧ ಚಿತ್ರ ಆಕರ್ಷವಾಗಿ, ವಿಶಿಷ್ಟವಾಗಿದ್ದು, ಮೆರವಣಿಗೆಯಲ್ಲಿ ಸಾಗಿ ಬಂದಾಗ ಎಲ್ಲರನ್ನೂ ಥಟ್ಟನೆ ಸೆಳೆಯುತ್ತಿತ್ತು. ಚಾಮರಾಜನಗರ ಜಿಲ್ಲೆಯ ಮಂಗಲ ಹೊಸೂರಿ ನವರಾದ ಚಿತ್ರ ಮತ್ತು ಶಿಲ್ಪ ಕಲಾವಿದ ಮಧುಸೂದನ್ ಈ ಸ್ತಬ್ಧಚಿತ್ರ ನಿರ್ಮಾಣ ಮಾಡಿದ್ದಾರೆ.
ಮಧು ಸೂದನ್ ಅವರು ಕಲಬುರ್ಗಿ ವಿವಿ ದೃಶ್ಯಕಲಾ ಸ್ನಾತ ಕೋತ್ತರ ಪದವೀಧರ. ಪೇಂಟಿಂಗ್‌ನಲ್ಲಿ ಪ್ರಸಿದ್ಧರು. ಪೇಂಟಿಂಗ್‌ನಲ್ಲಿ ಪೋರೆó„ಟ್ (ಭಾವಚಿತ್ರ) ರಚನೆ ಯಲ್ಲಿ ಸಿದ್ಧಹಸ್ತರು. ಇದುವರೆಗೆ ವಿವಿಧ ವ್ಯಕ್ತಿಗಳ ಒಂದು ಸಾವಿರಕ್ಕೂ ಹೆಚ್ಚು ಪೋರೆó„ಟ್ ರಚಿಸಿದ್ದಾರೆ. ಮಧು ಅವರು 2020ರ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಪಡೆದಿದ್ದಾರೆ.
ಈ ಸ್ತಬ್ಧಚಿತ್ರದಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಧಾನ ಜಾನಪದ ಕಲೆಯಾದ ಗೊರವರ ಕುಣಿತದಲ್ಲಿ ಗೊರವರ ದೊಡ್ಡದಾದ ಮುಖದ ಪ್ರತಿಕೃತಿ ಹಾಗೂ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡಿನಲ್ಲಿ ನಿರ್ಮಿಸಲಾಗಿರುವ 108ಅಡಿ ಮಲೆಮಹದೇಶ್ವರರ ಪ್ರತಿಮೆಯ ಪ್ರತಿಕೃತಿಯನ್ನು ರಚಿಸಲಾಗಿತ್ತು. ಅಲ್ಲದೇ ಬದಿಯಲ್ಲಿ ಭರಚುಕ್ಕಿ ಜಲಪಾತ, ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಜಿಲ್ಲೆಯಾದ ಕಾರಣ ಆನೆಗಳ ಪ್ರತಿಕೃತಿ ರಚಿಸಲಾಗಿತ್ತು.
ಹಲವು ಬಾರಿ ಬಹುಮಾನ: ಮಧುಸೂದನ್ ಅವರು ದಸರಾ ಸ್ತಬ್ಧಚಿತ್ರವನ್ನು 2012ರಿಂದಲೂ ಜಿಲ್ಲೆಯ ಮಹದೇವ್ ಅವರ ಜತೆ ನಿರ್ಮಿಸುತ್ತಾ ಬಂದಿದ್ದಾರೆ. 2012 ಜಾನಪದ ನಾಟಿ ವೈದ್ಯಪದ್ಧತಿ, 2013 ಹುಲಿ ಯೋಜನೆ, 2019ರಲ್ಲಿ ಹುಲಿಗಳ ನಾಡು ಸ್ತಬ್ಧಚಿತ್ರಗಳಿಗೆ ಬಹುಮಾನ ಬಂದಿದೆ. 2022ರಲ್ಲಿ ಜಿಲ್ಲೆಯ ಕಲಾವಿದರಾದ ಪುನೀತ್ ರಾಜ್ ಕುಮಾರ್ ಸ್ತಬ್ಧಚಿತ್ರ ರಚಿಸಿದ್ದರು. ಈ ಬಾರಿ ಮಧುಸೂದನ್ ಅವರೇ ಸ್ವತಂತ್ರವಾಗಿ ಸ್ತಬ್ಧಚಿತ್ರ ರಚಿಸಿದ್ದರು. ಈ ಬಾರಿ ಉತ್ತಮ ಸ್ತಬ್ಧಚಿತ್ರ ಬಹುಮಾನ ದೊರೆತು, ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ನಾನು ರಚಿಸಿದ ಸ್ತಬ್ಧಚಿತ್ರಕ್ಕೆ ಉತ್ತಮ ಬಹುಮಾನ ಬಂದಿದ್ದು ತಿಳಿದು ಖುಷಿಯಾಯಿತು. ನಮ್ಮ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ , ಶಾಪಗ್ರಸ್ತ ಜಿಲ್ಲೆ ಎನ್ನುತ್ತಾರೆ. ಯಾಕೆ ಹಾಗೆ ಹೇಳಬೇಕು? ನಮ್ಮದು ಸಮೃದ್ಧ ಕಾಡು, ಜಾನಪದ ಕಲೆಗಳ ಸಿರಿಯುಳ್ಳ ಶ್ರೀಮಂತ ಜಿಲ್ಲೆ. ಜಂಬೂಸವಾರಿಯಲ್ಲಿ ಚಾಮರಾಜನಗರ ಜಿಲ್ಲೆ ಟ್ಯಾಬ್ಲೋ ಬಂದಾಗ ನೆರೆದಿದ್ದ ಜನರು ಕೂಗುತ್ತಿದ್ದರು, ಜನರ ಆ ಅಭಿಮಾನವೇ ದೊಡ್ಡ ಪ್ರಶಸ್ತಿ. ಈ ಅವಕಾಶ ನೀಡಿದ ಜಿಪಂಗೆ ಚಿರಋಣಿ. ● ಎಸ್. ಮಧುಸೂದನ್, ಚಿತ್ರಕಲಾವಿದ
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.