ಹನೂರು ಕ್ಷೇತ್ರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ ಚಾಮುಲ್ ಚುನಾವಣೆ
ಮೂರು ಪಕ್ಷಗಳಲ್ಲಿ ಭುಗಿಲೆದ್ದ ಅಸಮಾಧಾನ
Team Udayavani, Jun 17, 2022, 4:21 PM IST
ಹನೂರು: ಚಾಮುಲ್‍ನ 3 ನಿರ್ದೇಶಕ ಸ್ಥಾನಗಳಿಗೆ ಬೆರಳೆಣಿಕೆಯಷ್ಟು ಮತದಾರರಿಂದ ನಡೆದ ಚುನಾವಣೆಯ ಫಲಿತಾಂಶ ಇಡೀ ಕ್ಷೇತ್ರದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು ಪ್ರಮುಖ 3 ಪಕ್ಷಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಚಾಮರಾಜನಗರ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ಜೂನ್ 14ರಂದು ಚುನಾವಣೆ ಜರುಗಿ ಕೊಳ್ಳೇಗಾಲ – ಹನೂರು ತಾಲೂಕುಗಳಿಂದ 3 ಜನ ನಿರ್ದೇಶಕರಿಗಾಗಿ ಚುನಾವಣೆ ನಡೆದಿತ್ತು. ಈ ಪೈಕಿ ಕಾಂಗ್ರೆಸ್ ಬೆಂಬಲಿತ 2, ಜೆಡಿಎಸ್ ಬೆಂಬಲಿತ 1 ಜಯ ಕಂಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡ ಇತರೆ ಅಭ್ಯರ್ಥಿಗಳು ಸ್ವಪಕ್ಷೀಯ ಘಟಾನುಘಟಿ ರಾಜಕಾರಣಿಗಳ ವಿರುದ್ಧ ಬಹಿರಂಗ ಸಮರವನ್ನೇ ಸಾರಿದ್ದಾರೆ.
ಜೆಡಿಎಸ್ ಮಂಜುನಾಥ್ ವೀಕೆಂಡ್ ರಾಜಕಾರಣಿ, 2 ಮುಖ
ಹನೂರು ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡ ಜಿ.ಕೆ.ಹೊಸೂರು ಬಸವರಾಜು ಪರ ಧ್ವನಿಮುದ್ರಿಕೆಯೊಂದನ್ನು ಬಿಡುಗಡೆ ಮಾಡಿರುವ ಜೆಡಿಎಸ್ ಮುಖಂಡ ಪಾಳಿ ಸಿದ್ದಪ್ಪಾಜಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ್ ಅವರ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.
ಸುಮಾರು 31 ನಿಮಿಷದ ಧ್ವನಿಮುದ್ರಿಕೆಯಲ್ಲಿ ಜೆಡಿಎಸ್‍ನ ಮಂಜುನಾಥ್ ವೀಕೆಂಡ್ ರಾಜಕಾರಣಿ, ಶನಿವಾರ ಮತ್ತು ಭಾನುವಾರ ಮಾತ್ರ ಕ್ಷೇತ್ರದತ್ತ ಆಗಮಿಸುತ್ತಾರೆ. ಇನ್ನು ಇವರನ್ನು ಗೆಲ್ಲಿಸಿದರೆ ಶನಿವಾರ, ಭಾನುವಾರವಾದರೆ ಕ್ಷೇತ್ರದ ಮತದಾರರು ರಾಜಧಾನಿ ಬೆಂಗಳೂರಿಗೆ ತೆರಳಿ ಮಾತನಾಡಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಂಜುನಾಥ್ ಅವರಿಗೆ 2 ಮುಖವಿದ್ದು ಯಾವುದೇ ಮುಖಂಡರು ಎದುರಿಗಿದ್ದರೆ ನಯವಾಗಿ ಮಾತನಾಡಿಸುತ್ತಾ ನಟನೆ ಮಾಡುತ್ತಾರೆ. ಹಿಂದೆ ಇನ್ನೊಂದು ಮುಖದಲ್ಲಿ ದ್ರೋಹ ಎಸಗುತ್ತಾರೆ ಎಂದು ಹರಿಹಾಯ್ದಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಯಾರಾದರೂ ಜೆಡಿಎಸ್ ಪಕ್ಷದಿಂದ ಚುನಾವಣೆಗೆ ನಿಲ್ಲಬೇಕಾದರೆ ಯೋಚನೆ ಮಾಡಿನಿಲ್ಲಿ, ಮಂಜುನಾಥ್ ನಂಬಿ ಚುನಾವಣೆಗೆ ಸ್ಫರ್ಧಿಸಿದಲ್ಲಿ ಇರುವ ಮನೆ ಮಠ ಮಾಡಿಕೊಂಡು ಹೆಂಡತಿ ಮಕ್ಕಳನ್ನು ಕರೆದುಕೊಂಡು ಊರು ಬಿಡಬೇಕಾಗುತ್ತದೆ ಎಂಬುವ ಎಚ್ಚರಿಕೆ ನೀಡುವ ಮಾತುಗಳನ್ನಾಡಿದ್ದಾರೆ.
ಮಂಜುನಾಥ್‍ಗೆ ತಕ್ಕ ಉತ್ತರ
ಧ್ವನಿಮುದ್ರಿಕೆಯ ಮುಂದುವರೆದ ಭಾಗವಾಗಿ ಮಂಜುನಾಥ್ ಅವರಿಂದ ಹನೂರು ಕ್ಷೇತ್ರದ ನಿಷ್ಠಾವಂತ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ದೇವೇಗೌಡ ಅಪ್ಪಾಜಿ ಅವರ ಅಭಿಮಾನಿಗಳು ಮತ್ತು ಕುಮಾರಣ್ಣನ ಅಭಿಮಾನಿಗಳಿಗೆ ಅನ್ಯಾಯವಾಗುತ್ತಿದೆ. ಅನ್ಯ ಪಕ್ಷದ ಮುಖಂಡರನ್ನು ಪಕ್ಷ ಸೇರ್ಪಡೆಗೊಳಿಸಿಕೊಳ್ಳುವ ಮುನ್ನ ಕಾರ್ಯಕರ್ತರ ಜೊತೆ ಚರ್ಚಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ. ಜಿ.ಕೆ. ಹೊಸೂರು ಬಸವರಾಜು ಅವರು ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯ ನಾಯಕರಾಗಿದ್ದು ಚೆನ್ನಾಲಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 4 ಸ್ಥಾನಗಳ ಗೆಲುವಿನಲ್ಲಿ, ಜಿ.ಕೆಹೊಸೂರು ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸುವಲ್ಲಿ ಮತ್ತು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷಗಾದಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಂತಹ ನಾಯಕನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲಾಗಿದೆ. ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್‍ಬಾಬು, ಯುವ ಮುಖಂಡ ಚನ್ನೇಶ್‍ಗೌಡ, ಲೊಕ್ಕನಹಳ್ಳಿ ವಿಷ್ಣುಕುಮಾರ್, ಉಗನೀಯ ಮೂರ್ತಿ ಸೇರಿದಂತೆ ಹಲವಾರು ಹಿರಿಯ ನಆಯಕರನ್ನು ಕಡೆಗಣಿಸಿದ್ದೀರಿ, ನಿಮಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದಾರೆ ಎಂದು ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ನನ್ನ ಸೋಲಿಗೆ ಶಾಸಕ ನರೇಂದ್ರ ಕಾರಣ
ಹನೂರು ಕ್ಷೇತ್ರದ ಹಿರಿಯ ಮುಖಂಡ, ಮೈಮುಲ್ ಹಾಗೂ ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಸೋಲಿನ ಹೊಣೆಯನ್ನು ಸಂಪೂರ್ಣವಾಗಿ ಶಾಸಕ ನರೇಂದ್ರ ಮತ್ತು ಕೆಲ ಕಾಂಗ್ರೆಸ್ ಮುಖಂಡರ ಮೇಲೆ ಹೊರಿಸಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ನಾನು ಶಾಸಕ ನರೇಂದ್ರ ಅವರ ಮನೆಯನ್ನು ತುಳಿದಿಲ್ಲ, ಯಾವುದಾದರೂ ಕಾರ್ಯಕ್ರಮದಲ್ಲಿ ಪಕ್ಕದಲ್ಲಿ ಕುಳಿತುಕೊಂಡರೆ ಮಾತನ್ನೂ ಆಡಿಸುತ್ತಿರಲಿಲ್ಲ, ಯಾವುದಾದರೂ ಸಣ್ಣಪುಟ್ಟ ಕೆಲಸ ಕೇಳಿದರೆ ಮಾಡಿಕೊಡುತ್ತಿರಲಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇಷ್ಟೆಲ್ಲ ಆದ ಮೇಲೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವುದಿಲ್ಲ, ಜೆಡಿಎಸ್ ಸೇರ್ಪಡೆಯಾಗಬೇಕೆ ಅಥವಾ ಬಿಜೆಪಿ ಸೇರ್ಪಡೆಯಾಗಬೇಕೇ ಎಂಬುದರ ಬಗ್ಗೆ ಹಿಂಬಾಲಕರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗುರುಮಲ್ಲಪ್ಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಪಕ್ಷದ ಅಭ್ಯರ್ಥಿ ಪುಟ್ಟಣ್ಣಗೆ ಮತ ನೀಡುವ ಬದಲು ಕಾಂಗ್ರೆಸ್ ಅಭ್ಯರ್ಥಿ ನಂಜುಂಡಸ್ವಾಮಿ ಅವರಿಗೆ ಮತ ನೀಡಿದ್ದಾರೆ ಎಂದು ಕಿಡಿಕಾರಿದರು.
ನನ್ನ ಸೋಲಿಗೆ ಪರಿಮಳಾ ನಾಗಪ್ಪ ಕಾರಣ
ಕೊಳ್ಳೇಗಾಲ ತಾಲೂಕಿನಿಂದ ಸ್ಫರ್ಧೆ ಮಾಡಿದ್ದ ಪರಾಜಿತ ಅಭ್ಯರ್ಥಿ ಪುಟ್ಟಣ್ಣ ನನ್ನ ಸೋಲಿಗೆ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರೇ ಕಾರಣ ಎಂದು ಜರಿದಿದ್ದಾರೆ. ಒಂದು ದಿನವೂ ನನ್ನ ಪರ ಪ್ರಚಾರಕ್ಕೆ ಬರಲಿಲ್ಲ, ಇವರು ಒಮ್ಮೆ ಬಂದಿದ್ದಲ್ಲಿ ನಾನು ಗೆಲ್ಲಬಹುದಿತ್ತು. ಇಂತಹ ನಾಯಕರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಮುಂದಿನ ಚುನಾವಣೆಯಲ್ಲಿಇವರಿಗೆ ವಿಧಾನಸಭಾ ಟಿಕೆಟ್ ಕೊಟ್ಟರೆ ಯಾವುದೇ ಪ್ರಯೋಜನವಾಗಲ್ಲ, ಬದಲಾಗಿ ಬೇರೆ ನಾಯಕರಿಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.
ಸಚಿವ ಸೋಮಣ್ಣ ಮೇಲೆ ಹಾಕಲು ಸಾಧ್ಯವೇ?
ಮತ್ತೋರ್ವ ಪರಾಜಿತ ಅಭ್ಯರ್ಥಿ ಶಿವಪುರ ಮಹಾದೇವಪ್ರಭು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು ಯಾವುದೇ ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ಅದನ್ನು ನಾವು ಸಮನಾಗಿ ಸ್ವೀಕರಿಸಬೇಕು. ಅದನ್ನು ಬಿಟ್ಟು ಇತರೆ ನಾಯಕರ ಮೇಲೆ ಹಾಕಿದರೆ ಏನು ಪ್ರಯೋಜನ? ನಾವು ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಲು ತೆರಳಿದಾಗ ಚಾಮುಲ್ ಚುನಾವಣೆ ನನ್ನ ತಲೆಯಲ್ಲಿಯೇ ಇಲ್ಲ ಎಂದು ಕೊನೆಪಕ್ಷ ನಮ್ಮನ್ನು ಪರಿಚಯವನ್ನೂ ಮಾಡಿಕೊಳ್ಳಲಿಲ್ಲ. ಸೋಮಣ್ಣ ಬೆಂಬಲಿಗರು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ನಾವು ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಕ್ಕೆ ಸಚಿವ ಸೋಮಣ್ಣ ಈ ರೀತಿಯಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಹಾಗೆಂದ ಮಾತ್ರಕ್ಕೆ ನಮ್ಮ ಸೋಲಿಗೆ ಸಚಿವ ಸೋಮಣ್ಣ ಎಂದು ದೋಷಿಸಲಾಗುತ್ತದೆಯೇ? ಯಾರೂ ಕೂಡ ಪಕ್ಷದ ಮುಖಂಡರ ವಿರುದ್ಧ ಮಾತನಾಡಬಾರದು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ಚಾಮುಲ್ ಚುನಾವಣೆ ಹನೂರು ಕ್ಷೇತ್ರದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು ಯಾರ ಹೇಳಿಕೆ, ಯಾರ ಹತಾಶೆಯ ನುಡಿ ಯಾರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ವರದಿ: ವಿನೋದ್ ಎನ್ ಗೌಡ, ಹನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.