ಅನ್ನದಾತನ ಹೊರೆ ಇಳಿಸುತ್ತಾ ಈ ಆಯವ್ಯಯ?
Team Udayavani, Feb 1, 2019, 7:04 AM IST
ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಾಮರಾಜನಗರಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ವಿಶೇಷ ಯೋಜನೆಯನ್ನು ಜಾರಿಗೊಳಿಸಿಲ್ಲ. ರೈಲ್ವೆಯಲ್ಲೂ ಜಿಲ್ಲೆಗೆ ಆದ್ಯತೆ ದೊರೆತ್ತಿಲ್ಲ. ಯಾವುದೇ ಹೊಸ ಕೈಗಾರಿಕೆಯನ್ನೂ ಸ್ಥಾಪಿಸಿಲ್ಲ. ರೈತರ ಸಾಲಮನ್ನಾ ಕೂಡ ಆಗಿಲ್ಲ. ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿ ಕೇಂದ್ರ ತೆರೆದಿಲ್ಲ.
ಬಿಮಾ ಫಸಲ್ ವಿಮೆ ನಿರೀಕ್ಷಿತ ಮಟ್ಟದಲ್ಲಿ ರೈತರ ಕೈಹಿಡಿದಿಲ್ಲ. ಆದರೆ, ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ನೇರ ನಗದು ಹಣ ವರ್ಗಾವಣೆ, ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ರೈತರಿಗೆ ಅನುಕೂಲ ಕಲ್ಪಿಸುವ ದೊಡ್ಡ ಯೋಜನೆ ಘೋಷಣೆಯಾಗುವ ನಿರೀಕ್ಷೆ ಇದೆ.
ಚಾಮರಾಜನಗರ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಶುಕ್ರವಾರ ಮಂಡನೆಯಾಗಲಿದ್ದು, ಈ ಬಜೆಟ್‌ನಲ್ಲೇ ರೈಲ್ವೆ ಬಜೆಟ್ ಸಹ ಸೇರಿರುವುದರಿಂದ ಜಿಲ್ಲೆಗೆ ಹೊಸ ರೈಲ್ವೆ ಯೋಜನೆಗಳು ಅಥವಾ ಹೊಸ ರೈಲುಗಳ ಸೇರ್ಪಡೆಯಾಗಬಹುದೇ ಎಂಬ ನಿರೀಕ್ಷೆ ಜನರಲ್ಲಿದೆ.
ರೈತರ ಆತ್ಮಹತ್ಯೆ ಎಂಬುದು ಒಂದು ರಾಷ್ಟ್ರೀಯ ಸಮಸ್ಯೆಯಾಗಿದ್ದು, ರೈತರ ಸಮಸ್ಯೆಗಳನ್ನು ನಿವಾರಿ ಸಲು ಪೂರಕವಾದ, ರೈತರಲ್ಲಿ ಆತ್ಮವಿಶ್ವಾಸ ತುಂಬುವ ಯೋಜನೆಗಳನ್ನು ಜಾರಿಗೊಳಿಸಬಹುದೆಂಬ ನಿರೀಕ್ಷೆಯಿದೆ.
ಕಳೆದ ಬಾರಿಯ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು (ನೈಪರ್) ಬಜೆಟ್‌ನಲ್ಲಿ ಮಂಜೂರು ಮಾಡಿಕೊಡುವಂತೆ ಸಂಸದ ಆರ್. ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಸ್ಥೆ ದೇಶದ 7 ರಾಜ್ಯಗಳಲ್ಲಿ ಸ್ಥಾಪಿತವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಇಲ್ಲ. ಅಭಿವೃದ್ಧಿ ಹೊಂದು ತ್ತಿರುವ ಚಾಮರಾಜನಗರ ಜಿಲ್ಲೆಗೆ ಈ ಸಂಸ್ಥೆಯನ್ನು ಮಂಜೂರು ಮಾಡಿಕೊಡ ಬೇಕು ಎಂದು ಸಂಸದರು ಕೋರಿದ್ದರು.
ಜಿಲ್ಲೆಯ ಹೊಂಡರಬಾಳು ಗ್ರಾಮ ದಲ್ಲಿ ನವೋ ದಯ ವಿದ್ಯಾಲಯವಿದ್ದು, ಇನ್ನೊಂದು ನವೋದಯ ವಿದ್ಯಾಲಯ ವನ್ನು ಮಂಜೂರು ಮಾಡಿಕೊಡ ಬೇಕೆಂದು ಮನವಿ ಸಲ್ಲಿಸಿದ್ದರು. ಈ ಎರಡೂ ಬೇಡಿಕೆಗಳು ಕಳೆದ ಬಜೆಟ್‌ನಲ್ಲಿ ಈಡೇರ ಲಿಲ್ಲ. ಈ ಬಾರಿಯಾದರೂ ಮಂಜೂರಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.
ಆದಾಯ ಮಿತಿ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ ನಿರೀಕ್ಷಿಸಲಾಗಿದೆ. ರೈತರ ಸಾಲ ಮನ್ನಾ, ಅದೂ ಸಹ ಈಡೇರಿಲ್ಲ. ರೈತರ ಬೆಳೆಗಳಿಗೆ ಬೆಲೆ ಕುಸಿತವಾದಾಗ, ಬೆಂಬಲ ಬೆಲೆ ನೀಡಲು ನಿಧಿ ಸ್ಥಾಪಿಸಲಾಗಿದೆಯೇ ಹೊರತು, ರಾಜ್ಯ ಸರ್ಕಾರಗಳಿಗೆ ಇದನ್ನು ಬಳಸುವ ಬಗ್ಗೆ ಸ್ವಾತಂತ್ರ್ಯ ನೀಡಿಲ್ಲ. ಖರೀದಿ ಕೇಂದ್ರ ತೆರೆದಿಲ್ಲ. ಮಾರುಕಟ್ಟೆ ಮಧ್ಯ ಪ್ರವೇಶ ನೀತಿ ಬದಲಾವಣೆಯಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕೌಶಲ್ಯ ಕೇಂದ್ರ: ಕಳೆದ ಬಜೆಟ್‌ನಲ್ಲಿ ನಿರುದ್ಯೋಗಿ ಯುವಕರಿಗೆ ಜಿಲ್ಲೆಗೊಂದು ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವುದಾಗಿ ಘೋಷಿಸಲಾಗಿತ್ತು. ಇದು ಈಡೇರಿದ್ದು, ನಗರದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲಾಗಿದೆ.
ರೈಲ್ವೆ ಬೇಡಿಕೆಗಳು: ರೈಲ್ವೆ ವಿಚಾರಕ್ಕೆ ಬಂದರೆ ಕಳೆದ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಯಾವೊಂದು ಯೋಜನೆಯೂ ದೊರಕದೇ ಶೂನ್ಯ ಸಂಪಾದನೆ ಯಾಗಿತ್ತು. ಈ ಬಾರಿ ಯಾದರೂ ಈ ಬಜೆಟ್ನಿಂದ ಆಶಾ ದಾಯಕ ಕೊಡುಗೆಗಳು ದೊರಕ ಬಹುದೇ ಕುತೂಹಲ ಮೂಡಿದೆ.
ಬೆಂಗಳೂರಿನ ಹೆಜ್ಜಾಲದಿಂದ, ಕನಕ ಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ, 1330 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಮಾರ್ಗವನ್ನು ಕಳೆದ ಯುಪಿಎ ಸರ್ಕಾ ರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಅದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂ. ನೀಡಿದ್ದರು. ಕಳೆದ ಬಜೆಟ್‌ನಲ್ಲಿ ಈ ಮಾರ್ಗಕ್ಕಾಗಿ ಯಾವುದೇ ಅನುದಾನ ಬಿಡುಗಡೆ ಯಾಗಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನಿರೀಕ್ಷಿಸಲಾಗಿದೆ.
ಚಾಮರಾಜನಗರವು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾಗಿದೆ. ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತದೆ. ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡದಿಂದ ಮೈಸೂರಿಗೆ ಬರುವ, ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಿಸಬೇಕೆಂ ಬುದು ಪ್ರಯಾಣಿಕರ ಒತ್ತಾಯವಾಗಿದೆ.
ಚಾಮರಾಜನಗರದಿಂದ ಮೈಸೂರಿಗೆ ಬೆಳಗ್ಗೆ 10.30 ರ ನಂತರ ಮಧ್ಯಾಹ್ನ 3 ಗಂಟೆಯವರೆಗೆ ರೈಲು ಸಂಚಾರ ಇಲ್ಲ. ಈ ಅವಧಿಯಲ್ಲಿ ಇನ್ನೊಂದು ಹೆಚ್ಚುವರಿ ರೈಲನ್ನು ಕಾರ್ಯಾಚರಣೆ ಮಾಡಬೇಕಾಗಿದೆ.
ಕವಲಂದೆಯಲ್ಲಿ ರೈಲ್ವೆ ಕ್ರಾಸಿಂಗ್ ಪಾಯಿಂಟ್: ಚಾಮರಾಜನಗರದಿಂದ ನಂಜನಗೂಡಿಗೆ 35 ಕಿ.ಮೀ. ಅಂತರವಿದ್ದು, ಯಾವುದೇ ಕ್ರಾಸಿಂಗ್ ಪಾಯಿಂಟ್ ಇಲ್ಲ. ಹೀಗಾಗಿ ರೈಲು ತಡವಾಗಿ ಹೊರಟಾಗ, ರೈಲ್ವೆ ವ್ಯಾಗನ್‌ಗಳು ಸಂಚರಿಸಿದಾಗ ರೈಲುಗಳು ನಂಜನಗೂಡು ಅಥವಾ ನಗರದಲ್ಲೇ ತಡವಾಗಿ ಹೊರಡಬೇಕಾಗಿದೆ. ಕವಲಂದೆ ನಿಲ್ದಾಣ ವನ್ನು ಮೇಲ್ದರ್ಜೆಗೇರಿಸಿ, ರೈಲ್ವೆ ಕ್ರಾಸಿಂಗ್ ಪಾಯಿಂಟ್ ಮಾಡಿದರೆ ಬಹಳ ಅನುಕೂಲವಾಗಲಿದೆ.
ರೈಲುಗಳ ಸ್ವಚ್ಛತಾ ಘಟಕ: ಚಾ.ನಗರ ರೈಲ್ವೆ ನಿಲ್ದಾಣ ದಲ್ಲಿ ಸ್ವಚ್ಛತಾ ಘಟಕ ಸ್ಥಾಪಿಸಬೇಕು. ಮೈಸೂರಿ ನಲ್ಲಿರುವ ಸ್ವಚ್ಛತಾ ಘಟಕದಲ್ಲಿ ಈಗ ಹೆಚ್ಚು ಒತ್ತಡ ವಿದ್ದು, ಅನೇಕ ರೈಲುಗಳು ಅಲ್ಲೇ ನಿಲ್ಲಬೇಕಾಗಿದೆ. ಅದಕ್ಕೆ ಸ್ಥಳಾವಕಾಶವೂ ಇಲ್ಲದಂತಾಗಿದೆ. ಚಾ.ನಗರ ದಲ್ಲಿ ಸ್ವಚ್ಛತಾ ಘಟಕ ಸ್ಥಾಪಿಸಿದರೆ ಮೈಸೂರಿನಲ್ಲಿ ನಿಲ್ಲುವ ರೈಲುಗಳು ಚಾ.ನಗರಕ್ಕೆ ಬರುತ್ತವೆ. ಪ್ರಯಾಣಿಕರಿಗೂ ಇದರಿಂದ ಬಹಳ ಅನುಕೂಲ ವಾಗುತ್ತದೆ. ಅಲ್ಲದೇ ಇಲ್ಲಿನ ನಿಲ್ದಾಣದಲ್ಲಿ ರೈಲುಗಳೂ ತಂಗಲು ಅವಕಾಶವಾಗುತ್ತದೆ.
ನಂಜನಗೂಡು-ಮೈಸೂರು ರೈಲು ಸಂಚಾರ: ನಂಜನಗೂಡು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮೈಸೂರು, ಚಾಮರಾಜನಗರದಿಂದ ಬರುವುದರಿಂದ ರೈಲುಗಳ ಸಂಚಾರವನ್ನು ಹೆಚ್ಚಳ ಮಾಡಬೇಕಾಗಿದೆ.
ಚಾಮರಾಜನಗರದಿಂದ ಬೆಂಗಳೂರಿಗೆ ಸೀಮಿತ ವಾಗಿ ಎಕ್ಸ್‌ಪ್ರೆಸ್ ರೈಲೊಂದನ್ನು ಮಂಜೂರು ಮಾಡ ಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆಯ ಈ ಬೇಡಿಕೆಗಳಲ್ಲಿ ಕೆಲವಾದರೂ ಜಾರಿಗೊಳ್ಳಬಹುದೆಂದು ಜಿಲ್ಲೆಯ ಸಾರ್ವಜನಿಕರು ಆಶಾಭಾವನೆ ಹೊಂದಿದ್ದಾರೆ.
* ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.