Cauvery ತೀರದಲ್ಲಿ ಪ್ರವಾಹ ಭೀತಿ: ಜನರ ಸ್ಥಳಾಂತರ
ಕಬಿನಿ, ಕೆಆರ್‌ಎಸ್‌ನಿಂದ 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆ
Team Udayavani, Jul 31, 2024, 12:10 AM IST
ಕೊಳ್ಳೇಗಾಲ: ಕಬಿನಿ ಮತ್ತು ಕೆಆರ್‌ಎಸ್ ಡ್ಯಾಂಗಳಿಂದ 2 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗಿದ್ದು ಕಾವೇರಿ ತೀರದಲ್ಲಿ ಪ್ರವಾಹ ಎದುರಾಗುವ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಮಂಗಳವಾರ ಸಂಜೆ ಸ್ಥಳಾಂತರ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.
ಉದಯವಾಣಿ ಜತೆ ಮಾತನಾಡಿದ ಅವರು, ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಕಾವೇರಿಗೆ ನೀರು ಬಿಡಲಾಗಿದ್ದು ರಾತ್ರಿ 10ರಿಂದ 11 ಗಂಟೆಗೆ ತಾಲೂಕಿನ ಹಳೇ ಹಂಪಾಪುರ ದಾಸನಪುರ ಹಳೇ ಅಣಗಳ್ಳಿ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು ಮುನ್ನಚ್ಚರಿಕೆ ಕ್ರಮವಾಗಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸರ್ಕಾರಿ ಬಸ್‌ನಲ್ಲಿ ಸಾಗಿಸಲಾಗುವುದು ಎಂದರು.
ತಾಲೂಕಿನ ಕಾವೇರಿ ನದಿಯ ತೀರದಲ್ಲಿರುವ ಗ್ರಾಮಗಳಿಗೆ ಖುದ್ದು ನಾನೇ ಭೇಟಿ ನೀಡಿ ಗ್ರಾಮಸ್ಥರಿಗೆ ಮನವಿ ಮಾಡಿದ್ದು ಗ್ರಾಮಸ್ಥರು ಕಾಳಜಿ ಕೇಂದ್ರಕ್ಕೆ ಬರಲು ಒಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳೊಂದಿಗೆ ಸಹಕರಿಸಿ
ಕಾಳಜಿ ಕೇಂದ್ರಕ್ಕೆ ಎಲ್ಲರೂ ಬರುವಂತೆ ಸೂಚನೆ ನೀಡಿದ್ದು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಕಾಳಜಿ ಕೇಂದ್ರಕ್ಕೆ ಬರುವ ಎಲ್ಲರಿಗೂ ರಾತ್ರಿಯಿಂದ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರು ಶೌಚಾಲಯದ ವ್ಯವಸ್ಥೆ ಹಾಗೂ ಚಾಪೆ ದಿಂಬು, ಹೊದಿಕೆ ನೀಡುವಂತೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಆರೋಗ್ಯದಲ್ಲಿ ತೊಂದರೆ ಎದುರಾದರೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ತಾಲೂಕಿನ ಮುಳ್ಳೂರು ಹರಳೆ ಸರಗೂರು ಯಡಕುರಿಯ ಗ್ರಾಮಗಳ ಜನರನ್ನು ಪ್ರವಾಹ ಮಟ್ಟ ವೀಕ್ಷಣೆ ಮಾಡಿದ ಬಳಿಕ ಅವರನ್ನು ಕಾಳಜಿ ಕೇಂದ್ರಕ್ಕೆ ಕರೆದು ತರಲಾಗುವುದು ಎಂದರು.
80 ಜಾನುವಾರು ರಕ್ಷಣೆ
ಪ್ರವಾಹ ಎದುರಾಗುವ ಗ್ರಾಮಗಳಲ್ಲಿ 80 ಜಾನುವಾರು ಪಟ್ಟಿ ಮಾಡಲಾಗಿದೆ. ಜತೆಗೆ ಕುರಿಗಳನ್ನು ನಗರದ ಆರ್‌ಎಂಸಿ ಆವರಣದಲ್ಲಿ ರಕ್ಷಣೆ ಮಾಡಲಾಗುವುದು. ಜಾನುವಾ ರುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪಶು ಸಂಗೋಪನಾ ಇಲಾಖೆಗೆ ವಹಿಸಲಾಗಿದೆ ಎಂದು ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ದಾಸನಪುರಗ್ರಾಮಗಳಲ್ಲಿ ಜನರನ್ನು ಕಾಳಜಿ ಕೇಂದ್ರಕ್ಕೆ ಬರುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದರು.
ಏರುತ್ತಲೇ ಇದೆ ಹೇಮಾವತಿ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು ಸೋಮವಾರ ಸಂಜೆಯ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಯಿತು.
ಒಳ ಹರಿವಿನ ಪ್ರಮಾಣ ಏರುತ್ತಿರುವುದರಿಂದ ಒಂದು ಲಕ್ಷ ಕ್ಯುಸೆಕ್‌ನ್ನು ನದಿಗೆ ಬಿಡಲು ಅಣೆಕಟ್ಟು ವಿಭಾಗದ ಎಂಜಿನಿಯರ್‌ಗಳು ನಿರ್ಧರಿಸಿದ್ದು ಹೊರ ಹರಿವಿನ ಪ್ರಮಾಣ ಒಂದು ಲಕ್ಷಕ್ಕೂ ಅಧಿಕವಾಗುವ ಸಾಧ್ಯತೆಗಳಿದೆ. ಆದ್ದರಿಂದ ನದಿ ದಂಡೆಯ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.