ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಇಳಿಕೆ
Team Udayavani, Dec 9, 2019, 3:00 AM IST
ಚಾಮರಾಜನಗರ: ಒಂದೆಡೆ ಜನಸಂಖ್ಯೆ ಮಿತಿ ಮೀರಿ ಕಾಣುತ್ತಿದ್ದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ರೈತನ ಜೀವನಾಡಿಗಳೆನಿಸಿದ ದನಕರುಗಳು, ಎಮ್ಮೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಅದರಲ್ಲೂ ಎಮ್ಮೆಗಳ ಸಂಖ್ಯೆಯಂತೂ ಗಣನೀಯ ಕುಸಿತ ಕಂಡಿದೆ. ಪಶು ಪಾಲನಾ ಇಲಾಖೆ ಈ ವರ್ಷ ನಡೆಸಿರುವ 20 ವರ್ಷದ ಜಾನುವಾರು ಗಣತಿಯ ತಾತ್ಕಾಲಿಕ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಜಾನುವಾರು ಗಣತಿ ಜಿಲ್ಲೆಯಲ್ಲಿ ಈ ಹಿಂದೆ 2012ರಲ್ಲಿ ನಡೆದಿತ್ತು. ಈಗ 2019ರಲ್ಲಿ ನಡೆದ ಜಾನುವಾರು ಗಣತಿಯಲ್ಲಿ ದನ, ಎಮ್ಮೆಗಳ ಸಂಖ್ಯೆ ಇಳಿಮುಖವಾಗಿರುವುದ ಸ್ಪಷ್ಟವಾಗಿ ಕಂಡುಬರುತ್ತಿದೆ. ಇದೇ ವೇಳೆ ಕೋಳಿ, ಕುರಿ, ಮೇಕೆಗಳ ಸಂಖ್ಯೆ ಹೆಚ್ಚಾಗಿದೆ.!
14,837 ದನಕರುಗಳು ಕಡಿಮೆ: 2012ರಲ್ಲಿ ನಡೆದಿದ್ದ ಜಾನುವಾರು ಗಣತಿಯಲ್ಲಿ ಹಸು, ಎತ್ತು, ಕರುಗಳ ಸಂಖ್ಯೆ 2,62,520 ಇತ್ತು. 2019ರ ಜಾನುವಾರು ಗಣತಿಯಲ್ಲಿ ಇವುಗಳ ಸಂಖ್ಯೆ 2,47,683 ಇದೆ. ಅಂದರೆ, ಕಳೆದ ಬಾರಿಯ ಜಾನುವಾರು ಗಣತಿಗಿಂತ 14,837 ದನಕರುಗಳು ಜಿಲ್ಲೆಯಲ್ಲಿ ಕಡಿಮೆಯಾಗಿವೆ. ಹಾಗೆಯೇ ಎಮ್ಮೆಗಳು 2012ರ ಜಾನುವಾರು ಗಣತಿಯಲ್ಲಿ 20,887ರಷ್ಟಿದ್ದವು, 2019ರ ಗಣತಿಯಲ್ಲಿ 9,521ಕ್ಕೆ ಕುಸಿದಿವೆ.
ಅಂದರೆ 11,366 ಎಮ್ಮೆಗಳು ಜಿಲ್ಲೆಯಲ್ಲಿ ಕಡಿಮೆಯಾಗಿವೆ. ಈ ಅಂಕಿ ಅಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ದನಕರುಗಳಿಗಿಂತಲೂ ಹೆಚ್ಚಿನ ಪ್ರಮಾಣದ ಕುಸಿತ ಎಮ್ಮೆಗಳ ಸಾಕಾಣಿಕೆಯಲ್ಲಿ ಕಂಡು ಬರುತ್ತಿದೆ. ಇದೇ ಪ್ರಮಾಣದಲ್ಲಿ ಎಮ್ಮೆಗಳ ಪ್ರಮಾಣ ಕುಸಿತ ಕಂಡರೆ ಮುಂದಿನ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಎಮ್ಮೆಗಳ ಪ್ರಮಾಣ ಒಂದು ಸಾವಿರಕ್ಕೆ ಸೀಮಿತವಾಗುವ ಆತಂಕ ಕಂಡು ಬರುತ್ತದೆ.
ಬೇಸಾಯಕ್ಕೆ ಜಾನುವಾರುಗಳ ಬಳಕೆ ಕಡಿಮೆ: ಎತ್ತು, ಹಸುಕರುಗಳ ಸಂಖ್ಯೆ ಕ್ಷೀಣಿಸಲು ಬೇಸಾಯದ ಉದ್ದೇಶಕ್ಕೆ ಜಾನುವಾರುಗಳ ಬಳಕೆ ಕಡಿಮೆ ಮಾಡಿರುವುದು ಕಾರಣ. ಉದಾಹರಣೆಗೆ 15 ವರ್ಷಗಳಿಗೂ ಹಿಂದೆ ಉಳುಮೆ ಮಾಡಲು, ಹುಲ್ಲು, ಬೆಳೆ, ಸಾಮಗ್ರಿಗಳನ್ನು ಸಾಗಿಸಲು ರೈತರು ಎತ್ತುಗಳನ್ನೇ ಹೆಚ್ಚು ಅವಲಂಭಿಸಿದ್ದರು. ಈಗ ಹಳ್ಳಿಗಳಲ್ಲಿ ಎತ್ತಿನ ಗಾಡಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಸಣ್ಣ ರೈತರಷ್ಟೇ ಉಳುಮೆಗೆ ಎತ್ತುಗಳನ್ನು ಹೊಂದಿದ್ದಾರೆ. ಎತ್ತಿನ ಗಾಡಿಗಳನ್ನು ಹೊಂದಿದ್ದ ರೈತರು ಟ್ರ್ಯಾಕ್ಟರ್‌ಗಳನ್ನು, ಸಣ್ಣ ಗೂಡ್ಸ್ ಆಟೋಗಳನ್ನು ಅವಲಂಭಿಸಿದ್ದಾರೆ. ಹೀಗಾಗಿ, ಬೇಸಾಯದ ಉದ್ದೇಶಕ್ಕೆ ಎತ್ತುಗಳ ಬಳಕೆ ಕಡಿಮೆಯಾಗಿದೆ. ಹೈನುಗಾರಿಕೆಗಷ್ಟೇ ಈಗ ಹಸು ಸಾಕಾಣಿಕೆ ಮಾಡಲಾಗುತ್ತಿದೆ. ಹಾಗಾಗಿ ಈಗಿರುವ ದನಕರುಗಳ ಸಂಖ್ಯೆಯಲ್ಲಿ ಎತ್ತುಗಳಿಗಿಂತ ಹಸುಗಳ ಪ್ರಮಾಣ ಹೆಚ್ಚಿದೆ. ಅಲ್ಲದೆ, ನಾಡ ಹಸುಗಳ ಸಂಖ್ಯೆಯೂ ಕಡಿಮೆಯಾಗಿದೆ. ಹೆಚ್ಚು ಹಾಲು ಕೊಡುವ ಮಿಶ್ರತಳಿ ಹಸುಗಳ ಸಂಖ್ಯೆ ಹೆಚ್ಚಿದೆ.
ಬರವೂ ಕಾರಣ: ಜಿಲ್ಲೆಯಲ್ಲಿ ಕಳೆದ 15 ವರ್ಷಗಳಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ನೀರಾವರಿ ಬೇಸಾಯಕ್ಕಿಂತ ಮಳೆ ಆಶ್ರಿತ ಪ್ರದೇಶವೇ ಹೆಚ್ಚಿದೆ. ಈ ವರ್ಷ ಬಿಟ್ಟರೆ ಹಿಂದಿನ ವರ್ಷಗಳಲ್ಲಿ ಮಳೆ ಕೊರತೆ ಉಂಟಾಗಿ, ಜಾನುವಾರುಗಳಿಗೂ ಸಹ ಮೇವಿಲ್ಲದಂತಾಗಿ ದನಕರುಗಳು ಸಾವಿಗೀಡಾದ ಪ್ರಕರಣಗಳು ಸಹ ನಡೆದಿವೆ. ಅಲ್ಲದೆ, ರೈತರು ಕಡಿಮೆ ದರಕ್ಕೆ ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ. ಇದು ಸಹ ಜಾನುವಾರುಗಳ ಸಂಖ್ಯೆ ಕ್ಷೀಣಿಸಲು ಪ್ರಮುಖ ಕಾರಣ ಎನ್ನುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್.
ಕೋಳಿ, ಮೇಕೆ, ಕುರಿಗಳ ಸಂಖ್ಯೆ ಹೆಚ್ಚಳ!: ಒಂದೆಡೆ ದನಕರು, ಎಮ್ಮೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇನ್ನೊಂದೆಡೆ ಮೇಕೆ, ಕುರಿ, ಕೋಳಿಗಳ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಾಗಿರುವುದು ಗಣತಿಯಲ್ಲಿ ಕಂಡುಬಂದಿದೆ. 2012ರ ಜಾನುವಾರು ಗಣತಿಯಲ್ಲಿ 1,02,854ರಷ್ಟಿದ್ದ ಮೇಕೆಗಳು ಈ ಗಣತಿಯಲ್ಲಿ 1,43,161 ರಷ್ಟಾಗಿವೆ. 40,307 ಮೇಕೆಗಳು ಹೆಚ್ಚಾಗಿವೆ. ಹಿಂದಿನ ಗಣತಿಯಲ್ಲಿ 1,28,48ರಷ್ಟಿದ್ದ ಕುರಿಗಳ ಸಂಖ್ಯೆ, ಈ ಬಾರಿಯ ಗಣತಿಯಲ್ಲಿ 1,33,647ರಷ್ಟಾಗಿವೆ. ಅಂದರೆ 5,162ರಷ್ಟು ಹೆಚ್ಚಾಗಿವೆ.
ಸಾಕು ಹಂದಿಗಳು 2012ರ ಗಣತಿಯಲ್ಲಿ 1049ರಷ್ಟಿದ್ದರೆ, ಈಗ 1528ರಷ್ಟಾಗಿವೆ. ಸಾಕು ನಾಯಿಗಳ ಸಂಖ್ಯೆ ಕ್ಷೀಣಿಸಿರುವುದು ಇನ್ನೊಂದು ಪ್ರಮುಖ ಅಂಶ. ಹಿಂದಿನ ಗಣತಿಯಲ್ಲಿ 12,321ರಷ್ಟಿದ್ದ ಸಾಕು ನಾಯಿಗಳ ಸಂಖ್ಯೆ ಈಗ 7,609ಕ್ಕೆ ಇಳಿದಿದೆ. ಇನ್ನು ಕೋಳಿಗಳ ಸಂಖ್ಯೆ ಮಾತ್ರ ಇನ್ನೆಲ್ಲವುಗಳಿಗಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದಕ್ಕೆ ಕೋಳಿ ಫಾರಂಗಳ ಸಂಖ್ಯೆ ಹೆಚ್ಚಾಗಿರುವುದು ಸಹ ಕಾರಣ. ಜನಸಂಖ್ಯೆ ಹೆಚ್ಚಾದಂತೆಲ್ಲ ಆಹಾರಕ್ಕಾಗಿ ಕೋಳಿ, ಕುರಿ, ಮೇಕೆಗಳ ಮಾಂಸವನ್ನು ಬಳಸುವುದರಿಂದ ಅವುಗಳ ಸಾಕುವಿಕೆಯೂ ಹೆಚ್ಚಾಗಿದೆ. ಹೀಗಾಗಿ ಕಳೆದ ಗಣತಿಯಲ್ಲಿ 1,56,709ರಷ್ಟಿದ್ದ ಕೋಳಿಗಳ ಸಂಖ್ಯೆ, ಈಗ 7,25,131ರಷ್ಟಾಗಿದೆ!
2012 – 2019
ದನಗಳು – 2,62,520 – 2,47,683
ಎಮ್ಮೆಗಳು – 20,887 – 9,521
ಕುರಿಗಳು – 1,28,483 – 1,33,647
ಮೇಕೆಗಳು – 1,02,854 – 1,43,161
ಕೋಳಿಗಳು – 1,56,709 – 7,25,131
* ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.