ಅರಣ್ಯ ಒತ್ತುವರಿ ಮಾಡಿದ್ದ 8 ಮಂದಿಗೆ ಇಲಾಖೆ ನೋಟಿಸ್
Team Udayavani, Dec 28, 2017, 1:59 PM IST
ಗುಂಡ್ಲುಪೇಟೆ: ಹಲವಾರು ಪ್ರಭಾವಿಗಳಿಂದ ಒತ್ತುವರಿಯಾಗಿರುವ ನೂರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಇಲಾಖೆ ಮುಂದಾಗಿದೆ. ಬಂಡೀಪುರ ಹುಲಿಯೋಜನೆ ವ್ಯಾಪ್ತಿಯ ಮದ್ದೂರು ವಲಯಾರಣ್ಯ ವ್ಯಾಪ್ತಿಯಲ್ಲಿ ಕೇರಳ ಮೂಲದ ವ್ಯಕ್ತಿಗಳಿಂದ ಅರಣ್ಯ ಭೂಮಿ ಒತ್ತುವರಿ ಯಾಗಿರುವ ಬಗ್ಗೆ ಈ ಹಿಂದೆಯೇ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು.
ಒತ್ತುವರಿಯ ಬಗ್ಗೆ ಮದ್ದೂರು ಅರಣ್ಯ ವಲಯದ ಆರ್.ಎಫ್.ಒ.ಆಗಿದ್ದ ಗೋವಿಂದಯ್ಯ ಅವರು 2013ರಲ್ಲಿ 8 ಮಂದಿ ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಒತ್ತುವರಿದಾರರು: ಮದ್ದೂರು ಅರಣ್ಯ ವ್ಯಾಪ್ತಿಯ ಸರ್ವೆ ನಂ. 87/40 ರಿಂದ 87/51 ರವರೆಗೆ ಹಾಗೂ 87/585 ಯಲ್ಲಿ ಕ್ಯಾಲಿಕೇಟಿನ ಮಹಮದ್ ಪೈಜಲ್ 45 ಎಕರೆ, ಓಮನ್ ಬಾಲಚಂದ್ರ 78/ಪಿ.2 ರಲ್ಲಿ 25 ಎಕರೆ, ಕಾರೆಹುಂಡಿ ಶಿವಪ್ಪಚನ್ನಮಲ್ಲೀಪುರ ಗ್ರಾಮ 86ರಲ್ಲಿ 2 ಎಕರೆ, ಕಾಳ ನವಿಲುಗುಂಡಿ ಕಾಲೋನಿಯ ಸರ್ವೆ ನಂ. 86ರಲ್ಲಿ 2 ಎಕರೆ, ಬಸಪ್ಪ ಚನ್ನಮಲ್ಲೀಪುರ ಸರ್ವೆ ನಂ. 86ರಲ್ಲಿ 2 ಎಕರೆ, ಸ್ವಾಮಿ ಸರ್ವೆ ನಂ.4 ಎಕರೆ, ಶಿವರುದ್ರಪ್ಪ, ಚನ್ನಮಲ್ಲೀಪುರ ಸರ್ವೆ ನಂ. 86 ರಲ್ಲಿ 1 ಎಕರೆ, ಡಾ.ಚಂದ್ರಚೂಡ ಸರ್ವೆನಂ. 78 ರಲ್ಲಿ 45 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಒತ್ತುವರಿದಾರರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದೆ.
ಈ ಪ್ರಕರಣವು ಅರಣ್ಯ ಇಲಾಖೆಯ ಬಂಡೀಪುರದ ಎಸಿಎಫ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪಟ್ಟಾ ಜಮೀನು ಖರೀದಿಸಿದ ಪ್ರಭಾವಿಗಳು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕೊಂಡಿದ್ದರೂ ಈವರೆಗೆ ಅವರಿಂದ ಒತ್ತುವರಿ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಯಾರೂ ಮುಂದಾಗಿರಲಿಲ್ಲ ಎನ್ನುವುದು ವಿಶೇಷ.
ಆದರೆ, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಹಾಗೂ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ರವಿಕುಮಾರ್, ಮದ್ದೂರು ಆರ್‌ಎಫ್ಒ ಶೈಲೇಂದ್ರ ಕುಮಾರ್ ತಂಡ ದಿಟ್ಟಕ್ರಮ ಕೈಗೊಂಡ ಪರಿಣಾಮ ಒತ್ತುವರಿಯಾಗಿರುವ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಜೀವ ಕೊಟ್ಟು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಜಮೀನು ಮಾರಾಟಕ್ಕೆ ಸಿದ್ಧರಾಗಿದ್ದ ಡಾ.ಚಂದ್ರಚೂಡ ಅವರಿಗೆ ಅರಣ್ಯ ಭೂಮಿ ಒತ್ತುವರಿಯಾಗಿರುವ ಬಗ್ಗೆ ತಿಳಿವಳಿಕೆ ನೀಡಿದ್ದಾರೆ. ಅರಣ್ಯ ಇಲಾಖೆಯ ಕಾಯ್ದೆ ಹಾಗೂ ಕಾನೂನನ್ನು ವಿವರಣೆ ಮಾಡಿದ ಬಳಿಕ ಡಾ. ಚಂದ್ರಚೂಡ ಅವರು ತಾವು 2013 ರಿಂದ 2017 ರವರೆಗೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 33.18 ಎಕರೆ ಅರಣ್ಯ ಭೂಮಿಯನ್ನು ಇಲಾಖೆಯ ವಶಕ್ಕೆ ಕೊಡಲು ಸ್ವಯಂ ಪ್ರೇರಿತರಾಗಿ ಒಪ್ಪಿಹೇಳಿಕೆ ಕೊಟ್ಟ ಬಳಿಕ ಎಸಿಎಫ್ ಕೋರ್ಟ್ ನಿಂದ ಅಂತಿಮ ತೀರ್ಪು ನೀಡಿದ್ದು, ಅರಣ್ಯ ಇಲಾಖೆಯು ಈ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು ಆದೇಶಿಸಲಾಗಿದೆ.
ಕೃಷಿ ಭೂಮಿ ಜೊತೆಗೆ ಅರಣ್ಯದ ಜಾಗವನ್ನೂ ಒತ್ತುವರಿ ಮಾಡಿಕೊಂಡಿರುವುದು ಸರ್ವೆ ನಡೆಸಿದಾಗ ತಿಳಿದು ಬಂದಿದೆ. ಈಗಾಗಲೇ ಒತ್ತುವರಿ ಮಾಡಿಕೊಂಡಿರುವ 8 ಮಂದಿಗೆ ನೋಟಿಸ್ ಕೂಡ ನೀಡಲಾಗಿದೆ. ಡಾ.ಚಂದ್ರಚೂಡ
ಸ್ವಯಂ ಪ್ರೇರಿತರಾಗಿ ಒತ್ತುವರಿ ತೆರವು ಮಾಡುತ್ತೇವೆ ಎಂದಿದ್ದಾರೆ. ಉಳಿದವರಿಗೂ ಈ ಬಗ್ಗೆ ತಿಳಿಸಲಾಗಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಿ ಅಂಬಾಡಿ ಮಾಧವ್, ಹುಲಿ ಯೋಜನೆ ನಿರ್ದೇಶಕ, ಬಂಡೀಪುರ.’
ಸೋಮಶೇಖರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.