ತಂಬಾಕು ಜಾಗೃತಿಗೆ ಪರಿಣಾಮಕಾರಿ ಕಾರ್ಯನಿರ್ವಹಿಸಿ: ಎಡಿಸಿ
Team Udayavani, May 18, 2019, 3:00 AM IST
ಚಾಮರಾಜನಗರ: ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲೆಯಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ತನಿಖಾ ದಳದ ಜಿಲ್ಲಾ ನೋಡಲ್ ಅಧಿಕಾರಿ ಸಿ.ಎಲ್. ಆನಂದ್ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೆçಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾನೂನು ಪರಿಣಾಮಕಾರಿ ಅನುಷ್ಠಾನಕ್ಕೆ ತನ್ನಿ: ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುತ್ತಿರುವ ಸಮಸ್ಯೆ ಪರಿಗಣಿಸಿ ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಜಾರಿಗೆ ತರಲಾಗಿರುವ ಕೋಟ್ಪಾ ಕಾಯಿದೆಯನ್ನು ಎಲ್ಲಾ ಭಾಗದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಕಾಯಿದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ದಂಡ ವಿಧಿಸಿ: ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದೆ. ಕಚೇರಿ, ಆಸ್ಪತ್ರೆ, ಹೋಟೆಲ್ ರೆಸ್ಟೋರೆಂಟ್, ಬೇಕರಿ, ಟೀ ಸ್ಟಾಲ್, ರೈಲು, ಬಸ್ ನಿಲ್ದಾಣದಂತಹ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಲು ಅವಕಾಶ ನೀಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ವ್ಯಕ್ತಿಗೆ ಸೆಕ್ಷನ್ 21ರ ಪ್ರಕಾರ ಅಧಿಕಾರಿಗಳು ಸ್ಥಳದಲ್ಲೇ ದಂಡ ವಿಧಿಸಬೇಕು ಎಂದು ಸಲಹೆ ನೀಡಿದರು.
ಫಲಕ ಪ್ರದರ್ಶಿಸಿ: ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತ್ವ ಮಾಡುವುದನ್ನು ನಿಷೇಧಿಸಲಾಗಿದೆ. ತಂಬಾಕು ನಿಯಂತ್ರಣಕ್ಕಾಗಿ ಇರುವ ಕಾಯಿದೆಗಳ ಬಗ್ಗೆ ಜಾಗೃತಿಗೊಳಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ತಂಬಾಕು ಉತ್ಪನ್ನಗಳ ಮಾರಾಟ, ಸಾರ್ವಜನಿಕ ಸ್ಥಳಗಳಲ್ಲಿ ಸೇವನೆಯಿಂದ ವಿಧಿಸಬಹುದಾದ ದಂಡ ಕಾಯಿದೆಯಲ್ಲಿ ಪಾಲಿಸಬೇಕಿರುವ ಸೂಚನೆ, ನಿಯಮಗಳನ್ನು ತಿಳಿಸುವ ಫಲಕಗಳನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.
ಪ್ರಚಾರ ಕೈಗೊಳ್ಳಿ: ಶಾಲೆಗಳು, ವಸತಿ ಶಾಲೆಗಳು, ಸರ್ಕಾರಿ ಕಚೇರಿ ಸೇರಿ ಎಲ್ಲಾ ಕಡೆ ಧೂಮಪಾನ ನಿಷೇಧಿತ ಪ್ರದೇಶ ಎಂಬ ಫಲಕಗಳ ಪ್ರದರ್ಶನ ಕಡ್ಡಾಯವಾಗಿ ಮಾಡಬೇಕು. ಪ್ರದರ್ಶನ ಫಲಕ ಚಿಕ್ಕದಾಗಿ ಇರದೆ ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿರುವ ಅಳತೆ ಪ್ರಕಾರದ ಫಲಕಗಳನ್ನೇ ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ವೈದ್ಯಾಧಿಕಾರಿ ಡಾ.ನಾಗರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.