ರಸ್ತೆಯಲ್ಲಿ ಒಕ್ಕಣೆ: ವಾಹನ ಸವಾರರಿಗೆ ಕಿರಿಕಿರಿ
Team Udayavani, Jan 13, 2020, 3:00 AM IST
ಗುಂಡ್ಲುಪೇಟೆ: ತಾಲೂಕಿನ ಹಲವು ಪ್ರಮುಖ ರಸ್ತೆಗಳಲ್ಲಿ ಹುರುಳಿ ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ಕಿರಿಕಿರಿಯುಂಟಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹುರುಳಿ ಒಕ್ಕಣೆ ಜೋರಾಗಿದ್ದು, ಪ್ರಮುಖವಾಗಿ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿಯೂ ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಕಿಯಿಂದ ಮೂವರು ರಕ್ಷಣೆ: ಇತ್ತೀಚಿಗೆ ತಾಲೂಕಿನ ಹುಲುಸಗುಂದಿ ಬಳಿ ಹುರುಳಿ ಸಿಪ್ಪೆ ಮಾರುತಿ ಕಾರಿನ ಇಂಜಿನಿಗೆ ಸಿಕ್ಕಿಕೊಂಡ ಪರಿಣಾಮವಾಗಿ ಹೊತ್ತಿ ಉರಿದಿತ್ತು. ಇದೇ ರೀತಿಯಾಗಿ ಸೋಮಹಳ್ಳಿ ರಸ್ತೆಯಿಂದ ಕನಕಗಿರಿಗೆ ಹೋಗುವ ರಸ್ತೆಯಲ್ಲಿ ಕಾರಿಗೆ ಹುರುಳಿ ಸಿಪ್ಪೆ ಸಿಕ್ಕಿ ಬೆಂಕಿ ಹೊತ್ತಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ನೀರು ಹಾಕಿ, ಮೂವರನ್ನು ರಕ್ಷಣೆ ಮಾಡಿದ್ದರು.
ಇದೇ ಮಾರ್ಗವಾಗಿ ಚಲಿಸುತ್ತಿದ್ದ ಬಸ್‌ಗೆ ಹುರುಳಿ ಸಿಪ್ಪೆ ಸಿಕ್ಕಿಕೊಂಡು ಬಸ್‌ನ ಆಕ್ಸಲ್ ತುಂಡಾಗಿ ಪ್ರಯಾಣಿಕರಿಗೆ ಕಿರಿಕಿರಿಯುಂಟಾಯಿತು. ಇದೇ ರೀತಿಯಾಗಿ ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿರುವುದರಿಂದ ನಿತ್ಯ ತೊಂದರೆಯಾಗುತ್ತಿದೆ.
ಕಣ ಇಲ್ಲದೇ ರಸ್ತೆಯಲ್ಲಿ ಒಕ್ಕಣೆ: ಈ ಬಾರಿ ಉತ್ತಮ ಮಳೆಯಾಗಿದ್ದು, ಹುರುಳಿ ಬೆಳೆ ವ್ಯಾಪಕವಾಗಿ ಬೆಳೆದಿದೆ. ಮುಂಗಾರು ಬಿತ್ತನೆ ಮಾಡಿದ ಬಹುತೇಕ ರೈತರು ಕಟಾವು ಮಾಡುತ್ತಿದ್ದು, ಕಣ ಇಲ್ಲದ ಪರಿಣಾಮ ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ತಾಲೂಕಿನ ಪಡಗೂರು, ಇಂಗಲವಾಡಿ, ಹಂಗಳ, ದೇವರಹಳ್ಳಿ, ಮಡಹಳ್ಳಿ, ಶಿವಪುರ, ಬೊಮ್ಮಲಾಪುರ, ಸೋಮಹಳ್ಳಿ, ಹೆಡಿಯಾಲ ಸೇರಿದಂತೆ ರಸ್ತೆಯಲ್ಲಿಯೇ ಹರಡಿಕೊಂಡಿದ್ದಾರೆ.
ಹುರುಳಿ ಬಳ್ಳಿಯಿಂದ ಗಂಭೀರ ಸಮಸ್ಯೆ: ರಸ್ತೆಯಲ್ಲಿ ಒಕ್ಕಣೆಯಿಂದ ದ್ವಿ ಚಕ್ರ ವಾಹನ, ಕಾರುಗಳು, ಬಸ್ ಮುಂತಾದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಇಂತಹ ರಸ್ತೆಯಲ್ಲಿ ಸಾಗುವ ದ್ವಿ ಚಕ್ರ ಸವಾರರು ಜಾರಿ ಬೀಳುತ್ತಿದ್ದಾರೆ. ಕಾರುಗಳು, ಬಸ್ಸುಗಳ ತಳಭಾಗಕ್ಕೆ ಹುರುಳಿಯ ಬಳ್ಳಿಗಳು ಸುತ್ತಿಕೊಳ್ಳುವುದರಿಂದ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ.
ಸಾಮೂಹಿಕ ಕಣ ನಿರ್ಮಿಸಿಲ್ಲ: ಪ್ರತಿ ವರ್ಷವೂ ಹುರುಳಿ ಕಟಾವು ಸಂದರ್ಭದಲ್ಲಿ ಇದು ಮರುಕಳಿಸುತ್ತಿದ್ದರೂ ಕೃಷಿ ಇಲಾಖೆ ಎಲ್ಲಾ ಗ್ರಾಮಗಳಲ್ಲಿಯೂ ಸಾಮೂಹಿಕ ಒಕ್ಕಣೆ ಕಣ ನಿರ್ಮಿಸಿಕೊಟ್ಟಿಲ್ಲ. ರಸ್ತೆಯ ಮೇಲೆ ಹಾಕದಂತೆ ಲೋಕೋಪಯೋಗಿ ಇಲಾಖೆ. ಗ್ರಾಮ ಪಂಚಾಯ್ತಿ, ಪೊಲೀಸ್ ಇಲಾಖೆ ತಿಳಿಸಿದ್ದರೂ ಸಹ ರೈತರು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಪಟ್ಟಣ ಠಾಣೆಯಲ್ಲಿ ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದ ಎಂಟು ಮಂದಿ ರೈತರ ವಿರುದ್ಧ ದೂರು ದಾಖಲಾಗಿದೆ.
ನರೇಗಾ ಯೋಜನೆಯಲ್ಲಿ ಸ್ವಂತ ಕಣ ನಿರ್ಮಿಸಲು ಇಲಾಖೆಯಲ್ಲಿ ಅನುದಾನವಿದೆ. ಆದರೂ, ಇದನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಗ್ರಾಮ ಪಂಚಾಯ್ತಿಗಳು ಸ್ಥಳಾವಕಾಶ ನೀಡಿ, ಸ್ವಲ್ಪ ಅನುದಾನ ನೀಡಿದರೆ ಸಾಮೂಹಿಕ ಕಣಗಳನ್ನು ನಿರ್ಮಿಸಬಹುದು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ವೆಂಕಟೇಶ್, ಸಹಾಯಕ ಕೃಷಿ ನಿರ್ದೇಶಕ
ರಸ್ತೆಯಲ್ಲಿ ಒಕ್ಕಣೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಮತ್ತು ವಾಹನಗಳಿಗೆ ಬೆಂಕಿ ಬಿದ್ದು ಆಗುತ್ತಿರುವ ಅನಾಹುತ ತಪ್ಪಿಸುವ ದೃಷ್ಟಿಯಿಂದ ಈಗಾಗಲೇ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ನೂರಾರು ರೈತರಿಗೆ ಈ ಬಗ್ಗೆ ಅರಿವು ಮೂಡಿಸಿದ್ದರೂ ಸಹ ಪದೇ ಪದೇ ರಸ್ತೆಯಲ್ಲಿ ಒಕ್ಕಣೆ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಇನ್ನಾದರೂ ರಸ್ತೆಯಲ್ಲಿ ಒಕ್ಕಣೆ ಮಾಡದೇ ಸೂಕ್ತ ಸ್ಥಳದಲ್ಲಿ ಮಾಡಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ರೈತರು ಸಹಕರಿಸಬೇಕು.
-ಲತೇಶ್ ಕುಮಾರ್, ಎಸ್‌ಐ, ಪಟ್ಟಣ ಪೊಲೀಸ್ ಠಾಣೆ
* ಸೋಮಶೇಖರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.