ಮನುಷ್ಯನ ಆಸೆಯಿಂದ ಪ್ರಕೃತಿ ನಾಶ: ವಿಷಾದ
Team Udayavani, Jun 15, 2019, 3:00 AM IST
ಹನೂರು: ಮನುಷ್ಯ ಪ್ರಕೃತಿಯನ್ನು ವಿಕೃತವಾಗಿ ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದಾನೆ ಎಂದು ಇಸ್ರೋ ವಿಜ್ಞಾನಿ ಜಗನ್ನಾಥನ್ ವೆಂಕಟರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಕ್ರಿಸ್ತರಾಜ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವನ ಸ್ವ-ಇಚ್ಛೆತನದಿಂದ ಪ್ರಕೃತಿಯಲ್ಲಿ ಏರುಪೇರು ಉಂಟಾಗಿ ಅನೇಕ ರೀತಿಯ ಪ್ರಾಕೃತಿಕ ಅಪಾಯಗಳು ಎದುರಾಗುತ್ತಿವೆ. ಮುಂದಿನ ದಿನಗಳಲ್ಲಾದರು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಮನಹರಿಸಬೇಕಾಗಿದೆ ಎಂದರು.
ಆರೋಗ್ಯ ಕಾಪಾಡಿಕೊಳ್ಳಿ: ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ವಾತಾವರಣ ಇದೆ. ಉತ್ತಮ ಗಾಳಿ ಸಿಗುತ್ತಿದೆ. ಗ್ರಾಮೀಣ ಭಾಗದ ಜನತೆಯೇ ಪುಣ್ಯವಂತರು. ಇಂದಿನ ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಪ್ಲಾಸ್ಟಿಕ್ ತ್ಯಜಿಸುವ ನಿಟ್ಟಿನಲ್ಲಿ ಹಾಗೂ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವಲ್ಲಿ ಗಮನಹರಿಸಬೇಕು ಎಂದು ತಮ್ಮದೇ ದಾಟಿಯಲ್ಲಿ ಉದಾಹರಣೆಗಳ ಮೂಲಕ ತಿಳಿಸಿದರು. ಬೀಡಿ, ಸಿಗರೆಟ್ ಸೇದಿ ಆದರೆ ಹೊಗೆ ಬಿಡಬೇಡಿ ಎಂಬ ಹಾಸ್ಯ ಚಟಾಕಿಯನ್ನು ಹಾರಿಸಿದ ಅವರು, ವಾಯು ಮಾಲಿನ್ಯ ಹಾಗೂ ಮಾನವನ ಆರೋಗ್ಯ ಕಾಪಾಡಬೇಕೆಂದು ತಿಳಿಸಿದರು.
ಪ್ರತಿಜ್ಞಾ ವಿಧಿ ಬೋಧನೆ: ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ ವಿಜ್ಞಾನಿ ಜಗನ್ನಾಥನ್ ಅವರು ಪರಿಸರಕ್ಕೆ ಮಾನವನಿಂದ ಆಗುತ್ತಿರುವ ಹಾನಿ ಹಾಗೂ ಮನುಷ್ಯನ ಸರ್ವ ಏಳಿಗೆಗೂ ಕಾರಣವಾಗಿರುವ ಪರಿಸರದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಬಳಿಕ ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಅಲ್ಯೂಮಿನಿಯಂ ನೀರಿನ ಬಾಟಲಿಯನ್ನು ತಂದಿದ್ದ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಅಭಿನಂದಿಸಿದರು. ನಂತರ ವಿದ್ಯಾರ್ಥಿಗಳಿಗೆ ಪರಿಸರವನ್ನು ಉಳಿಸಿ ಬೆಳೆಸುವ ಕುರಿತು ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ದುಶ್ಚಟಗಳಿಂದ ದೂರವಿರಿ: ಫಾದರ್ ಕ್ರಿಸ್ಟೋಫರ್ ಮಾತನಾಡಿ, ಪ್ಲಾಸ್ಟಿಕ್ ವ್ಯಾಮೋಹ ಬಿಟ್ಟು ಪ್ರಕೃತಿಯನ್ನು ಉಳಿಸಿಕೊಳ್ಳಲು ಹೆಚ್ಚು ಮಂದಿ ಮರಗಿಡಗಳನ್ನು ಬೆಳೆಸಲು ಮುಂದೆ ಬರಬೇಕು. ಪರಿಸರಕ್ಕೆ ಹಾನಿಯಾಗುವ ಯಾವುದೇ ದುಶ್ಚಟಗಳನ್ನು ಬಿಟ್ಟು ಮಕ್ಕಳು ಒಳ್ಳೆಯ ಮಾರ್ಗದರ್ಶನದಲ್ಲಿ ಮರಗಳನ್ನು ಬೆಳೆಸಬೇಕು. ಪರಿಸರ ಹಾನಿ ಮಾಡುವವರನ್ನು ಜಾಗೃತಿ ಮೂಡಿಸಿ ಅವರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಬೇಕು ಎಂದು ತಿಳಿಸಿದರು.
ಗಮನ ಸೆಳೆದ ವಿದ್ಯಾರ್ಥಿಗಳ ನೃತ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯಿಂದ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಪರಿಸರ ಸಂಬಂಧಿತ ಗೀತೆಗಳಿಗೆ ಹಸಿರು ಬಣ್ಣದ ಉಡುಗೆತೊಡುಗೆಗಳನ್ನುಟ್ಟು ನೃತ್ಯವನ್ನು ಮಾಡುವ ಮೂಲಕ ಗಮನ ಸೆಳೆದರು.
ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣ ಸೇರಿದಂತೆ ವೇದಿಕೆಯ ಮೇಲೆ ಹಸಿರು ಬಣ್ಣದ ಬಲೂನು ಮುಂತಾದವುಗಳಿಂದ ಸಿಂಗರಿಸಲಾಗಿತ್ತು. ಪರಿಸರ ಹಾಗೂ ವನ್ಯಪ್ರಾಣಿಗಳ ಮಹತ್ವವನ್ನು ಸಾರುವ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಗಮನಸೆಳೆದರು.
ಪರಿಸರ ತಜ್ಞರು ಹಾಗೂ ಕ್ರೆçಸ್ತ ಧರ್ಮಗುರುಗಳಾದ ಜಾನ್‌ಟೆಕ್ಷೇರಾ, ಶಿಕ್ಷಣ ತಜ್ಞ ಫಾದರ್ ಕೊಲೋಸೊ, ಮಾರ್ಟಳ್ಳಿ ಪ್ರಾಂಶುಪಾಲ ಫಾದರ್ ಕ್ರಿಸ್ಟೋಫರ್, ಫಾದರ್ ಜಾಯ್, ಕ್ರಿಸ್ತರಾಜ ಶಾಲೆಯ ವ್ಯವಸ್ಥಾಪಕರಾದ ಫಾದರ್ ರೊನಾಲ್ಡ್ ಧಾಂತಿ, ಕಾಲೇಜು ಪ್ರಾಂಶುಪಾಲ ಸಿಸ್ಟರ್ ಶಾಂತಿ, ಪ್ರçಮರಿ ಮುಖ್ಯ ಶಿಕ್ಷಕರಾದ ಸಿಸ್ಟರ್ ವೀಣಾ, ಜಸಿಂತ, ಆರ್‌ಎಫ್ಒ ನಂದಗೋಪಾಲ್, ಪಪಂ ಸದಸ್ಯ ಸೋಮಶೇಖರ್ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.