ಉಘೇ ಮಾದಪ್ಪನ ಶಿವರಾತ್ರಿ ಮಹಾ ರಥೋತ್ಸವ
Team Udayavani, Feb 25, 2020, 3:00 AM IST
ಹನೂರು: ಉಘೇ ಮಾದಪ್ಪ, ಉಘೇ ಮಾದಪ್ಪ ಎಂಬ ಘೋಷಣೆಗಳ ಮಧ್ಯೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಮಲೆ ಮಾದಪ್ಪನ ಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಶಿವರಾತ್ರಿ ಜಾತ್ರಾ ಮಹೋತ್ಸವ ಮಹಾರಥೋತ್ಸವ ಕಣ್ತುಂಬಿಕೊಳ್ಳಲು, ರಥೋತ್ಸವಕ್ಕೂ ಮುನ್ನ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತಾದಿಗಳು ಕಳೆದ 4-5 ದಿನಗಳಿಂದಲೇ ಪಾದಯಾತ್ರೆ ಹಾಗೂ ವಾಹನಗಳ ಮೂಲಕ ಆಗಮಿಸಿ ಶ್ರೀ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದರು. ಸುಮಾರು 3 ಲಕ್ಷ ಭಕ್ತರು ರಥೋತ್ಸವನ್ನು ಕಣ್ತುಂಬಿಕೊಂಡು ಧನ್ಯತಾಭಾವ ಮೆರೆದರು.
ಉತ್ಸವಮೂರ್ತಿಗೆ ವಿಶೇಷ ಪೂಜೆ: ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೀಯವಾದ ರಥೋತ್ಸವಕ್ಕೂ ಮುನ್ನ ಬೇಡಗಂಪಣ ಅರ್ಚಕ ವೃಂದದವರಿಂದ ವಿಧಿವಿಧಾನಗಳೊಂದಿಗೆ ಉತ್ಸವಮೂರ್ತಿಯನ್ನು ಅಲಂಕೃತಗೊಳಿಸಿ, ಬಿಳಿ ಆನೆ ಪೂಜೆ ನೆರವೇರಿಸಲಾಯಿತು. ಬಳಿಕ ಉತ್ಸವಮೂರ್ತಿಯನ್ನು ಬಿಳಿ ಆನೆಯ ವಾಹನದ ಮೇಲೆ ಇಟ್ಟು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಸತ್ತಿಗೆ ಸುರಪಾನಿ, ಜಾಗಟೆ, ವಾದ್ಯ-ಮೇಳಗಳ ಜೊತೆ ದೇವಾಲಯದ ಆವರಣದಲ್ಲಿ ವಿವಿಧ ಬಗೆಯ ಪುಷ್ಪ, ತಳಿರು-ತೋರಣ, ಬಣ್ಣ-ಬಣ್ಣದ ಬಟ್ಟೆಗಳಿಂದ ಅಲಂಕರಿಸಿ ಸಿದ್ಧಿಗೊಳಿಸಲಾಗಿದ್ದ ಮಹಾರಥೋತ್ಸವದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ರಥೋತ್ಸವಕ್ಕೆ ಚಾಲನೆ: ಉತ್ಸವಮೂರ್ತಿಯನ್ನು ರಥೋತ್ಸವದಲ್ಲಿ ಇಟ್ಟು ವಿಧಿವಿಧಾನಗಳೊಂದಿಗೆ ಬೇಡಗಂಪಣ ಅರ್ಚಕ ಪದ್ಧತಿಯಂತೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬೆಳಗ್ಗೆ 10 ಗಂಟೆಯ ಶುಭವೇಳೆಯಲ್ಲಿ ಬೂದುಗುಂಬಳಕಾಯಿಯಿಂದ ಆರತಿ ಬೆಳಗುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಹಸಿರು ಸೀರೆ ಮತ್ತು ಕುಪ್ಪಸ ಧರಿಸಿದ್ದ ಹೆಣ್ಣುಮಕ್ಕಳು ರಥೋತ್ಸವಕ್ಕೆ ಬೆಲ್ಲದ ಆರತಿ ಬೆಳಗಿ ರಂಗುತಂದರು.
ರಥೋತ್ಸವದ ಮುಂಭಾಗ ವೀರಗಾಸೆ, ಕೀಲುಗೊಂಬೆ ಕುಣಿತ, ಕಂಸಾಳೆ ನೃತ್ಯ ತಂಡಗಳು ಮೆರುಗು ನೀಡಿದವು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಭಕ್ತಾದಿಗಳ ಹಷೋದ್ಘಾರ ಮುಗಿಲು ಮುಟ್ಟುವಂತಿತ್ತು. ಈ ವೇಳೆ ಭಕ್ತಾದಿಗಳು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ದವಸ-ಧಾನ್ಯಗಳು, ಚಿಲ್ಲರೆ ನಾಣ್ಯ, ಎಳ್ಳು, ಹೂ-ಹಣ್ಣು, ಜವನ ಎಸೆದು ಭಕ್ತಿ ಸಮರ್ಪಿಸಿದರು. ಈ ವೇಳೆ ಭಕ್ತಾದಿಗಳು ಮಹದೇಶ್ವರನ ಭಕ್ತಿ ಗೀತೆಗಳು, ಜನಪದ ಗೀತೆಗಳು, ಸೋಬಾನೆ ಪದಗಳನ್ನು ಹಾಡುತ್ತಾ ತಮ್ಮ ಭಕ್ತಿಯನ್ನು ಮೆರೆದರು.
ಬಿಗಿ ಬಂದೋಬಸ್ತ್: ಮಹಾರಥೋತ್ಸವದ ಹಿನ್ನೆಲೆ ಕೊಳ್ಳೇಗಾಲ ಉಪವಿಭಾಗ ಡಿವೈಎಸ್ಪಿ ನವೀನ್‌ಕುಮಾರ್ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಹದೇಶ್ವರ ಬೆಟ್ಟದ ಕರಾರಸಾಸಂ ವಾಹನ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಆಯಾ ಕಟ್ಟಿನ ಸ್ಥಳಗಳಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ರಥೋತ್ಸವ ಪ್ರಾರಂಭವಾಗುತ್ತಿದ್ದಂತೆ ರಥವನ್ನು ಎಳೆಯಲು ಭಕ್ತಾದಿಗಳು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದ ಹಿನ್ನೆಲೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಡುವಂತಾಯಿತು. ಇದೇ ವೇಳೆ ರಥ ಸಾಗುವ ದಾರಿಯಲ್ಲಿ ರಥೋತ್ಸವಕ್ಕೆ ಸೂಕ್ತ ಸ್ಥಳಾವಕಾಶ ಬಿಟ್ಟು ಮಾರ್ಗದ ಇಕ್ಕೆಲಗಳಲ್ಲಿ ನಿಂತು ನೋಡುವಂತೆ ಪ್ರಾಧಿಕಾರದ ಸಿಬ್ಬಂದಿ, ಧ್ವನಿವರ್ಧಕದ ಮೂಲಕ ಮನವಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.
ವಿವಿಧೆಡೆ ಟ್ರಾಫಿಕ್ ಜಾಮ್: ಮಲೆ ಮಹದೇಶ್ವರ ಬೆಟ್ಟದಲ್ಲಿ ರಥೋತ್ಸವ ಮುಕ್ತಾಯವಾಗುತ್ತಿದ್ದಂತ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಮಾದಪ್ಪನ ಪರಿಷೆಯ ಜನ ತಮ್ಮ ಸ್ವಗ್ರಾಮಗಳತ್ತ ವಾಪಸ್ಸಾಗುತ್ತಿದ್ದರು. ಈ ವೇಳೆ ಒಂದೇ ಬಾರಿ ಪರಿಷೆ ಜನ ಹಿಂದಿರುಗುತ್ತಿದ್ದಂತೆ ಕೆಲ ಕಾಲ ಬಸ್‌ಗಳ ಸಮಸ್ಯೆ ತಲೆದೋರಿತ್ತು. ಅಲ್ಲದೇ ಮಲೆ ಮಹದೇಶ್ವರ ಬೆಟ್ಟದ ಕಡಿದಾದ ತಿರುವುಗಳಲ್ಲಿ, ತಾಳಬೆಟ್ಟ ಸಮೀಪ, ಕೌದಳ್ಳಿ ಮತ್ತು ಹನೂರು ಪಟ್ಟಣದ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಸಮಸ್ಯೆ ತಲೆದೋರಿತ್ತು. ಟ್ರಾಫಿಕ್ ಸಮಸ್ಯೆ ನಿವಾರಿಸಲು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಪರದಾಡುವಂತಾಗಿತ್ತು.
5 ದಿನದಲ್ಲಿ 3.06 ಕೋಟಿ ರೂ. ಸಂಗ್ರಹ: ಶಿವರಾತ್ರಿ ಜಾತ್ರಾ ಮಹೋತ್ಸವದ 5 ದಿನಗಳ ಅವಧಿಯಲ್ಲಿ ವಿಶೇಷ ಪ್ರವೇಶ ಶುಲ್ಕ, ವಾಹನ ಉತ್ಸವಗಳ ಸೇವೆ, ಲಾಡು ಮಾರಾಟ, ಕೊಠಡಿಗಳ ಬಾಡಿಗೆ, ವಾಹನಗಳ ಪ್ರವೇಶ ಶುಲ್ಕ ಸೇರಿದಂತೆ ವಿವಿಧ ಮೂಲಗಳಿಂದ 3.06 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನೂ 2 ದಿನಗಳ ಕಾಲ ಜಾತ್ರಾ ಮಹೋತ್ಸವ ಜರುಗಲಿದ್ದು ಈ ಆದಾಯ ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಕಳೆದ 2019ನೇ ಸಾಲಿನ 6 ದಿನಗಳ ಜಾತ್ರಾ ಮಹೋತ್ಸವದಲ್ಲಿ 2.57 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು ಜಾತ್ರಾ ಮಹೋತ್ಸವ, ಪ್ರಾಧಿಕಾರದ ಬಸ್ಸುಗಳ ಆದಾಯ, ಪೆಟ್ರೋಲ್ ಬಂಕಿನ ಆದಾಯ, ನಿಶ್ಚಿತ ಠೇವಣಿ ಮೇಲಿನ ಬಡ್ಡಿ, ಹುಂಡಿಯ ಆದಾಯ ಸೇರಿದಂತೆ ಇನ್ನಿತರ ಮೂಲಗಳ ಆದಾಯವನ್ನು ಕ್ರೋಢಿಕರಿಸಿ ಫೆ.27ರಂದು ಮಾಹಿತಿ ನೀಡುವುದಾಗಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಸೇವೆಗಳಿಗೆ ದುಬಾರಿ ಶುಲ್ಕ – ಭಕ್ತರ ಆಕ್ರೋಶ: ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಶುಚಿತ್ವಕ್ಕೆ ಕೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಹೇಳುತ್ತಾರೆ. ಆದರೆ, ಶ್ರೀಕ್ಷೇತ್ರದಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಅಲ್ಲದೇ ಲಾಡು ತಯಾರಿಕೆಯಲ್ಲಿ ಹಿಂದಿನ ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ. ಜೊತೆಗೆ ದರ ಕೂಡ ಹೆಚ್ಚಾಗಿದೆ. ಇನ್ನು ವಿಶೇಷ ದರ್ಶನ ಶುಲ್ಕ, ಮುಡಿ ಸೇವೆಗಳ ದರವನ್ನೂ ಹೆಚ್ಚಳ ಮಾಡಲಾಗಿದೆ. ಸ್ನಾನಗೃಹಗಳು ದುರ್ವಾಸನೆ ಬೀರುತ್ತಿವೆ ಎಂದು ಕೆಲ ಭಕ್ತಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊಳ್ಳೇಗಾಲದಿಂದ ಮ.ಬೆಟ್ಟದವರೆಗಿನ ಕರಾರಸಾಸಂ ಬಸ್ ನಿಗದಿಪಡಿಸಿರುವ 80 ರೂ. ಶುಲ್ಕ ಸಹ ದುಬಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ವಿನೋದ್ ಎನ್. ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.