ಬಿಜೆಪಿ, ಕಾಂಗ್ರೆಸ್ ಒಂದೊಂದು, ಇನ್ನೊಂದು ಅತಂತ್ರ
ಗುಂಡ್ಲುಪೇಟೆ ಪುರಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ | ಒಟ್ಟು 23 ಸ್ಥಾನಗಳ ಪೈಕಿ ಬಿಜೆಪಿಗೆ 13 ಸ್ಥಾನ
Team Udayavani, Jun 1, 2019, 9:37 AM IST
ಚಾಮರಾಜನಗರ: ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾರರು ವಿಭಿನ್ನ ತೀರ್ಪು ನೀಡಿದ್ದಾರೆ. ಗುಂಡ್ಲುಪೇಟೆ ಪುರಸಭೆಯಲ್ಲಿ ಬಿಜೆಪಿ, ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ, ಹನೂರು ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಫಲಿತಾಂಶ ದೊರೆತಿದೆ.
ಮೊದಲ ಸಲ ಅಧಿಕಾರಿ: ಇದೇ ಮೊದಲ ಬಾರಿಗೆ ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಇಲ್ಲಿ ಮಹದೇವಪ್ರಸಾದ್ ಅವರ ನಿಧನಾನಂತರ ಪಕ್ಷ ಶಾಸಕ ಸ್ಥಾನ ಕಳೆದುಕೊಂಡಿದ್ದು, ಇದೀಗ ಪುರಸಭೆಯೂ ಬಿಜೆಪಿ ತೆಕ್ಕೆಗೆ ಜಾರಿದೆ. ಒಟ್ಟು 23 ಸ್ಥಾನಗಳ ಪೈಕಿ ಬಿಜೆಪಿ 13 ಸ್ಥಾನಗಳನ್ನು, ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದಿವೆ.
ಓರ್ವ ಪಕ್ಷೇತರ ಅಭ್ಯರ್ಥಿ ಜಯ: ಚಾಮರಾಜನಗರ ನಗರಸಭೆಯಲ್ಲಿ ಆರು ಸ್ಥಾನಗಳನ್ನು ಗಳಿಸಿರುವ ಎಸ್‌ಡಿಪಿಐ ಗುಂಡ್ಲುಪೇಟೆಯಲ್ಲಿ ಒಂದು ಸ್ಥಾನ ಗೆಲ್ಲುವ ಮೂಲಕ ತನ್ನ ಖಾತೆ ತೆರೆದಿದೆ. ಎಸ್‌ಡಿಪಿಐ ಎರಡು ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ ಒಂದನ್ನು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯ ತೋರಿದೆ. ಓರ್ವ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದ ಬಿಜೆಪಿ, ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗೆ 15 ಸಾವಿರ ಮತಗಳ ಲೀಡ್ ನೀಡಿತ್ತು. ಈಗ ಪುರಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಶಾಸಕ ನಿರಂಜನಕುಮಾರ್ ಅವರ ಆಡಳಿತವನ್ನು ಮತದಾರರು ಪುಷ್ಠೀಕರಿಸಿದ್ದಾರೆ.
ಯಳಂದೂರು ಕೈ ಜಯಭೇರಿ: ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಒಟ್ಟು 11 ಸ್ಥಾನಗಳಿರುವ ಇಲ್ಲಿ ಕಾಂಗ್ರೆಸ್ 10 ಸ್ಥಾನಗಳನ್ನು ಸಾರಾಸಗಟಾಗಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ತನ್ನ ಹಿಡಿತ ಇನ್ನೂ ಇದೆ ಎಂಬುದನ್ನು ತೋರಿಸಿದೆ. ಇನ್ನೊಂದು ಸ್ಥಾನವನ್ನು ಬಿಜೆಪಿ ಗೆದ್ದಿದೆ. ವಿಪರ್ಯಾಸವೆಂದರೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿ ಶಾಸಕರಿದ್ದು, ಅವರ ವ್ಯಾಪ್ತಿಯ ಯಳಂದೂರು ಪಪಂ ಚುನಾವಣೆಯಲ್ಲಿ ಬಿಎಸ್‌ಪಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಬಿಎಸ್‌ಪಿಗೆ ಲೀಡ್ ದೊರೆತಿಲ್ಲ.
ಹನೂರು ಅತಂತ್ರ: ಇನ್ನು ಹನೂರು ಪಟ್ಟಣ ಪಂಚಾಯಿತಿಯ ಮತದಾರರು ಅತಂತ್ರ ತೀರ್ಪು ನೀಡಿದ್ದಾರೆ. ಒಟ್ಟು 13 ಸ್ಥಾನಗಳಿರುವ ಇಲ್ಲಿ, ಜೆಡಿಎಸ್ 6, ಕಾಂಗ್ರೆಸ್ 4 ಹಾಗೂ ಬಿಜೆಪಿ 3 ಸ್ಥಾನಗಳಲ್ಲಿ ಜಯಗಳಿಸಿವೆ.
ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರು ಹನೂರು ಪಟ್ಟಣ ಪಂಚಾಯಿತಿಯ 12 ಮತ್ತು 13ನೇ ವಾರ್ಡುಗಳಲ್ಲಿ ಸತತ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹನೂರು ಪಟ್ಟಣದ 12 ಮತ್ತು 13ನೇ ವಾರ್ಡುಗಳಲ್ಲಿ ಸಚಿವರ ಸಮುದಾಯವಾದ ಉಪ್ಪಾರ ಮತಗಳೇ ಹೆಚ್ಚಿದ್ದು ಈ ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ! ಶಾಸಕ ನರೇಂದ್ರ ಪ್ರತಿನಿಧಿಸುವ ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಲೋಕಸಭಾ ಚುನಾವಣೆಯಲ್ಲೂ ಉಪ್ಪಾರ ಮತದಾರರಿರುವ ಚಾ.ನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಕ್ಷೇತ್ರಗಳ ಬಹುತೇಕ ಮತಗಟ್ಟೆಗಳಲ್ಲಿ ಬಿಜೆಪಿಗೆ ಮುನ್ನಡೆ ದೊರೆತಿದ್ದು, ಉಸ್ತುವಾರಿ ಸಚಿವರು ತಮ್ಮ ಸಮುದಾಯದ ಮತಗಳ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಹನೂರು ಪಪಂ ಫಲಿತಾಂಶ ಗಮನಿಸಿದರೆ ಈ ಮಾತುಗಳಿಗೆ ಇನ್ನಷ್ಟು ಬಲ ಬಂದಿದೆ ಎಂದೇ ಹೇಳಬಹುದಾಗಿದೆ. ಹನೂರು ಪಪಂನಲ್ಲಿ ಅಧಿಕಾರ ಹಿಡಿಯಲು ಮೂರೂ ಪಕ್ಷಗಳು ಪೈಪೋಟಿ ನಡೆಸಲಿವೆ.
● ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.