ಅಕ್ರಮ ಗಣಿ ತಡೆಗೆ ರೈತಸಂಘದಿಂದ ಬಾರುಕೋಲು ಚಳವಳಿ
Team Udayavani, Jan 19, 2020, 3:00 AM IST
ಚಾಮರಾಜನಗರ: ಜಿಲ್ಲೆಯಲ್ಲಿ ಅಕ್ರಮವಾಗಿ ಕರಿಕಲ್ಲು, ಬಿಳಿ ಕಲ್ಲು ಗಣಿಗಾರಿಕೆ, ನಡೆಯುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆಗಳು ವಿಫಲವಾಗಿವೆ ಎಂದು ಆರೋಪಿಸಿ ಜಿಲ್ಲಾ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಶನಿವಾರ ಬಾರುಕೋಲು ಚಳವಳಿ ನಡೆಸಿದರು.
ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತ ಸಂಘದ ಮುಖಂಡರು, ಕಾರ್ಯಕರ್ತರು, ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ ಹಾದು ಡೀವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತ ತಲುಪಿದರು. ಬಳಿಕ, ಅಲ್ಲಿ ಕೆಲ ಸಮಯ ಮಾನವ ಸರಪಳಿ ರಚಿಸಿದರು.
ಈ ವೇಳೆ ರಸ್ತೆ ಸಂಚಾರ ತಡೆ ನಡೆಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಶ್ಚಿಮ ಘಟ್ಟಗಳ ಕೊಂಡಿಯಾಗಿರುವ ಜಿಲ್ಲೆಯ ಅರಣ್ಯ ಪ್ರದೇಶದಂಚಿನಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟ ನಡೆಸಿ ಅರಣ್ಯ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದರು.
ಜಿಲ್ಲೆಯಲ್ಲಿ ಬಿಳಿ, ಕಪ್ಪು ಕಲ್ಲು ಕ್ವಾರಿ, ಜಲ್ಲಿ ಕ್ರಷರ್‌ಗಳ ಹಾವಳಿ ಮಿತಿ ಮೀರಿದೆ. ಇವುಗಳ ಸುತ್ತಲಿನ ಗ್ರಾಮಗಳ ರಸ್ತೆಗಳು ಮಿತಿಮಿರಿ ಭಾರಹೊತ್ತು ಸಾಗುವ ಲಾರಿಗಳಿಂದ ಹಾಳಾಗಿವೆ ಎಂದು ಆರೋಪಿಸಿದರು. ಹೆಗ್ಗೊಠಾರ, ಬಿಸಲವಾಡಿ, ಮುಕ್ಕಡಹಳ್ಳಿ, ಮಲೆಯೂರು ಬಳಿಯ ರಾಗಿಕಲ್ಲು ಗುಡ್ಡ, ಬಿಳಿಗಿರಿರಂಗನಬೆಟ್ಟದ ತಪ್ಪಲು, ಗುಂಬಳ್ಳಿ, ಯರಗಂಬಳ್ಳಿ, ಮಡಹಳ್ಳಿ , ಹಿರೀಕಾಟಿ, ವಡ್ಗಲಪುರಗಳ ಸುತ್ತಮುತ್ತ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಗ್ರಾಮಗಳ ಜನ ವಾಸ ಮಾಡಲು ತೊಂದರೆಯಾಗಿದೆ. ಆದರೂ ಜಿಲ್ಲಾಡಳಿತ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.
ಪರಿಸರ ಸೂಕ್ಷ್ಮ ವಲಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮುಚ್ಚಿಸದೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡಿದೆ. ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡ ಹಾಕುವ ಪೊಲೀಸರು, ಹೆಚ್ಚು ಭಾರದ ಕಲ್ಲು ಸಾಗಣೆ ಮಾಡುವ ಲಾರಿಗಳನ್ನು ಮಾತ್ರ ತಡೆಯುತ್ತಿಲ್ಲ. ಸರ್ಕಾರಕ್ಕೆ ರಾಯಧನವೂ ಸಿಗುತ್ತಿಲ್ಲ ಎಂದು ಆರೋಪಿಸಿದರು. 8 ರಿಂದ 12 ಟನ್ ಭಾರ ಮಿತಿ ಗ್ರಾಮೀಣ ರಸ್ತೆಗಳ ಮೇಲೆ ಲಾರಿಗಳು ಸುಮಾರು 35 ರಿಂದ 50 ಟನ್ ಭಾರದ ಕಲ್ಲು ಸಾಗಣೆ ಮಾಡುತ್ತಿದ್ದು ರಸ್ತೆಗಳು ಹಾಳಾಗಿವೆ. ಗಣಿಗಾರಿಕೆ ಘಟಕಗಳು ತ್ಯಾಜ್ಯ ನೀರನ್ನು ಕೆರೆಗೆ ಬಿಡುತ್ತಿವೆ ಎಂದು ಆರೋಪಿಸಿದರು.
ಗಣಿಗಾರಿಕೆ ನಡೆಸಲು ಭೂಮಿ ಗುತ್ತಿಗೆ ಪಡೆದಿರುವವರು ಸುತ್ತಲಿನ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಟೀಕಿಸಿದರು. ರೈತರ ಫಲವತ್ತಾದ ಭೂಮಿಗಳಿಗೆ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ನಿಂದ ಸಂಚಕಾರ ಬಂದಿದೆ. ಈ ಕೂಡಲೇ ಜಿಲ್ಲಾಡಳಿತ ಈ ಕುರಿತು ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಖಜಾಂಚಿ ಅಂಬಳೆ ಶಿವಕುಮಾರ್, ಹಸಿರು ಸೇನೆ ಜಿಲ್ಲಾ ಸಂಚಾಲಕ ಹಾಲಹಳ್ಳಿ ಮಹೇಶ್, ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ನಂಜನಗೂಡು ತಾ. ಅಧ್ಯಕ್ಷ ಶ್ರೀಕಂಠಮೂರ್ತಿ, ಹೆಗ್ಗೊಠಾರ ವಿಜಿ, ಕುಂದಕೆರೆ ಸಂಪುತ್ತು, ಕಡಬೂರು ಮಂಜು, ಪುಟ್ಟರಾಜು, ಮಾದಪ್ಪ ಸೇರಿ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.