ಪ್ಲಾಸ್ಟಿಕ್‌ಗೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲ
Team Udayavani, Oct 16, 2019, 3:00 AM IST
ಹನೂರು: ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ದೇಶದಿಂದ ಹೊರದಬ್ಬಿ ಪರಿಸರದ ಮೇಲಿನ ದಾಳಿಯನ್ನು ತಡೆಗಟ್ಟು ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವು ಕಾಯ್ದೆಗಳನ್ನು ಜಾರಿಗೊಳಿಸಿದ್ದರೂ ಸಹ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ವಿಫಲರಾಗಿದ್ದಾರೆ. ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮವನ್ನು ಮನಗಂಡು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಿದ್ದರೂ ಸಹ ಪ್ಲಾಸ್ಟಿಕ್‌ನ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಸಹ ದಿನಸಿ ಅಂಗಡಿ, ತರಕಾರಿ ಅಂಗಡಿ, ಬೇಕರಿ, ಬಟ್ಟೆ ಅಂಗಡಿಗಳು, ಮಾಂಸದ ಅಂಗಡಿ, ಹಣ್ಣಿನ ಅಂಗಡಿಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿ ಸಾವಿರಾರು ನೀರಿನ ಲೋಟಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಂಡುಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸಾರ್ವಜನಿಕರ ಹೊಟ್ಟೆ ಸೇರುತ್ತಿದೆ: ಈ ಪ್ಲಾಸ್ಟಿಕ್ ಎನ್ನುವ ಮಾರಿ ಕೇವಲ ಬಳಕೆಗೆ ಮಾತ್ರವಲ್ಲದೆ ಗೊತ್ತಿಲ್ಲದಂತೆಯೇ ಸಾರ್ವಜನಿಕರ ಹೊಟ್ಟೆ ಸೇರುತ್ತಿದೆ. ಪಟ್ಟಣದ ಬಹುತೇಕ ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಅಲ್ಲದೆ ಸಾಂಬಾರ್‌ಗಳ ಪಾರ್ಸೆಲ್ ಗಾಗಿಯೂ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಬಹುತೇಕ ಅಂಗಡಿ ಬೇಕರಿಗಳಲ್ಲಿ ಟೀ, ಕಾಫಿಗಾಗಿ ಇನ್ನೂ ಸಹ ಪ್ಲಾಸ್ಟಿಕ್ ಲೋಟ ಬಳಸಲಾಗುತ್ತಿದೆ. ಅಲ್ಲದೆ ಅಂಗಡಿಯಿಂದ ಬೇರೆಡೆಗೆ ಟೀ, ಕಾಫಿ ಕೊಂಡೋಗಲೂ ಸಹ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಇದರ ದುಷ್ಪರಿಣಾಮದ ಬಗ್ಗೆ ಅರಿವಿಲ್ಲದ ಸಾರ್ವಜನಿಕರು ಅರಿವಿಲ್ಲದಂತೆಯೇ ಪ್ಲಾಸ್ಟಿಕ್‌ನಲ್ಲಿನ ವಿಷಕಾರಿ ಅಂಶವನ್ನು ತಮ್ಮ ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದಾರೆ.
ನಾನ್ ಓವನ್ ಬಳಕೆಯೂ ನಿಂತಿಲ್ಲ: ದೇಶದಲ್ಲಿ ಕೇವಲ ಪ್ಲಾಸ್ಟಿಕ್ ಬಳಕೆಗೆ ಮಾತ್ರ ನಿಷೇಧವೇರದೆ ನಾನ್ ಓವನ್ ಕವರ್‌ಗಳ ಬಳಕೆಗೂ ನಿಷೇಧವೇರಲಾಗಿದೆ. ಈ ನಾನ್ ಓವನ್ ಪ್ಲಾಸ್ಟಿಕ್‌ಗಿಂತಲೂ ವಿಷಕಾರಿಯಾಗಿದ್ದು ಇದರ ಬಗ್ಗೆ ಸಾರ್ವಜನಿಕರಿಗೆ ಅರಿವೇಯಿಲ್ಲ. ಈ ಬಗ್ಗೆ ಅಧಿಕಾರಿಗಳಿಗೂ ಸಹ ಮಾಹಿತಿ ಇಲ್ಲದೆ ನಾನ್ ಓವನ್ ಬಳಕೆದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ. ಪಟ್ಟಣದಲ್ಲಿ ಬಹುತೇಕ ಬಟ್ಟೆ ಅಂಗಡಿಗಳು, ಮೆಡಿಕಲ್ ಷಾಪ್‌ಳಲ್ಲಿ ನಾನ್ ಓವನ್ ಕವರ್‌ಗಳ ಬಳಕೆ ಮಾಡುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳು ಚಕಾರವೆತ್ತಿಲ್ಲ.
ಅಧಿಕಾರಿಗಳ ನಿರಾಸಕ್ತಿ: ಹನೂರು ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಿಲ್ಲ. ಕಳೆದ 3-4 ತಿಂಗಳುಗಳ ಹಿಂದೆ ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿ 230 ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದಿರುವುದೇ ದೊಡ್ಡ ಸಾಧನೆಯಾಗಿದೆ.
ಬಳಿಕ ಅ.2ರ ಬಳಿಕ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಹಿನ್ನೆಲೆ ಕೆಲ ಕರಪತ್ರಗಳನ್ನು ಮುದ್ರಿಸಿ ಅಂಗಡಿ ಮಳಿಗೆಯವರಿಗೆ ವಿತರಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈವರೆಗೂ ಯಾವುದಾದರೂ ಸಂಘ ಸಂಸ್ಥೆಯ ಜೊತೆ ಒಡಂಬಡಿಕೆ ಮಾಡಿಕೊಂಡು ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಒಮ್ಮೆಯಾದರೂ ಪ್ಲಾಸ್ಟಿಕ್ ಮಾರಾಟ ಮಾಡುವವರು ಅಥವಾ ಬಳಕೆ ಮಾಡುವವರಿಗೆ ದಂಡ ವಿಧಿಸಿರುವ ಉದಾಹರಣೆಗಳಿಲ್ಲ.
ಒಟ್ಟಾರೆ ನೂತನವಾಗಿ ಘೋಷಣೆಯಾಗಿರುವ ಹನೂರು ತಾಲೂಕಿನ ಕೇಂದ್ರಸ್ಥಾನದಲ್ಲಿಯೇ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇನ್ನು ತಾಲೂಕು ಕೇಂದ್ರಸ್ಥಾನದಲ್ಲಿಯೇ ಈ ಪರಿಸ್ಥಿತಿಯಾದರೆ ಗ್ರಾಪಂ ಕೇಂದ್ರ ಸ್ಥಾನಗಳು, ಕುಗ್ರಾಮಗಳಲ್ಲಿ ಪ್ಲಾಸ್ಟಿಕ್ ನಿಷೇಧವಿರುವುದೇ ಸಾರ್ವಜನಿಕರಿಗೆ ತಿಳಿಯದಂತಹ ಪರಿಸ್ಥಿತಿಯಿದೆ.
ಪ್ಲಾಸ್ಟಿಕ್ ನಿಷೇಧ ಕುರಿತು ಪಟ್ಟಣಾದ್ಯಂತ ಈಗಾಗಲೇ ಕರಪತ್ರಗಳನ್ನು ಹಂಚಿ ಅರಿವು ಮೂಡಿಸಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಬಳಕೆ ಮಾಡಿದಲ್ಲಿ ಮೊದಲ ಬಾರಿ 5 ಸಾವಿರ, 2ನೇ ಬಾರಿ 10 ಸಾವಿರ ದಂಡ ವಿಧಿಸುವುದಾಗಿಯೂ ತಿಳಿಸಲಾಗಿದೆ. ಈ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದ್ದು ಬೀದಿನಾಟಕ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ನಡೆಸಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮವಹಿಸಲಾಗುವುದು.
-ಮೂರ್ತಿ, ಮುಖ್ಯಾಧಿಕಾರಿ ಹನೂರು ಪಪಂ
ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಸಹ ಕೆಲ ಅಧಿಕಾರಿಗಳೇ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಕಂಡು ಕಾಣದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಕುರಿತು ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಮತ್ತು ಅಧಿಕಾರಿಗಳು ಮಾರಾಟಗಾರರು ಮತ್ತು ಬಳಕೆದಾರರಿಗೆ ದಂಡ ವಿಧಿಸಿದಲ್ಲಿ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಲಿದ್ದಾರೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾದಲ್ಲಿ ಸಾರ್ವಜನಿಕರಲ್ಲಿಯೂ ಕೂಡ ಅರಿವು ಮೂಡಿಸಲು ಸಾಧ್ಯವಾಗುತ್ತದೆ.
-ಕೃಷ್ಣ, ಪರಿಸರ ಪ್ರೇಮಿ
* ವಿನೋದ್.ಎನ್.ಹನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.