ಮಲೆ ಮಹದೇಶ್ವರ ಬೆಟ್ಟದ ಬೆಳ್ಳಿ ರಥ ನಿರ್ಮಾಣಕ್ಕೆ 450 ಕೆಜಿ ಶುದ್ಧ ಬೆಳ್ಳಿ ಅಗತ್ಯ
Team Udayavani, Dec 3, 2020, 2:26 PM IST
ಹನೂರು(ಚಾಮರಾಜನಗರ): ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿಯ ರಥವನ್ನು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ರಥ ನಿರ್ಮಾಣಕ್ಕಾಗಿ 450ಕೆ.ಜಿ ಶುದ್ಧ ಬೆಳ್ಳಿಯ ಅವಶ್ಯಕತೆಯಿದ್ದು ದಾನಿಗಳು ನಗದು ಅಥವಾ ಬೆಳ್ಳಿ ರೂಪದಲ್ಲಿ ಕಾಣಿಕೆ ಸಲ್ಲಿಸಬಹುದು ಎಂದು ಕಾರ್ಯದರ್ಶಿ ಜಯವಿಭವಸ್ವಾಮಿ ಮನವಿ ಮಾಡಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಾಮಿ ಬೆಳ್ಳಿಯ ರಥ ನಿರ್ಮಾಣ ಸಂಬಂಧ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆಯನ್ನೂ ನೀಡಲಾಗಿದೆ. ಈ ರಥ ನಿರ್ಮಾಣ ಕಾರ್ಯಕ್ಕೆ ದಾನ ಮಾಡಲು ಇಚ್ಛಿಸುವ ಭಕ್ತಾದಿಗಳು ಶುದ್ಧ ಬೆಳ್ಳಿ ಗಟ್ಟಿಯನ್ನು ದೇವಾಲಯದ ಪಾರುಪತ್ತೆದಾರರಿಗೆ ನೀಡಿ ರಶೀದಿ ಪಡೆಯಬಹುದು, ಭಕ್ತಾದಿಗಳ ಬಳಿ ಅನುಪಯುಕ್ತ ಬೆಳ್ಳಿ ಪದಾರ್ಥಗಳು ಇದ್ದಲ್ಲಿ ಅದನ್ನೂ ಕೂಡ ನೀಡಿ ರಶೀದಿ ಪಡೆಯಬಹುದು. ನಗದು ರೂಪದಲ್ಲಿ ಕಾಣಿಕೆ ಸಲ್ಲಿಸಲು ಇಚ್ಛಿಸುವ ಭಕ್ತಾದಿಗಳು www.mmhillstemple.com ಜಾಲತಾಣಕ್ಕೆ ಲಾಗಿನ್ ಆಗಿ ಆನ್‍ಲೈನ್‍ನಲ್ಲಿ ಹಣ ಪಾವತಿಸಿ ರಶೀದಿ ಪಡೆಯಬಹುದಾಗಿದ್ದು ಡಿ.31 ಒಳಗಾಗಿ ದಾನ ನೀಡಬೇಕು ಎಂದು ತಿಳಿಸಿದ್ದಾರೆ.
ಬೇರೆ ಎಲ್ಲಿಯೂ ನೀಡಬೇಡಿ: ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಬೆಳ್ಳಿರಥ ನಿರ್ಮಾಣಕ್ಕೆ ದಾನ ಪಡೆಯಲು ಯಾರೊಬ್ಬರನ್ನೂ ನೇಮಕ ಮಾಡಿಲ್ಲ. ದಾನಿಗಳು ದೇವಾಲಯದಲ್ಲಿ ಪಾರುಪತ್ತೆದಾರರ ಬಳಿ ಕಾಣಿಕೆ ನೀಡಿ ರಶಿದಿ ಪಡೆಯಬೇಕು. ಬೆಳ್ಳಿ ರಥ ನಿರ್ಮಾಣಕ್ಕೆ ಬೇರೆ ಊರುಗಳಲ್ಲಾಗಲಿ, ಮಹದೇಶ್ವರ ಬೆಟ್ಟದಲ್ಲಾಗಲಿ ಯಾರನ್ನೂ ನೇಮಕ ಮಾಡಿಲ್ಲ, ಒಂದೊಮ್ಮೆ ಯಾರಾದರೂ ಬೆಳ್ಳಿ ರಥ ನಿರ್ಮಾಣಕ್ಕೆ ದಾನ ಕೇಳಿದಲ್ಲಿ ಯಾರೂ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಮಜೂರಿ ಹಣದ ಕಾಣಿಕೆ ನೀಡಲು ಮುಂದಾದ ಭಕ್ತರು: ಬೆಳ್ಳಿ ರಥ ನಿರ್ಮಾಣದ ಕೆಲಸಕ್ಕೆ 22 ಲಕ್ಷದಿಂದ 24 ಲಕ್ಷರೂ ಮಜೂರಿ ಖರ್ಚಾಗುವ ಅಂದಾಜಿಸಲಾಗಿದೆ. ಈ ಹಣವನ್ನು ಪಾವತಿಸಲು ಇಬ್ಬರು ಭಕ್ತಾದಿಗಳು ಮುಂದಾಗಿದ್ದು ನೆರೆಯ ತಮಿಳುನಾಡು ರಾಜ್ಯದ ಮೋಹನರಾಮ್ ಅರ್ಧ ಭಾಗ ನೀಡಲಿದ್ದಾರೆ. ಇನ್ನುಳಿದ ಅರ್ಧ ಹಣವನ್ನು ಬೆಂಗಳೂರಿನ ರಾಜಾಜಿನಗರದ ಎಚ್.ಎಸ್.ಸೋಮಶೇಖರ್ ಮತ್ತು ಸುಜಾತ ಸೋಮಶೇಖರ್ ಕುಟುಂಬವರ್ಗದವರು ನೀಡಲಿದ್ದಾರೆ.
ಮಾಜಿ ಮುಖ್ಯಮಂತ್ರಿಗಳೂ ನೀಡಲಿದ್ದಾರೆ ಬೆಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ವೇಳೆ 2016ರ ಸೆ.26ರಂದು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಸಿದ್ಧರಾಮಯ್ಯನವರು ಪ್ರಾಧಿಕಾರದ ಸಭೆ ನಡೆಸಿ ಬೆಳ್ಳಿ ರಥ ನಿರ್ಮಾಣ ಪ್ರಸ್ತಾಪವಾದಾಗ ತಾವು ಮುಖ್ಯಮಂತ್ರಿಯಾದ ಬಳಿಕ ಬೆಳ್ಳಿಯ ಕಿರೀಟ, ಖಡ್ಗ, ವಿಗ್ರಹಗಳ ರೂಪದಲ್ಲಿ ಹಲವಾರು ಬೆಳ್ಳಿಯ ಪದಾರ್ಥಗಳು ಬಂದಿದ್ದು ಆ ಪದಾರ್ಥಗಳನ್ನು ದೇವಾಲಯಕ್ಕೆ ಕಾಣಿಕೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದರು.
25 ಕೆಜಿ ಬೆಳ್ಳಿ ದಾನ: ಬೆಂಗಳೂರಿನ ಲಕ್ಷ್ಮಿಪತಿ ಎಂಬುವ ಭಕ್ತಾದಿಗಳು ಡಿ.2ರಂದು ಶ್ರೀ ಕ್ಷೇತ್ರಕ್ಕೆ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದ ವೇಳೆ ಬೆಳ್ಳಿರಥ ನಿರ್ಮಾಣಕ್ಕಾಗಿ 25 ಕೆ.ಜಿ ಶುದ್ಧ ಬೆಳ್ಳಿಗಟ್ಟಿಯನ್ನು ಕಾಣಿಕೆಯನ್ನಾಗಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.