ಶೀಘ್ರದಲ್ಲೇ ಸಾರ್ವಜನಿಕರ ಸಮಸ್ಯೆಗೆ ಪರಿಹಾರ
Team Udayavani, Dec 23, 2019, 3:00 AM IST
ಚಾಮರಾಜನಗರ: ಸಾರ್ವಜನಿಕ ಶೌಚಾಲಯ ಕಲ್ಪಿಸಿ, ಶಾಲೆಯ ಸಮೀಪದ ಮದ್ಯದ ಅಂಗಡಿ ತೆರವುಗೊಳಿಸಿ, ಹನೂರು ತಾಲೂಕಾಗಿದ್ದರೂ ಕಚೇರಿ ಕೆಲಸಕ್ಕೆ ಕೊಳ್ಳೇಗಾಲಕ್ಕೇ ಹೋಗಬೇಕಾಗಿದೆ, ಕೋತಿಗಳ ಕಾಟ ತಪ್ಪಿಸಿ. . . . ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತ ನಾಗರಿಕರು ಜಿಲ್ಲಾಡಳಿತದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿ ದೂರು ಹೇಳಿಕೊಂಡರು.
ಜನರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 32 ದೂರುಗಳು ದಾಖಲಾದವು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಬಿ.ಎಚ್. ನಾರಾಯಣರಾವ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್ ಅವರ ಸಮ್ಮುಖದಲ್ಲಿ ನಡೆದ ಒಂದು ತಾಸಿನ ಅವಧಿಯ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಮಸ್ಯೆಗಳ ಕುರಿತು ದೂರುಗಳು ಕೇಳಿಬಂದವು.
ಸಾರ್ವಜನಿಕ ಶೌಚಾಲಯಗಳಿಲ್ಲ: ಚಾಮರಾಜನಗರದ 15ನೇ ವಾರ್ಡ್‌ನಿಂದ ಸಾರ್ವಜನಿಕರೊಬ್ಬರು ಕರೆ ಮಾಡಿ, 15ನೇ ವಾರ್ಡ್‌ನಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯಗಳಿಲ್ಲ. ಇದರಿಂದ ಸ್ವಚ್ಛತೆ ಸಮಸ್ಯೆ ತಲೆದೋರಿದೆ. ಅಲ್ಲದೇ ಇಲ್ಲಿರುವ ಅಂಗನವಾಡಿಗೆ ಅಗತ್ಯ ಆಹಾರ ಪದಾರ್ಥ ಸರಬರಾಜಾಗದ ಕಾರಣ ಮಕ್ಕಳಿಗೆ ತೊಂದರೆಯಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಅಂಗನವಾಡಿ ಆಹಾರ ಸಮಸ್ಯೆಯ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಇನ್ನು ಶೌಚಾಲಯ ನಿರ್ಮಾಣ ಬಗ್ಗೆ ಗಮನ ಹರಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಮದ್ಯದ ಅಂಗಡಿ ತೆರವುಗೊಳಿಸಿ: ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಿಂದ ಕರೆ ಮಾಡಿದ ಓರ್ವರು, ಚಂದಕವಾಡಿಯ ಶಾಲೆಯೊಂದರ ಸಮೀಪದಲ್ಲಿ ಮದ್ಯದ ಅಂಗಡಿ ತೆರೆಯಲಾಗಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದನ್ನು ತೆರವುಗೊಳಿಸಿ ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಇದಕ್ಕೆ ಪ್ರತಿಕ್ರಿಯಿಸಿ, ಶೀಘ್ರವಾಗಿ ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಇ-ಸ್ವತ್ತು ನೀಡುವಲ್ಲಿ ಅಕ್ರಮ: ಹನೂರು ಪಟ್ಟಣದ ನಿವಾಸಿಯೊಬ್ಬರು ಕರೆ ಮಾಡಿ, ಪಟ್ಟಣ ಪಂಚಾಯ್ತಿಯಲ್ಲಿ ಇ-ಸ್ವತ್ತು ನೀಡುವಲ್ಲಿ ಅಕ್ರಮ ನಡೆದಿದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೇ ಬೇನಾಮಿ ಹೆಸರಿನಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಗಮನ ಸೆಳೆದರು. ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ತ್ವರಿತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಾಲುವೆ ಒತ್ತುವರಿ: ನಗರದ ಹೊರವಲಯದಿಂದ ಕರೆ ಮಾಡಿದ ಓರ್ವರು, ಜ್ಯೋತಿಗೌಡನಪುರದ ಹತ್ತಿರ ಅರಣ್ಯ ಇಲಾಖೆಗೆ ಸೇರಿದ ಸ್ಥಳವನ್ನು ಸಮತಟ್ಟು ಮಾಡಿ, ಅಕ್ರಮವಾಗಿ ಜಮೀನಾಗಿ ಪರಿವರ್ತಿಸಿಕೊಳ್ಳಲಾಗಿದೆ. ಜತೆಗೆ ಕಾಲುವೆಯೊಂದನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕಲಾಗಿದೆ ಎಂದು ಹೇಳಿದರು. ಇದಕ್ಕೆ ಉತ್ತರ ನೀಡಿದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲಿಸಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಹನೂರಿನಲ್ಲಿ ರೆಕಾರ್ಡ್ ರೂಮ್ ಸ್ಥಾಪನೆ: ಸಾರ್ವಜನಿಕರೊಬ್ಬರು, ಹನೂರು ತಾಲೂಕಿನಿಂದ ಕರೆ ಮಾಡಿ, ಹನೂರು ತಾಲೂಕು ಆಗಿದ್ದರೂ, ಸರ್ಕಾರಿ ದಾಖಲಾತಿಗಳಿಗಾಗಿ ಇಂದಿಗೂ ಕೊಳ್ಳೇಗಾಲಕ್ಕೆ ಹೋಗಬೇಕು. ಇದನ್ನು ಪರಿಹರಿಸುವಂತೆ ಕೋರಿದರು. ಇದಕ್ಕೆ ಉತ್ತರ ನೀಡಿದ ಜಿಲ್ಲಾಧಿಕಾರಿ ಅವರು ಹೊಸ ಕಡತಗಳನ್ನು ಈಗಾಗಲೇ ಹನೂರಿನಲ್ಲಿಯೇ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಹಳೆಯ ದಾಖಲಾತಿಗಳನ್ನು ಹನೂರಿನಲ್ಲಿ ರೆಕಾರ್ಡ್ ರೂಮ್ ಸ್ಥಾಪಿಸಿದ ಬಳಿಕ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ರಾಮಾಪುರ ಬಳಿಯ ಚೆಕ್ ಡ್ಯಾಮ್ ಕಾಮಗಾರಿ ವಿಳಂಬ, ಹಂಗಳ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಪಂಚಾಯ್ತಿಗಳಲ್ಲಿನ ಅವ್ಯವಸ್ಥೆ ಬಗೆಗಿನ ಸಮಸ್ಯೆಗಳ ಕುರಿತು ಉತ್ತರ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ನಾರಾಯಣರಾವ್ ಅವರು ತ್ವರಿತ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ರಸ್ತೆ, ಚರಂಡಿ ದುರಸ್ಥಿ, ನೀರಿನ ಸಮಸ್ಯೆ, ಅಕ್ರಮ ಮದ್ಯ ಮಾರಾಟ, ಕೋತಿಗಳ ಕಾಟ, ವಿದ್ಯುತ್ ಸಮಸ್ಯೆ, ಅಕ್ರಮ ಖಾಸಗಿ ಮನೆಪಾಠ, ಪಿಂಚಣಿ ವಿಷಯಗಳ ಕುರಿತು ಸಮಸ್ಯೆಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿಬಂದವು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.