ರಾಜ್ಯಕ್ಕೆ ನರೇಂದ್ರ ಮೋದಿ ಕೊಡುಗೆ ಶೂನ್ಯ
Team Udayavani, Apr 17, 2019, 3:00 AM IST
ಕೊಳ್ಳೇಗಾಲ: ಪ್ರಧಾನಿ ನರೇಂದ್ರ ಮೋದಿ 5 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ ಆದರೆ ಅವರಿಗೆ ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡಲಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ನಗರದ ಸರ್ಕಾರಿ ನ್ಯಾಷನಲ್ ಶಾಲಾ ಮೈದಾನದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಸಂಸದ ಆರ್.ಧ್ರುವನಾರಾಯಣ ಪರ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಂಗಳವಾರ ಆರೋಪ ಮಾಡಿದರು.
ಫಲಿತಾಂಶ ಕಾಯುತ್ತಿರುವ ಜಗತ್ತು: ಮೋದಿಯವರು ಏಕಪಕ್ಷೀಯ ಆಡಳಿತ ನಡೆಸಿ ಸಂವಿಧಾನ ಬದಲಾವಣೆಯ ಮುಂಚೂಣಿಯಲ್ಲಿರುವ ಅವರಿಗೆ ಈ ದೇಶದ ಜನ ಮತ್ತೆ ಮತ ನೀಡಬೇಕೆ ಎಂಬುದನ್ನು ಪ್ರತಿಯೊಬ್ಬರು ಚಿಂತಿಸಬೇಕಾದ ಅವಶ್ಯಕತೆ ಇದೆ. ದೇಶದ ನೂರು ಕೋಟಿ ಜನರು ಮೋದಿಯನ್ನು ತಿರಸ್ಕಾರ ಮಾಡುತ್ತಾರೆಯೇ ಎಂದು ಇಡೀ ಜಗತ್ತು ಫಲಿತಾಂಶವನ್ನು ಕಾಯುತ್ತಿದೆ ಎಂದರು.
ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿ: ಡಾ.ಬಿ.ಆರ್.ಅಂಬೇಡ್ಕರ್ ಭಾರತೀಯರಿಗೆ ನೀಡಿರುವ ಸಂವಿಧಾನವೇ ಬೈಬಲ್, ಕುರಾನ್, ಭಗವತ್ ಗೀತೆ ಧರ್ಮಗ್ರಂಥವಾಗಿದ್ದು, ಇದರ ಬದಲಾವಣೆ ಸಾಧ್ಯವೆ ಎಂಬುದನ್ನು ಬಿಜೆಪಿಯ ಮುಖಂಡರು ಚಿಂತಿಸಬೇಕು. ಅನಂತ್ ಕುಮಾರ್ ಹೆಗಡೆಯಂತಹ ಸಚಿವರು ಹೇಳಿಕೆ ನೀಡಿದಾಗಲೇ ಅವನ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕಾಗಿತ್ತು.
ಆದರೆ ಬಿಜೆಪಿಯವರು ವಿವಾದಿತನಿಗೆ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಹಾಗೂ ತೇಜಸ್ವಿ ಸೂರ್ಯ ಅಂಬೇಡ್ಕರ್ ಪ್ರತಿಮೆ ಬೀಳಸಬೇಕು. ಸಂವಿಧಾನವನ್ನು ಸುಡಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡುವ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದರು.
ಈಶ್ವರಪ್ಪಗೆ ಮಾತನಾಡುವ ನೈತಿಕತೆ ಇಲ್ಲ: ಸಂವಿಧಾನ ಉಳಿಸುವುದು ಮತ್ತು ನಾಶ ಮಾಡುವುದು ಹೋರಾಟದ ನಡುವೆ ಲೋಕಸಭಾ ಚುನಾವಣೆ ಬಂದಿದೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ಸಲುವಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಮತ್ತು ಇನ್ನಿತರ ಸಮಾಜದವರಿಗೆ ಟಿಕೆಟ್ ನೀಡಿಲ್ಲ. ಆದರೆ ಕಾಂಗ್ರೆಸ್ 10 ಸಮುದಾಯಗಳಿಗೆ ಟಿಕೆಟ್ ನೀಡಿದೆ. ಕುರುಬ ಸಮಾಜಕ್ಕೂ ಟಿಕೆಟ್ ಕೊಡಿಸುವಲ್ಲಿ ವಿಫಲನಾಗಿರುವ ಕೆ.ಎಸ್. ಈಶ್ವರಪ್ಪ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆಂದು ವಾಗ್ಗಾಳಿ ನಡೆಸಿದರು.
ಸಾಲಮನ್ನಾ ಮಾಡದ ಮೋದಿ: ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ವಿರೋಧ ಪಕ್ಷದವರು ಸೇರಿದಂತೆ ಹಲವಾರು ಮುಖಂಡರೊಂದಿಗೆ ರೈತರ ಸಾಲಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಬಳಿ ನಿಯೋಗ ತೆರಳಿತ್ತು. ಆದರೆ ಹಲವಾರು ಬಾರಿ ಮನವಿ ಮಾಡಿದರೂ ಸಹ ರೈತರ ಸಾಲ ಮನ್ನಾ ಮಾಡಲು ಪ್ರಧಾನಿ ನಿರಾಕರಿಸಿದರು.
ಇದರಿಂದ ಬೇಸತ್ತು ರಾಜ್ಯ ಸಂಪುಟ ಸಭೆ ಸೇರಿ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿದ್ದ 50 ಸಾವಿರ ಸಾಲಮನ್ನಾ ಮಾಡಿದೆ. ನಂತರ ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ರೈತರ 2 ಲಕ್ಷದವರಿಗೆ ಸುಮಾರು 45 ಸಾವಿರ ಕೋಟಿ ಸಾಲಮನ್ನಾ ಮಾಡಿದರು. ಈಗಾಲಾದರೂ ರೈತರು ಎಚ್ಚೆತ್ತು ರೈತರ ಇರುವ ಪಕ್ಷಕ್ಕೆ ಮತ ನೀಡಬೇಕೆಂದು ಮನವಿ ಮಾಡಿದರು.
ಸರ್ಜಿಕಲ್ ಸ್ಟ್ರೈಕ್: ಮೋದಿಯವರು ಬಡವರ ಪರ ಕಾರ್ಯಕ್ರಮಗಳನ್ನು ರೂಪಿಸದೆ ಗಡಿಯಲ್ಲಿ ಯೋಧರು ಹೋರಾಟ ಮಾಡಿದ್ದನ್ನು ನಾನೇ ಮಾಡಿದ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿಕೊಂಡು ಬೀಗುತ್ತಿದ್ಧಾರೆ ಎಂದು ಆರೋಪಿಸಿದ ಸಿದ್ದು, ಮೋದಿ ಗನ್ ಹಿಡಿದು ದಾಳಿಗೆ ಹೋಗಿದ್ದರೆ ಎಂದು ಪ್ರಶ್ನಿಸಿದ ಅವರು ಸೈನಿಕರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕೆ ಹೊರತು ನಾನೇ ಮಾಡಿದ ದಾಳಿ ಎಂದು ಹೇಳಿಕೊಂಡು ಯುವಕರ ಮನಸ್ಸನ್ನು ಕೆಡಿಸುತ್ತಿದ್ದಾರೆ.
ಇಂತಹ ಸರ್ಜಿಕಲ್ ಸ್ಟ್ರೈಕ್‌ನ್ನು ಕಾಂಗ್ರೆಸ್ 1971ರಲ್ಲೇ ಸುಮಾರು 12 ಬಾರಿ ಸರ್ಜಿಕಲ್‌ಸ್ಟ್ರೈಕ್ ಮಾಡಿ 4 ಯುದ್ಧಗಳನ್ನು ಮಾಡಿದೆ. ಬಿಜೆಪಿಗಿಂತ ಕಾಂಗ್ರೆಸ್ ಕಮ್ಮಿ ಇಲ್ಲ ಎನ್ನುವುದನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸಂಸದ ಆರ್.ಧ್ರುವನಾರಾಯಣ ಉತ್ತಮ ಕೆಲಸಗಾರರಾಗಿದ್ದು, ಏ.18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿ 3ನೇ ಅವಧಿಗೆ ಗೆಲುವು ತಂದು ಕೊಡಬೇಕೆಂದು ಮನವಿ ಮಾಡಿದರು.
ಧ್ರುವ ಕಾಯಂ ಸದಸ್ಯ: ಮಾಜಿ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂಸದ ಆರ್.ಧ್ರುವನಾರಾಯಣ ಉತ್ತಮ ಸೇವೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು, ಅವರಿಗೆ ರಿನಿವಲ್ ಬೇಕಾಗಿಲ್ಲ. 20 ವರ್ಷಗಳ ಅವಧಿಗೆ ವರೆಗೆ ಕಾಯಂ ಲೋಕಸಭಾ ಸದಸ್ಯರಾಗಿ ಇರುತ್ತಾರೆ ಎಂದು ಭವಿಷ್ಯ ನುಡಿದರು.
ಪ್ರಸಾದ್ ಏಕೆ ಸುಮ್ಮನಿದ್ದರು: ಸಮಾನತೆಗಾಗಿ ಚುನಾವಣೆ ಬಂದಿದೆ. ಅದು ಎಲ್ಲಾ ಸಮಾಜಕ್ಕೆ ಧಕ್ಕುವಂತೆ ಇರಬೇಕೆ ಹೊರತು ಏಕ ವ್ಯಕ್ತಿಯಲ್ಲಿ ಕೇಂದ್ರೀಕೃತವಾಗಬಾರದು. ಸಂವಿಧಾನದ ಆಶಯಕ್ಕೆ ಆಡಚಣೆಯಾಗದೆ ಭಾರತವನ್ನು ಸಂವೃದ್ಧವನ್ನಾಗಿ ಮಾಡಲು ಕಾಂಗ್ರೆಸ್‌ಗೆ ಮತ ನೀಡಬೇಕು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಸಂವಿಧಾನ ಬದಲಾವಣೆ ಮಾತುಗಳು ಬಂದಾಗ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಹೋರಾಟ ಮಾಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಹ್ಯಾಟ್ರಿಕ್ ಗೆಲುವು ಕೊಡಿ: ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಏ.18 ರಂದು ನಡೆಯುವ ಚುನಾವಣೆ ಮಹತ್ವದ ಚುನಾವಣೆಯಾಗಿದ್ದು, ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮತ್ತು ವೈಖರಿಯನ್ನು ಅರಿತು ಕಾಂಗ್ರೆಸ್‌ಗೆ ಮತ ನೀಡಿ ಅಭ್ಯರ್ಥಿ ಆರ್. ಧ್ರುವನಾರಾಯಣರವರಿಗೆ ಹ್ಯಾಟ್ರಿಕ್ ಗೆಲುವು ತಂದುಕೊಡಬೇಕೆಂದರು.
ಕಾಂಗ್ರೆಸ್ ಸೇರ್ಪಡೆ: ಚಾಮುಲ್ ನಿರ್ದೇಶಕ ಬಸವರಾಜು ಮತ್ತು ನಾಗರತ್ನ ರವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಬಿಎಸ್ಪಿ ಮುಖಂಡರಾದ ಶಾಂತರಾಜು, ಸಿದ್ದರಾಜು, ಕರಾಟೆ ಕುಮಾರ್ ಬಿಎಸ್ಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಜಿಪಂ ಅಧ್ಯಕ್ಷೆ ಶಿವಮ್ಮ, ಯೋಗೀಶ್, ಕೆಪಿಸಿಸಿ ಸದಸ್ಯ ವಾಸಂತಿ ಶಿವಣ್ಣ, ತಾಪಂ ಅಧ್ಯಕ್ಷ ರಾಜೇಂದ್ರ, ಜೆಡಿಎಸ್ ಮುಖಂಡರಾದ ಶಿವಮಲ್ಲು, ಚಾಮರಾಜು, ಸೆಸ್ಕ್ ಮಾಜಿ ನಿರ್ದೇಶಕ ಡಿ.ಸಿದ್ದರಾಜು ಇತರರು ಇದ್ದರು.
ಧ್ರುವಗೆ ಮತ ನೀಡಿ: ಬಿಜೆಪಿಯವರು ಸಂವಿಧಾನದ ಬಗ್ಗೆ ಮಾತನಾಡುತ್ತಿರುವ ಪಕ್ಷದಲ್ಲಿರುವ ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಇಂತಹ ಹೇಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಬೇಕು. ಮೌನಂ ಸಮ್ಮತಿ ಲಕ್ಷಣಂ ಎನ್ನುವ ರೀತಿಯಲ್ಲಿ ಸಂವಿಧಾನ ಬದಲಾವಣೆ ಮಾಡುವ ಮುನ್ಸೂಚನೆ ನೀಡಿರುವ ಬಿಜೆಪಿ ಮುಖಂಡರು ಇಂತಹವರಿಗೆ ಮತ ನೀಡಬೇಕೆ? ಇದನ್ನು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಬಡವರು ಚಿಂತಿಸಿ ರಾಜಕೀಯ ಶಕ್ತಿ ನೀಡುವ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.