“ಹಸಿರು ವಲಯಕ್ಕೆ ನನ್ನಿಂದಾಗಿ ಸೋಂಕು ಹರಡುವಂತಾಯಿತಲ್ಲ ಎಂದು ನೊಂದುಕೊಂಡಿದ್ದೆ”
ಯಾರದೋ ತಪ್ಪು.. ಯಾರಿಗೋ ನೋವು.. ಪಾಸಿಟಿವ್‌ನಿಂದ ನೆಗೆಟಿವ್ ಆದ ಬೇಗೂರಿನ ಮುಖ್ಯ ಪೇದೆ ಅನಿಸಿಕೆ
Team Udayavani, May 8, 2020, 10:43 AM IST
ಚಾಮರಾಜನಗರ: ನಾನು ಬೆಂಗಳೂರಿನಿಂದ ಹಸಿರು ವಲಯವಾದ ಚಾಮರಾಜನಗರಕ್ಕೆ ಬಂದ ಕಾರಣ ಕೋವಿಡ್-19 ಸೋಂಕು ಹರಡುವಂತಾಯಿತಲ್ಲ, ಅನೇಕರು ಕ್ವಾರಂಟೈನ್ ನಲ್ಲಿ ಇರುವಂತಾಯಿತಲ್ಲ ಎಂದು ಬಹಳ ನೊಂದುಕೊಂಡಿದ್ದೆ. ಆದರೆ ನನ್ನ ವರದಿ ನೆಗೆಟಿವ್ ಬಂದಿರುವುದು ತಿಳಿದು ಈಗ ಸ್ವಲ್ಪ ನಿರಾಳವಾಗಿದೆ.
ಹೀಗೆಂದು ತಮ್ಮ ಅನಿಸಿಕೆ ಹಂಚಿಕೊಂಡವರು, ಬೆಂಗಳೂರಿನ ಬೇಗೂರು ಠಾಣೆಯ ಮುಖ್ಯ ಪೇದೆ. ಜಿಲ್ಲೆಯ ಹನೂರು ಸಮೀಪದ ಬೆಳತ್ತೂರಿನ ತಮ್ಮ ಪತ್ನಿಯ ಮನೆಗೆ ಬಂದ ನಂತರ ಆದ ಅವಾಂತರಗಳಿಂದ ನೊಂದಿರುವ ಅವರನ್ನು ಉದಯವಾಣಿ ಸಂಪರ್ಕಿಸಿದಾಗ ಅಳುಕಿನಿಂದಲೇ ತಮ್ಮ ಅನುಭವ ಹಂಚಿಕೊಂಡರು.
ನಾನು ಮೂಲತಃ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಆಲತ್ತೂರಿನವನು. ಈಗ ಎಲ್ಲಿ ಯಾರೂ ಇಲ್ಲ. ಈಗ ಬೆಂಗಳೂರೇ ನಮ್ಮ ಊರಾಗಿದೆ. ತಂದೆ ತಾಯಿ ಸಮೇತ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಬೆಂಗಳೂರಿನ ಬೇಗೂರು ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಸಣ್ಣ ಅಪಘಾತವಾಗಿದ್ದರಿಂದ 15 ದಿವಸಗಳ ಕಾಲ ರಜೆಯಲ್ಲಿದ್ದೆ. ನಾನು ಕರ್ತವ್ಯ ನಿರ್ವಹಿಸುವ ಬೇಗೂರು ಠಾಣೆ ಹೊಂಗಸಂದ್ರ ರಸ್ತೆಯಲ್ಲಿರುವುದರಿಂದ, ರೆಡ್ ಜೋನ್ ಆದ ಕಾರಣ ಪೊಲೀಸರನ್ನು ರ್ಯಾಂಡಮ್ ಆಗಿ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ರಜೆಯಲ್ಲಿದ್ದರೂ ನಾನೂ ಸಹ ಮೇ 1 ರಂದು ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದೆ. ನಾನು 15 ದಿನಗಳಿಂದಲೂ ಮನೆ ಬಿಟ್ಟು ಎಲ್ಲೂ ಹೋಗಿರಲಿಲ್ಲ. ಬೆಳತ್ತೂರು ನಮ್ಮ ತಾಯಿಯ ಊರು ಮತ್ತು ಹೆಂಡತಿ ಊರು ಸಹ. ನಮ್ಮ ತಾತನವರಿಗೆ (ತಾಯಿಯ ತಂದೆ) ಹುಷಾರಿರಲಿಲ್ಲ, ಅವರನ್ನು ನೋಡಿಕೊಂಡು ಹಾಗೇ ನನ್ನ ಹೆಂಡತಿ ಮಗಳನ್ನು ಊರಿನಲ್ಲಿ ಬಿಡಲು ಮೇ 4 ರಂದು ಬೆಳತ್ತೂರಿಗೆ ಬಂದೆ ಎಂದರು.
ಬೆಳತ್ತೂರಿಗೆ ಬಂದು ನಮ್ಮ ತಾತನವರನ್ನು ಇನ್ನೂ ನೋಡಿರಲಿಲ್ಲ. ಅಷ್ಟರಲ್ಲಿ ಸ್ಟೇಷನ್‌ನಿಂದ ಕರೆ ಬಂತು. ನಿಮಗೆ ಕೋವಿಡ್ ಪಾಸಿಟಿವ್ ಇದೆ ಬನ್ನಿ ಎಂದರು. ಮೊದಲಿಗೆ ಶಾಕ್ ಆದರೂ ನನಗೇನೂ ಆಗಿರಲ್ಲ ಎಂದ ನಂಬಿದ್ದೆ. ಬೆಂಗಳೂರಿಗೆ ವಾಪಸಾಗಿ ಹೆಂಡತಿ ಮಗಳನ್ನು ಮನೆಯಲ್ಲಿ ಬಿಟ್ಟು ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಮೇ 4 ರ ರಾತ್ರಿಯೇ ದಾಖಲಾದೆ. ಮೇ 6ರಂದು ರಿಪೋರ್ಟ್ ಗಳ ವ್ಯತ್ಯಾಸವಾಗಿರುವುದು ತಿಳಿಯಿತು. ನನಗೆ ಪಾಸಿಟಿವ್ ಇರಲೇ ಇಲ್ಲ. ಆದರೂ ಮೇ 6ರಂದು ಇನ್ನೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಿದರು. ಅದೂ ನೆಗೆಟಿವ್ ಬಂದಿದ್ದರಿಂದ ಅಂದೇ ರಾತ್ರಿ ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಕೋವಿಡ್ ಆಸ್ಪತ್ರೆಯಲ್ಲಿದ್ದ ಕಾರಣಕ್ಕೆ ಈಗ ಒಂದು ಹೋಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿಟ್ಟಿದ್ದಾರೆ.
ಮಾನಸಿಕ ಹಿಂಸೆ ಅನುಭವಿಸಿದೆ: ಎರಡು ದಿನ ನಾನು ಮಾನಸಿಕವಾಗಿ ಹಿಂಸೆ ಅನುಭವಿಸಿದೆ. ನನ್ನಿಂದ ಕುಟುಂಬಕ್ಕೆ, ನಮ್ಮ ಸಿಬ್ಬಂದಿಗೆ, ಚಾಮರಾಜನಗರಕ್ಕೆ ತೊಂದರೆಯಾಯಿತಲ್ಲ ಎಂದು ತೀವ್ರ ಬೇಸರವಾಯಿತು. ಚಾಮರಾಜನಗರ ಗ್ರೀನ್ ಝೋನ್ ನಲ್ಲಿರುವ ಜಿಲ್ಲೆ. ನನ್ನಿಂದ ಈ ರೀತಿಯ ಪ್ರಾಬ್ಲಂ ಆಯಿತಲ್ಲ ಎಂದು ನೋವಾಯಿತು. ನನ್ನಿಂದಾಗಿ ನಮ್ಮ ತಾತನ ಮನೆಯವರು, ಹೆಂಡತಿ ಮನೆಯವರೆಲ್ಲ ಕ್ವಾರಂಟೈನ್ ಆಗಬೇಕಾಯಿತು.
ಇನ್ನು ಅನೇಕ ಕಡೆ ಪುಂಖಾನುಪುಂಖವಾಗಿ ವದಂತಿಗಳು ಹರಡಿದವು. ಮನೆಗೆ ಬಂದು ನಂತರ ಬಾರ್‌ಗೆ ಹೋಗಿದ್ದನಂತೆ ಎಂಬ ಮಾತುಗಳು ಕೇಳಿಬಂದವು. ನಾನು ಕುಡಿಯುವುದೇ ಇಲ್ಲ. ಆದರೂ ಈ ರೀತಿ ಸುಳ್ಳು ಹರಡಿದ್ದು ಬೇಸರ ತಂದಿತು. ನಾನು ಬೆಂಗಳೂರಿನಿಂದ ಬಂದು ಕೊಳ್ಳೇಗಾಲ ಹೊರವಲಯದಲ್ಲೇ ಬೈಪಾಸ್ ಮಾಡಿಕೊಂಡು ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಲೊಕ್ಕನಹಳ್ಳಿ ಮಾರ್ಗ ಬೆಳತ್ತೂರಿಗೆ ಹೋಗಿದ್ದೆ. ಕೊಳ್ಳೇಗಾಲ ಪಟ್ಟಣ, ಹನೂರಿಗೂ ಹೋಗಿಲ್ಲ. ಹೀಗಿದ್ದರೂ ಚಾಮರಾಜನಗರಕ್ಕೂ ಹೋಗಿದ್ದ ಅಂಗಡಿ, ಪೆಟ್ರೋಲ್ ಬಂಕ್ ಗೆ ಹೋಗಿದ್ದ ಎಂಬ ವದಂತಿಗಳು ಹರಡಿದವು. ಕಾರಿನಲ್ಲಿ ಫುಲ್ ಟ್ಯಾಂಕ್ ಇತ್ತು. ಎಲ್ಲೂ ಪೆಟ್ರೋಲ್ ಸಹ ಹಾಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಇಲ್ಲ ಎಂಬ ಭರವಸೆ ಇತ್ತು: ಪಾಸಿಟಿವ್ ಇದೆ ಎಂದು ಫೋನ್ ಮಾಡಿದ್ದರೂ ಸಹ ನನಗೆ ಕೋವಿಡ್ ಬಂದಿಲ್ಲ ಎಂಬ ಭರವಸೆ ಇತ್ತು. ನಾನು ಎಲ್ಲೂ ಈಚೆಗೇ ಹೋಗಿರಲಿಲ್ಲ. ನನಗೆ ಯಾರ ಸಂಪರ್ಕವೂ ಇರಲಿಲ್ಲ. ಹೊರ ಬಂದಾಗ ಮಾಸ್ಕ್ ಧರಿಸುತ್ತಿದ್ದೆ. ಸ್ಯಾನಿಟೈಸರ್ ನನ್ನ ಜೊತೆಯಲ್ಲೇ ಇಟ್ಟುಕೊಂಡಿದ್ದೇನೆ. ಇಷ್ಟೆಲ್ಲ ಮುನ್ನೆಚ್ಚರಿಕೆ ವಹಿಸಿರುವಾಗ ಕೋವಿಡ್ ಬರಲು ಹೇಗೆ ಸಾಧ್ಯ ಎಂಬ ಭರವಸೆ ನನ್ನಲ್ಲಿತ್ತು ಎಂದರು.
ಇದರಲ್ಲಿ ಯಾರ ತಪ್ಪೋ ಏನೋ ನನಗೆ ಗೊತ್ತಿಲ್ಲ ಸರ್. ರಿಪೋರ್ಟು ನನಗೆ ತೋರಿಸಿಲ್ಲ. ಏನಾಯ್ತೋ ಗೊತ್ತಿಲ್ಲ. ಸೀರಿಯಲ್ ನಂ. ಚೇಂಜ್ ಆಗಿತ್ತು ಅಂತಾರೆ. ಒಟ್ಟಿನಲ್ಲಿ ನಾನಂತೂ ತೀವ್ರ ತೊಂದರೆಗೊಳಾಗದೆ. ನನ್ನಿಂದ ಬೇರೆಯವರಿಗೂ ತೊಂದರೆಯಾಯಿತು.
ನನ್ನಿಂದ ನಮ್ಮ ಕುಟುಂಬದವರು, ಬಂಧುಗಳು, ನಮ್ಮ ಸಿಬ್ಬಂದಿ ಕ್ವಾರಂಟೈನ್‌ನಲ್ಲಿರಬೇಕಾಯಿತು. ಚಾಮರಾಜನಗರದಲ್ಲಿ 38 ಮಂದಿ ಮಾತ್ರವಲ್ಲ, ಬೆಂಗಳೂರಿನಲ್ಲೂ ಸಹ ನಮ್ಮ ಕುಟುಂಬದವರು, ನಮ್ಮ ಸಿಬ್ಬಂದಿ ಸೇರಿ 35 ಜನರನ್ನು ಕ್ವಾರಂಟೈನ್ ನಲ್ಲಿರಿಸಿದ್ದರು. ಈಗ ಎಲ್ಲ ಬಿಡುಗಡೆಯಾಗಿದ್ದಾರೆ. ನನ್ನಿಂದ ಯಾರ್ಯಾರಿಗೆ ತೊಂದರೆಯಾಯಿತೋ ಅವರೆಲ್ಲರ ಕ್ಷಮೆ ಯಾಚಿಸುತ್ತೇನೆ. ಈಗ ಎಲ್ಲವೂ ನಿರಾಳವಾಗಿದೆ. ಇದಕ್ಕೆ ಬಿಳಿಗಿರಿರಂಗನಾಥ, ಮಹದೇಶ್ವರರ ಕೃಪೆಯೇ ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ಘಟನೆ ಹಿನ್ನಲೆ
ಕಳೆದ ಸೋಮವಾರ ಬೆಂಗಳೂರಿನ ಬೇಗೂರು ಠಾಣೆಯ ಮುಖ್ಯ ಪೇದೆ ಜಿಲ್ಲೆಯ ಬೆಳತ್ತೂರು ಗ್ರಾಮದ ತಮ್ಮ ಅತ್ತೆ ಮನೆಗೆ ತನ್ನ ಹೆಂಡತಿ ಮಗುವಿನೊಂದಿಗೆ ಬಂದಿದ್ದರು. ಗ್ರಾಮದಲ್ಲಿದ್ದಾಗ ಬೆಂಗಳೂರಿನ ಆಸ್ಪತ್ರೆಯಿಂದ ಕರೆಬಂದು, ನಿಮಗೆ ಕೋವಿಡ್-19 ಪಾಸಿಟಿವ್ ಇರುವುದರಿಂದ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು. ತಕ್ಷಣ ಅವರು ವಾಪಸಾಗಿದ್ದರು. ಅವರು ಹೋದ ಬಳಿಕ ಬೆಳತ್ತೂರಿನ ಅವರ ಅತ್ತೆ ಮನೆ ಹಾಗೂ ಅಕ್ಕಪಕ್ಕದ ಮನೆಯವರೂ ಸೇರಿ 38 ಜನರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿತ್ತು.
ಬೆಂಗಳೂರಿಗೆ ತೆರಳಿದ ಪೇದೆಯವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪೇದೆಯವರಿಗೆ ಕೋವಿಡ್-19 ನೆಗೆಟಿವ್ ಇದ್ದು, ಪಾಸಿಟಿವ್ ಇದ್ದ ಇನ್ನೋರ್ವ ರೋಗಿಯ ವರದಿಯನ್ನು ಇವರದೆಂದು ತಪ್ಪಾಗಿ ಭಾವಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.
ಮತ್ತೊಮ್ಮೆ ಖಚಿತಪಡಿಸಿಕೊಳ್ಳುವ ಸಲುವಾಗಿ ಬುಧವಾರ ಮತ್ತೊಮ್ಮೆ ಪೇದೆಯ ಗಂಟಲು ದ್ರವ ಪರೀಕ್ಷೆ ನಡೆಸಿ, ಅದರಲ್ಲೂ ನೆಗೆಟಿವ್ ಬಂದಿತು. ನಂತರ ಪೇದೆಯವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಪ್ರಸ್ತುತ ಕ್ವಾರಂಟೈನ್ ನಲ್ಲಿಡಲಾಗಿದೆ.
ವರದಿ: ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.