ಸಾಮಾನ್ಯ ಹೆರಿಗೆಗೂ ಸಿಜೇರಿಯನ್ ಮಾಡಿಸಲು ವೈದ್ಯರ ಸೂಚನೆ!
ಮಹಿಳಾ ವೈದ್ಯರಿಂದ ಬಡವರ ಸುಲಿಗೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
Team Udayavani, Feb 10, 2021, 2:43 PM IST
ಯಳಂದೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರೊಬ್ಬರು ಸಾಮಾನ್ಯ ಹೆರಿಗೆಗೂ ಸಿಜೇರಿಯನ್ ಮಾಡಿಸಿಕೊಳ್ಳುವ ಸಲಹೆನೀಡಿ ಆ ನೆಪದಲ್ಲೇ ಬಡ ರೋಗಿಗಳಿಂದ ಹಣ ವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಎದುರು ತಾಪಂ ಸದಸ್ಯರು ಈ ಆರೋಪ ಮಾಡಿದರು. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞವೈದ್ಯರು ಸಾಮಾನ್ಯ ಹೆರಿಗೆಗೆ ಬರುವ ಗರ್ಭಿಣಿಯರಿಗೂ ಶಸ್ತ್ರ ಚಿಕಿತ್ಸೆ ಮಾಡುವ ಸಲಹೆ ನೀಡುತ್ತಾರೆ.
ಅವರಿಂದ ಸಾವಿರಾರು ರೂ. ವಸೂಲಿ ಮಾಡುತ್ತಾರೆ. ರೋಗಿಗಳೊಂದಿಗೆ ಅನುಚಿತವಾಗಿ ವರ್ತಿಸು ತ್ತಾರೆ. ಕೂಡಲೇ ಇವರನ್ನು ವರ್ಗಾವಣೆ ಮಾಡ ಬೇಕು ಎಂದು ಸದಸ್ಯ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ. ಮೋಳೆ ನಾಗರಾಜು ಆರೋಪಿಸಿದರು. ಇದಕ್ಕೆ ಇತರೆ ಸದಸ್ಯರು ಧ್ವನಿಗೂಡಿಸಿದರು. ಈ ಬಗ್ಗೆ ಆರೋಗ್ಯಾಧಿಕಾರಿ ಮಂಜುನಾಥ್ ಉತ್ತರಿಸಿ, ನಮಗೂ ಈ ಬಗ್ಗೆ ದೂರುಗಳಿವೆ. ಇಲಾಖೆಗೆ ಇದು ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆದೂರು ನೀಡಿ ಕ್ರಮ ವಹಿಸುವ ಭರವಸೆ ನೀಡಿದರು. ಅಲ್ಲದೆ ಬಾಗಿಲು ಹಾಕಿರುವ ಜನೌಷಧಿ ಕೇಂದ್ರವನ್ನು ತೆರೆಯಲು ಕ್ರಮ ವಹಿಸುವುದಾಗಿ ಸಭೆಗೆ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ಸುವರ್ಣಾವತಿ ಸೇತುವೆ ಕಾಮಗಾರಿ ಪೂರ್ಣಗೊಳಿ ಸ ಬೇಕು. ಅಧಿಕ ಭಾರಹೊತ್ತ ವಾಹನಗಳುಇಲ್ಲಿ ಸಂಚರಿಸಬಾರದು ಎಂಬ ನಿಯಮವಿದ್ದರೂ ಇದರ ಉಲ್ಲಂಘನೆಯಾಗುತ್ತಿದ್ದು ಕೂಡಲೇ ಈ ಬಗ್ಗೆ ನಾಮಫಲಕ ಅಳವಡಿಸಬೇಕು. ಮಾಂಬಳ್ಳಿ ಗ್ರಾಮದ ಸೇತುವೆ ಕಾಮಗಾರಿ ಬೇಗ ಮುಗಿಸ ಬೇಕು ಎಂದು ಸೂಚನೆ ನೀಡಲಾಯಿತು. ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳ ವಿತರಣೆಗೆ ಕ್ರಮ ವಹಿಸುವ, ವಿತರಿಸುವ ವೇಳೆಯಲ್ಲಿ ಸಂಬಂಧಪಟ್ಟ ಸದಸ್ಯರ ಸಮ್ಮುಖದಲ್ಲೇ ಇದನ್ನು ವಿತರಿಸಲು ಕ್ರಮ ವಹಿಸಲಾಗುವುದು ಎಂದು ಸಿಡಿಪಿಒ ದೀಪಾ ಸಭೆಗೆ ಮನವರಿಕೆ ಮಾಡಿಕೊಟ್ಟರು.
ಪಂಚಾಯತ್ ರಾಜ್ ಇಲಾಖೆಯ ಜೆಇ ಧನಲಕ್ಷ್ಮೀ, ಕಾಮಗಾರಿಗಳನ್ನು ನಿಗದಿತ ಅವಧಿ ಯಲ್ಲಿ ಪೂರ್ಣಗೊಳಿಸುತ್ತಿಲ್ಲ. ಅಲ್ಲದೆ ಅನೇಕ ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಬಿಲ್ ಪಾವತಿಯಲ್ಲೂ ವಿಳಂಬವಾಗುತ್ತಿದೆ ಎಂದು ಅನೇಕ ದೂರುಗಳಿದ್ದು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಇಒ ಉಮೇಶ್ ಮಾತನಾಡಿ, ಆದಷ್ಟು ಫೆಬ್ರವರಿ ತಿಂಗಳೊಳಗೆ ಎಲ್ಲಾ ಕಾಮಗಾರಿಗಳನ್ನು ಮುಗಿಸಬೇಕು. ನೀರಾವರಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತಿ ಶುಕ್ರವಾರ ಸಭೆ ನಡೆಸಲಾಗುವುದು, ಯಾವುದೇ ಕಾರಣಕ್ಕೂ
ಕಾಮಗಾರಿ ವಿಳಂಬವಾಗಬಾರದು, ಗುಣಮಟ್ಟದಿಂದ ಕೂಡಿರಬೇಕು ಎಂದು ಎಚ್ಚರಿಕೆ ನೀಡಿದರು. ಸಾಮಾಜಿಕ ಅರಣ್ಯ, ಶಿಕ್ಷಣ, ಕಾವೇರಿ ನೀರಾವರಿ ನಿಗಮ, ಸಮಾಜಕಲ್ಯಾಣ, ಅಬಕಾರಿ ಸೇರಿದಂತೆ ವಿವಿಧ ಇಲಾಖೆಯ ವಿಷಯಗಳು ಚರ್ಚೆಯಾದವು.
ತಾಪಂ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಭಾಗ್ಯ ನಂಜಯ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಸದಸ್ಯರಾದ ನಿರಂಜನ್, ವೆಂಕಟೇಶ್, ಶಾರದಾಂಬ, ಮಣಿ, ಪದ್ಮಾವತಿ, ಪಲ್ಲವಿಮಹೇಶ್, ಪುಟ್ಟು ಇಒ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.