Indira Canteen: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ: ಡೀಸಿ ಬೇಸರ
Team Udayavani, Oct 28, 2023, 4:00 PM IST
ಯಳಂದೂರು: ಪಪಂನಿಂದ ನಗರೋತ್ಥಾನ ಯೋಜನೆಯಡಿಯಲ್ಲಿ ನಡೆದಿರುವ ಚರಂಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಶಿಲ್ಪನಾಗ್ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಮೊದಲು ಪಪಂ ಕಚೇರಿಗೆ ಭೇಟಿ ನೀಡಿ ಇಲ್ಲಿನ ಸಭಾಂಗಣದಲ್ಲಿ ಕೆಲ ಪಪಂ ಸದಸ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂ ಡರು. ಈ ವೇಳೆ ಪಪಂ ಸದಸ್ಯ ವೈ.ಜಿ. ರಂಗನಾಥ, ಮಹೇಶ್, ರವಿ ಪಟ್ಟ ಣದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಗೆ ಅಸಮಧಾನ: ನಂತರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಇಲ್ಲಿ ಶುದ್ಧ ಕುಡಿವ ನೀರು ಇಲ್ಲದಿರುವ ಬಗ್ಗೆ , ವಿದ್ಯುತ್ ಕಡಿತಗೊಂಡಿರುವ ಬಗ್ಗೆ, ಅಲ್ಲದೆ ಮೆನು ಪ್ರಕಾರ ಆಹಾರ ತಯಾರಿಸದ ಬಗ್ಗೆ ಅಸಮಧಾನ ವ್ಯಕ್ತಪಡಿ ಸಿದರು. ಅಲ್ಲದೆ ಇಲ್ಲೇ ತಯಾರಿಸಿದ ಅನ್ನಸಾಂಬಾರ್ ಸೇವಿಸಿ ಸಾಂಬಾರಿನಲ್ಲಿ ಬೇಳೆಯೇ ಇಲ್ಲ, ರುಚಿಕಟ್ಟಾಗಿ ಆಹಾರ ನೀಡಬೇಕು. ಇಲ್ಲವಾದಲ್ಲಿ ಇದನ್ನು ನಾಳೆಯಿಂದಲೇ ಬಂದ್ ಮಾಡಿಸಲಾಗುವುದು ಎಂದು ಸಂಬಂಧಪಟ್ಟ ಟೆಂಡರ್ ಪಡೆದಿರುವ ವ್ಯಕ್ತಿಗೆ ಎಚ್ಚರಿಕೆ ನೀಡಿದರು.
ಅಲ್ಲದೆ ನಾಳೆಯಿಂದಲೇ ಇದಕ್ಕೆ ವಿದ್ಯುತ್ ಮರುಸಂಪರ್ಕ ನೀಡಬೇಕು, ಮೆನು ಪ್ರಕಾರ ಆಹಾರ ತಯಾರಿಸಬೇಕು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಲ್ಲವಾದಲ್ಲಿ ಶಿಸ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಖಾಲಿ ಹುದ್ದೆ ಭರ್ತಿಗೆ ಕ್ರಮ: ಈ ವೇಳೆ ಪಪಂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟ 666 ಹುದ್ದೆಗಳಿದ್ದು ಇದರಲ್ಲಿ ಕೇವಲ 400 ಜನರು ನೌಕರರು ಇದ್ದಾರೆ. ಹಾಗಾಗಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಈಗಾಗಲೇ ಸಂಬಂಧಪಟ್ಟ ಸರ್ಕಾರದ ಇಲಾಖೆಗೆ ಮಾಹಿತಿಯನ್ನು ರವಾನಿಸಲಾಗಿದೆ. ಉಸ್ತುವಾರಿ ಸಚಿವರ ಗಮನಕ್ಕೂ ಈ ವಿಷಯವನ್ನು ತರಲಾಗಿದ್ದು ಶೀಘ್ರದಲ್ಲೇ ಹುದ್ದೆ ಭರ್ತಿ ಮಾಡಲಾಗುವುದು ಎಂದರು.
ಪತ್ರಕರ್ತರು, ಶಿಕ್ಷಕರ ಭವನದ ಸ್ಥಳ ಪರಿಶೀಲನೆ: ಅಲ್ಲದೆ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಪತ್ರಕರ್ತರು ಹಾಗೂ ಶಿಕ್ಷಕರ ಭವನ ನಿರ್ಮಾಣಕ್ಕೆ ನಿಗಧಿಯಾಗಿರುವ ಸ್ಥಳವನ್ನು ಪರಿಶೀಲಿಸಿದರು. ಕೂಡಲೇ ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ತಯಾರು ಮಾಡಿಕೊಂಡು ಆದಷ್ಟು ಬೇಗ ಇವರಿಗೆ ನಿವೇಶನ ನೀಡಲು ಕ್ರಮ ವಹಿಸಿ ಎಂದು ಸಲಹೆ ನೀಡಿದರು.
ಆದಾಯ ಬರುವಂತೆ ಮಾಡಿಕೊಳ್ಳಿ: ಪಪಂಗೆ ಬರುವ ಆದಾಯ ವೃದ್ಧಿಸಿಕೊಳ್ಳಲು ವಸೂಲಾತಿ ಆಂದೋಲನ ಮಾಡಿ, ಹೆಚ್ಚು ಈ ಸ್ವೀಕೃತಿಗಳನ್ನು ಮಾಡಿ, ಮನೆಮನೆಗಳಿಗೆ ತೆರಳಿ ಮನೆ, ನೀರು, ಖಾಲಿ ನಿವೇಶನಗಳ ಕಂದಾಯವನ್ನು ವಸೂಲಾತಿ ಮಾಡಿ ಎಂದು ಸಲಹೆ ನೀಡಿದರು.
ಅಲ್ಲದೆ, ನಗರತ್ಥಾನದ ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಬೇಕೆಂದರು. ಖುದ್ದು ನಡೆದಿರುವ ಕಾಮಗಾರಿಗಳ ಅಳತೆ ಹಾಗೂ ಗುಣಮಟ್ಟವನ್ನು ಪರಿಶೀಲಿಸಿದರು.
ಕಾರಾಪುರ ವಿರಕ್ತ ಮಠದ ಒಂದು ಕಿ.ಮಿ. ರಸ್ತೆಯಲ್ಲಿ ನಡೆದುಕೊಂಡೇ ಕಾಮಗಾರಿಯನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ನಂತರ ಪಟ್ಟಣ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಇಲ್ಲಿನ ಕಂಪ್ಯೂಟರ್ ರೂಂ, ಲೈಬ್ರರಿಯನ್ನು ಪರಿಶೀಲಿಸಿದರು.
ಕಟ್ಟಡಕ್ಕೆ ದಾನಿಗಳು ನೀಡಿರುವ ನಿವೇಶನದ ಬಗ್ಗೆ ಮಾಹಿತಿ ಪಡೆದುಕೊಂಡು ಎಲ್ಲಾ ದಾಖಲೆಗಳನ್ನು ಕಚೇರಿಗೆ ತರುವಂತೆ ಪ್ರಾಂಶುಪಾಲ ವಿಜಯರವರಿಗೆ ಮಾಹಿತಿ ನೀಡಿದರು.
ಪಿಡಿ ಸುಧಾ, ಎಇಇ ನಟರಾಜು, ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಜೆಇ ನಾಗೇಂದ್ರ, ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಬಿ. ರವಿ, ಮುಖಂಡರಾದ ಲಿಂಗರಾಜು, ಮಲ್ಲು, ರಾಜಶೇಖರ್ ಸೇರಿದಂತೆ ಅನೇಕರು ಇದ್ದರು.
ಬಸ್ ನಿಲ್ದಾಣ ಕಟ್ಟಡ ತೆರವಿಗೆ ಕ್ರಮ: ಬಸ್ ನಿಲ್ದಾಣದಲ್ಲಿ ರಸ್ತೆ ಅಗಲೀಕರಣದ ವೇಳೆ ಒಂದೇ ಒಂದು ಕಟ್ಟಡವನ್ನು ಮಾತ್ರ ಹಾಗೇ ಬಿಡಲಾಗಿದೆ. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಅನೇಕ ಅಪಘಾತ ಗಳೂ ಸಂಭವಿಸಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದರು. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಕೂಡಲೇ ಇಲ್ಲಿಗೆ ರಾತ್ರಿ ವೇಳೆಯಲ್ಲಿ ಡಿವೈಡರ್‌ಗೆ ಸೂಚನಾ ಫಲಕ, ರಿಫ್ಲೇಕ್ಷನ್ ಲೈಟ್ ಅಳವಡಿಸಿ ಎಂದು ಮುಖ್ಯಾಧಿಕಾರಿಗೆ ಡೀಸಿ ಸೂಚನೆ ನೀಡಿ ದರು. ಅಲ್ಲದೆ ಈ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.
ಚರಂಡಿ ಕಾಮಗಾರಿ ಬಗ್ಗೆ ದೂರು: ನಗರೋತ್ಥಾನ ಯೋಜನೆಯಡಿಯಲ್ಲಿ ನಡೆದಿರುವ ಚರಂಡಿ ಕಾಮಗಾರಿಯಲ್ಲಿ ಪಟ್ಟಣ ಗೌತಮ್ ಬಡಾವಣೆ ಬಳಿ ಹಳೇ ಚರಂಡಿಯ ಮೇಲೆ ಇದನ್ನು ತೆರವುಗೊಳಿಸದೆ ಹೊಸದಾಗಿ ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಕೆಲ ಸಾರ್ವಜನಿಕರು ದೂರಿದರು. ಇದಕ್ಕೆ ಸಂಬಂಧಪಟ್ಟ ಎಇಇ ಹಾಗೂ ಪಿಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪನಾಗ್ ಸೂಚನೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.