ಕ್ಷೀಣಿಸುತ್ತಿದೆ ಮಂಟೇಸ್ವಾಮಿ ಕಾವ್ಯದ ನೀಲಗಾರ ಪರಂಪರೆ
Team Udayavani, Jan 15, 2020, 3:00 AM IST
ಚಾಮರಾಜನಗರ: ದಕ್ಷಿಣ ಕರ್ನಾಟಕದ ಜನಪದ ಗಾಯಕರಲ್ಲಿ ಮಂಟೇಸ್ವಾಮಿ ಪರಂಪರೆಗೆ ಸೇರಿದ ನೀಲಗಾರರು ಪ್ರಮುಖರಾದವರು. ತಂಬೂರಿ ಇವರ ಪ್ರಮುಖ ವಾದ್ಯ. ನಾಲ್ಕು ತಂತಿಯ ಈ ವಾದ್ಯ ನುಡಿಸುತ್ತಾ ಇವರು ತಾಳ ಮೇಳಗಳೊಡನೆ ಸುವಿಸ್ತಾರ ಲಾವಣಿ ಹಾಡುತ್ತಾರೆ. ಆದರೆ, ಈ ಪರಂಪರೆ ಕ್ರಮೇಣ ಕ್ಷೀಣಿಸುತ್ತಿದೆ.
ತಲೆಯ ಮೇಲೆ ಕೆಂಪು ಮುಂಡಾಸು, ಮೈ ಮೇಲೆ ಬಣ್ಣದ ನಿಲುವಂಗಿ, ಕಚ್ಚೆಯ ಪಂಚೆ, ನಡುವಿಗೆ ಸುತ್ತಿದ ವಸ್ತ್ರಗಳೊಡನೆ ಈ ಕಲಾವಿದರು ಹೊರಗೆ ಹೊರಡುತ್ತಾರೆ. ಹಣೆಯಲ್ಲಿ ವಿಭೂತಿ ಗಂಧ ಧರಿಸುತ್ತಾರೆ. ಕೊರಳಲ್ಲಿ ಮೂರು ರುದ್ರಾಕ್ಷಿ ಮಣಿಗಳು ಇರುತ್ತದೆ. ಲೀಲೆಗಾರರು ಎಂಬ ಪದವೇ ನೀಲಗಾರರು ಎಂದಾಗಿದೆ. ಲೀಲೆಗಾರರು ಎಂದರೆ ಗುರುವಿನ ಲೀಲೆಯನ್ನು ಹಾಡುವರು ಎಂದರ್ಥ.
ಕಥೆಯಲ್ಲಿ ಬರುವ ಧರೆಗೆ ದೊಡ್ಡವರ ಹೆಸರು: ನೀಲಗಾರರಲ್ಲಿ ಪ್ರಧಾನವಾಗಿ ಪರಿಶಿಷ್ಟ ಜಾತಿಯವರು, ಉಪ್ಪಾರರು, ಕುರುಬರು, ಅಕ್ಕಸಾಲಿಗರು, ಕುಂಬಾರರು ಸೇರಿದಂತೆ ಹಿಂದುಳಿದ ಹಾಗೂ ತಳ ಸಮುದಾಯವರಿದ್ದಾರೆ. ಇವರು ತಮ್ಮನ್ನು ಸಿದ್ಧಪ್ಪಾಜಿಯ ಗುಡ್ಡಗಳು ಎಂದು ಕರೆದುತ್ತಾರೆ. ನೀಲಗಾರರಲ್ಲಿ ಎರಡು ವಿಧ. ಸಾಧಾರಣ ನೀಲಗಾರರು ಮತ್ತು ತಂಬೂರಿ ನೀಲಗಾರರು. ಸಾಧಾರಣ ನೀಲಗಾರರು ಕೇವಲ ಗುಡ್ಡರು.
ಇವರು ಕಾವ್ಯ ಅಥವಾ ಪದ ಹಾಡುವುದಿಲ್ಲ, ಅಲ್ಲದೇ ಇವರಿಗೆ ಒಂದು ರುದ್ರಾಕ್ಷಿ ಕಟ್ಟಲಾಗಿರುತ್ತದೆ. ತಂಬೂರಿ ನೀಲಾಗರರು ದೇವರ ಕಥೆಗಳನ್ನು ಹಾಡುತ್ತ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುತ್ತಾರೆ. ನೀಲಗಾರರು ಮಂಟೇಸ್ವಾಮಿ ಸಂಪ್ರದಾಯಕ್ಕೆ ಸೇರಿದ್ದವರಾದ್ದರಿಂದ ಮಂಟೇದವರು ಮಂಟೇದಯ್ಯ, ಮಂಟೇಸ್ವಾಮಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಮಂಟೆಲಿಂಗಯ್ಯ ಎಂಬುದು ಮಂಟೇಸ್ವಾಮಿ ಕಥೆಯಲ್ಲಿ ಬರುವ ಧರೆಗೆ ದೊಡ್ಡವರ ಹೆಸರು.
ಹಿರಿಯ ಮಗನಿಗೆ ದೀಕ್ಷೆ: ನೀಲಗಾರರು ತಮ್ಮನ್ನು ಸಿದ್ಧಪ್ಪಾಜಿಯ ಗುಡ್ಡರು ಎಂದು ಕರೆದುಕೊಳ್ಳುತ್ತಾರೆ. ಇವರಲ್ಲಿ 2 ತಂಡಗಳನ್ನು ಗುರುತಿಸಬಹುದು. ಮಂಟೇಸ್ವಾಮಿಯ ಮನೆತನ ಎಂದು ಕರೆದುಕೊಳ್ಳುವ ಅನೇಕ ಒಕ್ಕಲುಗಳಲ್ಲಿ ಸ್ವಾಮಿಯ ಕಥೆಯನ್ನು ಹಾಡದವರು, ಒಂಟಿ ಮಣಿಯನ್ನು ಹಾಡುವವರು ಮೂರು ಮಣಿಗಳನ್ನು ಧರಿಸುತ್ತಾರೆ. ಇವೆಲ್ಲ ಅವರ ಗುರು ಕೊಟx ಲಾಂಛನಗಳು. ಹಾಡುವ ಪದ್ಧತಿ ಎಲ್ಲರಿಗೂ ನಡೆದು ಬಂದಿಲ್ಲ. ಒಂದೊಂದು ಒಕ್ಕಲಲ್ಲಿ ಒಬ್ಬ ಮಗ ಮಾತ್ರ ಈ ಹಕ್ಕಿಗೆ ಪಾತ್ರನಾಗುತ್ತಾನೆ. ಮನೆಯ ಹಿರಿಯ ಮಗನ್ನು ಹುಟ್ಟಿದ ಏಳು ವರ್ಷಗಳಿಗೆ ಶ್ರೀ ಮಠಕ್ಕೆ ಕರೆದುಕೊಂಡು ಹೋಗಿ ದೀಕ್ಷೆ ಕೊಡಿಸಲಾಗುವುದು. ದೀಕ್ಷೆ ಬೊಪ್ಪಗೌಡನ ಪುರದ ಮಠದಲ್ಲೋ, ಮಳವಳ್ಳಿ ಮಠದಲ್ಲೋ, ಜಾತ್ರೆಗಳು ನಡೆಯುವ ಕಪ್ಪಡಿ ಚಿಕ್ಕಲ್ಲೂರು ಕ್ಷೇತ್ರಗಳಲ್ಲೋ ನಡೆಯುತ್ತದೆ.
ನೀಲಗಾರರ ತಂಬೂರಿ ಜನಪದ ವಾದ್ಯ: ನೀಲಗಾರರ ತಂಬೂರಿ ಒಂದು ವಿಶಿಷ್ಠ ಸ್ವರೂಪದ ಜನಪದ ವಾದ್ಯ. ಧರೆಗೆ ದೊಡ್ಡವರೇ ತಂಬೂರಿಯನ್ನು ಹಿಡಿದು ಹಾಕಿಕೊಂಡು ಬಂದರು ಎಂಬ ಐತಿಹ್ಯವಿದೆ. ಸಿದ್ಧಪ್ಪಾಜಿಯವರು ಹಲಗೂರು ಪವಾಡಕ್ಕೆ ಹೋದಾಗ ತಂಬೂರಿಯನ್ನು ಹಿಡಿದು ಹೋಗಿದ್ದರು. ಪವಾಡವನ್ನು ಗೆಲ್ಲಿಸಿದ ಆ ತಂಬೂರಿ ನೀಲಗಾರರಗು ಬಂದಿತು ಎಂದು ಕೆಲವು ಗಾಯಕರ ಅಭಿಪ್ರಾಯ.
ನೀಲಗಾರರು ಹಾಡುವ ಕಾವ್ಯಗಳನ್ನು ಧಾರ್ಮಿಕ ಕಾವ್ಯ ಹಾಗೂ ತಾರ್ಕಿಕ ಕಾವ್ಯಗಳೆಂದು ವಿಭಾಗಿಸಲಾಗಿದೆ. ಧಾರ್ಮಿಕ ಕಾವ್ಯದಲ್ಲಿ ಮಂಟೇಸ್ವಾಮಿ ಕಾವ್ಯ ಸೇರುತ್ತದೆ. ತಾರ್ಕಿಕ ಕಾವ್ಯದಲ್ಲಿ ಕುಶ- ಲವರ ಕಥೆ, ಅರ್ಜುನ ಜೋಗಿ ಹಾಡು, ಪಿರಿಯಾಪಟ್ಟಣದ ಕಾಳಗ, ಲಿಂಗಾರಾಜಮ್ಮ, ಚೆನ್ನಿಗರಾಮ, ಸಾರಂಗಧರ, ಗುಂಡುಬ್ರಹ್ಮಯ್ಯ, ಅಕ್ಕನಾಗಮ್ಮ, ಭುಜನಮ್ಮ, ಚೆನ್ನಬಸಣ° ಬಾಲನಾಗಮ್ಮ, ಚೆಲುವರಾಯ, ಬಿಳಿಗಿರಿರಂಗ, ನಂಜುಡೇಶ್ವರ, ಕಾರುಗಹಳ್ಳಿ, ಬಾಲನಾಗಮ್ಮ,
ಕತ್ತಲರಾಯನ ಕಥೆ, ಮುಡುಕು ತೊರೆಮಲ್ಲಿಕಾರ್ಜುನ, ಮೈದುನರಾಮಣ್ಣ, ಮಡಿವಾಳ ಮಾಚಯ್ಯ, ಬಂಜೆ ಹೊನಮ್ಮ, ಹರಳಯ್ಯನವರು ಕಥೆ, ಮಾತಾಗಿಕಾಳಗ, ಬಾಣಾಸುರವಧೆ, ಸತ್ಯವ್ರತ ಮೊದಲಾದ ಕಥೆಗಳು ಸೇರುತ್ತವೆ. ಮಂಟೇಸ್ವಾಮಿ ಕಾವ್ಯವು ಆಳ ಮತ್ತು ಹರಹುಗಳೆರಡರಲ್ಲಿಯು ಬಹುಮುಖ್ಯವಾದದು. ಈ ಕಾವ್ಯವು ನಾಲ್ಕು ಸಾಲುಗಳಾಗಿ ವಿಭಾಗಿಸಲ್ಪಟ್ಟಿದೆ. ಧರೆಗೆ ದೊಡ್ಡವರ ಸಾಲು, ಸಿದ್ಧಪ್ಪಾಜಿಯ ಸಾಲು, ರಾಚಪ್ಪಾಜಿಯ ಸಾಲು, ಚಿಕ್ಕಲ್ಲೂರು ಸಾಲು ಎಂದು ಕಾವ್ಯವನ್ನು ವಿಭಾಗಿಸಲಾಗಿದೆ.
ಮಂಟೇಸ್ವಾಮಿ ಮಹಿಮೆಗಳ ಪ್ರಸಾರಕ ಸಿದ್ಧಪ್ಪಾಜಿ: ಮಂಟೇಸ್ವಾಮಿಗಳ ಮಹಿಮೆಗಳ ಪ್ರಸಾರಕನಾದ ಸಿದ್ಧಪ್ಪಾಜಿ ಅನೇಕ ಮಂದಿಶಿಷ್ಯ ಪರಂಪರೆಗಳನ್ನು ಬೆಳೆಸಿದರು. ಆ ಶಿಷ್ಯರು ತಾಳ ತಂಬೂರಿಗಳೊಡನೆ ಚಿಕ್ಕಲ್ಲೂರಿನಿಂದ ಕಪ್ಪಡಿಯವರೆಗೆ, ಚಾಮರಾಜನಗರದಿಂದ ಬೆಂಗಳೂರಿನವರೆಗೆ ಭಕ್ತ ಪರಂಪರೆಯನ್ನು ಬೆಳೆಸಿದರು. ಕನಕಪುರ, ಮಳವಳ್ಳಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ, ಟಿ.ನರಸೀಪುರ, ಪಾಂಡವಪುರ, ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ, ಹೆಗ್ಗಡದೇವನ ಕೋಟೆ, ಹುಣಸೂರು ಮುಂತಾದ ಪ್ರದೇಶಗಳಲ್ಲಿ ನೀಲಗಾರರು ಕಂಡು ಬರುತ್ತಾರೆ.
ಮಂಟೇಸ್ವಾಮಿ ಪರಂಪರೆಗೆ ಸಂಬಂಧಪಟ್ಟಂತೆ ಮೂರು ಜಾತ್ರೆಗಳು ವರ್ಷಕ್ಕೊಮ್ಮೆ ನಡೆಯುತ್ತವೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆ, ಕಪ್ಪಡಿ ಹಾಗೂ ಬೊಪ್ಪ ಗೌಡನ ಪುರದಲ್ಲಿ ನಡೆಯುವ ಈ ಜಾತ್ರೆಗಳು ಮಂಡ್ಯ, ಮೈಸೂರು, ಹಾಸನ, ಕೊಡಗು, ಬೆಂಗಳೂರು, ಸೇಲಂ ಜಿಲ್ಲೆಗಳ ಜನರನ್ನು ಆಕರ್ಷಿಸುತ್ತವೆ. ತಮ್ಮ ಗುರು ಪರಂಪರೆಯ ಕ್ಷೇತ್ರದರ್ಶನ, ಸೇವೆಗಳ ನೆಪದಲ್ಲಿ ಕಲಾವಿದರ ಒಂದು ಗೋಷ್ಠಿಯೇ ನಡೆಯುತ್ತದೆ. ವಿವಿಧ ಪ್ರದೇಶದ ಕಲಾವಿದರು ತಂಬೂರಿ ಹಿಡಿಡು ಇಲ್ಲಿಗೆ ಬರುತ್ತಾರೆ. ಜೊತೆಗೆ ಮಂಟೇಸ್ವಾಮಿಯ ಕಥೆಯನ್ನು ಶುದ್ಧ ರೂಪದಲ್ಲಿ ಉಳಿಸುತ್ತಾರೆ.
ಜನಪದ ವಿವಿ, ಸರ್ಕಾರ ಮೌಖೀಕ ಪರಂಪರೆ ಉಳಿಸಲಿ: ಮಂಟೇಸ್ವಾಮಿ ಕಾವ್ಯ ಬಹಳ ವಿಶಿಷ್ಟವಾದುದು. ಇದು ಕುಲ ಹದಿನೆಂಟು ಜಾತಿಗಳನ್ನು ಒಗ್ಗೂಡಿಸುವ ಪ್ರಯತ್ನದ ಕಾವ್ಯ ಎಂದೇ ಬಣ್ಣಿಸಲಾಗುತ್ತಿದೆ. ಈ ಕಾವ್ಯ ಉಳಿದುಕೊಂಡು ಬಂದಿದ್ದು, ನೀಲಗಾರರ ಹಾಡುಗಳ ಮೌಖೀಕ ಪರಂಪರೆಯಿಂದ. ಆದರೀಗ ಮಂಟೇಸ್ವಾಮಿ ಕಾವ್ಯ ಹಾಡುವ ನೀಲಗಾರರು ಕಡಿಮೆಯಾಗುತ್ತಿದ್ದಾರೆ.
ಹೀಗಾಗಿ ಈ ಮೌಖೀಕ ಪರಂಪರೆಯನ್ನು ಉಳಿಸುವ ಕೆಲಸ ಜನಪದ ವಿವಿಗಳಿಂದ, ಸರ್ಕಾರದಿಂದ ಆಗಬೇಕಾಗಿದೆ. ಪ್ರಸ್ತುತ ನೀಲಗಾರ ಪರಂಪರೆ ಕಡಿಮೆಯಾಗುತ್ತಿದೆ. ಮಗು ನೀಲಗಾರನಾದರೆ 7-8 ವರ್ಷಗಳವರೆಗೆ ಮಂಟೇಸ್ವಾಮಿ ಕಥೆಗಳನ್ನು ಕಲಿಯಬೇಕಾಗುತ್ತಿತ್ತು. ಈಗ ಅಂತಹವರು ಅಪರೂಪ. ಮೂಲಧಾಟಿಯಲ್ಲಿ ಹಾಡುವವರು ಕ್ಷೀಣಿಸುತ್ತಿದ್ದಾರೆ ಎಂದು ಸಾಹಿತಿ ಡಾ. ಮಹೇಶ್ ಹರವೆ ಕಳವಳ ವ್ಯಕ್ತಪಡಿಸುತ್ತಾರೆ.
ನೀಲಗಾರರ ಹಾಡುವಿಕೆಗೆ ಗೌರವ ನೀಡಿ: ನೀಲಗಾರರ ಹಾಡುವಿಕೆಗೆ ಗೌರವ ದೊರಕಬೇಕು. ಅವರನ್ನು ಕರೆಸಿ ಗೌರವಯುತವಾದ ಸಂಭಾವನೆ ಕೊಡಬೇಕು. ಜನಪದ ವಿಶ್ವವಿದ್ಯಾಲಯಗಳು ಇಂಥವರನ್ನು ಪ್ರೋತ್ಸಾಹಿಸಬೇಕು. ವಿಶೇಷ ದಿನಗಳಲ್ಲಿ ಮನೆಗಳ ಮುಂದೆ ತಂಬೂರಿ ಹಿಡಿದು ಹಾಡಲು ಬರುವ ನೀಲಗಾರರನ್ನು ಭಿಕ್ಷೆಗೆ ಬಂದವರಂತೆ ಪರಿಗಣಿಸಲಾಗುತ್ತಿದೆ. ಇದು ವಿಷಾದನೀಯ.
ಹಿಂದೆ ಅವರು ಬೆತ್ತ ಹಿಡಿದು ಮನೆ ಮನೆಗಳಿಗೆ ಹೋದರೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿ, ಜೋಳಿಗೆಗೆ ಧಾನ್ಯ, ಹಣ ಹಾಕುತ್ತಿದ್ದರು. ಈಗ ನೀಲಗಾರರ ಪರಂಪರೆಯೇ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಜನಪದ ಅಕಾಡೆಮಿ, ವಿವಿಗಳ ಜನಪದ ವಿಭಾಗಗಳು ಸಕ್ರಿಯವಾಗಿ ನೀಲಗಾರ ಪರಂಪರೆಯನ್ನು ಉಳಿಸುವ ಕೆಲಸ ಮಾಡಬೇಕು. ಮುಂದಿನ ಅನೇಕ ತಲೆಮಾರುಗಳಿಗೂ ನೀಲಗಾರರ ಮೌಖೀಕ ಕಾವ್ಯ ಉಳಿಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
* ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.