Chintamani: ಖಾಸಗಿ ಬಸ್ ಬೊಲೆರೋ ವಾಹನದ ನಡುವೆ ಡಿಕ್ಕಿ; ಓರ್ವ ಸಾವು
Team Udayavani, Sep 10, 2024, 4:14 PM IST
ಚಿಂತಾಮಣಿ (ಚಿಕ್ಕಬಳ್ಳಾಪುರ): ಖಾಸಗಿ ಬಸ್ ಮತ್ತು ಟೊಮೆಟೋ ಸಾಗಾಣೆಕೆ ಮಾಡುವ ಬೊಲೆರೋ ವಾಹನದ ನಡುವೆ ಡಿಕ್ಕಿ ಸಂಭವಿಸಿ ಬೊಲೆರೋ ವಾಹನದ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ-ಚೇಳೂರು ರಸ್ತೆಯ ಸಿದ್ದೇಪಲ್ಲಿ ಕ್ರಾಸ್ ಬಳಿ ಬೆಳಿಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿರುವ ಟೊಮೆಟೋ ಸಾಗಾಣೆಕೆ ಮಾಡುವ ಬೊಲೆರೋ ವಾಹನದ ಚಾಲಕನನ್ನು ಚೇಳೂರು ತಾಲ್ಲೂಕು ಪಾತಪಾಳ್ಯ ಸಮೀಪದ ಶಿವಪುರ ಗ್ರಾಮದ 35 ವರ್ಷದ ರೆಡ್ಡಪ್ಪ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಖಾಸಗಿ ಬಸ್ಸಿನ ಚಾಲಕ ಕಿರಣ್ ಗೆ ಗಾಯವಾಗಿದ್ದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ಪಡೆದುಕೊಂಡು ವಾಪಸ್ಸಾಗಿದ್ದಾರೆ.
ಖಾಸಗಿ ಬಸ್ ಚಿಂತಾಮಣಿಯಿಂದ ನೆರೆ ಆಂಧ್ರಪ್ರದೇಶದ ಬಿ.ಕೊತ್ತಕೋಟೆ ಕಡೆ ಹೋಗುತ್ತಿದ್ದರೆ ಬೊಲೆರೋ ವಾಹನ ನೆರೆ ಆಂಧ್ರಪ್ರದೇಶದಿಂದ ಚಿಂತಾಮಣಿ ಎಪಿಎಂಸಿಸಿ ಟೊಮೆಟೋ ಮಾರುಕಟ್ಟೆಗೆ ಬರುತ್ತಿತ್ತು ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಬೊಲೆರೋ ವಾಹನ ಮತ್ತು ಬಸ್ಸಿಗೆ ಸಿಕ್ಕಿ ಹಾಕಿಕೊಂಡಿತ್ತು. ಜೆಸಿಬಿ ಮೂಲಕ ಸಾರ್ವಜನಿಕರ ನೆರವಿನಿಂದ ಎರಡು ವಾಹನಗಳನ್ನು ಬೇರ್ಪಡಿಸಿದ್ದಾರೆ.
ಬೊಲೆರೋ ವಾಹನದಲ್ಲಿದ್ದ ಟೊಮೆಟೋ ಕ್ರೇಟ್ ಗಳು ಇಡೀ ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಅಸ್ಥವ್ಯಸ್ಥವಾಗಿದ್ದು, ಸ್ಥಳಕ್ಕೆ ಅಗಮಿಸಿದ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.