ದೇಸಿ ಸೊಗಡಿನಿಂದ ಗಮನ ಸೆಳೆದ ರೈತದಸರಾ
Team Udayavani, Oct 5, 2019, 3:00 AM IST
ಚಾಮರಾಜನಗರ: ಮೈಸೂರು ದಸರಾ ಸಮಿತಿ ಹಾಗೂ ಜಿಲ್ಲಾಡಳಿತ ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮ ದೇಸಿ ಸೊಗಡಿನಿಂದ ಗಮನ ಸೆಳೆಯಿತು. ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಅಲಂಕೃತಗೊಂಡ ಎತ್ತಿನಗಾಡಿಗಳ ಮೆರವಣಿಗೆಗೆ ದಸರಾ ಸಮಿತಿಯ ಉಪಾಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಿರಂಜನ್ ಪುಷ್ಪಾಚನೆ ನೆರವೇರಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಎತ್ತುಗಳಿಗೆ ವಿಶೇಷ ಅಲಂಕಾರ: ಮೆರವಣಿಗೆಯಲ್ಲಿ ಪಾಲ್ಗೊಂಡ ಎತ್ತಿನಗಾಡಿಗಳಿಗೆ ಮಾವಿನ ತೋರಣ, ಬಣ್ಣ ಬಣ್ಣದ ಕಾಗದ, ಬಾಳೆಕಂದು, ಎಳನೀರು, ಬಾಳೆಗೊನೆ, ಅಡಿಕೆ, ಹೂಗಳಿಂದ ಶೃಂಗರಿಸಲಾಗಿತ್ತು. ಜಾನುವಾರುಗಳ ಕೊಂಬುಗಳಿಗೆ ಬಣ್ಣವನ್ನು ಲೇಪಿಸುವುದರ ಜೊತೆಗೆ ಚಿತ್ರಗಳನ್ನು ಬಿಡಿಸಿದ್ದು ಎಲ್ಲರ ಗಮನ ಸೆಳೆಯಿತು. ವಿಶೇಷವಾಗಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಅರಣ್ಯ ಇಲಾಖೆಗಳ ಮಾಹಿತಿಗಳ ಫಲಕಗಳನ್ನು ಎತ್ತಿನ ಗಾಡಿಗಳಿಗೆ ಅಳವಡಿಸಲಾಗಿತ್ತು.
ಯುವಕರಿಂದ ಸುಗ್ಗಿ ಕುಣಿತ: ಡೊಳ್ಳು ಕುಣಿತ, ತಮಟೆ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿ, ಮೆರವಣಿಗೆಗೆ ಮೆರುಗು ನೀಡಿದವು. ನಾದ ಸ್ವರದ ಸದ್ದಿಗೆ ಯುವಕರು ಉತ್ಸಾಹದಿಂದ ಸುಗ್ಗಿಕುಣಿತವನ್ನು ಕುಣಿಯುವ ಮೂಲಕ ಮತ್ತಷ್ಟು ರಂಗು ತಂದರು.
ಎತ್ತಿನಗಾಡಿ ಮೆರವಣಿಗೆ: ಚಾಮರಾಜೇಶ್ವರ ದೇವಾಲಯದ ಆವರಣದಿಂದ ಪ್ರಾರಂಭವಾದ ಎತ್ತಿನಗಾಡಿ ಮೆರವಣಿಗೆಯು ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಸಾಗಿ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣವನ್ನು ತಲುಪಿತು. ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯ ಸಿ.ಎನ್.ಬಾಲರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚಂದ್ರಕಲಾ ಎತ್ತಿನ ಗಾಡಿ ಏರಿ ಸಾಗುವ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಧಾನ್ಯ ರಾಶಿಗೆ ಪೂಜೆ: ಜೆ.ಎಚ್. ಪಟೇಲ್ ಸಭಾಂಗಣ ಮುಂಭಾಗದಲ್ಲಿ ರಾಗಿ ಧಾನ್ಯದ ರಾಶಿಗೆ ಗಣ್ಯರು ಪೂಜೆ ಸಲ್ಲಿಸಿದರು. ವೇದಿಕೆಯಲ್ಲಿ ಮುಂಬಾಗದಲ್ಲಿ ನೇಗಿಲು, ನೊಗ, ಕುಡುಗೋಲು, ಮೊರ, ವಂದರಿ, ಮರದ ಹಲುವೆ, ಕೊಳಗ, ಸೇರು, ಒನಕೆ, ಕಲಕೋಟು, ಬುಟ್ಟಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಪರಿಕರಗಳನ್ನು ಇಡಲಾಗಿತ್ತು. ಮೆರವಣಿಗೆ ಚಾಲನೆ ವೇಳೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್. ನಾರಾಯಣ್‌ರಾವ್, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ರೈತ ದಸರಾ ಕೃಷಿಕರಿಗೆ ಮಾಹಿತಿ ಕೇಂದ್ರವಾಗಲಿದೆ
ಚಾಮರಾಜನಗರ: ಕೃಷಿಕರಿಗೆ ವ್ಯವಸಾಯದ ಕುರಿತು ಪ್ರಾಯೋಗಿಕ ಮಾಹಿತಿ ಒದಗಿಸಿ, ತನ್ಮೂಲಕ ಅವರನ್ನು ಮತ್ತಷ್ಟು ಸಬಲಗೊಳಿಸುವುದೇ ರೈತ ದಸರಾದ ಮುಖ್ಯ ಗುರಿ ಎಂದು ಮೈಸೂರು ದಸರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಹೇಳಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಭೂತಪೂರ್ವ ಯಶಸ್ಸು: ಹಿಂದಿನ ದಿನಗಳಲ್ಲಿ ನಾಡಹಬ್ಬ ದಸರಾದ ಪ್ರಯುಕ್ತ ತಾಲೂಕು ಮಟ್ಟದಲ್ಲಿ ಗ್ರಾಮೀಣ ದಸರಾ ಎಂದು ಸೀಮಿತ ಪ್ರಮಾಣದಲ್ಲಿ ಆಚರಿಸಲಾಗುತ್ತಿತ್ತು. ನಂತರ ಅದನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಯಿತು. ಪ್ರತಿ ಬಾರಿ ಹೊಸ ಪರಿಕಲ್ಪನೆಗಳಲ್ಲಿ ಪರಿಚಯಿಸುತ್ತಾ ಬರಲಾಯಿತು. ಅದೆಲ್ಲದರ ಫಲಶೃತಿಯಾಗಿ ನಗರ ದಸರಾ ಅಭೂತಪೂರ್ವ ಯಶಸ್ಸು ಕಾಣುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದೇಶದ ಹಿತದೃಷ್ಟಿಯಿಂದ ಅವಶ್ಯಕ: ರೈತರ ಬಲವೇ, ಪ್ರತಿಯೊಬ್ಬ ಮನುಷ್ಯನ ಬಲ. ಏಕೆಂದರೆ ರೈತನೇ ಎಲ್ಲರಿಗೂ ಅನ್ನ ನೀಡುವಾತ. ಅಂತಹ ರೈತರನ್ನು ಸದೃಢಗೊಳಿಸುವುದು ದೇಶದ ಹಿತದೃಷ್ಟಿಯಿಂದ ಅವಶ್ಯಕ. ಹೀಗಾಗಿಯೇ ರೈತ ದಸರಾವನ್ನು ದಸರಾ ಮಹೋತ್ಸವದ ಭಾಗವಾಗಿ ಆಚರಿಸಲಾಗುತ್ತಿದೆ. ರೈತರಿಗೆ ಮಾಹಿತಿಯ ಕೇಂದ್ರವಾಗಲಿದೆ ಎಂದು ಹೇಳಿದರು.
ಪ್ರಕೃತಿಯೇ ಇಡೀ ಜೀವವೈವಿಧ್ಯತೆಯ ಉಸಿರು: ಪರಿಸರ ಮತ್ತು ಅರಣ್ಯೀಕರಣ ಸಂರಕ್ಷಣೆ ಕುರಿತು ವಿಚಾರಗೋಷ್ಠಿ ಮಂಡಿಸಿದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎ.ಎನ್. ಯಲ್ಲಪ್ಪರೆಡ್ಡಿ ಅವರು ಪ್ರಕೃತಿಯ ರಕ್ಷಣೆ ಮತ್ತು ಪೋಷಣೆ ಒಂದು ಕಲೆ. ಆ ಕಲೆಯನ್ನು ಪ್ರತಿಯೊಬ್ಬರೂ ಕರಗತ ಮಾಡಿಕೊಳ್ಳಬೇಕು. ಏಕೆಂದರೆ ಪ್ರಕೃತಿಯೇ ಇಡೀ ಜೀವವೈವಿಧ್ಯತೆಯ ಉಸಿರು. ಅದನ್ನು ಜತನದಿಂದ ಕಾಪಾಡುವುದು ಪ್ರತಿಯೊಬ್ಬರ ಹೊಣೆ ಎಂದರು.
ವಿಶೇಷ ಜೀವ ವೈವಿಧ್ಯತೆ ಭಾರತದಲ್ಲಿದೆ: ಯಾವ ಭೂಪ್ರದೇಶದಲ್ಲೂ ಇರದಂತಹ ಜೀವ ವೈವಿಧ್ಯತೆ ಭಾರತದಲ್ಲಿದೆ. ಅದಕ್ಕಾಗಿಯೇ ವಿದೇಶಿ ನೆಲಗಳಲ್ಲಿ ಇಂಡೋಲಜಿ ಅಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿನ ಎಷ್ಟೋ ಪದ್ಧತಿಗಳನ್ನು ವಿದೇಶಿಯರು ಸಂಶೋಧಿಸಿ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಈ ನೆಲದ ಅಸ್ಮಿತೆಯನ್ನು ಹಾಗೆ ಉಳಿಸಿಕೊಂಡು ಹೋಗುವುದು ತುಂಬಾ ಅವಶ್ಯ ಎಂದು ತಿಳಿಸಿದರು.
ಮಣ್ಣಿನ ಫಲವತ್ತತೆಯ ಕೊರತೆ: ನೀರು ಮತ್ತು ಮಣ್ಣು ನಿರ್ವಹಣೆ ಕುರಿತು ಮಾತನಾಡಿದ ಜಿಕೆವಿಕೆಯ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎನ್. ತಿಮ್ಮೇಗೌಡ, ಯಾವುದೇ ಒಂದು ಸಸಿ ಚಿಗುರಲು, ಬೆಳೆಯಲು, ಫಲ ನೀಡಲು ಸೂರ್ಯನ ಕಿರಣ, ಗಾಳಿ, ನೀರು ಮತ್ತು ಮಣ್ಣು ಅಗತ್ಯ ಸಂಪನ್ಮೂಲಗಳು. ಆದರೆ ಇಂದು ನೀರಿನ ಅಭಾವ ಮತ್ತು ಮಣ್ಣಿನ ಫಲವತ್ತತೆಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವುದು ಅನಿವಾರ್ಯ ಎಂದು ತಿಳಿಸಿ ಸಂರಕ್ಷಣೆಯ ವಿವಿಧ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಸಿರಿಧಾನ್ಯ ಬೆಳೆಗಳಿಗೂ ಆದ್ಯತೆ: ಸಿರಿಧಾನ್ಯ ಬೆಳೆಗಳ ಕುರಿತು ಕೊನೆಯ ವಿಚಾರಗೋಷ್ಠಿ ಮಂಡಿಸಿದ ಜಿಕೆವಿಕೆಯ ಪ್ರಾಧ್ಯಾಪಕ ಡಾ.ಎಂ.ಎನ್. ನಿರಂಜನ್‌ಮೂರ್ತಿ ಅವರು ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಗಳ ಕಡೆಗೆ ಆಸಕ್ತಿ ತೋರಿಸುತ್ತಾರೆ. ಒಳ್ಳೆ ಬೆಲೆ ಮತ್ತು ಇಳುವರಿ ದೊರೆತರೆ ಲಾಭದಾಯಕವಾದೀತು ಎಂಬುದು ಅವರ ಯೋಚನೆ. ಆದರೆ ಸಿರಿಧಾನ್ಯಗಳಿಗೂ ಅಷ್ಟೇ ಬೇಡಿಕೆ ಮತ್ತು ಪ್ರಾಮುಖ್ಯತೆ ಇದೆ. ಇದರ ಬಳಕೆಯೂ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ರೈತರು ಅವರ ಸಾಂಪ್ರದಾಯಿಕ ಕೃಷಿಯ ಜತೆಗೆ ಸಿರಿಧಾನ್ಯ ಬೆಳೆಗಳಿಗೂ ಆದ್ಯತೆ ನೀಡಬೇಕು ಎಂದರು.
ವಿಶಿಷ್ಟ ಬೆಳೆಗಳನ್ನು ಬೆಳೆದು ಹೆಸರುವಾಸಿಯಾಗಿರುವ ರೈತಮಹಿಳೆ ಪುಟ್ಟಿರಮ್ಮ ಹಾಗೂ ಜಿಲ್ಲೆಯ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಚೆನ್ನಪ್ಪ, ಉಮಾವತಿ ಸಿದ್ಧರಾಜು, ಸಿ.ಎನ್.ಬಾಲರಾಜು, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಬಸವಣ್ಣ, ಸದಸ್ಯರಾದ ರೇವಣ್ಣ, ಮಹದೇವಪ್ಪ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ನಾರಾಯಣರಾವ್, ಕೃಷಿ ಜಂಟಿ ನಿರ್ದೇಶಕಿ ಚಂದ್ರಕಲಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
Pro Kabaddi: ಹರಿಯಾಣ- ಪಾಟ್ನಾ ಫೈನಲ್ ಹಣಾಹಣಿ
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.