ಹೇಮೆ ತುಂಬಿ ಹರಿದರೂ ಕುಡಿವ ನೀರಿಗೆ ಬರ
ಹೇಮಾವತಿ ನೀರಿನಲ್ಲಿ ಮುಳುಗಿದ ಜಲ ಶುದ್ಧೀಕರಣ ಘಟಕ • ಜಿಲ್ಲೆಯ ಹಲವಡೆ ಅತಿವೃಷ್ಟಿ, ತಾಲೂಕಿನಲ್ಲಿ ಅನಾವೃಷ್ಟಿ
Team Udayavani, Aug 12, 2019, 2:56 PM IST
ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಯಂತ್ರಗಾರದ ವಿದ್ಯುತ್ ಪರಿವರ್ತಕಗಳು ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಹೋಗಿದ್ದು ಸೇತುವೆ ತುದಿಯ ವರೆಗೂ ನೀರು ಹರಿಯುತ್ತಿದೆ.
ಚನ್ನರಾಯಪಟ್ಟಣ: ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದರೂ ಪಟ್ಟಣದ ಜನತೆ ಮಾತ್ರ ಕೊಳವೆ ಬಾವಿ ನೀರು ಕುಡಿಯುವಂತಾಗಿದೆ. ಗನ್ನಿ ಗ್ರಾಮದ ಸಮೀಪದಲ್ಲಿ ಹರಿಯುವ ನದಿ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ ನೀರು ಕೆಂಪಾಗಿರುವುದರಿಂದ ಕುಡಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಶುದ್ಧ ಕುಡಿಯುವ ಘಟದ ಮೊರೆ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು ಗೊರೂರು ಅಣೆಕಟ್ಟೆ ತುಂಬಿದ್ದು ಸುಮಾರು 1.08 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ನದಿಯಲ್ಲಿ ಹರಿಯುತ್ತಿರುವ ನೀರು ಸಂಪೂರ್ಣ ಕೆಂಪಾಗಿದೆ ಈ ನೀರನ್ನು ಪುರಸಭೆ ಶುದ್ಧೀಕರಿಸಿ ನೀಡಿದರೂ ನೀರಿನ ಬಣ್ಣ ಮಾತ್ರ ಹಾಗೆ ಇರುವುದರಿಂದ ಜನರು ಅಡುಗೆ ಮಾಡಲು ಹಾಗೂ ಕುಡಿಯಲು ಉಪಯೋಗಿಸುತ್ತಿಲ್ಲ, ಶುದ್ಧ ಕುಡಿಯುವ ನೀರಿನ ಘಟಕ್ಕೆ ಮೊರೆ ಹೋಗುತ್ತಿದ್ದಾರೆ.
ಕೆಂಪಾಗಿದೆ ನದಿ ನೀರು: ಕುಡಿಯುವ ನೀರು ಕೆಂಪಾಗಿ ಇರುವುದರಿಂದ ಕೆಲ ವಾರ್ಡ್‌ಗಳಿಗೆ ಕಳೆದ ಮೂರು ದಿವಸದಿಂದ ಹೇಮಾವತಿ ನದಿ ನೀರು ಪೂರೈಕೆ ಮಾಡದೇ ಆಯಾ ವಾರ್ಡಿನ ಕೊಳವೆ ಬಾವಿ ನೀರುನ್ನು ಮಾತ್ರ ನೀಡಲಾಗುತ್ತಿದೆ. ಇನ್ನು ಕೆಲ ವಾರ್ಡಿನಲ್ಲಿ ಹೊಳೆ ನೀರು ಸರಬರಾಜು ಮಾಡುವ ಪೈಪ್ ಒಡೆದು ಹೋಗಿರುವುದರಿಂದ ರಿಪೇರಿ ಕಾರ್ಯವೂ ಭರದಿಂದ ನಡೆಯುತ್ತಿದೆ. ಆಶ್ಲೇಷ ಮಳೆಯ ಅವಾಂತರದಿಂದ ಕುಡಿಯಲು ಯೋಗ್ಯವಾದ ನೀರು ದೊರೆಯುತ್ತಿಲ್ಲ.
ಏತನೀರಾವರಿ ಮೂಲಕ ಸಮಸ್ಯೆ ಪರಿಹಾರ: ತಾಲೂಕಿನಲ್ಲಿ ಹೇಮಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಏತನೀರಾವರಿ ಮೂಲಕ ಕೆರೆ ಕಟ್ಟೆ ತುಂಬಿಸದೇ ಮೈ ಮರೆತು ಕೂತಿರುವುದರಿಂದ ಸುಮಾರು 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಅನಗತ್ಯವಾಗಿ ಮಳೆ ನೀರು ಸಮುದ್ರ ಸೇರುತ್ತಿದೆ ಈ ನೀರನ್ನು ವೈಜ್ಞಾನಿಕವಾಗಿ ಬಳಕೆ ಮಾಡಿಕೊಂಡರೆ ಮುಂದಿನ ಐದಾರು ವರ್ಷಗಳು ಮಳೆ ಇಲ್ಲದೆ ಇದ್ದರು ನೀರಿನ ಸಮಸ್ಯೆ ನೀಗಿಸಬಹುದಾಗಿದೆ ಎಂದು ಜಲತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಜನಪ್ರತಿನಿಧಿಗಳು ಮುಂದಾಗಬೇಕು: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಈಗಾಗಲೆ ತಾಲೂಕು ಆಡಳಿತದಿಂದ ಕ್ರಮ ಕೈಗೊಂಡಿದ್ದು, ಗ್ರಾಮ ಪಂಚಾಯಿತಿ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ತಾಲೂಕಿನಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸಲು ಚುನಾಯಿತ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಯಾವ ಗ್ರಾಮದಲ್ಲಿ ಸಮಸ್ಯೆ ಇರುತ್ತದೆ ಅಲ್ಲಿಗೆ ಕೊಳವೆ ಬಾವಿ ಕೊರೆಸಿ ನೀರು ಒದಗಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.
ನದಿ ಭಾಗದ ಗ್ರಾಮಗಳಲ್ಲಿ ಅಪಾಯ: ತಾಲೂಕಿನ ಕಸಬಾ ಹೋಬಳಿ ನಲ್ಲೂರು, ದಡದಹಳ್ಳಿ, ಚಿಕ್ಕಘನ್ನಿ, ದೊಡ್ಡಘನ್ನಿ, ದಂಡಿನಹಳ್ಳಿ ಹೋಬಳಿ ಕಾಳೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹೇಮಾವತಿ ನದಿ ಹರಿಯುತ್ತಿದ್ದು, ನದಿ ನೀರು ಕೃಷಿ ಭೂಮಿಯನ್ನು ಆವರಿಸಿಕೊಂಡಿದೆ. ಕೆಲ ಗ್ರಾಮದಲ್ಲಿನ ಮನೆಗಳು ಧರೆಗೆ ಉರುಳಿವೆ, ತೆಂಗು, ಶುಂಠಿ, ಕಬ್ಬು ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ನೀರು ಪಾಲಾಗುತ್ತಿವೆ.
ಪ್ರೇಕ್ಷಣೀಯ ಸ್ಥಳವಾದ ನದಿ ಸೇತುವೆ: ಈಗಾಗಲೆ ಗೊರೂರು ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯೂಸೆಕ್ ನೀರು ಹೊರಗೆ ಬಿಡುತ್ತಿರುವುದರಿಂದ ಗನ್ನಿ ಸಮೀಪದಲ್ಲಿ ಹರಿಯುತ್ತಿರುವ ಹೇಮಾವತಿ ನದಿ ಪ್ರೇಕ್ಷಣಿಯ ಸ್ಥಳವಾಗಿ ಮಾರ್ಪಟ್ಟಿದೆ. ಚನ್ನರಾಯ ಪಟ್ಟಣ, ಮಾರೇನಹಳ್ಳಿ, ಶ್ರೀನಿವಾಸಪುರ, ನಲ್ಲೂರು, ಗನ್ನಿ, ಹೊನ್ನಶಟ್ಟಿಹಳ್ಳಿ, ಹೌಸಿಂಗ್‌ಬೋರ್ಡ್ ನ ಸಾರ್ವ ಜನಿಕರು ಕಳೆದ ಎರಡು ದಿವಸದಿಂದ ಹೇಮಾವತಿ ನದಿ ಹರಿಯುವ ಸ್ಥಳಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವೀಕ್ಷಣೆ ಮಾಡುತ್ತಿರುವುದಲ್ಲದೇ ಸೆಲ್ಫಿ ಕ್ಲಿಕ್ಕಿಸಿ ಕೊಳ್ಳುತ್ತಿದ್ದಾರೆ.
ಪೊಲೀಸ್ ನಿಯೋಜನೆ ಮಾಡಬೇಕಿದೆ: ಸಾವಿರಾರು ಮಂದಿ ನದಿಯಲ್ಲಿ ನೀರು ಹರಿಯುತ್ತಿರುವುದನ್ನು ವೀಕ್ಷಣೆ ಮಾಡಲು ಮುಂದಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚುತ್ತಿದೆ. ಸೇತುವೆ ಮೇಲೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಇನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿರುವುದರಿಂದ ಅನಾಹುತಗಳು ಸಂಭವಿಸುವ ಲಕ್ಷಣಗಳು ಕಾಣಿಸುತ್ತಿದ್ದರೂ ಪೊಲೀಸ್ ಇಲಾಖೆ ಓರ್ವ ಪೇದೆಯನ್ನು ನೇಮಕ ಮಾಡಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.