Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ
ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ ಆದೇಶ; ದಾವೆ ಹೂಡಿದ್ದ ಇಫ್ಕೋ ಕಂಪನಿ
Team Udayavani, Oct 15, 2024, 8:29 PM IST
ಚಿಕ್ಕಬಳ್ಳಾಪುರ: ಚೆಕ್ ಬೌನ್ಸ್ ಪ್ರಕರಣದಲ್ಲಿ ಚಿಂತಾಮಣಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ಕ್ಕೆ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ 1,22,50,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಚಿಂತಾಮಣಿ ಟಿಎಪಿಸಿಎಂಎಸ್‌ಗೆ ಇಫ್ಕೋ ಕಂಪೆನಿ 200 ಟನ್‌ಗಿಂತಲೂ ಅಧಿಕ ರಸಗೊಬ್ಬರ ಪೂರೈಸಿದ್ದರೂ ಟಿಎಪಿಸಿಎಂಎಸ್ ಸಕಾಲದಲ್ಲಿ ಹಣ ಪಾವತಿಸಿರಲಿಲ್ಲ. ಅಲ್ಲದೇ ಇಫ್ಕೋ ಗೆ ನೀಡಲಾಗಿದ್ದ 61.25 ಲಕ್ಷ ರೂ. ಚೆಕ್ ಕೂಡ ಬ್ಯಾಂಕ್‌ನಲ್ಲಿ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಂಪೆನಿಯು ಚಿಂತಾಮಣಿ ಟಿಎಪಿಸಿಎಂಎಸ್ ವಿರುದ್ಧ ಬೆಂಗಳೂರಿನ ಎಸಿಎಂಎಂ ಕೋರ್ಟಿನಲ್ಲಿ ದಾವೆ ಹೂಡಿತ್ತು.
ದಂಡ ಪಾವತಿಸದಿದ್ದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರಪ್ಪ ಹಾಗೂ ಕಾರ್ಯದರ್ಶಿ ಎನ್. ವೆಂಕಟೇಶಪ್ಪ ಅವರಿಗೆ 1 ವರ್ಷ ಸದಾ ಕಾರಾಗೃಹ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪಿನಲ್ಲಿ ಆದೇಶಿಸಿದೆ.