ಗ್ರಾಮಪಂಚಾಯಿತಿಗಳಲ್ಲಿ ಆಧಾರ್ ನೋಂದಣಿ ಬಂದ್!
Team Udayavani, May 20, 2019, 3:00 AM IST
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಮಾದರಿ ನೀತಿ ಸಂಹಿತೆ ಪರಿಣಾಮ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಗ್ರಾಪಂಗಳಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿರುವುದರಿಂದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಧಾರ್ ಮಾಡಿಸಲು ಪೋಷಕರು ಇನ್ನಿಲ್ಲದ ಪರದಾಟ ನಡೆಸುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ.
ಆಧಾರ್‌ಗೆ ಹೆಚ್ಚಿದ ಮಹತ್ವ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಯೊಂದು ಯೋಜನೆಗೂ ಈಗ ಆಧಾರ್ ಕಡ್ಡಾಯಗೊಳಿಸಿರುವುದರಿಂದ ಆಧಾರ್‌ಗೆ ಹೆಚ್ಚಿನ ಮಹತ್ವ ಬಂದಿದೆ. ಆದರೆ ಕಾಲಮಿತಿಯೊಳಗೆ ಆಧಾರ್ ಸಿಗದೇ ಸರ್ಕಾರದ ಸೌಲಭ್ಯಗಳು ಜನ ಸಾಮಾನ್ಯರಿಗೆ ದೂರವಾಗಿ ಯೋಜನೆಗಳ ಲಾಭ ಜನರ ಪಾಲಿಗೆ ಸಿಗದಂತಾಗಿದೆ.
ಶಾಲಾ ದಾಖಲಾತಿಗೆ ಆಧಾರ್ ಕಡ್ಡಾಯ: ಸದ್ಯ ಜಿಲ್ಲಾದ್ಯಂತ ಶಾಲಾ, ಕಾಲೇಜುಗಳು 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿವೆ. ದಾಖಲಾತಿ ಪ್ರಕ್ರಿಯೆಗಳು ಎಲ್ಲಾ ಕಡೆ ಶುರುವಾಗಿವೆ. ಆದರೆ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಜಾತಿ, ಆದಾಯ ಪ್ರಮಾಣ ಪತ್ರ ಮಾಡಿಸಲು ಹಾಗೂ ಶಾಲಾ, ಕಾಲೇಜುಗಳಲ್ಲಿ ದಾಖಲಾತಿಗಾಗಿ ಆಧಾರ್ ಸಂಖ್ಯೆ ಕೊಡುವುದು ಕಡ್ಡಾಯವಾಗಿರುವುದರಿಂದ ಸದ್ಯ ಆಧಾರ್‌ಗೆ ಪರದಾಡುತ್ತಿರುವ ಸನ್ನಿವೇಶಗಳು ಎಲ್ಲೆಡೆ ಕಂಡುಬರುತ್ತಿವೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಗ್ರಾಪಂ ಕಚೇರಿಗಳಲ್ಲಿ ಮಾಡಲಾಗುತ್ತಿದ್ದ ಆಧಾರ್ ನೋಂದಣಿ ಪ್ರಕ್ರಿಯೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಜನ ಸಾಮಾನ್ಯರು ಆಧಾರ್ ನೋಂದಣಿಗೆ ಅಲೆದಾಡಬೇಕಿದೆ.
20 ರಿಂದ 30ಮಂದಿಗೆ ಅವಕಾಶ: ಜಿಲ್ಲೆಯ ಕೆಲವೊಂದು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಆಧಾರ್ ನೋಂದಣಿಗೆ ಅವಕಾಶ ಕೊಡಲಾಗಿದ್ದರೂ ಸಾಕಷ್ಟು ವಿಳಂಬ ಆಗುತ್ತಿದೆ. ದಿನಕ್ಕೆ ಕೇವಲ 20 ರಿಂದ 30 ಮಂದಿಗೆ ಆಧಾರ್ ನೋಂದಣಿಗೆ ಬ್ಯಾಂಕ್‌ಗಳು ಟೋಕನ್ ವಿತರಿಸುತ್ತಿರುವುದರಿಂದ ಬೆಳಗ್ಗೆ 4 ಗಂಟೆಗೆ ಬಂದು ಸಾಲುಗಟ್ಟಿ ನಿಂತರೂ ಬ್ಯಾಂಕ್‌ಗಳಲ್ಲಿ ಆಧಾರ್ ಪಡೆಯಲು ಟೋಕನ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಜಿಲ್ಲಾ ಕೇಂದ್ರಕ್ಕೆ ಬರುವ ರೈತಾಪಿ ಜನ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಆಧಾರ್ ಪಡೆಯಲು ಸಾಧ್ಯವಾಗದೇ ಬರಿಗೈಯಲ್ಲಿ ವಾಪಸ್ಸು ಹೋಗುವಂತಾಗಿದೆ. ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ತಲಾ ಒಂದೊಂದು ಬ್ಯಾಂಕ್‌ನಲ್ಲಿ ಮಾತ್ರ ಆಧಾರ್‌ಗೆ ಬಯೋಮೆಟ್ರಿಕ್ ತೆಗೆಯುತ್ತಿದ್ದು, ದಿನಕ್ಕೆ 25 ರಿಂದ 30 ಮಂದಿಗೆ ತೆಗೆಯಲು ಸಾಧ್ಯವಾಗುತ್ತಿದೆ. ಆದರೆ ಪ್ರತಿ ನಿತ್ಯ ನೂರಾರು ಮಂದಿ ಆಧಾರ್ ಕಾರ್ಡ್‌ಗಾಗಿ ಬ್ಯಾಂಕುಗಳಿಗೆ ಲಗ್ಗೆ ಹಾಕಿದರೂ ಪ್ರಯೋಜನವಾಗುತ್ತಿಲ್ಲ.
ಜಿಲ್ಲಾ ಕೇಂದ್ರದಲ್ಲಿ ಆಧಾರ್‌ಗೆ ಸಂಕಷ್ಟ: ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆಧಾರ್ ಪಡೆಯುವುದು ಜನ ಸಾಮಾನ್ಯರಿಗೆ ಗಗನ ಕುಸುಮವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿವೆ. ನಗರದ ಕೆನರಾ ಬ್ಯಾಂಕ್ ಹಾಗೂ ಎಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಾತ್ರ ಆಧಾರ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದರೂ ದಿನಕ್ಕೆ 20 ರಿಂದ 30 ಮಂದಿಗೆ ಮಾತ್ರ ಅವಕಾಶ ದೊರೆಯುತ್ತಿದೆ.
ಬಹಳಷ್ಟು ಮಂದಿ ಆಧಾರ್ ಕಾರ್ಡ್‌ನ್ನು ಹೊಸದಾಗಿ ಪಡೆಯುವುದಕ್ಕಿಂತ ತಿದ್ದುಪಡಿಗೆ ಹೆಚ್ಚು ಅರ್ಜಿಗಳು ಹಾಕುತ್ತಿರುವುದರಿಂದ ನೋಂದಣಿ ಕೇಂದ್ರಗಳು ಜನಸಂದಣಿಯಿಂದ ಕೂಡಿವೆ. ಕಾಲಮಿತಿಯೊಳಗೆ ಅರ್ಜಿ ಹಾಕಲು ಸಾಧ್ಯವಾಗದೇ ಆಧಾರ್ ನೋಂದಣಿ ಕೇಂದ್ರಗಳಿಗೆ ನಿತ್ಯ ಸುತ್ತಾಡುವಂತಾಗಿದೆ.
ಗ್ರಾಪಂಗಳಲ್ಲಿ ಅವಕಾಶ ಇರಬೇಕಿತ್ತು: ಗ್ರಾಪಂಗಳಲ್ಲಿ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಿದ್ದರೆ ಅನುಕೂಲವಾಗುತ್ತಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಆಧಾರ್ ತೆಗೆಸಲು ಬರುತ್ತಾರೆ. ಇಲ್ಲಿ ನಿತ್ಯ 20 ರಿಂದ 30 ಮಂದಿಗೆ ಮಾತ್ರ ನೋಂದಣಿಗೆ ಅವಕಾಶ ಇದೆ. ಬಹಳಷ್ಟು ಮಂದಿ ವಾಪಸ್ಸು ಹೋಗುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಾದರೂ ನೋಂದಣಿ ಅವಕಾಶ ಕೊಡಬಹುದಿತ್ತು ಎಂದು ಜಿಲ್ಲಾ ಕೇಂದ್ರದ ಬ್ಯಾಂಕ್‌ನಲ್ಲಿ ಆಧಾರ್ ನೋಂದಣಿ ಮಾಡಿಸುವ ತಮ್ಮ ಹೆಸರು ಹೇಳಲು ಇಚ್ಛಿಸದ ನೋಡಲ್ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
ಮಧ್ಯ ಮಧ್ಯೆ ಕೈ ಕೊಡುವ ಸರ್ವರ್: ಇಡೀ ಜಿಲ್ಲೆಗೆ ಸೇರಿ ಕೇವಲ ನಾಲ್ಕೈದು ಬ್ಯಾಂಕ್‌ಗಳಲ್ಲಿ ಮಾತ್ರ ಆಧಾರ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೊಮ್ಮೆ ಮಧ್ಯೆ ಮಧ್ಯೆ ಕೈ ಕೊಡುತ್ತಿರುವ ಸರ್ವರ್ ಸಮಸ್ಯೆಯಿಂದ ಆಧಾರ್ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡು ಸಾರ್ವಜನಿಕರು ಊಟ, ತಿಂಡಿ ಇಲ್ಲದೇ ದಿನವಿಡೀ ಸಾಲಗಟ್ಟಿ ನಿಂತು ಆಧಾರ್ ಪಡೆಯಬೇಕಿದೆ.
ಇದರ ನಡುವೆ ಆಧಾರ್ ಕಡ್ಡಾಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನೋಂದಣಿ ಕೇಂದ್ರಗಳು ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ದಂಧೆಗೆ ಇಳಿದಿವೆ. ನೋಂದಣಿ ಕೇಂದ್ರದ ಸಿಬ್ಬಂದಿ ಕೈಗೆ ಕಾಸು ಕೊಟ್ಟರೆ ಆಧಾರ್ ನೋಂದಣಿ ಬೇಗ ಮಾಡಿಸುವ ಕಾರ್ಯಗಳು ನಡೆಯುತ್ತಿವೆ.
ಮೊಮ್ಮಕ್ಕಳದು ಆಧಾರ್ ತಿದ್ದುಪಡಿ ಆಗಬೇಕಿದೆ. ಆದರೆ ನೋಂದಣಿ ಅಧಿಕಾರಿಗಳು ದಿನಕ್ಕೊಂದು ದಾಖಲೆ ತನ್ನಿಯೆಂದು ದಿನ ವಾಪಸ್ಸು ಕಳುಹಿಸುತ್ತಾರೆ. ಆರೇಳು ದಿನಗಳಿಂದ ಬಂದು ಹೋಗುತ್ತಿದ್ದೇನೆ. ಅಧಿಕಾರಿಗಳಿಗೆ ಮಾನವೀಯತೆ ಇಲ್ಲ. ಆಧಾರ್ ತಿದ್ದುಪಡಿ ಮಾಡಿಕೊಡುವಂತೆ ಕೇಳಿಕೊಂಡರೂ ಏನೇನೋ ಸಬೂಬು ಹೇಳುತ್ತಾರೆ. ಗ್ರಾಪಂಗಳಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವುದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ.
-ವೆಂಕಟರಾಯಪ್ಪ, ಹಳೇಹಳ್ಳಿ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.