ಹೈನೋದ್ಯಮದಿಂದ ಆರ್ಥಿಕ ಲಾಭ
Team Udayavani, Oct 15, 2019, 3:00 AM IST
ಚಿಕ್ಕಬಳ್ಳಾಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ರೈತ ಕುಟುಂಬಗಳು ಸ್ವಾವಲಂಬಿಗಳಾಗಿ ಬದುಕು ನಡೆಸುತ್ತಿವೆ ಎಂದು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ಎನ್.ಸಿ.ವೆಂಕಟೇಶ್ ತಿಳಿಸಿದರು. ನಗರದ ಎಪಿಎಂಸಿ ಆವರಣದ ಕೋಚಿಮುಲ್ ಉಪ ಶಿಬಿರ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದರು.
ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಎಷ್ಟೇ ಬರಗಾಲ ಇದ್ದರೂ ಜಿಲ್ಲೆಯ ರೈತರನ್ನು ಹೈನೋದ್ಯಮ ಉಳಿಸಿಕೊಂಡು ಬರುತ್ತಿದೆ. ಯಾವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಇರುವುದಿಲ್ಲ. ಆ ಗ್ರಾಮಗಳಲ್ಲಿ ರೈತರ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ಹಾಲು ಉತ್ಪಾದನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ ಪ್ರತಿ ನಿತ್ಯ 11 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದೇವೆ.
ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದ ಅವರು, ಇವತ್ತು ನಂದಿನಿ ಹಾಲು ದೇಶದಲ್ಲಿ ಅಷ್ಟೇ ಅಲ್ಲದೆ ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ನಂದಿನಿ ಹಾಲು ಹಾಗೂ ಅದರ ಉತ್ಪನ್ನ ಕಡಿಮೆ ಬೆಲೆ ದೊರೆಯುತ್ತವೆ. ಪ್ರತಿಯೊಬ್ಬರು ನಂದಿನಿ ಉತ್ಪನ್ನ ಬಳಸಿದರೆ ಪರೋಕ್ಷವಾಗಿ ರೈತರಿಗೆ ಹೆಚ್ಚು ಬೆಂಬಲ ನೀಡಿದಂತಾಗುತ್ತದೆ ಎಂದರು.
ಹಾಲು ಉತ್ಪಾದಿಸುವ ರೈತರು ನಂದಿನಿ ಹಾಲಿನ ಉತ್ಪನ್ನ ಬಳಸಬೇಕು. ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸುವ ಮೂಲಕ ಆಕಸ್ಮಿಕವಾಗಿ ಜರುಗುವ ರಾಸುಗಳ ಜೀವ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಇದಕ್ಕಾಗಿ ಕೋಚಿಮುಲ್ ವಿಶೇಷ ವಿಮೆ ಯೋಜನೆ ರೂಪಿಸದೆ ರೈತರು ಅರ್ಧ ವಿಮೆ ಪಾವತಿ ಮಾಡಿದರೆ ಉಳಿದ ವಿಮೆ ಹಣವನ್ನು ಕೋಚಿಮುಲ್ ತುಂಬುತ್ತದೆ ಎಂದು ಹೇಳಿದರು.
ಒಕ್ಕೂಟದ ವತಿಯಿಂದ ಸಹಕಾರ ಸಂಘಗಳ ಸಿಬ್ಬಂದಿ ಮರಣ ಹೊಂದಿದರೆ ಸಂಘದ ವತಿಯಿಂದ ಅವರ ಕುಟುಂಬಕ್ಕೆ ಸಹಾಯಧನ ನೀಡಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಿವಿಧೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ.ರಾಮಕೃಷ್ಣರೆಡ್ಡಿ, ಕೋಚಿಮುಲ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಪಾಪೇಗೌಡ, ನಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ರಮೇಶ್ ಬಾಬು, ಮಂಜುನಾಥ್ ಸದಾಶಿವ, ಪಾತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆಂಪಣ್ಣ, ಅಡ್ಡಗಲ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್ ಉಪಸ್ಥಿತರಿದ್ದರು.
ಎಎಂಸಿ ಯಂತ್ರಗಳ ವಿತರಣೆ: ಕಾರ್ಯಕ್ರಮದಲ್ಲಿ 10 ಫಲಾನುಭವಿಗಳಿಗೆ 3. 10 ಲಕ್ಷ ಮೊತ್ತದ ವಿಮೆ ಪರಿಹಾರದ ಚೆಕ್, ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ, ಪಾತೂರು, ಅಡ್ಡಗಲ್ , ಬಿಸೇಗಾರನಹಳ್ಳಿ, ವರದಹಳ್ಳಿ, ಹಾಗೂ ಮುದ್ದೇನಹಳ್ಳಿ ಡೇರಿಗೆ ಬಿಎಂಸಿ ಘಟಕಗಳಿಗೆ ಯಂತ್ರಗಳನ್ನು ಕೋಚಿಮಯಲ್ ನಿರ್ದೇಶಕ ಎನ್.ಸಿ.ವೆಂಕಟೇಶ್ ಹಾಗೂ ಇತರರು ಸಂಘಗಳ ಅಧ್ಯಕ್ಷರಿಗೆ ವಿತರಿಸಿದರು.
ರೈತರು ತಮ್ಮ ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ಕಾಲು ಬಾಯಿ ಜ್ವರದ ಲಸಿಕೆ ಹಾಕಿಸುವ ಮೂಲಕ ರೋಗ ತಡೆಗಟ್ಟಲು ಮುಂದಾಗಬೇಕು. ಹಸುಗಳಿಗೆ ಲಸಿಕೆ ಹಾಕಿದಾಗ ಹಾಲಿನ ಇಳುವರಿ ಕಡಿಮೆಯಾಗುವುದು ಸಹಜ. ಆದರೆ ಲಸಿಕೆ ಹಾಕಿಸದಿದ್ದರೆ ಹಸುಗಳು ಕಾಲು ಬಾಯಿ ಜ್ವರಕ್ಕೆ ತುತ್ತಾಗಿ ಜೀವಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
-ಎನ್.ಸಿ.ವೆಂಕಟೇಶ್, ಕೋಚಿಮುಲ್ ನಿರ್ದೇಶಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.