ಸಿರಿಧಾನ್ಯ ಬೆಳೆ ಪ್ರಮಾಣ ಹೆಚ್ಚಳಕ್ಕೆ ಉತ್ತೇಜಿಸಿ
Team Udayavani, Feb 24, 2020, 3:00 AM IST
ಚಾಮರಾಜನಗರ: ಸಿರಿಧಾನ್ಯ ಬೆಳೆಗಳ ಮಹತ್ವದ ಬಗ್ಗೆ ರೈತರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ಪ್ರಮಾಣವನ್ನು ಹೆಚ್ಚಿಸಲು ಉತ್ತೇಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಹಬ್ಬ ಆಚರಣೆಯ ಪೂರ್ವಭಾವಿ ಸಭೆ ಹಾಗೂ ರೈತ ಸಿರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಸಿರಿಧಾನ್ಯ ಬೆಳೆಯುವಿಕೆಗೆ ಜಿಲ್ಲೆಯ ವಾತಾವರಣ ಅತ್ಯಂತ ಅನುಕೂಲಕರವಾಗಿದೆ. ಹೀಗಾಗಿ ರೈತರಲ್ಲಿ ಸಿರಿಧಾನ್ಯ ಬೆಳೆ ಮಹತ್ವದ ಬಗ್ಗೆ ಅರಿವು ಮೂಡಿಸಿ, ಅದರಲ್ಲಿರುವ ವಿಶಾಲ ಅವಕಾಶಗಳ ಬಗ್ಗೆ ಮಾಹಿತಿ ನೀಡಬೇಕು. ಜತೆಗೆ ಸಿರಿಧಾನ್ಯ ಬಿತ್ತನೆ ಬೀಜಗಳನ್ನು ಸಮರ್ಪಕ ರೀತಿಯಲ್ಲಿ, ಸರಿಯಾದ ಸಮಯಕ್ಕೆ ಒದಗಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸಿರಿಧಾನ್ಯ ಹೆಚ್ಚಳಕ್ಕೆ ಯೋಜನೆ: ಸಿರಿಧಾನ್ಯ ಪ್ರಮಾಣವನ್ನು ಜಿಲ್ಲೆಯಲ್ಲಿ ಹೆಚ್ಚಿಸುವಲ್ಲಿ ಯೋಜನೆಗಳನ್ನು ರೂಪಿಸಬೇಕು. ಸಿರಿಧಾನ್ಯಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ ರೈತರೊಂದಿಗೆ ನಿರಂತರ ಸಂಪರ್ಕ ಬೆಳೆಸಿ, ಅಗತ್ಯ ನೆರವು ನೀಡಬೇಕು. ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಲಭ್ಯತೆ ಬಗೆಗೂ ಪ್ರಾಶಸ್ತ್ಯ ನೀಡಿ, ಕಾರ್ಯನಿರ್ವಹಿಸಬೇಕು. ರೈತರೇ ಖುದ್ದು ತಯಾರಿಸುವ ಸಿರಿಧಾನ್ಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಹಾಗೂ ಅವುಗಳ ಬ್ರಾಂಡ್ ಬೆಳೆಸುವಲ್ಲಿ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು.
ಸುಸಜ್ಜಿತ ವ್ಯವಸ್ಥೆ ಅಗತ್ಯ: ಸಿರಿಧಾನ್ಯ ಬೆಳೆ ಪ್ರಮಾಣ ಹೆಚ್ಚಿಸಲು ಸುಸಜ್ಜಿತ ವ್ಯವಸ್ಥೆ ಅಗತ್ಯ. ಹೀಗಾಗಿ ಸಿರಿಧಾನ್ಯ ಹೆಚ್ಚಾಗಿ ಬೆಳೆಯುವ ಪ್ರದೇಶ ಗುರುತಿಸಿ, ಅಲ್ಲಿ ಸಂಸ್ಕರಣಾ ಘಟಕವನ್ನು ತೆರೆಯಬೇಕು. ಸಂಸ್ಕರಣಾ ಘಟಕ ತೆರೆಯಲು ಮುಂದೆ ಬರುವವರಿಗೆ ಕೃಷಿ ಇಲಾಖೆಯಿಂದ ಅಗತ್ಯವಿರುವ ಆರ್ಥಿಕ ನೆರವು ಕಲ್ಪಿಸಬೇಕು. ಸಿರಿಧಾನ್ಯ ಬಳಕೆ ಮಾಡುವ ಗ್ರಾಹಕರನ್ನು ಗುರುತಿಸಿ, ರೈತರ ಉತ್ಪನ್ನಗಳು ನೇರವಾಗಿ ಅವರನ್ನು ತಲುಪುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಸಿರಿಧಾನ್ಯ ಹಬ್ಬ ಆಚರಣೆಗೆ ಸಿದ್ಧತೆ: ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಹಬ್ಬ ಆಚರಣೆಯ ರೂಪುರೇಷೆ ಹಾಗೂ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ, ಸಿರಿಧಾನ್ಯ ಹಬ್ಬವನ್ನು ವ್ಯವಸ್ಥಿತವಾಗಿ, ಯಾವುದೇ ಲೋಪಗಳಾಗದ ರೀತಿಯಲ್ಲಿ ಆಯೋಜಿಸಬೇಕು. ವ್ಯಾಪಕ ಪ್ರಚಾರ ಕೈಗೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಸಿರಿಧಾನ್ಯ ಬೆಳೆ ಉತ್ತೇಜನಕ್ಕೆ ಪೂರಕವಾಗಿ ಜಾಗೃತಿಗೊಳಿಸುವ ದಿಸೆಯಲ್ಲಿ ಹಮ್ಮಿಕೊಳ್ಳಲಾಗುವ ರೋಡ್ ಶೋವನ್ನು ಪರಿಣಾಮಕಾರಿಯಾಗಿ ಆಯೋಜನೆ ಮಾಡಬೇಕು. ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುವ ಹಾಗೆ ರೂಪಿಸಬೇಕು ಎಂದು ಹೇಳಿದರು.
ಸಾವಯವ ಸಿರಿಧಾನ್ಯ ಸಂತೆ: ಜಿಲ್ಲೆಯಲ್ಲಿ ಬೆಳೆಯಲಾಗುವ ಸಿರಿಧಾನ್ಯಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ನಗರದಲ್ಲಿ ಸಾವಯವ ಸಿರಿಧಾನ್ಯ ಸಂತೆ ನಡೆಸಬೇಕು. ಇಲ್ಲಿ ತಜ್ಞರಿಂದ ರೈತರಿಗೆ ಜಾಗೃತಿ ನೀಡುವ ಕಾರ್ಯಕ್ರಮಗಳು ಜರುಗಬೇಕು. ಗ್ರಾಹಕರು ಹಾಗೂ ಉತ್ಪಾದಕರ ನಡುವೆ ಸಂವಾದ, ಉಪನ್ಯಾಸ ಏರ್ಪಾಡು ಮಾಡಬೇಕು. ಸಂಘಟನೆ, ವಿಭಿನ್ನ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಸಿರಿಧಾನ್ಯಗಳ ಲಭ್ಯತೆ ಬಗೆಗೂ ಗಮನ ನೀಡಬೇಕು ಎಂದು ತಿಳಿಸಿದರು.
ಸರಿ ಸಮಯಕ್ಕೆ ಬಿತ್ತನೆ ಬೀಜ ವಿತರಿಸಿ: ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಸಿರಿಧಾನ್ಯಗಳನ್ನು ಕಡಿಮೆ ವೆಚ್ಚದಲ್ಲಿ ವರ್ಷಪೂರ್ತಿ ಬೆಳೆಯಬಹುದಾಗಿದೆ. ಮಾಹಿತಿ ಕೊರತೆಯಿಂದ ಹೆಚ್ಚಿನ ರೈತರು ಸಿರಿಧಾನ್ಯ ಬೆಳೆಯಲು ಮುಂದಾಗುತ್ತಿಲ್ಲ. ಹೀಗಾಗಿ ಸಿರಿಧಾನ್ಯದ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗಬೇಕು. ಅಲ್ಲದೇ ಸಿರಿಧಾನ್ಯ ಬಿತ್ತನೆ ಬೀಜಗಳನ್ನು ಸರಿಯಾದ ಸಮಯಕ್ಕೆ ವಿತರಿಸುವ ಕೆಲಸ ಆಗಬೇಕು. ಸುಸಜ್ಜಿತ ಸಂಸ್ಕರಣಾ ಘಟಕವನ್ನು ತೆರೆಯಬೇಕು ಎಂದು ಸಲಹೆ ನೀಡಿದರು.
ಉತ್ಪನ್ನಕ್ಕೆ ಉತ್ತಮ ಬೆಲೆ ಅಗತ್ಯ: ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಮಹೇಶ್‌ಪ್ರಭು ಮಾತನಾಡಿ, ಸಿರಿಧಾನ್ಯಗಳ ಬೆಳೆ ಬೆಳೆಸುವಂತಹ ಪ್ರೋತ್ಸಾಹ ಕಾರ್ಯಕ್ರಮಗಳು ನಡೆಯಬೇಕು. ಯಾವುದೇ ವಸ್ತುವಿಗೆ ಮಾರುಕಟ್ಟೆ ಇದ್ದು, ಉತ್ಪನ್ನಕ್ಕೆ ಉತ್ತಮ ಬೆಲೆ ಇದ್ದಾಗ ಸಹಜವಾಗಿ ರೈತರು ಬೆಳೆಯಲು ಮುಂದೆ ಬರುತ್ತಾರೆ. ಹೀಗಾಗಿ ಸೂಕ್ತವಾದ ಮಾರುಕಟ್ಟೆ ಒದಗಿಸುವ ಮೂಲಕ ಸಿರಿಧಾನ್ಯ ಬೆಳೆಗಾರರನ್ನು ಉತ್ತೇಜಿಸಬೇಕು ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚಂದ್ರಕಲಾ, ಕೃಷಿ ಪರಿಕರ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಗಳು, ತಾಲೂಕು ಕೃಷಿ ಸಹಾಯಕ ನಿರ್ದೇಶಕರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಸಿರಿಧಾನ್ಯ ಬೆಳೆಯಲು ಇರುವ ಅಡಚಣೆಗಳ ನಿವಾರಣೆಗೆ ಸಲಹೆಯನ್ನು ಬೆಳೆಗಾರರು, ರೈತರು ನೀಡಬೇಕು. ಇದರಿಂದ ಕೃಷಿ ಇಲಾಖೆ ಬೆಳೆಗೆ ಉತ್ತೇಜನಕಾರಿ ಕ್ರಮಗಳನ್ನು ಅಳವಡಿಸಿಕೊಳ್ಳಲಿದೆ. ಸಿರಿಧಾನ್ಯ ಉತ್ಪನ್ನಗಳಿಗೆ ಆರ್ಗಾನಿಕ್ ಟ್ಯಾಗ್ ನೀಡುವ ಮುಖೇನ ಮಾರಾಟಕ್ಕೆ ಪ್ರೋತ್ಸಾಹ ನೀಡಬಹುದಾಗಿದೆ.
-ಬೋಯರ್ ಹರ್ಷಲ್ ನಾರಾಯಣರಾವ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.