ಸಿದ್ದು ಮತ್ತೆ ಉತ್ತರ ವರ್ಸಸ್ ದಕ್ಷಿಣ ಕದನ
Team Udayavani, Apr 26, 2018, 6:00 AM IST
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ನಾಯಕರಿಲ್ಲದೆ ಉತ್ತರ ಭಾರತದವರಾದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಮದು ಮಾಡಿಕೊಳ್ಳಲು ಕಾಯುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ವೈರಲ್ ಆಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಇದಕ್ಕೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮುಂಜಾನೆ, “ಕರ್ನಾಟಕ ಬಿಜೆಪಿಯು ಉತ್ತರ ಭಾರತದವರಾದ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಾಯುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಯಾವುದೇ ನಾಯಕರಿಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಆ ಮೂಲಕ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರನ್ನು ಡಮ್ಮಿ ಮಾಡಿದೆ. ಪ್ರಧಾನಿ ಬರಲಿ, ಹೋಗಲಿ, ಇಲ್ಲಿ ಏನಿದ್ದರೂ ಸಿದ್ದರಾಮಯ್ಯ ವರ್ಸಸ್ ಯಡಿಯೂರಪ್ಪ. ನೋಡೋಣ ಯಾರು ಗೆಲ್ಲುತ್ತಾರೆ ಎಂದು’ ಟ್ವೀಟ್ ಮಾಡಿದ್ದರು.
ಮುಖ್ಯಮಂತ್ರಿಗಳ ಟ್ವೀಟ್‌ಗೆ ರಾಜ್ಯ ಬಿಜೆಪಿಯೂ ಟ್ವಿಟರ್ ಮೂಲಕ ತಿರುಗೇಟು ನೀಡಿದೆ. ಮುಖ್ಯಮಂತ್ರಿಗಳಿಗೆ ಆಮದು ಎಂದರೇನು ಎಂಬ ಪಾಠ ಮಾಡುವ ಸಮಯವಿದು. ಆಮದು ಎಂದರೆ ಒಂದು ದೇಶಕ್ಕೆ ಸರಕು ಅಥವಾ ಸೇವೆಗಳನ್ನು ಹೊರದೇಶದಿಂದ ತರಿಸಿಕೊಳ್ಳುವುದು. ಉದಾಹರಣೆಗೆ, ನಿಮ್ಮ ಬೆಂಗಳೂರಿನ ಬಾತ್‌ರೂಂಗೆ ಇಟೆಲಿಯಿಂದ ಶೌಚಾಲಯ ಸಲಕರಣೆಗಳನ್ನು ತರಿಸಿಕೊಳ್ಳುವುದು ಆಮದು. ಆಮದು ಅಲ್ಲ ಎಂದರೆ ಅತ್ಯಾಚಾರ ಆರೋಪಿ ಕೇರಳದ ಕೆ.ಸಿ.ವೇಣು ಅವರನ್ನು ಕರ್ನಾಟಕ ಉಸ್ತುವಾರಿಯಾಗಿ ನೇಮಿಸುವುದು ಎಂದು ಪ್ರತಿಕ್ರಿಯಿಸಿದೆ. ಜತೆಗೆ ದೆಹಲಿಯಲ್ಲಿನ 10 ಜನಪತ್‌ನಲ್ಲಿ ವಾಸ ಮಾಡುತ್ತಿರುವುದು ಯಾರು ಎಂದೂ ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸೋನಿಯಾ ಗಾಂಧಿ ಅವರನ್ನು ಟಾರ್ಗೆಟ್ ಮಾಡಿದೆ. ಜತೆಗೆ ಹಲವಾರು ಬಿಜೆಪಿ ನಾಯಕರು ಮೋದಿ ಕರ್ನಾಟಕಕ್ಕೆ ಸೀಮಿತವಲ್ಲ, ಅವರು ಭಾರತದ ಪ್ರಧಾನಿ ಎಂದು ಟ್ವೀಟಿಸಿದ್ದಾರೆ.
ಇದರ ಜತೆಗೆ ಟ್ವಿಟರ್ ಮೂಲಕವೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಮೊದಲು ತಮ್ಮ ಮನೆಯ ಒಳಗೆ ನೋಡಿಕೊಂಡು ನಂತರ ತಮ್ಮ ತಪ್ಪುಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಜನತೆಗೆ ತಿಳಿಸುವುದು ಸೂಕ್ತ ಎಂದು ಪರೋಕ್ಷವಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಬಗ್ಗೆ ಹೇಳಿದ್ದರು. ಅಲ್ಲದೆ, ನನ್ನೊಂದಿಗೆ ಸ್ಪರ್ಧೆ ಬಯಸುವ ಮುನ್ನ ಚಾಮುಂಡೇಶ್ವರಿ ಮತ್ತು ಬದಾಮಿಯಲ್ಲಿ ಗೆದ್ದು ಬನ್ನಿ. ನೀವು ಈಗಾಗಲೇ ಚಾಮುಂಡೇಶ್ವರಿಯಿಂದ ಪಲಾಯನ ಮಾಡಿದ್ದೀರಿ ಎಂದು ಜನ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.