ಕೆರೆ, ಕಟ್ಟೆ, ಕಲ್ಯಾಣಿಗಳ ಸಂರಕ್ಷಣೆ ಅತ್ಯಗತ್ಯ
Team Udayavani, Apr 24, 2019, 3:08 AM IST
ಚಾಮರಾಜನಗರ: ಸಾಂಪ್ರದಾಯಿಕ ನೀರಿನ ವ್ಯವಸ್ಥೆಗಳಾದ ಕೆರೆ, ಬಾವಿ, ಕಲ್ಯಾಣಿ ಕುಂಟೆ, ಗೋಕಟ್ಟೆ ಕಟ್ಟೆಗಳು ಬಹಳ ವಿಶೇಷವಾದ ಜಲ ಮೂಲಗಳಾಗಿದ್ದು ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಬೇಕಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ, ಗ್ರಾಮೀಣಾಭಿವೃದ್ದಿ, ಪಂಚಾಯತ್‌ರಾಜ್ ಇಲಾಖೆ, ಜಿಪಂ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಪ್ರದಾಯಿಕ ನೀರು ಸಂಗ್ರಹಣಾ ವ್ಯವಸ್ಥೆಗಳ ಪುನಶ್ಚೇತನ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೇಸರದ ಸಂಗತಿ: ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ನೀರಿನ ಮೂಲಗಳು ಮರೆಯಾಗುತ್ತಿರುವುದು ಬೇಸರದ ಸಂಗತಿ. ನೀರಿನ ಮೂಲಗಳ ಪ್ರದೇಶಗಳು ಅಲ್ಲಲ್ಲಿ ಒತ್ತುವರಿಯಾಗುತ್ತಿರುವುದು ಸಹ ಕಂಡುಬರುತ್ತಿವೆ. ಸಾಂಪ್ರದಾಯಿಕ ನೀರಿನ ಮೂಲಗಳನ್ನು ಅತ್ಯಗತ್ಯವಾಗಿ ಉಳಿಸಿಕೊಳ್ಳಬೇಕಿದೆ ಎಂದರು.
ಪೂರ್ವಜರಿಗೆ ವೈಜ್ಞಾನಿಕ ತಿಳಿವಳಿ ಇತ್ತು: ಭಾರತ ವಿಶೇಷ ಪರಂಪರೆಯುಳ್ಳ ದೇಶ. ನಮ್ಮ ಪೂರ್ವಿಕರು ಆ ಕಾಲದಲ್ಲೇ ಸಾಂಪ್ರದಾಯಿಕ ನೀರು ಸಂಗ್ರಹಣಾ ವ್ಯವಸ್ಥೆಗಳಾದ ಕೆರೆ, ಕಲ್ಯಾಣಿ, ಕುಂಟೆ, ಗೋಕಟ್ಟೆ, ಕಟ್ಟೆಗಳನ್ನು ನಿರ್ಮಾಣ ಮಾಡುವ ಮೂಲಕ ದಿನನಿತ್ಯದ ದೈನಂದಿನ ಚಟುವಟಿಕೆಗಳಿಗೆ ಬಳಸುತ್ತಿದ್ದರು. ಅವರು ಆ ಕಾಲದಲ್ಲೇ ಎಷ್ಟು ವೈಜ್ಞಾನಿಕವಾದ ತಿಳಿವಳಿಕೆ ಹೊಂದಿದ್ದರು ಎಂಬುದಕ್ಕೆ ಇದು ನಿದರ್ಶನವಾಗಿ ಎಂದು ಅಭಿಪ್ರಾಯಪಟ್ಟರು.
ನೀರಿನ ಸಂಗ್ರಹಣೆ ಮುಖ್ಯ: ಇಂದು ಮಳೆಯ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಹರಿದು ಹೋಗುವ ನೀರನ್ನು ನಿಲ್ಲಿಸಿ, ಅದನ್ನು ಬಳಕೆ ಮಾಡಬೇಕಿದೆ. ಇದರಿಂದ ಅಂತರ್ಜಲ ಕೂಡ ಹೆಚ್ಚಲಿದೆ. ಸಾಂಪ್ರದಾಯಿಕ ನೀರಿ ಮೂಲಗಳನ್ನು ಉಳಿಸಿ ಬೆಳೆಸಬೇಕಿದೆ. ಕಲ್ಯಾಣಿಗಳು ಅಂತರ್ಜಲ ಮೂಲಗಳಾಗಿವೆ. ಮಳೆಗಾಲದಲ್ಲಿ ನೀರಿನ ಸಂಗ್ರಹಣೆ ಬಹಳ ಮುಖ್ಯವಾದ್ದರಿಂದ ಸಾಂಪ್ರದಾಯಿಕ ನೀರಿನ ಮೂಲಗಳನ್ನು ಪುನಶ್ಚೇತನ ಮಾಡಬೇಕು ಎಂದರು.
ಕಾಲುವೆ ನಿರ್ಮಾಣ: ಮೈಸೂರು ರಾಜರ ಕಾಲದಲ್ಲಿ ದಿವಾನರಾಗಿದ್ದ ದಿವಾನ್ ಪೂರ್ಣಯ್ಯ ಅವರ ಅವಧಿಯಲ್ಲಿ ಯಳಂದೂರು ಗ್ರಾಮದ ಸುತ್ತ ಮುತ್ತಲೂ ಅನೇಕ ಕೆರೆ, ಕಟ್ಟೆ, ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ನೀರಾವರಿ, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಮರುಪೂರಣ ಸೇರಿದಂತೆ ಸಮುದಾಯದ ಎಲ್ಲಾ ಅಗತ್ಯತೆಗಳನ್ನು ಇದರಿಂದ ನಿರ್ವಹಿಸಲಾಗುತ್ತಿದೆ ಎಂದರು.
ನೀರಿನ ಸಂರಕ್ಷಣೆ ನಮ್ಮ ಕರ್ತವ್ಯ: ಇತ್ತೀಚಿನ ದಿನಗಳಲ್ಲಿ ಸಂಪ್ರಾದಾಯಿಕ ನೀರಿನ ವ್ಯವಸ್ಥೆಗಳು ನಶಿಸಿ ಹೋಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಇಂತಹ ನೀರಿನ ಮೂಲಗಳನ್ನು ಉಳಿಸಿಕೊಂಡು ದುರಸ್ತಿ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರಿನ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ತೋಟಗಾರಿಕೆ, ಕೃಷಿ, ಅರಣ್ಯ, ಶಿಕ್ಷಣ ಇಲಾಖೆ, ನರೇಗಾ ಯೋಜನೆ, ಗ್ರಾಮ ಪಂಚಾಯಿತಿ ಸಂಪನ್ಮೂಲಗಳನ್ನು ಬಳಸಿ ನೀರಿನ ಸಂಗ್ರಹಣೆ ಹಾಗೂ ಸಂರಕ್ಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಲ ಮೂಲ ಉಳಿಸಿ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮುಖ್ಯ ವೈಜ್ಞಾನಿಕ ಅಧಿಕಾರಿ ಎ.ಆರ್. ಶಶಿಕುಮಾರ್ ಮಾತನಾಡಿ, ಮಳೆ ನೀರು ಜಲದ ಮೂಲವಾಗಿದೆ. ಕಲ್ಯಾಣಿ, ಕೆರೆ, ಕುಂಟೆ, ಗೋಕಟ್ಟೆ, ಕಟ್ಟೆಗಳಲ್ಲಿ ಮಳೆಗಾಲದಲ್ಲಿ ಹೆಚ್ಚಿನ ನೀರು ಶೇಖರಣೆಯಾಗುತ್ತದೆ. ಹಾಗಾಗಿ ಅವುಗಳನ್ನು ನಾವು ಸಂರಕ್ಷಿಸಬೇಕು ಎಂದರು.
ಮಳೆ ನೀರು ಕೊಯ್ಲು ಪದ್ಧತಿ: ಸ್ವಾಭಾವಿಕವಾಗಿ ಮತ್ತು ಸುಲಭವಾಗಿ ನೀರನ್ನು ಪಡೆಯಲು ಮಳೆ ನೀರಿನ ಸಂರಕ್ಷಣೆ ಅತಿ ಮುಖ್ಯ. ಮಳೆ ನೀರನ್ನು ಸಂರಕ್ಷಣೆ ಮಾಡಿ ಬಳಸುವುದರಿಂದ ನೀರಿನ ಸಮಸ್ಯೆಯನ್ನು ನಾವು ತಡೆಯಬಹುದು. ಮಳೆಗಾಲದಲ್ಲಿ ಮನೆ ಮೇಲಿನ ಮೇಲ್ಛಾವಣಿಗೆ ಬಿದ್ದ ನೀರನ್ನು, ಮಳೆ ನೀರು ಕೊಯ್ಲು ಪದ್ಧತಿಯ ಮೂಲಕ ಶೇಖರಿಸಿ ಉಪಯೋಗಿಸಿದರೆ ನೀರಿನ ಸಮಸ್ಯೆ ನೀಗಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಜಿಲ್ಲೆಗಳಲ್ಲಿ ಮಳೆ ನೀರು ಸಂರಕ್ಷಣೆ ಮಾಡುವ ವಿಧಾನವನ್ನು ಅನುಸರಿಸಬೇಕು. ಈ ವಿಧಾನ ಕುರಿತು ಮಾಹಿತಿಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಆರ್.ಡಬ್ಲ್ಯು.ಎಚ್. ವೆಬ್‌ಸೈಟ್ ಲಿಂಕ್‌ನಲ್ಲಿ ದೊರೆಯುತ್ತದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಪ್ರಧಾನ ವೈಜ್ಞಾನಿಕ ಅಧಿಕಾರಿ ಡಾ. ಯು.ಟಿ ವಿಜಯ್ ಅವರು ಮಾತನಾಡಿ, ಸಾಂಪ್ರಾದಾಯಿಕ ನೀರು ಸಂಗ್ರಹಣಾ ವ್ಯವಸ್ಥೆಗಳ ಸ್ಥಿತಿಗತಿ ಅಧ್ಯಯನ ಮತ್ತು ಅವುಗಳ ಪುನರುಜ್ಜೀವನದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹನುಮನರಸಯ್ಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.