ಜಿಲ್ಲಾದ್ಯಂತ ಶ್ರದ್ಧಾಭಕ್ತಿಯ ಬಕ್ರೀದ್ ಆಚರಣೆ
Team Udayavani, Aug 13, 2019, 3:00 AM IST
ಜಿಲ್ಲಾದ್ಯಂತ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸೋಮವಾರ ಮುಸ್ಲಿಮರು ಅತ್ಯಂತ ಭಕ್ತಿಭಾವದಿಂದ ಆಚರಿಸಿದರು. ಬೆಳಗ್ಗೆ ಜಾಮೀಯಾ ಮಸೀದಿಗಳ ಬಳಿ ಜಮಾಯಿಸಿ ಅಲ್ಲಿಂದ ನಗರದ ಮುಖ್ಯ ಬೀದಿಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸುವ ಮೂಲಕ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡು ದಾನ ಧರ್ಮಗಳಲ್ಲಿ ತೊಡಗಿದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅಲ್ಲದೆ, ಕೆಲವು ತಾಲೂಕುಗಳಲ್ಲಿ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿ ಮಾನವೀಯತೆ ತೋರಲಾಯಿತು.
ಚಿಕ್ಕಬಳ್ಳಾಪುರ: ನಗರದ ಪ್ರಶಾಂತ್ ನಗರದ ದಿನ್ನೆಹೊಸಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮುಸ್ಲಿಮರು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಜಮಾಯಿಸಿದ್ದ ಮುಸ್ಲಿಮರು, ನಗರದ ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆ, ಎಂ.ಜಿ.ರಸ್ತೆ ಮುಖಾಂತರ ದಿನ್ನೆಹೊಸಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಇಸ್ಲಾಂ ಧರ್ಮ ಗುರುಗಳಾದ ಮಹಮ್ಮದ್ ಮನ್ಸೂರ್ ಬಕ್ರೀದ್ ಹಬ್ಬ ಆಚರಣೆ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದಾನ ಧರ್ಮ ಮಾಡಿ: ಬಕ್ರೀದ್ ಆಚರಣೆ ಹಿಂದಿರುವ ಮಹತ್ವದ ಬಗ್ಗೆ ವಿವರಿಸಿದ ಧರ್ಮಗುರು ಮಹಮ್ಮದ್ ಮನ್ಸೂರ್, ಬಕ್ರೀದ್ ತ್ಯಾಗ, ಬಲಿದಾನದ ಸಂಕೇತವಾಗಿದ್ದು, ಉಳ್ಳವರು ಸಮಾಜದಲ್ಲಿರುವ ಬಡವರನ್ನು ಮುಖ್ಯವಾಹಿನಿಗೆ ತರಬೇಕು. ಇದಕ್ಕೆ ದಾನ, ಧರ್ಮದಲ್ಲಿ ತೊಡಗಿಕೊಳ್ಳಬೇಕೆಂದು ತಿಳಿಸಿದರು. ಸುಮಾರು ಮೂರು ಗಂಟೆಗಳ ಕಾಲ ವಿಶೇಷ ಪ್ರಾರ್ಥನೆ ಜೊತೆಗೆ ಧರ್ಮಗಳ ಗುರುಗಳ ಪ್ರವಚನ ನಡೆಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ವೃದ್ಧರ ಹಾದಿಯಾಗಿ ನಾಗರಿಕರು, ಮಕ್ಕಳು ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ಜೊತೆಗೆ ಈದ್ಗಾ ಮೈದಾನದ ಪಕ್ಕದಲ್ಲಿಯೇ ಇದ್ದ ಖಬರಸ್ಥಾನ್‌ಗೆ ತೆರಳಿ ತಮ್ಮ ಹಿರಿಯರ ಸಮಾಧಿಗಳ ಮುಂದೆ ಹೂವು, ಬೂಂದಿ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈದ್ಗಾ ಮೈದಾನಗಳು ಭರ್ತಿ: ಬಕ್ರೀದ್ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಈದ್ಗಾ ಮೈದಾನಗಳು ಭರ್ತಿಯಾಗಿದ್ದವು. ಶಿಸ್ತು ಬದ್ಧವಾಗಿ ಸಾಲಾಗಿ ನಿಂತು ವಿಶೇಷ ಪ್ರಾರ್ಥನೆಯಲ್ಲಿ ತೊಡಗಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ ಬಕ್ರೀದ್ ಸಂಭ್ರಮ ಜೋರಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂಮರು ಈದ್ಗಾ ಮೈದಾನಕ್ಕೆ ಮೆರವಣಿಗೆ ಮೂಲಕ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಬಕ್ರಿದ್ ಸಂಭ್ರಮ ಕಳೆಗಟ್ಟಿತ್ತು. ಬಾಗೇಪಲ್ಲಿ ವೃತ್ತದಲ್ಲಿರುವ ಈದ್ಗಾ ಮೈದಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮುಸ್ಲಿಮರು ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಉಳಿದಂತೆ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಜಿಲ್ಲಾ ಕೇಂದ್ರದಲ್ಲಿ ನಡೆದ ಬಕ್ರೀದ್ ಸಾಮೂಹಿಕ ಪ್ರಾರ್ಥನೆ ವೇಳೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷರಾದ ಕೆ.ವಿ.ನವೀನ್ ಕಿರಣ್ ಮತ್ತಿತರರು ಭಾಗಿಯಾಗಿ ಮುಸ್ಲಿಂ ಸಮುದಾಯಕ್ಕೆ ಹಬ್ಬದ ಶುಭಾಷಯ ಕೋರಿದರು. ಇದೇ ವೇಳೆ ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಚಿಕ್ಕಬಳ್ಳಾಪುರದ ಉಪ ವಿಭಾಗದ ಡಿವೈಎಸ್‌ಪಿ ಪ್ರಭುಶಂಕರ್, ಜಿಲ್ಲಾ ವಕ್ಫ್ ಮಂಡಳಿ ಆಡಳಿತಾಧಿಕಾರಿ ಬಿ.ಎಸ್.ರಫೀವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಬಿಗಿ ಭದ್ರತೆ: ಬಕ್ರೀದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿತ್ತು. ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ಹಾಗೂ ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿತ್ತು. ಪ್ರಮುಖ ಮಸೀದಿ ಹಾಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಈದ್ಗಾ ಮೈದಾನಗಳ ಬಳಿ ಹೆಚ್ಚುವರಿ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್, ಚಿಂತಾಮಣಿ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಶ್ರೀನಿವಾಸ್ ನೇತೃತ್ವದಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಕಿಷ್ಕಿಂದೆಯಾಗಿದ್ದ ಈದ್ಗಾ ಮೈದಾನ: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಈದ್ಗಾ ಮೈದಾನ ಅತ್ಯಂತ ಕಿರಿದಾಗಿದ್ದ ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಸಮುದಾಯಯಕ್ಕೆ ಪ್ರಾರ್ಥನೆ ಮಾಡಲು ಸಾಧ್ಯವಾಗಲಿಲ್ಲ. ಕೆಲವರು ರಸ್ತೆಯಲ್ಲಿ ನಿಂತು ಪ್ರಾರ್ಥನೆ ಮಾಡಿದರೆ ಕೆಲವರು ಕೂರಲು ಜಾಗದ ಸಮಸ್ಯೆಯಿಂದ ಪ್ರಾರ್ಥನೆ ಕೈ ಬಿಟ್ಟರು. ಈದ್ಗಾ ಮೈದಾನ ಸಾಕಷ್ಟು ಕಿರಿದಾಗಿದ್ದರಿಂದ ಪ್ರಾರ್ಥನೆ ಮಾಡಲು ಪರದಾಡಬೇಕಾಯಿತು. ನಗರದ ಹೊರ ಭಾಗದಲ್ಲಿ ಈದ್ಗಾ ಮೈದಾನಕ್ಕೆ ಸ್ಥಳಾವಕಾಶ ಮಾಡಿಕೊಡಿ ಎಂದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಲಿಲ್ಲ ಎಂಬ ಅಸಮಾಧಾನ ಸಮುದಾಯದ ಮುಖಂಡರಿಂದ ಕೇಳಿ ಬಂತು.
ಈದ್ಗಾ ಮೈದಾನಕ್ಕೆ ಬಾರದ ಜನ ನಾಯಕರು: ರಂಜಾನ್ ಆಗಲಿ ಅಥವಾ ಬಕ್ರೀದ್ ಹಬ್ಬವಾಗಲಿ, ಈದ್ಗಾ ಮೈದಾನಕ್ಕೆ ತಪ್ಪದೇ ಕ್ಷೇತ್ರದ ಶಾಸಕರು, ಸಂಸದರು ತಪ್ಪದೇ ಹಾಜರಾಗಿ ಮುಸ್ಲಿಂ ಸಮುದಾಯಕ್ಕೆ ಶುಭಾಷಯ ಕೋರುತ್ತಿದ್ದರು. ಆದರೆ, ಈ ಬಾರಿ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಹಿನ್ನೆಲೆಯಲ್ಲಿ ಈದ್ಗಾ ಮೈದಾನಕ್ಕೆ ಬರಲಿಲ್ಲ. ಇದೇ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿರುವ ಬಿ.ಎನ್.ಬಚ್ಚೇಗೌಡ ಬರುತ್ತಾರೆಂಬ ನಿರೀಕ್ಷೆ ಹುಸಿಯಾದರೆ ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಆಗಮನ ಕೊನೇ ಘಳಿಗೆಯಲ್ಲಿ ರದ್ದಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.