ಸಂಸದರ ಕಾರ್ಯಾಲಯಕ್ಕೆ 4 ಕಚೇರಿ ಸ್ಥಳಾಂತರ
Team Udayavani, Aug 31, 2019, 3:00 AM IST
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲಿ ಕ್ಷೇತ್ರದ ಸಂಸದರ ಕಾರ್ಯಾಲಯಕ್ಕೆ ಸ್ಥಳವಕಾಶ ಒದಗಿಸಲು ಎದುರಾದ ವಾಸ್ತು ದೋಷದ ಹಿನ್ನೆಲೆಯಲ್ಲಿ ಬರೋಬ್ಬರಿ ನಾಲ್ಕು ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡಿದ್ದು, ದಿಢೀರನೇ ಕಚೇರಿಗಳ ಸ್ಥಳಾಂತರ ಕಾರ್ಯ ಎದುರಾಗಿದ್ದಕ್ಕೆ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈರಾಣಗಿದ್ದಾರೆ.
ವಾಸ್ತು ಸರಿ ಇಲ್ಲದ್ದಕ್ಕೆ ಕಚೇರಿ ಸ್ಥಳಾಂತರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷದಿಂದ ಸಂಸದರಾಗಿ ಆಯ್ಕೆಗೊಂಡಿರುವ ಬಿ.ಎನ್.ಬಚ್ಚೇಗೌಡ, ಜಿಲ್ಲಾಡಳಿತ ಭವನದಲ್ಲಿ ಕಚೇರಿ ತೆರೆಯಲು ಕೊಠಡಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಜಿಲ್ಲಾಡಳಿತ ತೋರಿಸಿದ ಎರಡು ಮೂರು ಕೊಠಡಿಗಳು ವಾಸ್ತು ಸರಿ ಇಲ್ಲದ ಕಾರಣ ಹಲವು ಕಚೇರಿಗಳನ್ನು ಸ್ಥಳಾಂತರ ಮಾಡಿ ಸಂಸದರ ಕಾರ್ಯಾಲಯಕ್ಕೆ ಕಚೇರಿ ಸೌಲಭ್ಯ ಒದಗಿಸಲಾಗಿದೆ.
ಚರ್ಚೆಗೆ ಗ್ರಾಸ: ಲೋಕಸಭಾ ಚುನಾವಣೆ ಮುಗಿದು ಆರೇಳು ಮೂರ್ನಾಲ್ಕು ತಿಂಗಳ ಬಳಿಕ ಸಂಸದ ಬಿ.ಎನ್.ಬಚ್ಚೇಗೌಡ ಜಿಲ್ಲಾಡಳಿತ ಭವನದಲ್ಲಿ ತಮ್ಮ ಕಾರ್ಯಾಲಯ ಆರಂಭಿಸಲು ಮುಂದಾಗಿರುವುದು ಸಂತಸ ತಂದರೂ ವಾಸ್ತು ದೋಷ ಇದೆ ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನಾಲ್ಕೈದು ಇಲಾಖೆಗಳ ಕಚೇರಿಗಳನ್ನು ದಿಢೀರ್ ಬದಲಾವಣೆ ಮಾಡುತ್ತಿರುವುದು ಸಾರ್ವಜನಿಕ ಹಾಗೂ ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಂಸದರ ಬೆಂಬಲಿಗರು ಒಪ್ಪಿಲ್ಲ: ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಚೇರಿಗೆ ಎರಡು ಮೂರು ಕೊಠಡಿಗಳನ್ನು ತೋರಿಸಿದರೂ ಅದು ಸರಿಯಿಲ್ಲ, ವಾಸ್ತು ದೋಷ ಇದೆ. ಬೇರೆ ಕೊಠಡಿಗಳನ್ನು ತೋರಿಸುವಂತೆ ಸಂಸದರ ಬೆಂಬಲಿಗರು ಹಾಗೂ ಅವರ ಆಪ್ತ ಕಾರ್ಯದರ್ಶಿ ಜಿಲ್ಲಾಡಳಿತದ ಬೆನ್ನು ಬಿದ್ದಿದ್ದರು. ಕೊನೆಗೂ ಹುಡುಕಾಟ ನಡೆಸಿ ವಾಸ್ತು ಪ್ರಕಾರ ಇರುವಂತಹ ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿರುವ ಕೈ ಮಗ್ಗ ಹಾಗೂ ಜವಳಿ ಇಲಾಖೆ ಕಾರ್ಯಾಲಯವನ್ನು ಈಗ ಸಂಸದರ ಕಾರ್ಯಾಲಯಕ್ಕೆ ಬಿಟ್ಟು ಕೊಡಲಾಗಿದೆ.
ಸ್ಥಳಾಂತರಕ್ಕೆ ಇಲಾಖೆಗಳ ಪರದಾಟ: ಸಂಸದರ ಕಾರ್ಯಾಲಯ ಆರಂಭಿಸಲು ಬರೋಬ್ಬರಿ ನಾಲ್ಕು ಕಚೇರಿಗಳನ್ನು ಒಂದೆಡೆಯಿಂದ ಮತ್ತೂಂದು ಕಡೆಗೆ ಸ್ಥಳಾಂತರಗೊಳಿಸಿದರ ಪರಿಣಾಮ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ನಾಲ್ಕೈದು ದಿನಗಳ ಕಾಲ ಸ್ಥಳಾಂತರಕ್ಕೆ ಪರದಾಡಿದ್ದಾರೆ. ಇಲಾಖೆಗಳಲ್ಲಿರುವ ಕಡತಗಳನ್ನು ಜೋಪನವಾಗಿ ಸ್ಥಳಾಂತರಿಸಲು ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರೇ ಸ್ಥಳಾಂತರ ಕಾರ್ಯದಲ್ಲಿ ತೊಡಗಿದ್ದಾರೆ.
ಡೀಸಿ ಆದೇಶದಂತೆ ಬಿಟ್ಟು ಕೊಟ್ಟಿದ್ದೇವೆ: ಜಿಲ್ಲಾಡಳಿತ ಭವನದಲ್ಲಿ ಸಂಸದರಿಗೆ ಕಚೇರಿ ಕಲ್ಪಿಸಲು ಹಲವು ಇಲಾಖೆಗಳ ಕಚೇರಿಗಳನ್ನು ಸೂಚಿಸಿದರೂ ಅವರ ಆಪ್ತ ಕಾರ್ಯದರ್ಶಿಗಳು ವಾಸ್ತು ದೋಷದ ಹಿನ್ನೆಲೆಯಲ್ಲಿ ಯಾವುದನ್ನು ಒಪ್ಪದೇ ನಮ್ಮ ಇಲಾಖೆ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ ವಾಸ್ತು ಪ್ರಕಾರ ಇದೆ. ಜೊತೆಗೆ ಮಿನಿ ಸಭಾಂಗಣ, ಎಲ್ಲಾ ರೀತಿಯ ಸೌಕರ್ಯ ಇದೆಯೆಂದು ಹೇಳಿದ್ದಕ್ಕೆ ನಮ್ಮ ಕಚೇರಿಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಬಿಟ್ಟು ಕೊಟ್ಟಿದ್ದೇವೆ. ನಮ್ಮ ಇಲಾಖೆಗೆ ಪಿಯು ಉಪ ನಿರ್ದೇಶಕರ ಕಚೇರಿಯನ್ನು ಬಿಟ್ಟು ಕೊಟ್ಟಿದ್ದಾರೆ. ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡಕ್ಕೆ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಕೈ ಮಗ್ಗ ಹಾಗೂ ಜವಳಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ “ಉದಯವಾಣಿ’ಗೆ ತಿಳಿಸಿದರು.
ನಮಗೂ ತೊಂದರೆ ಆಯಿತು: ಜಿಲ್ಲಾಡಳಿತ ಭವನದಲ್ಲಿ ಎಲ್ಲಾ ಕೊಠಡಿಗಳು ಚೆನ್ನಾಗಿವೆ. ಆದರೆ ಸಂಸದರು ವಾಸ್ತು ದೋಷ ಇರುವ ಕೊಠಡಿಗಳನ್ನು ಕಚೇರಿಯಾಗಿ ಪಡೆಯಲು ಒಪ್ಪದ ಕಾರಣ ನಮ್ಮ ಇಲಾಖೆಯ ಕಚೇರಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಮೂರು ದಿನದಿಂದ ಇಲಾಖೆ ಕಚೇರಿ ಕೆಲಸ ಕಾರ್ಯಗಳು ನಡೆದಿಲ್ಲ. ಸ್ಥಳಾಂತರ ಕಾರ್ಯದಿಂದ ಸಾಕಷ್ಟು ತೊಂದರೆ ಅನುಭವಿಸಿದೆವು ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳಾಂತರಗೊಳ್ಳುತ್ತಿರುವ ಇಲಾಖೆಯ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
ಯಾವ್ಯಾವ ಇಲಾಖೆಗಳ ಸ್ಥಳಾಂತರ: ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿದ್ದ ಜಿಲ್ಲಾ ಕೈ ಮಗ್ಗ ಹಾಗೂ ಜವಳಿ ಇಲಾಖೆ ಉಪ ನಿರ್ದೇಶಕರ ಕೊಠಡಿಯಲ್ಲಿ ಸದ್ಯ ಸಂಸದರ ಕಾರ್ಯಾಲಯ ತೆರೆಯಲಾಗಿದ್ದು, ಅಲ್ಲಿಂದ ಕೈಮಗ್ಗ ಹಾಗೂ ಜವಳಿ ಇಲಾಖೆಯನ್ನು ಜಿಲ್ಲಾಡಳಿತದ ಭವನದ ಮೊದಲ ಮಹಡಿಯಲ್ಲಿದ್ದ ಪಿಯು ಉಪ ನಿರ್ದೇಶಕರ ಕಚೇರಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿನ ಪಿಯು ಉಪ ನಿರ್ದೇಶಕರ ಕಚೇರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಸ್ಥಳಾಂತರ ಮಾಡಿದ್ದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಕಚೇರಿಯನ್ನು ಜಿಪಂ ಅಧ್ಯಕ್ಷರ ಕಾರ್ಯಾಲಯ ಪಕ್ಕದಲ್ಲಿರುವ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ.
ಕೊಠಡಿಗಳ ವಾಸ್ತು ದೋಷದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಸಂಸದರಿಗೆ ಎರಡು, ಮೂರು ಕೊಠಡಿಗಳನ್ನು ತೋರಿಸಲಾಗಿತ್ತು. ಅವರು ಯಾವುದನ್ನು ಒಪ್ಪಿದ್ದಾರೋ ಆ ಕಚೇರಿಯಲ್ಲಿರುವ ಇಲಾಖೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿಸಿ ಸಂಸದರ ಕಾರ್ಯಾಲಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾಸ್ತುದೋಷದ ಬಗ್ಗೆ ಚರ್ಚೆ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ
-ಅನಿರುದ್ಧ್ ಶ್ರವಣ್, ಹಿಂದಿನ ಜಿಲ್ಲಾಧಿಕಾರಿ
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.