135 ಹಳ್ಳಿಗಳಿಗೆ ಟ್ಯಾಂಕರ್, ಖಾಸಗಿ ಕೊಳವೆ ಬಾವಿ ನೀರೇ ಗತಿ!
Team Udayavani, Feb 18, 2019, 7:27 AM IST
ಬರ ಪೀಡಿತ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಕಳೆದ ವರ್ಷದ ಮುಂಗಾರಿನ ಆರಂಭದಿಂದಲೇ ಮಳೆರಾಯನ ದರ್ಶನ ಇಲ್ಲದೇ ಭೂಮಿಗೆ ಬಿದ್ದ ಬೀಜವೂ ಮೊಳಕೆಯೊಡೆಯದೇ ರೈತಾಪಿ ಕೃಷಿ ಕೂಲಿಕಾರರು ಬರದಿಂದ ತತ್ತರಿಸಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿದ್ದರೂ ಬರ ಪರಿಹಾರ ಕಾಮಗಾರಿಗಳು ಮಾತ್ರ ಆಮೆಗತಿಯಲ್ಲಿ ಸಾಗಿರುವುದು ಎದ್ದು ಕಾಣುತ್ತಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ ಎದುರಾಗಿದ್ದು, 135 ಗ್ರಾಮಗಳು ಟ್ಯಾಂಕರ್ ನೀರಿಗೆ ನಿತ್ಯ ಎದುರು ನೋಡಬೇಕಿದೆ. ಸದ್ಯ ಕುಡಿಯುವ ನೀರಿನ ಸಂಕಷ್ಟ ಹೇಗಿದೆ? ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಲಭ್ಯವಾಗುತ್ತಿದೆಯೇ? ಬರ ನಿಭಾಯಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳೇನು? ಬರದ ಬವಣೆಯಲ್ಲಿ ಜಿಲ್ಲೆಯ ಜನ ಹೇಗಿದ್ದಾರೆಂಬ ಸಮಗ್ರ ಚಿತ್ರಣ ನಿಮ್ಮ ಮುಂದೆ..
ಚಿಕ್ಕಬಳ್ಳಾಪುರ: ಬರದಿಂದ ತತ್ತರಿಸುತ್ತಿರುವ ಜಿಲ್ಲೆಯಲ್ಲಿ ಬೇಸಿಗೆಯ ರಣಬಿಸಿಲು ಶುರುವಾದಂತೆ ಬರದ ಕಾರ್ಮೋಡದ ಕರಾಳ ಛಾಯೆ ಜಿಲ್ಲೆಯ ಜನರಿಗೆ ದರ್ಶನವಾಗತೊಡಗಿದೆ. ಬರದಿಂದ ಸರಣಿಯಂತೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿರುವ ಪರಿಣಾಮ ಕುಡಿಯುವ ನೀರಿನ ಸಮಸ್ಯೆ ಮೊದಲಿಗಿಂತ ಈಗ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತವನ್ನು ತೀವ್ರ ಚಿಂತೆಗೀಡು ಮಾಡಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಜಿಲ್ಲೆಯಲ್ಲಿ ಹೆಚ್ಚಾಗುವ ಆತಂಕ ಎದುರಾಗಿ ಕೃಷಿ ಚಟುವಟಿಕೆಗಳು ಸ್ತಬ್ದಗೊಂಡು ದುಡಿಯುವ ಜನ ವಲಸೆ ಕಡೆಗೆ ಮುಖ ಮಾಡುವಂತಾಗಿದೆ.
ಭೀಕರ ಬರಗಾಲ: ಕಳೆದ ವರ್ಷದಲ್ಲಿ ಮುಂಗಾರು ಆರಂಭಗೊಂಡ ಜುಲೈ, ಆಗಸ್ಟ್ ತಿಂಗಳಲ್ಲಿ ಮಾತ್ರ ದರ್ಶನವಾಗಿದ್ದ ಮಳೆ ಇದುವರೆಗೂ ಕಾಣಿಸಿಕೊಳ್ಳದೇ ಇರುವುದರಿಂದ ಜಿಲ್ಲೆಯಲ್ಲಿನ ಹಲವು ವರ್ಷಗಳ ಬರಗಾಲಕ್ಕೆ ಹೋಲಿಸಿಕೊಂಡರೆ ಇದು ಭೀಕರ ಬರಗಾಲ ಎಂದು ಭಾವಿಸಲಾಗಿದೆ. ಬರಗಾಲದ ಆರ್ಭಟಕ್ಕೆ ಜನ, ಜಾನುವಾರುಗಳು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಕೈ ಕೊಟ್ಟಿರುವುದರಿಂದ ಬೆಳೆಗಳು ಕೈಗೆ ಸಿಗದೇ ಅನ್ನತದಾತರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಮತ್ತೂಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗತೊಡಗಿದೆ.
135 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಜಿಲ್ಲಾಡಳಿತ ನೀಡಿರುವ ಅಂಕಿ, ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಬರೋಬ್ಬರಿ 135 ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಬೇಸಿಗೆ ಪೂರ್ಣ ಪ್ರಮಾಣದಲ್ಲಿ ಆವರಿಸುವಷ್ಟರಲ್ಲಿ ಇದರ ಸಂಖ್ಯೆ 300 ಗಡಿ ದಾಡುವ ಆತಂಕ ಜಿಲ್ಲಾಡಳಿತಕ್ಕಿದೆ. ಸದ್ಯ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯ 135 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆ ತೋರಿದ್ದು, ಆ ಪೈಕಿ 57 ಗ್ರಾಮಗಳಿಗೆ ನಿತ್ಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಉಳಿದ 78 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಪ್ರತಿ ದಿನ 57 ಗ್ರಾಮಗಳಿಗೆ 127 ಟ್ಯಾಂಕರ್‌ಗಳಷ್ಟು ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ವ್ಯಾಪ್ತಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ನೀರು ಸಾಮರ್ಥ್ಯ ಕಡಿಮೆಯಾಗಿದೆ. ಬೇಸಿಗೆ ಹೊತ್ತಿಗೆ ನೀರಿನ ಸಮಸ್ಯೆ ಗ್ರಾಮಗಳ ಸಂಖ್ಯೆ 300 ರಿಂದ 350 ದಾಟಬಹುದೆಂದು ಇಲಾಖೆಯ ಕಾರ್ಯಪಾಪಲ ಅಭಿಯಂತರರಾದ ಶಿವಕುಮಾರ್ ಲಾಥೂರ್ ಉದಯವಾಣಿಗೆ ತಿಳಿಸಿದರು.
ಕೆಲಸ ಕಾರ್ಯ ಬಿಟ್ಟು ನೀರಿಗೆ ಕಾಯಬೇಕು: ನೀರಿಗಾಗಿ ಜನ ಎಷ್ಟೊಂದು ಸಮಸ್ಯೆ ಎದುರಿಸಬೇಕಿದೆ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ತಮ್ಮ ನಿತ್ಯ ಕೆಲಸ, ಕಾರ್ಯಗಳನ್ನು ಬದಿಗೊತ್ತಿ ಕುಡಿಯುವ ನೀರಿಗಾಗಿ ಕಾಯಬೇಕಿದೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ಗ್ರಾಪಂಗಳ ಮೂಲಕ ಸರಬರಾಜು ಮಾಡುವ ಟ್ಯಾಂಕರ್ ನೀರಿಗಾಗಿ ಮಹಿಳೆಯರು, ಮಕ್ಕಳು ಕಾದು ಕಾದು ನೀರು ಹಿಡಿದುಕೊಳ್ಳುವ ಸನ್ನಿವೇಶಗಳು ಮಾಮೂಲಿಯಾಗಿದೆ. ಕೆಲವು ಗ್ರಾಮಗಳಲ್ಲಿ ಸೀಮಿತ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಮಹಿಳೆಯರ ಮಧ್ಯೆಯೇ ನೀರಿಗಾಗಿ ಹೊಡೆದಾಟ, ಬಡಿದಾಡಿಕೊಳ್ಳುವುದು ಸಾಮಾನ್ಯವಾಗಿದೆ. ನೀರು ಬಿಡುವ ದಿನ ಕೂಲಿ ಕೆಲಸ ಬಿಟ್ಟು ಬಡವರು ನೀರಿಗಾಗಿ ಕಾಯಬೇಕಿದೆ.
ಜಾನುವಾರುಗಳ ಸಂಕಷ್ಟ ಕೇಳ್ಳೋರಿಲ್ಲ: ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪ್ಪಿಸುತ್ತಿದ್ದರೆ, ಮತ್ತೆ ಕೆಲವು ಗ್ರಾಮಗಳಲ್ಲಿ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಕೇಳ್ಳೋರು ಇಲ್ಲವಾಗಿದೆ. ಗ್ರಾಪಂಗಳ ಮೂಲಕ ಜಾನುವಾರುಗಳಿಗೆ ನೀರು ಪೂರೈಸಬೇಕೆಂಬ ಆದೇಶ ಅಧಿಕಾರಿಗಳು ಗಾಳಿಗೆ ತೂರುತ್ತಿದ್ದಾರೆ. ಜಾನುವಾರುಗಳನ್ನು ಹೊಂದಿರುವ ರೈತರು ಅವುಗಳಿಗೆ ಕುಡಿಯುವ ನೀರಿಗಾಗಿ ಕಿ.ಮೀ.ಗಟ್ಟಲೇ ಕಟ್ಟೆ, ಕುಂಟೆ, ಕೆರೆ, ಕಾಲುವೆಗಳನ್ನು ಹುಡುಕಿ ಹೋಗುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜಾನುವಾರುಗಳ ಪ್ರಮಾಣ ಇದ್ದು, ಅದರಲ್ಲೂ ಹೈನೋದ್ಯಮಕ್ಕೆ ಬಳಸಲಾಗುತ್ತಿರುವ ಸೀಮೆ ಹಸುಗಳಿಗೆ ಮೇವು, ನೀರು ಒದಗಿಸುವುದು ರೈತರಿಗೆ ಸಂಕಷ್ಟವಾಗಿದೆ.
ಎಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 135 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಆ ಪೈಕಿ ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 43, ಗುಡಿಬಂಡೆ 7, ಬಾಗೇಪಲ್ಲಿ 18, ಶಿಡ್ಲಘಟ್ಟ 28, ಚಿಕ್ಕಬಳ್ಳಾಪುರ 32 ಹಾಗೂ ಗೌರಿಬಿದನೂರು ತಾಲೂಕಿನ 7 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಪೈಕಿ ಚಿಂತಾಮಣಿ, ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.
ಶುದ್ಧ ನೀರಿನ ಘಟಕಗಳ ಕೋಳ್ಳೋರಿಲ್ಲ: ಜಿಲ್ಲೆಯಲ್ಲಿ 600 ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಆದರೆ ಬಹುತೇಕ ಘಟಕಗಳು ದುರಸ್ತಿಗೆ ಬಂದಿವೆ. ಕೆಲವು ಚೆನ್ನಾಗಿದ್ದರೂ ನೀರಿನ ಕೊರತೆಯಿಂದ ಗ್ರಾಮೀಣ ಜನರ ಪಾಲಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿದೆ. ಜನಸಂಖ್ಯೆಗೆ ಅನುಗುಣಮವಾಗಿ ಘಟಕಗಳನ್ನು ಅಳವಡಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಬಹಳಷ್ಟು ಕುಗ್ರಾಮಗಳು ಇಂದಿಗೂ ಘಟಕಗಳಿಂದ ದೂರ ಉಳಿದಿವೆ.
ಮೇವು ಬ್ಯಾಂಕ್ ಇಲ್ಲ, ಗೋಶಾಲೆ ತೆರೆದಿಲ್ಲ: ಜಿಲ್ಲೆಯಲ್ಲಿ ಬರಗಾಲದ ಛಾಯೆ ಇದ್ದರೂ ಇದುವರೆಗೂ ಜಿಲ್ಲಾಡಳಿತ ಮೇವು ಬ್ಯಾಂಕ್ ಆಗಲಿ ಅಥವಾ ಗೋಶಾಲೆಯಾಗಲಿ ತೆರೆದಿಲ್ಲ. ಗೋಶಾಲೆ ತೆರೆದರೆ ರೈತರು ಬರಲ್ಲ. ಎಲ್ಲವು ಹಾಲು ಕರೆಯುವ ಹಸುಗಳು ಜಾಸ್ತಿ. ಆದ್ದರಿಂದ ಮೇವು ಕೊಟ್ಟರೆ ತಗೊಂಡು ಹೋಗುತ್ತಾರೆ. ಗೋಶಾಲೆಗೆ ಯಾರು ರಾಸುಗಳನ್ನು ಕೆರೆದುಕೊಂಡು ಬರಲ್ಲ ಎಂದು ಜಿಲ್ಲಾಡಳಿತ ಹೇಳುತ್ತದೆ.
ಮೇವು ಬ್ಯಾಂಕ್ ಸ್ಥಾಪನೆ ವಿಚಾರದಲ್ಲಿ ಸದ್ಯಕ್ಕೆ ಮೇವು ಸಮಸ್ಯೆ ಇಲ್ಲ. ನೀರಾವರಿ ಇರುವ ಕಡೆ ಮೇವು ಬೆಳೆಯಲು ರೈತರಿಗೆ ಜೋಳ ವಿತರಿಸಿದ್ದೇವೆ. ಕೋಚಿಮುಲ್ ಸಹ ಭಾಗಿತ್ವದಲ್ಲಿ ಅವರಿಗೆ ಮೇವು ಬೆಳೆಯಲು ಪ್ರೋತ್ಸಾಹಧನ ನೀಡುತ್ತಿರುವುದರಿಂದ ಇದುವರೆಗೂ ಬರೋಬ್ಬರಿ 60 ಸಾವಿರಕ್ಕೂ ಅಧಿಕ ಪ್ರಮಾಣದಲ್ಲಿ ಮೇವು ಬೀಜದ ಕಿರುಪೊಟ್ಟಣಗಳನ್ನು ವಿತರಿಸಿರುವುದರಿಂದ ಸದ್ಯಕ್ಕೆ ಮೇವು ಬ್ಯಾಂಕ್ ತೆರೆದಿಲ್ಲ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ನಿರ್ವಹಣೆ ಕಾಣದ ಜಾನುವಾರುಗಳ ನೀರಿನ ತೊಟ್ಟಿಗಳು: ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಹಳ್ಳಿಯಲ್ಲೂ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಸಾವಿರಾರು ರೂ. ವೆಚ್ಚ ಮಾಡಿ ಕುಡಿಯುವ ನೀರು ಸಂಗ್ರಹಿಸುವ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳ ಸೂಕ್ತ ನಿರ್ವಹಣೆ ಇಲ್ಲದೇ ನೀರಿನ ತೊಟ್ಟಿಗಳು ಪಾಳು ಬಿದ್ದಿವೆ.
ಬಹುತೇಕ ತೊಟ್ಟಿಗಳಿಗೆ ನೀರು ಬಿಡುವುದನ್ನೇ ಗ್ರಾಪಂಗಳು ಮರೆತಿರುವುದರಿಂದ ನೀರಿನ ತೊಟ್ಟಿಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಕಳೆದ ಜಿಪಂ ಕೆಡಿಪಿ ಸಭೆಯಲ್ಲಿ ಪ್ರತಿ ಹಳ್ಳಿಗೂ ಒಂದು ನೀರಿನ ತೊಟ್ಟಿ ನಿರ್ಮಿಸಬೇಕೆಂಬ ಆದೇಶವಾಗಿದೆ. ಆದರೆ ಇರುವ ನೀರಿನ ತೊಟ್ಟಿಗಳಿಗೆ ಗ್ರಾಪಂಗಳು ನೀರು ಬಿಡದ ಬಗ್ಗೆ ಗ್ರಾಮೀಣ ಜನರಲ್ಲಿ ಆಕ್ರೋಶ ಇದೆ. ಜಿಲ್ಲಾಡಳಿತ ಇರುವ ನೀರಿನ ತೊಟ್ಟಿಗಳಿಗೆ ಜಾನುವಾರುಗಳ ಕುಡಿಯುವ ನೀರಿಗಾಗಿ ಕನಿಷ್ಠ ಎರಡು ದಿನಕ್ಕೊಮ್ಮೆ ನೀರು ಪೂರೈಸುವಂತೆ ಗ್ರಾಪಂಗಳಿಗೆ ಖಡಕ್ ಆದೇಶ ನೀಡಬೇಕಿದೆ.
ನೀರಿನ ಸಮಸ್ಯೆ ಯೋಜನೆಗೆ ಅಡ್ಡಗಾಲು: ಕ್ಷೇತ್ರದಲ್ಲಿ 60 ರಿಂದ 70 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪ್ರತಿನಿತ್ಯ ಎರಡು ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಮಳೆ ಇಲ್ಲದೇ ತುಂಬ ಸಮಸ್ಯೆ ಎದುರಿಸುವಂತಾಗಿದೆ. ಅವಧಿಗೂ ಮೊದಲೇ ಮುಂಗಾರು ಮಳೆ ಬರಲಿಲ್ಲ ಅಂದರೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅನುದಾನದ ಕೊರತೆ ಇಲ್ಲ ಎಂದು ಶಾಸಕ ಸುಧಾಕರ್ ತಿಳಿಸಿದರು. ಟಾಸ್ಕ್ಫೋರ್ಸ್‌ಗೆ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಜಿಲ್ಲೆಗೆ ರೂಪಿಸಿರುವ ಕುಡಿಯುವ ನೀರಿನ ಯೋಜನೆಗಳಿಗೆ ಕೆಲವರು ಅಡ್ಡಗಾಲು ಹಾಕಿರುವುದರಿಂದ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕುಡಿಯುವ ನೀರಿಗೆ 6 ಕೋಟಿ ರೂ. ಅನುದಾನ: ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಿಲ್ಲೆಗೆ ಸರ್ಕಾರ 6 ಕೋಟಿ ರೂ. ಅನುದಾನ ಕೊಟ್ಟಿದೆ. ಜೊತೆಗೆ ಟಾಸ್ಕ್ಫೋರ್ಸ್ ಸಮಿತಿಗೆ ಪ್ರತಿ ತಾಲೂಕಿಗೆ ಹೆಚ್ಚುವರಿಯಾಗಿ 25 ಲಕ್ಷ ರೂ. ಅನುದಾನ ನೀಡಲಾಗಿದ್ದು, ಅನುದಾನದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.
ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಟ್ಯಾಂಕರ್ ಅಥವಾ ಖಾಸಗಿ ಕೊಳವೆ ಬಾವಿಗಳ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಇಲ್ಲ, ಗೋ ಶಾಲೆ ತೆರೆಯಬೇಕೆಂಬ ಬೇಡಿಕೆಯು ಇಲ್ಲ. ಗೋಶಾಲೆ ತೆರೆದರೂ ಯಾರು ರಾಸುಗಳನ್ನು ಕರೆದುಕೊಂಡು ಬರುವುದಿಲ್ಲ ಎಂದು ತಿಳಿಸಿದರು.
13 ವಾರಕ್ಕೆ ಮಾತ್ರ ಮೇವು ಸಂಗ್ರಹ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಇದೆ. ಆದರೆ ಹೇಳಿಕೊಳ್ಳುವಷ್ಟು ಸಮಸ್ಯೆ ಇಲ್ಲ. ಮಾರ್ಚ್ ಅಂತ್ಯ ಅಥವಾ ಏಪ್ರೀಲ್‌ನಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಎದುರಾಗಬಹುದು ಎಂದು ಜಿಲ್ಲಾ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮಧುರನಾಥರೆಡ್ಡಿ ಭಾನುವಾರ ಜಿಲ್ಲೆಯ ಮೇವಿನ ಪರಿಸ್ಥಿತಿ ಕುರಿತು ಉದಯವಾಣಿಗೆ ಮಾಹಿತಿ ನೀಡಿದರು. ಆದರೆ ನಾವು ಈಗಾಗಲೇ ಜಿಲ್ಲೆಯಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ಮೇವು ಬೀಜದ ಕಿರುಪೊಟ್ಟಣಗಳನ್ನು ರೈತರಿಗೆ ವಿತರಿಸಿದ್ದೇವೆ. ಇರುವ ಮೇವು ಇನ್ನೂ 13 ವಾರಗಳ ಕಾಲಕ್ಕೆ ಹೋಗಲಿದೆ ಎಂದು ತಿಳಿಸಿದರು.
ಗೌರಿಬಿದನೂರು ನಗರದ ಬಹುತೇಕ ಬಡಾವಣೆಗಳಲ್ಲಿ 15ರಿಂದ 20 ದಿನಗಳಿಗೊಮ್ಮೆ ನೀರು ಬಿಡುತ್ತಿದ್ದಾರೆ. ಟ್ಯಾಂಕರ್ ವ್ಯವಸ್ಥೆಯೂ ಇಲ್ಲ, ಇದರಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆ ಆಗಿದೆ. ನಗರಸಭೆ ಯಾವುದೇ ಬದಲಿ ವ್ಯವಸ್ಥೆ ಈವರೆಗೂ ಮಾಡಿಲ್ಲ. ಇನ್ನೂ ಕೊಳವೆಬಾವಿಗಳನ್ನು ಕೊರೆಸುವ ಹಂತದಲ್ಲಿದ್ದು, ಬಡವರಿಗೆ ನೀರಿನ ಬವಣೆ ತಪ್ಪಿಲ್ಲ.
-ಮೋಹನ್ ಕುಮಾರ್ ಜೋಡಿದಾರ್, ಗಲ್ಲಿ ಗೌರಿಬಿದನೂರು
ಬಾಗೇಪಲ್ಲಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಮಳೆ ಬೆಳೆ ಇಲ್ಲದೆ ರೈತಾಪಿ ಜನರು ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಪಿಚ್ಚಲವಾರಿಪಲ್ಲಿ ಗ್ರಾಮದಲ್ಲಿ 165 ಮನೆಗಳಿದ್ದು, ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೆ 3 ಕಿ.ಮೀ ದೂರದ ಮಾರ್ಗಾನುಕುಂಟೆ ಗ್ರಾಮಕ್ಕೆ ಹೋಗಿ ನೀರು ತರಬೇಕಾಗಿದೆ.
-ಪಿ.ಎ.ಹರಿಬಾಬುರೆಡ್ಡಿ, ರೈತ ಪಿಚ್ಚಲವಾರಿಪಲ್ಲಿ ಬಾಗೇಪಲ್ಲಿ
ಜಿಲ್ಲೆಯಲ್ಲಿ ನೂರಾರು ಕೆರೆಗಳಿದ್ದರೂ ಒಂದು ಕೆರೆಯಲ್ಲಿಯೂ ಸಹ ನೀರು ಸಂಗ್ರಹಣೆ ಇಲ್ಲ. ಕೆರೆ, ಕುಂಟೆಗಳಲ್ಲಿ ಹೂಳು ತುಂಬಿಕೊಂಡು ಸಾಮರ್ಥ್ಯ ಕಳೆದುಕೊಂಡಿದ್ದು ಮಳೆ ಬಂದರೆ 1-2 ತಿಂಗಳು ಕಾಲ ನೀರು ಸಂಗ್ರಹವಾಗಿ ಮತ್ತೆ ಕೆರೆಗಳು ಖಾಲಿಯಾಗುತ್ತಿವೆ. ಇದರಿಂದ ರೈತರ ಪರಿಸ್ಥಿತಿ ತುಂಬ ಕಠಿಣವಾಗಿದೆ. ಸರ್ಕಾರ ಮೊದಲು ಜಿಲ್ಲೆಯ ಕೆರೆಗಳಲ್ಲಿ ಹೂಳು ಎತ್ತಿಸಬೇಕು.
-ಜಿ.ಎಂ.ರಾಮಕೃಷ್ಣಪ್ಪ, ಪ್ರಗತಿ ಪರ ರೈತ
ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಗುಡಿಬಂಡೆ ಪ್ರಸ್ತುತ ಬರಗಾಲದಿಂದ ತತ್ತರಿಸಿ ಹೋಗಿದೆ. ಬರಗಾಲ ನಿರ್ವಹಣೆಗೆ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ರಾಸುಗಳ ಮೇವಿಗಾಗಿ ಗೋ ಶಾಲೆಗಳನ್ನು ಇದುವರೆಗೂ ತೆರೆದಿಲ್ಲ.
-ರವಿ, ಕೋರೆನಹಳ್ಳಿ ಗ್ರಾಮಸ್ಥ ಗುಡಿಬಂಡೆ
ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಜಾನುವಾರುಗಳಿಗೆ ನೀರು ಪೂರೈಸುತ್ತಿಲ್ಲ. ಈ ಹಿಂದೆ ಜಿಲ್ಲಾಡಳಿತವೇ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಮೇವು ಬೆಳೆದು ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿತ್ತು. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ.
-ಭಕರ್ತಹಳ್ಳಿ ಬೈರೇಗೌಡ, ಜಿಲ್ಲಾಧ್ಯಕ್ಷರು, ರೈತ ಸಂಘ ಹಾಗೂ ಹಸಿರು ಸೇನೆ
* ಬರ ನಿರ್ವಹಣೆಗೆ ಜಿಲ್ಲೆಗೆ 6 ಕೋಟಿ ರೂ. ಅನುದಾನ
* ಪ್ರತಿ ತಾಲೂಕಿಗೆ ಟಾಸ್ಕ್ಫೋರ್ಸ್‌ನಲ್ಲಿ 25 ಲಕ್ಷ ರೂ.
* ಜಿಲ್ಲೆಯ 135 ಗ್ರಾಮಗಳಲ್ಲಿ ಸದ್ಯ ಕುಡಿವ ನೀರಿಗೆ ಬರ
* ನಿರ್ವಹಣೆ ಇಲ್ಲದೇ ನೀರಿನ ತೊಟ್ಟಿಗಳು ಅನಾಥ
* ಜಿಲ್ಲೆಯಲ್ಲಿ 13 ವಾರಕ್ಕೆ ಆಗುವಷ್ಟು ಮೇವು
* ರೈತರಿಗೆ 60 ಸಾವಿರ ಮೇವು ಬೀಜ ಪೊಟ್ಟಣ ವಿತರಣೆ
* ಸದ್ಯಕ್ಕೆ ಗೋಶಾಲೆ, ಮೇವು ಬ್ಯಾಂಕ್ ತೆರೆದಿಲ್ಲ
* ಮಾರ್ಚ್, ಏಪ್ರೀಲ್‌ನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಭೀತಿ
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.