ರೈತರ ಬಹುದಿನಗಳ ಕನಸು ನನಸು
Team Udayavani, Dec 15, 2019, 3:00 AM IST
ಚಾಮರಾಜನಗರ/ಗುಂಡ್ಲುಪೇಟೆ: ರೈತರ ಬಹುದಿನಗಳ ಕನಸಾಗಿದ್ದ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಯೋಜನೆ ಕೊನೆಗೂ ನನಸಾಗಿದೆ. ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಶನಿವಾರ ಚಾಲನೆ ನೀಡಿದರು. ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಕೆರೆ ಬಳಿ ನಿರ್ಮಿಸಲಾಗಿರುವ ಪಂಪ್ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ, ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಸ್ವಿಚ್ ಆನ್ ಮಾಡುವ ಮೂಲಕ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ನೀರು ಹರಿಸುವ ಕಾರ್ಯಕ್ಕೆ ಬೇಡಿಕೆ: ಬಳಿಕ ಸಚಿವರು ಪಂಪ್‌ಹೌಸ್ ಬಳಿ ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಯೋಜನೆಯ ಕಾರ್ಯವನ್ನು ಆರಂಭಿಸುವಂತೆ ಕಳೆದ ನವಂಬರ್ 5ರಂದು ಚಾಮರಾಜನಗರದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಅಂದಿನ ಸಭೆಯಲ್ಲಿ ರೈತ ಮುಖಂಡರು ಪ್ರತಿನಿಧಿಗಳು ಹುತ್ತೂರು ಕೆರೆಯಿಂದ ನೀರು ಹರಿಸುವ ಕಾರ್ಯವನ್ನು ಆರಂಭಿಸುವಂತೆ ತೀವ್ರ ಬೇಡಿಕೆ ಇಟ್ಟಿದ್ದರು. ಅಂದಿನ ಸಭೆಯಲ್ಲಿ ಹುತ್ತೂರು ಕೆರೆಯಿಂದ ನೀರು ಹರಿಸುವುದಾಗಿ ತಿಳಿಸಲಾಗಿತ್ತು. ಅದರಂತೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಈ ಕಾರ್ಯ ಸಾಧ್ಯವಾಗಲು ಕಾರಣರಾದ ಎಲ್ಲಾ ರೈತ ಮುಖಂಡರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ವಿವಿಧ ಯೋಜನೆಗಳು ಸಾಕಾರ: ತಾಳ್ಮೆ, ಛಲ ಇದ್ದರೆ ಎಂತಹ ಕೆಲಸ ಸಹ ಸಾಧ್ಯವಾಗಲಿದೆ ಎಂಬುದಕ್ಕೆ ಕೆರೆಗೆ ನೀರು ತುಂಬಿಸುವ ಯೋಜನೆ ಕೆಲಸ ನಡೆದಿರುವುದೆ ನಿದರ್ಶನವಾಗಿದೆ. ಸ್ಥಳಿಯ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಅವರ ಪರಿಶ್ರಮದಿಂದ ಇಂದಿನ ಕೆಲಸ ನೆರವೇರಿದೆ. ಕೆರೆಗಳಿಗೆ ನೀರು ತುಂಬಿಸುವ ವಿವಿಧ ಹಂತದ ಯೋಜನೆಗಳು ಸಾಕಾರಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತಿಯವರನ್ನು ಆಹ್ವಾನಿಸಿ ದೊಡ್ಡ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 40 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಮಂಜೂರಾತಿ ಸಿಕ್ಕಿದೆ. ಈ ಅನುಷ್ಠಾನ ಸಂಬಂಧ ಪ್ರಕ್ರಿಯೆಯನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಸ್ಯೆಗಳಿಗೆ ಪರಿಹಾರ: ಕಳೆದ ನವಂಬರ್ 18ರಂದು ಗೋಪಿನಾಥಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಆರಂಭಿಸಬೇಕೆಂಬ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ನೆರವೇರಿದ್ದು, ಮುಂಬರುವ ಶೈಕ್ಷಣಿಕ ಸಾಲಿನಲ್ಲಿಯೇ ಕನ್ನಡ ಮಾಧ್ಯಮ ಆರಂಭಿಸಲು ಆದೇಶ ಬಂದಿದೆ. ಅಲ್ಲದೆ, ಶಾಲೆಗೆ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರನ್ನು ನೇಮಿಸಲಾಗಿದೆ. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಪಾಲಾರ್ ಶಾಲೆಯಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಗೋಪಿನಾಥಂ, ಹೊಗೇನಕಲ್ ನಡುವಿನ ಕೆಎಸ್‌ಆರ್‌ಟಿಸಿ ಬಸ್ ದರ ಸಹ ಸ್ಥಳಿಯರ ಮನವಿಯಂತೆ ಇಳಿಕೆ ಮಾಡಲಾಗಿದೆ ಎಂದರು.
ಸಂತ್ರಸ್ತರಿಗೆ ಸರ್ಕಾರ ನೆರವು: ಸುಳ್ವಾಡಿ ವಿಷ ಪ್ರಸಾದ ಸೇವನೆ ದುರಂತ ಪ್ರಕರಣ ಸಂಭವಿಸಿ ಇಂದಿಗೆ ಒಂದು ವರ್ಷವಾಗಿದೆ. ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ, ಸಂತ್ರಸ್ತ ಕುಟುಂಬಗಳಿಗೆ ತಲಾ ಎರಡು ಎಕರೆ ಜಮೀನು ಹಾಗೂ ನಿವೇಶನ ನೀಡಲಾಗುತ್ತಿದೆ. ಖಾಸಗಿಯವರಿಂದ ಜಮೀನು ಖರೀದಿಸಿ ಸಂತ್ರಸ್ತರಿಗೆ ನೀಡಲಾಗುವುದು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರ ಸಂತ್ರಸ್ತರ ನೆರವಿಗೆ ಮುಂದಿದೆ ಎಂದು ತಿಳಿಸಿದರು.
ಎಲ್ಲರ ಬದುಕು ಹಸನು: ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಕೆ.ಎಸ್. ಮಹೇಶ್ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಎಲ್ಲರ ಶ್ರಮವಿದೆ. ಎಲ್ಲರ ಬದುಕು ಹಸನಾಗಲಿದೆ. ಕೆರೆಗಳಿಗೆ ನೀರು ತುಂಬಿಸುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಶಿವಮ್ಮ, ಜಿಲ್ಲಾ ಪಂಚಾಯ್ತಿ ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗತ ಮಣಿ, ಸದಸ್ಯೆ ಅಶ್ವಿನಿ, ತಾಪಂ ಸದಸ್ಯರಾದ ಮಹೇಶ್, ಗುರುಸ್ವಾಮಿ, ಸುರೇಶ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಒ ಬಿ.ಎಚ್.ನಾರಾಯಣರಾವ್, ಎಸ್‌ಪಿ ಎಚ್.ಡಿ ಆನಂದ್ ಕುಮಾರ್, ಉಪವಿಭಾಗಾಧಿಕಾರಿ ನಿಖೀತಾ ಎಂ ಚಿನ್ನಸ್ವಾಮಿ, ಗ್ರಾಪಂ ಅಧ್ಯಕ್ಷೆ ಜಯಮ್ಮ, ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್, ಮುಖಂಡರಾದ ಸಿ.ಎಂ.ಶಿವಮಲ್ಲಪ್ಪ, ಕೊಡಸೋಗೆ ಶಿವಬಸಪ್ಪ, ಪ್ರಣಯ್, ನಿಟ್ರೆ ನಾಗರಾಜಪ್ಪ, ಬಿ.ಪಿ.ರಾಜಶೇಖರಪ್ಪ, ಅಭಿಷೇಕ್ ಗುಡಿಮನೆ, ಹಿರಿಕಾಟಿ ಸೋಮಶೇಖರ್, ಕಿರಣ್‌ಗೌಡ, ನಂದೀಶ್, ನಾಗೇಂದ್ರ, ಮಲ್ಲಿಕಾರ್ಜುನ್, ಗೋವಿಂದರಾಜನ್ ಸೇರಿದಂತೆ ರೈತರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ: ಹುತ್ತೂರು ಕೆರೆಯಿಂದ ವಡ್ಡಗೆರೆಗೆ ಮತ್ತು ಮುಂದುವರಿದ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 56 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಂಡು ಪೂರ್ಣಗೊಳಿಸಲಾಗುತ್ತಿದೆ. 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 212 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಿದ್ದರು ಎಂದು ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಹೇಳಿದರು.
ಇದಕ್ಕೆ ಪೂರಕವಾಗಿ ಸುತ್ತೂರು ಶ್ರೀಗಳ ಸಲಹೆಯಂತೆ ಯಡಿಯೂರಪ್ಪ ಅವರು ಇಲ್ಲಿನ ಜನತೆಯ ಕಷ್ಟವನ್ನು ಅರಿತು ತಕ್ಷಣವೇ ಕಾಮಗಾರಿಯ ಹಣವನ್ನು ಮಂಜೂರು ಮಾಡಿದ್ದರು. ನಂತರದ ದಿನಗಳಲ್ಲಿ ಮಾಜಿ ಸಚಿವರಾದ ಮಹದೇವಪ್ರಸಾದ್ ಮತ್ತು ಗೀತಾ ಮಹದೇವಪ್ರಸಾದ್ ಅವರೂ ಸಹ ಶ್ರಮ ವಹಿಸಿ ಈ ಯೋಜನೆಯನ್ನು ಮುಂದುವರಿಸಿದ್ದರು. ಈಗ ನಾನು ಶಾಸಕನಾದ ಮೇಲೆ ಇದಕ್ಕೆ ಇದ್ದ ಅಡ್ಡಿ ಆತಂಕಗಳನ್ನು ಬಗೆಹರಿಸಿದ್ದು, ನಿರಂತರವಾಗಿ ಕೆರೆಗಳಿಗೆ ನೀರು ಹರಿಯುತ್ತದೆ. ಇದರ ಬಗ್ಗೆ ಯಾರಿಗೂ ಸಂಶಯ ಬೇಡ.
ಮುಂದಿನ ದಿನಗಳಲ್ಲಿ ಬೆಳವಾಡಿ ಮತ್ತು ನಲ್ಲೂರು ಆಮಾನಿ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು. ರೈತರು ಹಾಗೂ ಜನರ ಆಶಯದಂತೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಉಸ್ತುವಾರಿ ಸಚಿವರು ನುಡಿದಂತೆ ನಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಪ್ರೋತ್ಸಾಹ ಬೆಂಬಲದಿಂದ ಯೋಜನೆ ಕಾರ್ಯ ನೆರವೇರಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.