ಚಾ.ನಗರ ಜಿಲ್ಲಾಸ್ಪತ್ರೆಯನ್ನು ಸಿಮ್ಸ್ ನಿಂದ ಬೇರ್ಪಡಿಸಿ ಪುನಾರಂಭಿಸಲು ಸಾರ್ವಜನಿಕರ ಒತ್ತಾಯ
ಬಿಕೋ ಎನ್ನುತ್ತಿದೆ 250 ಹಾಸಿಗೆಗಳ ಜಿಲ್ಲಾಸ್ಪತ್ರೆ
Team Udayavani, Sep 4, 2022, 11:18 AM IST
ಚಾಮರಾಜನಗರ: ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿದ್ದ ಜಿಲ್ಲಾಸ್ಪತ್ರೆಯ ಚಿಕಿತ್ಸಾ ವಿಭಾಗಗಳನ್ನು ನಗರದಿಂದ 7 ಕಿ.ಮೀ. ದೂರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರ ಮಾಡಿರುವುದರಿಂದ ಸಾವಿರಾರು ರೋಗಿಗಳಿಗೆ ತೊಂದರೆಯಾಗಿದ್ದು, ಜಿಲ್ಲಾಸ್ಪತ್ರೆಯನ್ನು ಮತ್ತೆ ಆರಂಭಿಸಬೇಕೆಂಬ ಒತ್ತಾಯ ಪ್ರಬಲವಾಗಿ ಕೇಳಿಬರುತ್ತಿದೆ.
ಚಾಮರಾಜನಗರದ ಹೃದಯ ಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನಕ್ಕೊಳಪಟ್ಟಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇತ್ತು. ನಂತರ ಅದು ತಾಲೂಕು ಆಸ್ಪತ್ರೆ ಆಯಿತು. ಜಿಲ್ಲಾ ಕೇಂದ್ರವಾದ ನಂತರ ಅದೇ ಜಿಲ್ಲಾ ಆಸ್ಪತ್ರೆಯೂ ಆಯಿತು. ಚಿಕ್ಕ ಕಟ್ಟಡವನ್ನು ವಿಸ್ತರಿಸಲಾಯಿತು. ಪಕ್ಕದಲ್ಲಿ ಮೂರು ಅಂತಸ್ತುಗಳ ಇನ್ನೊಂದು ಕಟ್ಟಡವನ್ನೂ ಏಳೆಂಟು ವರ್ಷಗಳ ಹಿಂದೆ ನಿರ್ಮಿಸಲಾಯಿತು.
ಈ ಎಲ್ಲ ಕಟ್ಟಡ ಸೇರಿ 250 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಜಿಲ್ಲಾಆಸ್ಪತ್ರೆ ಇಲ್ಲಿ ಇತ್ತು. 2014ರಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆಯನ್ನಾಗಿ ಜಿಲ್ಲಾಸ್ಪತ್ರೆಯನ್ನು ತಾತ್ಕಾಲಿಕವಾಗಿ ಪರಿವರ್ತಿಸಲಾಯಿತು. 2021ರವರೆಗೂ ಜಿಲ್ಲಾಸ್ಪತ್ರೆಯು ಸರ್ಕಾರಿ ಮೆಡಿಕಲ್ ಕಾಲೇಜಿನ ಬೋಧನಾ ಆಸ್ಪತ್ರೆಯಾಗಿತ್ತು. 2021ರ ಅಕ್ಟೋಬರ್ 21ರಂದು ನಗರದಿಂದ 7 ಕಿ.ಮೀ. ದೂರದಲ್ಲಿರುವ ಯಡಬೆಟ್ಟದ ಬಳಿ ಸರ್ಕಾರಿ ಮೆಡಿಕಲ್ ಕಾಲೇಜಿನ ಬೋಧನಾ ಆಸ್ಪತ್ರೆ (ಸಿಮ್ಸ್ ಆಸ್ಪತ್ರೆ) ರಾಷ್ಟ್ರಪತಿಯವರಿಂದ ಉದ್ಘಾಟನೆಗೊಂಡಿತು.
ಸ್ವಂತ ಕಟ್ಟಡಕ್ಕೆ ಹೋದ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವೈದ್ಯರು, ಸಿಬ್ಬಂದಿ ಸೇರಿದಂತೆ ಇಲ್ಲಿದ್ದ ಇಡೀ ವ್ಯವಸ್ಥೆಯನ್ನು ಸಿಮ್ಸ್ ಗೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ತಾಯಿ ಮತ್ತು ಮಕ್ಕಳ ವಿಭಾಗ ಬಿಟ್ಟು ಈಗ ಬೇರೇನೂ ಇಲ್ಲ! 250 ಹಾಸಿಗೆಗಳ ಸಾಮರ್ಥ್ಯವಿದ್ದ ಎರಡು ದೊಡ್ಡ ಕಟ್ಟಡಗಳು ಈಗ ಬಿಕೋ ಎನ್ನುತ್ತಿವೆ.
ಇದನ್ನೂ ಓದಿ:ರಾಜ್ಯದಲ್ಲಿ 1,108 ಎಲೆಕ್ಟ್ರಿಕ್ ಪವರ್ ಚಾರ್ಜಿಂಗ್ ಸೆಂಟರ್ : ಸಚಿವ ಸುನಿಲ್ ಕುಮಾರ್
ವೈದ್ಯಕೀಯ ಕಾಲೇಜು ಒಂದು ಸರ್ಕಾರಿ ಸ್ವಾಯತ್ತ ಸಂಸ್ಥೆ. ಇದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನಕ್ಕೊಳಪಡುತ್ತದೆ. ಜಿಲ್ಲಾಸ್ಪತ್ರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನಕ್ಕೊಳಪಟ್ಟಿದೆ. ಜಿಲ್ಲಾಸ್ಪತ್ರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ವೈದ್ಯಕೀಯ ಕಾನೂನು ಪ್ರಕರಣಗಳು ಇತ್ಯಾದಿಗಳನ್ನು ಒಳಗೊಂಡಿದೆ. ಜಿಲ್ಲಾಡಳಿತದ ನೇರ ನಿಯಂತ್ರಣ ಇಲ್ಲಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೇಲೆ ಜಿಲ್ಲಾಡಳಿತದ ನಿಯಂತ್ರಣ ಇರುವುದಿಲ್ಲ.
ವಿಷಯ ಹೀಗಿರುವಾಗ ಆರೋಗ್ಯ ಮತ್ತು ಕು.ಕ. ಇಲಾಖೆಯ ಸಂಪೂರ್ಣ ಅಧೀನದಲ್ಲಿರುವ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ವಾಯತ್ತ ಸಂಸ್ಥೆಯಾದ ಮೆಡಿಕಲ್ ಕಾಲೇಜು ಆಡಳಿತದ ಆಜ್ಞೆ ಅನುಸರಿಸಿ ಕೆಲಸ ನಿರ್ವಹಿಸಬೇಕಾಗಿದೆ! ಇದರಿಂದ ವೈದ್ಯರು ಮತ್ತು ಸಿಬ್ಬಂದಿಗೆ ಅನೇಕ ಸೇವಾ ಸಮಸ್ಯೆಗಳು ತಲೆದೋರುತ್ತಿವೆ!
ರೋಗಿಗಳ ಪರದಾಟ: ಜಿಲ್ಲಾ ಕೇಂದ್ರದ ಮಧ್ಯ ಭಾಗದಲ್ಲಿದ್ದ 250 ಹಾಸಿಗೆಗಳ ಜಿಲ್ಲಾಸ್ಪತ್ರೆಯಿಂದ ಸಾವಿರಾರು ರೋಗಿಗಳಿಗೆ ಬಹಳ ಅನುಕೂಲವಾಗಿತ್ತು. ತುರ್ತು ಚಿಕಿತ್ಸೆ, ಸಾಮಾನ್ಯ ಆರೋಗ್ಯ ತೊಂದರೆಗಳು, ಗಾಯದ ಚಿಕಿತ್ಸೆ, ಮೆಡಿಸಿನ್, ಮೂಳೆ ವಿಭಾಗಗಳು ಹತ್ತಿರದಲ್ಲೇ ಇದ್ದುದರಿಂದ ರೋಗಿಗಳು ಚಿಕಿತ್ಸೆ ಪಡೆಯಲು ಅನುಕೂಲವಾಗಿತ್ತು. ಈಗ ಒಂದು ಸಣ್ಣ ಗಾಯಕ್ಕೆ ಚಿಕಿತ್ಸೆಪಡೆಯಬೇಕಾದರೂ, ನೆಗಡಿ ಕೆಮ್ಮಿಗೂ ಪಟ್ಟಣದಿಂದ ಏಳು ಕಿ.ಮೀ. ದೂರದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋಗಬೇಕಾಗಿದೆ. ಆಟೋ ವೆಚ್ಚವೇ 200 ರೂ. ತಗುಲುತ್ತದೆ. ವೈದ್ಯರು ಹೆಚ್ಚಿನ ಮಾತ್ರೆ, ಔಷಧಿ ಬರೆದುಕೊಟ್ಟರೆ ಅದನ್ನು ಖರೀದಿಸಲು, ಮತ್ತೆ ಜಿಲ್ಲಾಸ್ಪತ್ರೆಯ ಎದುರಲ್ಲಿರುವ ಮೆಡಿಕಲ್ ಸ್ಟೋರ್‌ಗಳಿಗೇ ರೋಗಿಗಳು ಬರಬೇಕಾಗಿದೆ.
ಹೀಗಾಗಿ ಜಿಲ್ಲಾಸ್ಪತ್ರೆಯನ್ನು ಪುನಾರಂಭಿಸಬೇಕೆಂಬ ಒತ್ತಾಯ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಕೇಳಿಬರುತ್ತಿದೆ.
ಖಾಸಗಿ ಕ್ಲಿನಿಕ್‌ಗಳಿಗೆ ಲಾಭ!
ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಸ್ಪತ್ರೆಯ ವ್ಯವಸ್ಥೆಯೇ ಬೇರೆ ಹಾಗೂ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯ ವ್ಯವಸ್ಥೆಯೇ ಬೇರೆ. ವೈದ್ಯಕೀಯ ಶಿಕ್ಷಣ ಇಲಾಖೆ ಬೋಧನಾ ಆಸ್ಪತ್ರೆ ಬಂದ ಮಾತ್ರಕ್ಕೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಯನ್ನು ಅಲ್ಲಿಗೆ ವರ್ಗಾಯಿಸುವ ಅಗತ್ಯ ಇರಲಿಲ್ಲ. ಜಿಲ್ಲಾಸ್ಪತ್ರೆಯನ್ನು ಜಿಲ್ಲಾ ಕೇಂದ್ರದಲ್ಲೇ ಉಳಿಸಿಕೊಳ್ಳಬೇಕಾಗಿತ್ತು.
ಈಗ ಜ್ವರವೋ, ನೆಗಡಿಯೋ ಆದರೆ ಅಷ್ಟು ದೂರ ಹೋಗಿಬರಬೇಕೆಂಬ ಮನೋಭಾವದಿಂದ ರೋಗಿಗಳು ಖಾಸಗಿ ಕ್ಲಿನಿಕ್‌ಗಳಿಗೆ ಹೋಗಬೇಕಾಗಿದೆ. ಸಿಮ್ಸ್ ವೈದ್ಯರೇ ನಗರದಲ್ಲಿ ಖಾಸಗಿ ಕ್ಲಿನಿಕ್‌ಗಳನ್ನು ತೆರೆದಿದ್ದಾರೆ! ಜಿಲ್ಲಾಸ್ಪತ್ರೆ ಇಲ್ಲದಿರುವುದು, ಖಾಸಗಿ ಕ್ಲಿನಿಕ್ ವೈದ್ಯರಿಗೆ ವರದಾನವಾಗಿದೆ. ನೆಗಡಿ ಕೆಮ್ಮು ಬಂದರೆ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಮಾತ್ರೆ ದೊರಕುತ್ತಿತ್ತು. ಈಗ ಖಾಸಗಿ ಕ್ಲಿನಿಕ್ ಗಳಲ್ಲಿ 150 ರೂ. ಶುಲ್ಕ, ಮಾತ್ರೆ ಸಿರಪ್ ಗೆ ಎಂದು 300 ರಿಂದ 400 ರೂ. ತೆರಬೇಕಾಗಿದೆ. ಇದರಿಂದ ನಲುಗುತ್ತಿರುವವರು ಕೆಳಮಧ್ಯಮ ವರ್ಗ ಹಾಗೂ ಬಡವ ವರ್ಗದ ಜನರು.
ಉಸ್ತುವಾರಿ ಸಚಿವ ಸೋಮಣ್ಣ ಕಾಳಜಿ
ಜಿಲ್ಲಾಸ್ಪತ್ರೆಯನ್ನು ಮತ್ತೆ ಆರಂಭಿಸಬೇಕೆಂಬ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳೇ ಅನಾಸಕ್ತಿ ವಹಿಸಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅತ್ಯಂತ ಕಾಳಜಿ ವಹಿಸಿದ್ದಾರೆ.
ಶುಕ್ರವಾರ, ನಗರದಲ್ಲಿ ಪತ್ರಕರ್ತರು ಜಿಲ್ಲಾಸ್ಪತ್ರೆ ಖಾಲಿ ಬಿದ್ದಿರುವ ವಿಚಾರವನ್ನು ಸೋಮಣ್ಣನವರಿಗೆ ತಿಳಿಸಿದರು. ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಕೈಗೆತ್ತಿಕೊಂಡ ಸಚಿವರು, ವೈದ್ಯಕೀಯ ಕಾಲೇಜು ಡೀನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಸ್ಪತ್ರೆಯಿಂದ ಬಡಜನರಿಗೆ ಬಹಳ ಅನುಕೂಲವಾಗುತ್ತಿತ್ತು. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಯಾಕೆ ಸ್ಥಳಾಂತರ ಮಾಡಿದ್ದೀರಿ? ಜಿಲ್ಲಾಸ್ಪತ್ರೆಯನ್ನು ತಕ್ಷಣ ಪುನಾರಂಭಿಸಿ ಎಂದು ತಾಕೀತು ಮಾಡಿದರು. ಜಿಲ್ಲಾಧಿಕಾರಿಯವರಿಗೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಿಮ್ಸ್ ನಲ್ಲೇ ಇದ್ದಾರೆ ಅಲ್ಲಿಗೆ ಸಾಕಾಗುಷ್ಟು ವೈದ್ಯರು ಮತ್ತು ಸಿಬ್ಬಂದಿ!
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ (ಸಿಮ್ಸ್)ನಲ್ಲಿ ಅವರೇ ನೇಮಕಾತಿ ಮಾಡಿಕೊಂಡ ಒಟ್ಟು 500 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಇವರಲ್ಲಿ 160ಕ್ಕೂ ಹೆಚ್ಚು ವೈದ್ಯರಿದ್ದಾರೆ. 125 ಮಂದಿ ಹೌಸ್ ಸರ್ಜನ್‌ಗಳಿದ್ದಾರೆ. 30 ಮಂದಿ ಎಂಎಸ್ ವಿದ್ಯಾರ್ಥಿಗಳಿದ್ದಾರೆ. 20 ಮಂದಿ ಕಿರಿಯ ವೈದ್ಯರಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನಕ್ಕೊಳಪಟ್ಟ ಜಿಲ್ಲಾಸ್ಪತ್ರೆಯ 150 ಸಿಬ್ಬಂದಿ ಸಿಮ್ಸ್ ನಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 27 ಮಂದಿ ವೈದ್ಯರಿದ್ದಾರೆ ಸುಮಾರು 120 ಮಂದಿ ನರ್ಸ್‌ಗಳು ಇತ್ಯಾದಿ ಸಿಬ್ಬಂದಿ ಇದ್ದಾರೆ.
ಜಿಲ್ಲಾಸ್ಪತ್ರೆಗೆ ಈ ಹೆಚ್ಚುವರಿ 27 ಮಂದಿ ವೈದ್ಯರು ಹಾಗೂ 120 ಸಿಬ್ಬಂದಿ ಬಿಟ್ಟುಕೊಟ್ಟರೆ, ಜಿಲ್ಲಾಸ್ಪತ್ರೆಯನ್ನು ನಾಳೆಯಿಂದಲೇ ಆರಂಭಿಸಬಹುದಾಗಿದೆ. ಇದಕ್ಕೆ ಕಟ್ಟಡ, ವೈದ್ಯಕೀಯ ಉಪಕರಣಗಳು, ಮಾನವ ಸಂಪನ್ಮೂಲ ಈಗಾಗಲೇ ಲಭ್ಯವಿದೆ.
ಜಿಲ್ಲಾಸ್ಪತ್ರೆ ಮುಂದೆಯೇ ಗಾಯಗೊಂಡರೂ ಚಿಕಿತ್ಸೆ ಲಭ್ಯವಿಲ್ಲ!
ಸುಸಜ್ಜಿತ ಜಿಲ್ಲಾ ಆಸ್ಪತ್ರೆ ಇದ್ದರೂ ಈಗ ಪರಿಸ್ಥಿತಿ ಹೇಗಾಗಿದೆಯೆಂದರೆ, ಆ ಅಸ್ಪತ್ರೆ ಮುಂದೆ ಯಾರಾದರೂ ಗಾಯಗೊಂಡರೂ ಅವರಿಗೆ ಇಲ್ಲಿ ಚಿಕಿತ್ಸೆ ದೊರಕುವುದಿಲ್ಲ! ಆ ಗಾಯಾಳುವನ್ನು,7 ಕಿಮೀ ದೂರದ ಸಿಮ್ಸ್ ಆಸ್ಪತ್ರೆಗೇ ಕರೆದೊಯ್ಯಬೇಕಾಗಿದೆ!
ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.