ಕಂದಾಯ, ಕೃಷಿ ಇಲಾಖೆ ಕಾರ್ಯವೈಖರಿಗೆ ಗರಂ
Team Udayavani, Jan 22, 2020, 3:00 AM IST
ಚಿಕ್ಕಬಳ್ಳಾಪುರ: ವಿಷಯ ಸೂಚಿ ಇಲ್ಲದೇ ಜಿಪಂ ಸಾಮಾನ್ಯ ಸಭೆ ಕರೆದಿದ್ದಕ್ಕೆ ಆಕ್ರೋಶ, ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ, ಬೇಜವಾಬ್ದಾರಿಗೆ ಜಿಪಂ ಸದಸ್ಯರು ತರಾಟೆ, ಸಹಕಾರಿ ಸಂಘಗಳ ಚುನಾವಣೆಯಲ್ಲಿ ಶಿಕ್ಷಕರ ಭಾರೀ ಗೋಲ್‌ಮಾಲ್ ಪ್ರಕರಣ ಬಗ್ಗೆ ಗಂಭೀರ ಚರ್ಚೆ, ಇಲಾಖೆಗಳಲ್ಲಿ ರೈತ ಸಂಘದ ಸದಸ್ಯರಿಗೆ ಸಿಗುವ ಗೌರವ ಜಿಪಂ ಸದಸ್ಯರಿಗೆ ಸಿಗುತ್ತಿಲ್ಲವಂತೆ.
ಕೆಡಿಪಿ ಸಭೆಗೆ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗಳನ್ನ ಕರೆಸುವಂತೆ ಸದಸ್ಯರ ಪಟ್ಟು, ಜಿಲ್ಲೆಯಲ್ಲಿ ಎಸಿಬಿ ಬಲೆಗೆ ಬೀಳುತ್ತಿರುವ ಅಧಿಕಾರಿಗಳ ಸಂಖ್ಯೆ ಹೆಚ್ಚಳಕ್ಕೆ ಸದಸ್ಯರ ಕಳವಳ, 9 ತಿಂಗಳ ಬಳಿಕ ನಡೆದ ಜಿಪಂ ಸಾಮಾನ್ಯ ಸಭೆ.
ರಾಜಕೀಯವಾಗಿ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿ ಪದೇ ಪದೆ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ಮಂಗಳವಾರ ಬರೋಬ್ಬರಿ 9 ತಿಂಗಳ ಬಳಿಕ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯಗಳಿವು. ಜಿಪಂ ಸದಸ್ಯ ಎಂ.ಬಿ.ಚಿಕ್ಕನರಸಿಂಹಯ್ಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ನಡೆದ ಸಾಮಾನ್ಯ ಸಭೆ ಯಾವುದೇ ವಿಷಯ ಸೂಚಿ ಹಾಗೂ ಹಿಂದಿನ ಸಭೆಯ ಅನುಪಾಲನಾ ವರದಿ ಇಲ್ಲದೇ ನಡೆದಿದ್ದು, ಸದಸ್ಯರ ಆಕ್ರೋಶ, ಗದ್ದಲಕ್ಕೆ ಕಾರಣವಾಯಿತು.
ಅಜೆಂಡಾ ಇಲ್ಲದ ಸಭೆ ವ್ಯರ್ಥ: ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಜಿಪಂ ಸದಸ್ಯ ಪಿ.ಎನ್.ಪ್ರಕಾಶ್, ಯಾವುದೇ ಅಜೆಂಡಾ ಇಲ್ಲದೇ ಹಿಂದಿನ ಸಭೆಯ ಅನುಪಾಲನಾ ವರದಿ ಇಲ್ಲದೇ ಸಭೆ ಏಕೆ ನಡೆಸುತ್ತೀರಿ? ಸಭೆ ವ್ಯರ್ಥ ಆಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಊಟ ಮಾಡಿಕೊಂಡು ಹೋಗಕ್ಕೆ ನಾವು ಬರಬೇಕಾ? ಅಜೆಂಡಾ ಇಲ್ಲದೇ ಹೋದರೆ ಅದು ಸಭೆ ಆಗುತ್ತಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಕೇವಲ 40 ದಿನ ಇದೆ. ಸಭೆಯಲ್ಲಿ ಚರ್ಚೆ ಮಾಡಿ ಅಧಿಕಾರಿಗಳಿಗೆ ಸೂಚನೆ ಕೊಟ್ಟರೆ ಸಾಕು ಅಜೆಂಡಾ ಇಟ್ಟುಕೊಂಡು ಸಭೆ ನಡೆಸಕ್ಕೆ ಸಮಯ ಇಲ್ಲ. ಪದೇ ಪದೆ ಸಭೆಗಳು ಮಾಡಲು ಹೋದರೆ ಅಧಿಕಾರಿಗಳು ಕೆಲಸ ಮಾಡುವುದು ಯಾವಾಗ ಎಂದು ಸಭೆಗೆ ವಿಷಯ ಸೂಚಿ ಇಲ್ಲದಿದ್ದನ್ನು ಸಮರ್ಥಿಸಿಕೊಂಡರು.
ಕಂದಾಯ, ಕೃಷಿ ಇಲಾಖೆ ವಿರುದ್ಧ ಆಕ್ರೋಶ: ಗ್ರಾಪಂ ಮಟ್ಟದಲ್ಲಿ ಘನ ತಾಜ್ಯ ನಿರ್ವಹಣಾ ಘಟಕಗಳ ಪ್ರಗತಿ ಕುಂಠಿತ ಬಗ್ಗೆ ಸದಸ್ಯರು ವಿಶೇಷವಾಗಿ ಚರ್ಚೆ ನಡೆಸಿದರು. ಬಹುತೇಕ ಕಡೆ ಜಾಗ ಗುರುತಿಸುತ್ತಿಲ್ಲ. ಗುರುತಿಸಿರುವ ಜಾಗವನ್ನು ಸರ್ವೆ ಮಾಡಿಕೊಡುವಲ್ಲಿ ಭೂ ಮಾಪನ ಇಲಾಖೆ ಅಧಿಕಾರಿಗಳು ವರ್ಷದಿಂದ ಕಡತಗಳನ್ನು ಬಾಕಿ ಇಟ್ಟುಕೊಂಡಿದ್ದಾರೆ ಎಂದು ಕೆಲ ಸದಸ್ಯರು ಕಿಡಿಕಾರಿದರು.
ಖಾಸಗಿ ರಿಯಲ್ ಎಸ್ಟೇಟ್ ಅವರದು ಬೇಗ ಕೆಲಸ ಆಗುತ್ತೆ. ಅವರು ಜಮೀನುಗಳು ಬೇಗ ಸರ್ವೆ ಆಗುತ್ತವೆ. ಆದರೆ ಸರ್ಕಾರದ ಕೆಲಸಗಳೇ ಸಮರ್ಪಕವಾಗಿ ಅಧಿಕಾರಿಗಳಿಂದ ಆಗುತ್ತಿಲ್ಲ. ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕರ ಧೋರಣೆಯನ್ನು ಜಿಪಂ ಸದಸ್ಯ ಪ್ರಕಾಶ್ ತರಾಟೆಗೆ ತೆಗೆದುಕೊಂಡರು.
10 ಸಾವಿರ ವಸೂಲಿ: ಕೃಷಿ ಇಲಾಖೆಯಲ್ಲಿ ಟಾರ್ಪಲ್ ವಿತರಣೆ ಸೇರಿದಂತೆ ಕೃಷಿ ಹೊಂಡಗಳಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ಇಲಾಖೆಗೆ ದೂರು ಕೊಟ್ಟರೂ ಏನು ಆಗಿಲ್ಲ. ಚಿಂತಾಮಣಿ ತಾಲೂಕಿನ ಕೋಡಿಗಲ್‌ನಲ್ಲಿ ಒಬ್ಬನೇ ವ್ಯಕ್ತಿ 40 ಕೃಷಿ ಹೊಂಡಗಳನ್ನು ಜೆಸಿಬಿ ಮೂಲಕ ನಿರ್ಮಿಸಿದ್ದಾನೆ. ಬ್ರೋಕರ್‌ಗಳಿಗೆ ಸಿಗುವ ಸೌಲಭ್ಯಗಳು ಜಿಪಂ ಸದಸ್ಯರಿಗೆ ಸಿಗಲ್ಲ. ಕೃಷಿ ಹೊಂಡ ರೈತನಿಗೆ ಸಿಗಬೇಕಾದರೆ 10 ಸಾವಿರ ವಸೂಲಿ ಮಾಡುತ್ತಾರೆಂದು ಜಿಪಂ ಸದಸ್ಯ ಸ್ಕೂಲ್ ಸುಬ್ಟಾರೆಡ್ಡಿ ಆರೋಪಿಸಿದರು.
ಟಾರ್ಪಲ್‌ಗಳನ್ನು ಇಲಾಖೆ ಸಕಾಲದಲ್ಲಿ ಕೊಡುತ್ತಿಲ್ಲ. ಕೃಷಿ ಹೊಂಡ ನಿರ್ಮಿಸಿದವರಿಗೆ ಸಬ್ಸಿಡಿ ಹಣ ಕೊಡುತ್ತಿಲ್ಲ. ಕೃಷಿ ಇಲಾಖೆಗಳಲ್ಲಿ ರೈತ ಸಂಘದ ಸದಸ್ಯರಿಗೆ ಸಿಗುವ ಗೌರವ ಜಿಪಂ ಸದಸ್ಯರಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸದಸ್ಯರು ದೂರು ಕೊಟ್ಟರೆ ತಕ್ಷಣ ಕ್ರಮ ಆಗಬೇಕು. ಇಲ್ಲದೆ ಹೋದರೆ ನಾವು ಸದಸ್ಯರಾಗಿ ಏಕೆ ಇರಬೇಕೆಂದು ಶಿಡ್ಲಘಟ್ಟದ ಜಿಪಂ ಸದಸ್ಯ ಬಂಕ್ ಮುನಿಯಪ್ಪ ಪ್ರಶ್ನಿಸಿದರು.
ಕಳೆದ ಬಾರಿ ಜಿಪಂ ಸಾಮಾನ್ಯ ಸಭೆ ಕರೆದು ಮುಂದೂಡಿರುವ ವಿಚಾರ ಯಾವ ಸದಸ್ಯರಿಗೂ ತಿಳಿಸಿಲ್ಲ ಎಂದು ಜಿಪಂ ಸದಸ್ಯ ಕೆ.ಎಂ.ಮುನೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದರೆ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಸದಸ್ಯರಿಗೆ ಗೌರವಯುತವಾಗಿ ಸಭೆ ಮಾಹಿತಿ ತಿಳಿಸಿ, ವಾರದ ಮುಂಚೆ ಅಂಚೆ ಮೂಲಕ ಕಳುಹಿಸಿ ಕೊಡಿ. ಜಿಪಂ ಸಿಪಿಒ ಖುದ್ದು ಸದಸ್ಯರಿಗೆ ವಿಚಾರ ತಿಳಿಸಬೇಕು. ಈ ವಿಚಾರದಲ್ಲಿ ಇಒಗಳನ್ನು ಹೊಣೆ ಮಾಡಲು ಆಗುವುದಿಲ್ಲ ಎಂದರು.
ಶೀಘ್ರ ಹಕ್ಕುಪತ್ರ ಕೊಡಿ: ಕೆಲ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷರು, ಗ್ರಾಪಂ ಚುನಾವಣೆಗಳು ಬರಲಿವೆ, ಅಷ್ಟರೊಳಗೆ ಗ್ರಾಪಂ ಮಟ್ಟದಲ್ಲಿ ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ವಿತರಿಸಿ ಎಂದರು. ಅಧಿಕಾರಿಗಳು ಬರೀ ಯೋಜನೆಗಳನ್ನು ಅನುಷ್ಠಾನಗೊಳಿಸಿ ಬಿಲ್ ಪಾವತಿ ಮಾಡುವುದೇ ಕೆಲಸವಲ್ಲ.
ಕನಿಷ್ಠ ರೈತರ ಬಗ್ಗೆ, ಬಡವರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕೆಂದರು. ಗ್ರಾಪಂ ಮಟ್ಟದಲ್ಲಿ ತೆರೆಯಲಾಗುತ್ತಿರುವ ಘನ ತ್ಯಾಜ್ಯ ನಿರ್ವಹಣ ಘಟಕಗಳಿಗೆ ಅಗತ್ಯವಾದ ಜಮೀನು ಗುರುತಿಸಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಒಟ್ಟು 6 ಕೋಟಿ ಅನುದಾನ ಬಂದಿದ್ದು, ಎಲ್ಲಾ ಸದಸ್ಯರ ಬೇಡಿಕೆಯಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.
ಸಂಸದರು, ಶಾಸಕರು ಏಕೆ ಬರುತ್ತಿಲ್ಲ: ಜಿಪಂ ಸಭೆಗಳಿಗೆ ಸಂಸದರು, ಶಾಸಕರು ಬರುತ್ತಿಲ್ಲ. ಕೆಡಿಪಿ ಸಭೆಗೂ ಸಂಸದರು, ಶಾಸಕರು ಬಾರದೇ ಹೋದರೆ ಹೇಗೆ ಎಂದು ಜಿಪಂ ಸದಸ್ಯ ಈರುಳ್ಳಿ ಶಿವಣ್ಣ ಹಾಗೂ ಕೆ.ಎಂ.ಮುನೇಗೌಡ ಪ್ರಶ್ನಿಸಿದರು. ಕಂದಾಯ ಇಲಾಖೆಯಲ್ಲಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು ಅಥವಾ ಅಪರ ಜಿಲ್ಲಾಧಿಕಾರಿಗಳು ಸಭೆಗೆ ಬಂದರೆ ಚೆನ್ನಾಗಿರುತ್ತದೆ. ಜಿಪಂ ಸದಸ್ಯ ಕೆ.ಸಿ.ರಾಜಾಕಾಂತ್ ತಿಳಿಸಿದರು. ಆಗ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಮಾತನಾಡಿ, ಸಭೆಗೆ ಆಗಮಿಸುವಂತೆ ಮನವಿ ಮಾಡಬಹುದು. ಆದರೆ ಕಡ್ಡಾಯವಾಗಿ ಬನ್ನಿ ಎಂದು ಹೇಳಕ್ಕೆ ಆಗುವುದಿಲ್ಲ ಎಂದರು.
ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ಕೃಷಿ, ತೋಟಗಾರಿಕೆ, ರೇಷ್ಮೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಕುರಿತು ಸದಸ್ಯರು ಚರ್ಚೆ ನಡೆಸಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ನಿರ್ಮಲಾ, ಸಿಇಒ ಬಿ.ಫೌಝೀಯಾ ತರುನ್ನುಮ್, ಉಪ ಕಾರ್ಯದರ್ಶಿ ನೋಮೇಶ್ ಕುಮಾರ್, ಮುಖ್ಯ ಯೋಜನಾಧಿಕಾರಿ ಮಧುರಾಮ್ ಸೇರಿದಂತೆ ಜಿಪಂ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಡೇರಿ ಚುನಾವಣೆಗಳಿಗೆ ಶಿಕ್ಷಕರ ನೇಮಕಕ್ಕೆ ಬ್ರೇಕ್: ಜಿಲ್ಲೆಯಲ್ಲಿ ನಡೆಯುವ ಎಂಪಿಸಿಎಸ್ ಹಾಗೂ ಸಹಕಾರ ಸಂಘಗಳ ಚುನಾವಣೆಯನ್ನು ಕೆಲವರು ದಂಧೆಯಾಗಿ ರೂಢಿಸಿಕೊಂಡು ಕೆಲ ಶಿಕ್ಷಕರು ಡೇರಿ ಹಾಗೂ ಸಹಕಾರ ಸಂಘಗಳ ಚುನಾವಣೆಗೆ ನೇಮಕಗೊಂಡು ಸಾವಿರಾರು ರೂ. ಹಣ ಅಕ್ರಮವಾಗಿ ಡ್ರಾ ಮಾಡುತ್ತಿದ್ದಾರೆಂದು ಜಿಪಂ ಸದಸ್ಯ ಬಂಕ್ ಮುನಿಯಪ್ಪ ಟೀಕಿಸಿದರು. ಇದಕ್ಕೆ ಧ್ವನಿಗೂಢಿಸಿದ ಸ್ಕೂಲ್ ಸಬ್ಟಾರೆಡ್ಡಿ, ಚಿಂತಾಮಣಿಯಲ್ಲಿ ರವಣಪ್ಪ ಎಂಬ ಶಿಕ್ಷಕ ಚುನಾವಣೆ ಅಕ್ರಮಗಳನ್ನು ಮೊದಲೇ ಫಿಕ್ಸ್ ಮಾಡಿಕೊಂಡು ಮತಪೆಟ್ಟಿಗಳನ್ನೇ ಅದಲು ಬದಲು ಮಾಡುತ್ತಾರೆ.
ಇದನ್ನು ನಾನು ಕಣ್ಣಾರೆಡ್ಡಿ ನೋಡಿದ್ದೇನೆ ಎಂದು ಆರೋಪಿಸಿದರು. ಡೇರಿ ಹಾಗೂ ಸಹಕಾರ ಸಂಘಗಳ ಚುನಾವಣೆಗೆ ಶಿಕ್ಷಕರನ್ನು ನಿಯೋಜಿಸಬೇಡಿ ಎಂದರು. ಇದಕ್ಕೆ ಡಿಡಿಪಿಐ ನಾಗೇಶ್ ಸಹ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಲೋಕಸಭೆ, ವಿಧಾನಸಭೆ ಹೊರತುಪಡಿಸಿ ಬೇರೆ ಚುನಾವಣೆಗಳಿಗೆ ಶಿಕ್ಷಕರನ್ನು ನಿಯೋಜಿಸಲು ಅವಕಾಶ ಇಲ್ಲ ಎಂದಾಗ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಇನ್ನೂ ಮುಂದೆ ಡೇರಿ ಹಾಗೂ ಸಹಕಾರ ಸಂಘಗಳ ಚುನಾವಣೆಗೆ ಶಿಕ್ಷಕರನ್ನು ನಿಯೋಜಿಸದಂತೆ ಸೂಚಿಸಿ ಸಭೆಯಲ್ಲಿ ಅನುಮೋದನೆ ಪಡೆದರು.
ವಾರ್ಷಿಕ ಆಡಳಿತ ವರದಿ ಬಿಡುಗಡೆ: ಜಿಪಂ ಸಾಮಾನ್ಯ ಸಭೆಯಲ್ಲಿ ಇದೇ ಮೊದಲ ಬಾರಿಗೆ 2018-19ನೇ ಸಾಲಿನ ವಾರ್ಷಿಕ ಆಡಳಿತ ಮಂಡಳಿಯ ವರದಿಯನ್ನು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ನಿರ್ಮಲ, ಸಿಇಒ ಬಿ.ಫೌಜಿಯಾ ತರುನ್ನುಮ್, ಎಲ್ಲಾ ಜಿಪಂ ಸದಸ್ಯರು ವೇದಿಕೆ ಮೇಲೆ ತೆರಳಿ ಆಡಳಿತ ವರದಿ ಕೈಪಿಡಿಯನ್ನು ಹಾಗೂ ನರೇಗಾ ಯೋಜನೆಯ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. 2018-19ನೇ ವಾರ್ಷಿಕ ಆಡಳಿತ ವರದಿಯಲ್ಲಿ ಜಿಪಂ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಗಳಿಗೆ ಬಂದ ಅನುದಾನ, ಖರ್ಚು ಆದ ಅನುದಾನ ಉಳಿಕೆಯಾದ ಅನುದಾನಗಳ ಸಮಗ್ರ ವರದಿ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.