ಸ್ಟ್ರಾಂಗ್ ರೂಂಗೆ 3 ಹಂತದ ಭದ್ರತೆ
Team Udayavani, Apr 20, 2019, 3:00 AM IST
ಚಿಕ್ಕಬಳ್ಳಾಪುರ: ಅಲ್ಲಿ ಹೆಜ್ಜೆ ಹೆಜ್ಜೆಗೂ ಶಸ್ತ್ರಸಜ್ಜಿತ ಭದ್ರತಾ ಪಡೆಗಳ ಹದ್ದಿನ ಕಣ್ಣು..ಸುತ್ತಲೂ ಸಿಸಿ ಕ್ಯಾಮೆರಾಗಳ ಕಣ್ಗಾವಲು. ಮೂರು ಹಂತದಲ್ಲಿ ಬಿಗಿ ಪೊಲೀಸ್ ಪಹರೆ..8 ಕೊಠಡಿಗಳ ಕಿಟಕಿ, ಬಾಗಿಲು ಸಂಪೂರ್ಣ ಬಂದ್, ವಿದ್ಯುತ್ ಸಂಪರ್ಕ ಕಟ್..ದಿನದ 24 ಗಂಟೆ ಹೈಲರ್ಟ್.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಖಾಡದಲ್ಲಿದ್ದ 15 ಮಂದಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಅಡಗಿರುವ ಇವಿಎಂ ಮತಯಂತ್ರಗಳನ್ನು ಶೇಖರಿಸಿಟ್ಟಿರುವ ನಗರದ ಹೊರ ವಲಯದ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ಸ್ಟ್ರಾಂಗ್ ರೂಮ್ ಬಳಿ ಶುಕ್ರವಾರ ಬೆಳಗ್ಗೆ ಕಂಡು ಬಂದ ದೃಶ್ಯಗಳು ಇವು.
ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಯಲಹಂಕ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿಯುತ್ತಿದ್ದಂತೆ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿರುವ ಇವಿಎಂ ಮತಯಂತ್ರಗಳನ್ನು ಭಾರೀ ಭದ್ರತೆಯಲ್ಲಿ ಸ್ಟ್ರಾಂಗ್ ರೂಂ ಸ್ಥಾಪಿಸಿರುವ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಗುರುವಾರ ಮಧ್ಯ ರಾತ್ರಿಯೇ ತಂದಿಟ್ಟಿದ್ದಾರೆ. ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಕೋಲಾರಕ್ಕೆ ಕೊಂಡೊಯ್ಯಲಾಗಿದೆ.
ಮೂರು ಹಂತದಲ್ಲಿ ಭದ್ರತೆ: ಎಂಟು ವಿಧಾನಸಭಾ ಕ್ಷೇತ್ರದ ಇವಿಎಂ ಮತಯಂತ್ರಗಳು ಇರುವ 8 ಕೊಠಡಿಗಳ ಸ್ಟ್ರಾಂಗ್ ರೂಮ್ ಸುತ್ತಲೂ ಮೊದಲ ವೃತ್ತದಲ್ಲಿ ಕೇಂದ್ರ ಮೀಸಲು ಅರೆಸೇನಾ ಪಡೆ ಯೋಧರನ್ನು ಕೊಠಡಿಗಳ ಸುತ್ತಲೂ ನಿಯೋಜಿಸಲಾಗಿದ್ದು, ಸದಾ ಶಸ್ತ್ರಸಜ್ಜಿತವಾಗಿ ಪ್ಯಾರಾಮಿಲಿಟರಿ ಪಡೆಗಳು ಹದ್ದಿನ ಕಣ್ಣು ಇಟ್ಟು ನಿಗಾ ವಹಿಸಿವೆ.
ಎರಡನೇ ಹಂತದಲ್ಲಿ ಪೊಲೀಸ್ ಅಧಿಕಾರಿಗಳ ಮಟ್ಟದಲ್ಲಿ ಡಿವೈಎಸ್‌ಪಿ, ಸಿಪಿಐ, ಎಎಸ್‌ಐ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮೂರನೇ ಹಂತದಲ್ಲಿ 1 ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇಡೀ ಸ್ಟ್ರಾಂಗ್ ರೂಮ್‌ನ್ನು ಕೇಂದ್ರ ಮೀಸಲು ಅರೆಸೇನಾ ಪಡೆಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಡೀಸಿ ಮುಂದಾಳತ್ವದಲ್ಲಿ ಬೀಗ ಮುದ್ರೆ: ಶುಕ್ರವಾರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಎಸ್‌ಪಿ ಕೆ.ಸಂತೋಷಬಾಬು, ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ, ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಸಮ್ಮುಖದಲ್ಲಿ ಬಿಗಿ ಭದ್ರತೆಯಲ್ಲಿ ಬಂದಿರುವ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಯಂತ್ರಗಳನ್ನು ಒಟ್ಟು 8 ಕೊಠಡಿಗಳನ್ನು ಪಡೆದು ಕ್ರಮವಾಗಿ ಜೋಡಿಸಿ ಇಡಲಾಗಿದೆ.
ಸ್ಟ್ರಾಂಗ್ ರೂಮ್‌ಗೆ 18 ಸಿಸಿ ಕ್ಯಾಮೆರಾ ಅಳವಡಿಕೆ: ಸ್ಟ್ರಾಂಗ್ ರೂಮ್ ಇರುವ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಬರೋಬ್ಬರಿ 18 ಸಿಸಿ ಕ್ಯಾಮೆರಾಗಳನ್ನು ಮುಂಜಾಗ್ರತಾವಾಗಿ ಅಳವಡಿಸಲಾಗಿದ್ದು, 8 ಕೊಠಡಿಗಳಿಗೆ ತಲಾ ಇಬ್ಬರಂತೆ 16 ಮಂದಿ ಕೇಂದ್ರ ಮೀಸಲು ಅರೆಸೇನಾ ಪಡೆಯನ್ನು ಶಸ್ತ್ರಸಜ್ಜಿತವಾಗಿ ನೇಮಿಸಲಾಗಿದೆ.
ಪಾಳಿಯಂತೆ ದಿನದ 24 ಗಂಟೆ ಕಾಲ ಪೊಲೀಸರನ್ನು ನಿಯೋಜಿಸಲಾಗಿದ್ದು, 1 ಡಿವೈಎಸ್‌ಪಿ, 3 ಸಿಪಿಐ, 6 ಪಿಎಸ್‌ಐ ಹಾಗೂ 1 ಡಿಆರ್ ಹಾಗೂ 1 ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ತಿಳಿಸಿದರು.
ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸ್ಟ್ರಾಂಗ್ ರೂಮ್ ತೆರೆದು ಒಟ್ಟು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 8 ಕೊಠಡಿಗಳನ್ನು ತೆರೆದು ಇವಿಎಂ ಹಾಗೂ ಮತಯಂತ್ರಗಳನ್ನು ಜೋಡಿಸಿ ಇಡಲಾಗಿದೆ. ಸ್ಟ್ರಾಂಗ್ ರೂಮ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಎಲ್ಲಾ 8 ಕೊಠಡಿಗಳ ಕಿಟಕಿ, ಬಾಗಿಲುಗಳನ್ನು ಸಂಪೂರ್ಣ ಬಂದ್ ಮಾಡಿ ಸೀಲ್ ಮಾಡಲಾಗಿದೆ.
-ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.